
ಬಳ್ಳಾರಿ, ಅಕ್ಟೋಬರ್ 30: ವೈದ್ಯಕೀಯ ಲೋಕವನ್ನೇ ಬೆರಗುಗೊಳಿಸುವಂತ ಹಾಗೂ ಅತ್ಯಂತ ಅಪರೂಪ ಎನಿಸಿಕೊಂಡಿರುವ ‘ಫೀಟಸ್ ಇನ್ ಫೀಟು’ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಬಳ್ಳಾರಿ ನಗರದ ಬಿಎಂಸಿಆರ್ಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರ ತಂಡವು ಎರಡು ತಿಂಗಳ ಗಂಡು ಮಗುವಿನ ಹೊಟ್ಟೆಯಲ್ಲಿದ್ದ ಭ್ರೂಣವನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ.
ಮಗು ತಾಯಿಯ ಗರ್ಭದಲ್ಲಿದ್ದಾಗಲೇ ಬಿಎಂಸಿಆರ್ಸಿಯ ವಿಕಿರಣಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸದಾಶಿವಗೌಡ ಅವರ ನೇತೃತ್ವದ ತಂಡವು ಈ ಅಪರೂಪದ ಸಮಸ್ಯೆಯನ್ನು ನಿಖರವಾಗಿ ಪತ್ತೆಹಚ್ಚಿತ್ತು. ಎರಡು ತಿಂಗಳ ಹಿಂದೆ ಇದೇ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ಜನನದ ನಂತರ ಅಗತ್ಯ ತಪಾಸಣೆಗಳನ್ನು ನಡೆಸಿ, ಅತ್ಯಂತ ಜಾಗರೂಕತೆಯಿಂದ ಶಸ್ತ್ರಚಿಕಿತ್ಸಾ ಯೋಜನೆ ರೂಪಿಸಲಾಗಿತ್ತು.
ನಂತರ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಗಡ್ಡಿ ದಿವಾಕರ್ ಅವರ ನೇತೃತ್ವದಲ್ಲಿ ಈ ಸಂಕೀರ್ಣ ಕಾರ್ಯಾಚರಣೆ ಯಶಸ್ವಿಯಾಗಿ ನೆರವೇರಿತು. ಈ ತಂಡದಲ್ಲಿ ಡಾ. ಸಂಜೀವ್ ಜೋಶಿ, ಡಾ. ರಾಮ್ ಮೋಹನ್, ಡಾ. ಅಶ್ವಿತಾ ಹಾಗೂ ಅರಿವಳಿಕೆ ವಿಭಾಗದ ಮುಖ್ಯಸ್ಥರಾದ ಡಾ. ಬಾಲಸುಬ್ರಹ್ಮಣ್ಯ, ಡಾ. ಪರಿಮಳಾ, ಡಾ. ನಿಜಾಮುದ್ದೀನ್, ಡಾ. ರಘುನಾಥ್, ಡಾ. ಮಧುಶ್ರೀ ಹಾಗೂ ಶುಶ್ರೂಷಕರಾದ ಪುಷ್ಪಲತಾ ಮತ್ತು ಸಲೀಂ ಪಾಷಾ ಸಕ್ರಿಯವಾಗಿ ಸಹಕರಿಸಿದರು.
ವೈದ್ಯಕೀಯ ವಿಜ್ಞಾನದ ಪ್ರಕಾರ, ಇದು ತಾಯಿಯ ಗರ್ಭದಲ್ಲಿ ಬೆಳವಣಿಗೆ ಹೊಂದದ ಅವಳಿ ಭ್ರೂಣವು ಇನ್ನೊಂದು ಮಗುವಿನ ದೇಹದೊಳಗೆ ಸೇರಿಕೊಳ್ಳುವ ಅತ್ಯಂತ ಅಪರೂಪದ ಜನ್ಮಜಾತ ಸ್ಥಿತಿಯಾಗಿದೆ. ಸುಮಾರು ಐದು ಲಕ್ಷ ಜನನಗಳಲ್ಲಿ ಒಂದರಲ್ಲಿ ಮಾತ್ರ ಇಂತಹ ಪ್ರಕರಣಗಳು ಕಂಡುಬರುತ್ತವೆ. ಸರಿಯಾದ ಸಮಯದಲ್ಲಿ ಪತ್ತೆಹಚ್ಚಿ ಶಸ್ತ್ರಚಿಕಿತ್ಸೆ ನಡೆಸಿದರೆ ಮಗುವನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಡಾ. ಗಡ್ಡಿ ದಿವಾಕರ್ ಅವರ ನೇತೃತ್ವದಲ್ಲಿ ಕಳೆದ 22 ವರ್ಷಗಳಿಂದ ಮಕ್ಕಳ ಸುಧಾರಿತ ಶಸ್ತ್ರಚಿಕಿತ್ಸೆಗಳು ನಡೆಯುತ್ತಿದ್ದು, 2008ರಲ್ಲೂ ಇಂತಹುದೇ ಪ್ರಕರಣವನ್ನು ವಿಮ್ಸ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಿಭಾಯಿಸಲಾಗಿತ್ತು. ಆಸ್ಪತ್ರೆಯ ಡೀನ್ ಮತ್ತು ನಿರ್ದೇಶಕ ಡಾ. ಮರಿರಾಜ್, ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಎಂ., ವೈದ್ಯಕೀಯ ಅಧೀಕ್ಷಕ ಡಾ. ಅರುಣ್, ಮುಖ್ಯ ಆಡಳಿತಾಧಿಕಾರಿ ಡಾ. ನಯನಾ ಹಾಗೂ ಹಣಕಾಸು ಸಲಹೆಗಾರ ಮಹೇಶ್ ಅವರ ನಿರಂತರ ಬೆಂಬಲಕ್ಕೆ ವೈದ್ಯರ ತಂಡ ಕೃತಜ್ಞತೆ ಸಲ್ಲಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:08 am, Fri, 30 October 26