ಬಳ್ಳಾರಿ: ಮಂತ್ರಾಲಯಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತರ ಮತಾಂತರಕ್ಕೆ ಯತ್ನ; ಒಬ್ಬನ ಬಂಧನ, ಮತ್ತೊಬ್ಬ ನಾಪತ್ತೆ
ಮಂತ್ರಾಲಯಕ್ಕೆ ಪಾದಯಾತ್ರೆ ತೆರಳುವ ಭಕ್ತರನ್ನೇ ಮತಾಂತರಗೊಳಿಸಲು ಯತ್ನಿಸಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಎಂಬಲ್ಲಿ ನಡೆದಿದೆ. ಘಟನೆ ಸಂಬಂಧ ಇದೀಗ ಪೊಲೀಸ್ ದೂರು ದಾಖಲಾಗಿದ್ದು, ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿಗಾಗಿ ಶೋಧ ನಡೆದಿದೆ.
ಬಳ್ಳಾರಿ, ಜುಲೈ 22: ಮಂತ್ರಾಲಯಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತರ ಮತಾಂತರಕ್ಕೆ ಯತ್ನಿಸಿದ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಬಳಿ ನಡೆದಿದ್ದು, ತೆಕ್ಕಲಕೋಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ. ಮಂತ್ರಾಲಯಕ್ಕೆ ಪಾದಯಾತ್ರೆ ತೆರಳುತ್ತಿದ್ದ ಯಾತ್ರಿಕರಿಗೆ ಇಬ್ಬರು ಜುಲೈ 18 ರಂದು ಇಸ್ಲಾಂ ಧರ್ಮದ ಬಗ್ಗೆ ಬೋಧನೆ ಮಾಡಿದ್ದಾರೆ ಎಂಬ ಆರೋಪವಿದೆ.
ಯಾತ್ರಾತ್ರಿಗಳಿಬ್ಬರು ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿ ಮೂಲಕ ಮಂತ್ರಾಲಯಕ್ಕೆ ತೆರಳುತ್ತಿದ್ದರು. ಇದೇ ವೇಳೆ, ತೆಕ್ಕಲಕೋಟೆ ಪಟ್ಟಣದ ಹುಸೇನ್ ಭಾಷಾ (44), ಸಾಯಿ ಬಾಬಾ (24) ಮತಾಂತರಕ್ಕೆ ಯತ್ನ ಮಾಡಿದ್ದಾರೆ ಎನ್ನಲಾಗಿದೆ. ಕೇಸರಿ ಧ್ವಜ ಹಿಡಿದುಕೊಂಡು ಮಂತ್ರಾಲಯಕ್ಕೆ ಪಾದಯಾತ್ರೆ ಮಾಡುತ್ತಿದ್ದವರಿಗೆ ಆರೋಪಿಗಳು ಇಸ್ಲಾಂ ಧರ್ಮದ ಬೋಧನೆ ಮಾಡಿದ್ದಾರೆ. ಈ ಬಗ್ಗೆ ಗಾದಿಲಿಂಗಪ್ಪ ಎಂಬವರು ತೆಕ್ಕಲಕೋಟೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅನ್ಯ ಧರ್ಮದವರು ತಮ್ಮ ಗುರುಗಳ ಬಗ್ಗೆ ಭೋದನೆ ಮಾಡುತ್ತಿರುವ ದೃಶ್ಯವನ್ನು ಅವರು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಅನ್ಯ ಧರ್ಮದವರು ಮಾತನಾಡಿದ ಬಳಿಕ ಯಾತ್ರಾತ್ರಿಗಳಿಗೆ ಬುದ್ಧಿಹೇಳಿದ ಗಾದಿಲಿಂಗಪ್ಪ, ಅವರ ಮಾತು ನಂಬಬೇಡಿ. ಅವರೆಲ್ಲ ಮತಾಂತರ ಮಾಡುತ್ತಾರೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಬಳ್ಳಾರಿಯಲ್ಲಿ ಹೆಚ್ಚಾಯ್ತು ಉಪ ಚುನಾವಣೆ ಕಾವು; ಸಂಡೂರನ್ನು ವಶಪಡಿಸಿಕೊಳ್ಳಲು ಬಿಜೆಪಿ ಪ್ಲಾನ್
ಸದ್ಯ, ಮತಾಂತರ ಮಾಡಲು ಪ್ರಯತ್ನ ಮಾಡಿದ ಆರೋಪದಲ್ಲಿ ತೆಕ್ಕಲಕೋಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಸೇನ್ ಭಾಷ ಎಂಬಾತನನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ನಾಪತ್ತೆಯಾಗಿದ್ದಾನೆ.
ವಿಡಿಯೋ ದಾಖಲೆ ಆಧಾರದ ಮೇಲೆ ಮತಾಂತರ ಯತ್ನ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ