ಬಿಸಿಲ ಬೇಗೆಗೆ ಬಳ್ಳಾರಿ ಮಂದಿ ಹೈರಾಣ: ಜನರಲ್ಲಿ ಹೆಚ್ಚಿದ ಆರೋಗ್ಯ ಸಮಸ್ಯೆ

ಬಳ್ಳಾರಿಯಲ್ಲಿ ಬೇಸಿಗೆಯ ಬಿಸಿಲು ಅತಿ ಬೇಗನೆ ಆವರಿಸಿದ್ದು, ತಾಪಮಾನ 38°C ತಲುಪಿದೆ. ತೀವ್ರ ಸೆಕೆ ಕಾರಣ ನಿರ್ಜಲೀಕರಣ, ಆಯಾಸದಂತಹ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಿದೆ. ಜನರು ತಂಪು ಪಾನೀಯಗಳ ಮೊರೆ ಹೋಗಿದ್ದು, ಅವುಗಳ ದರವೂ ಏರಿದೆ. ಸಂಚಾರ ಸಿಗ್ನಲ್‌ಗಳಲ್ಲಿ ನೆರಳಿನ ವ್ಯವಸ್ಥೆ, ನೀರಿನ ಕುಟೀರಗಳ ಸ್ಥಾಪನೆಗೆ ಸಾರ್ವಜನಿಕರ ಆಗ್ರಹ ಕೇಳಿಬಂದಿದೆ.

ಬಿಸಿಲ ಬೇಗೆಗೆ ಬಳ್ಳಾರಿ ಮಂದಿ ಹೈರಾಣ: ಜನರಲ್ಲಿ ಹೆಚ್ಚಿದ ಆರೋಗ್ಯ ಸಮಸ್ಯೆ
ಸಾಂದರ್ಭಿಕ ಚಿತ್ರ
Image Credit source: Google
Edited By:

Updated on: Mar 04, 2026 | 6:55 PM

ಬಳ್ಳಾರಿ, ಮಾರ್ಚ್​​ 04: ರಾಜ್ಯಾದ್ಯಂತ ಬೇಸಿಗೆಯ ಬಿಸಿ ಆರಂಭವಾಗಿದ್ದು, ಸೆಕೆಯ ವಾತಾವರಣ ಕಂಡುಬರುತ್ತಿದೆ. ಆದ್ರೆ ಗಣಿನಾಡು ಬಳ್ಳಾರಿಯ ಮಂದಿ ಮಾತ್ರ ಈಗಲೇ ಬಿಸಿಲಿನ ಬೇಗೆಗೆ ತತ್ತರಿಸಿ ಹೋಗಿದ್ದಾರೆ. ಕಳೆದ 2-3 ದಿನಗಳಿಂದ ಬಳ್ಳಾರಿಯಲ್ಲಿ 36°, 37° ಮತ್ತು 38° ಸೆಲ್ಸಿಯಸ್ ವರಗೆ ತಾಪಮಾನ ದಾಖಲಾಗಿದೆ. ಹೀಗಾಗಿ ಬಿಸಿಲಿನ ಧಗೆಗೆ ಜನ ಹೈರಾಣಾಗಿದ್ದಾರೆ. ಈಗಾಗಲೇ ಹವಾಮಾನ ಇಲಾಖೆ ಕೂಡ ಜಿಲ್ಲೆಯಲ್ಲಿ ಬಿಸಿಲಿನ ತಾಪ ಮತ್ತಷ್ಟು ಹೆಚ್ಚಾಗುವ ಬಗ್ಗೆ ಮುನ್ಸೂಚನೆ ನೀಡಿದೆ. ವಾತಾವರಣದಲ್ಲಿ ಅತೀ ಹೆಚ್ಚು ಬಿಸಿ ಗಾಳಿ ಸಾಧ್ಯತೆ ಇದ್ದು, ಜನ ಜಾಗೃತಿಯಿಂದಿರುವಂತೆ ತಿಳಿಸಲಾಗಿದೆ.

ಆಸ್ಪತ್ರೆ ಸೇರುತ್ತಿರುವ ಮಂದಿ

ಇನ್ನು ಸೆಕೆ ತಾಳಲಾರದೆ ಜನ ತಂಪುನೀಯಗಳ ಮೊರೆ ಹೋಗುತ್ತಿದ್ದಾರೆ. ಎಳನೀರು, ಜ್ಯೂಸ್​​ನಂತಹ ಪೇಯಗಳ ಜೊತೆಗೆ ಕಲ್ಲಂಗಡಿ ತಿಂದು ಬಿಸಿಲ ಧಗೆಯಿಂದ ತಮ್ಮನ್ನ ತಾವು ಕಾಪಾಡಿಕೊಳ್ಳುತ್ತಿದ್ದಾರೆ. ಬಿಸಿಲಿನ ಶಾಖಕ್ಕೆ ನಿರ್ಜಲೀಕರಣ, ಕಣ್ಣು ಉರಿ, ಆಯಾಸ, ತೆಲೆ ನೋವು ಮುಂತಾದ ಕಾರಣಗಳಿಗೆ ಆಸ್ಪತ್ರೆಯತ್ತ ಮುಖ ಮಾಡುವವರ ಸಂಖ್ಯೆಯೂ ಹೆಚ್ಚಿದೆ.  ಜನ ಮನೆ ಬಿಟ್ಟು ಹೊರ ಬರಲು ಭಯ ಪಡುವ ಪರಿಸ್ಥಿತಿ ಉದ್ಭವಿಸಿದೆ. ಈಗಲೇ ಇಷ್ಟು ಸೆಕೆಯಾದರೆ ನಡು ಬೇಸಿಗೆಯಲ್ಲಿ ದೇವರೇ ನಮ್ಮನ್ನು ಕಾಪಾಡಬೇಕು. ಈಗಲೇ ಊಟ-ತಿಂಡಿ ಬಿಟ್ಟು ಕೇವಲ ತಂಪುಪಾನೀಯಗಳ ಸೇವಿಸಿ ಜೀವನ ಮಾಡುತ್ತಿದ್ದೇವೆ ಎಂದು ಜನರು ಅಲವತ್ತುಕೊಂಡಿದ್ದಾರೆ.

ಇದನ್ನೂ ಓದಿ: ಬೇಸಿಗೆಯಲ್ಲಿ ದೇಹ ತಂಪಾಗಿರಿಸಲು ಈ ಹಣ್ಣುಗಳನ್ನು ಸೇವನೆ ಮಾಡಲೇಬೇಕು

ಟ್ರಾಫಿಕ್ ಸಿಗ್ನಲ್​​ಗಳ ಬಳಿ ನೆರಳಿಗೆ ಆಗ್ರಹ

ಬಿಸಿಲ ಬೇಗೆಯಿಂದ ವಾಹನ ಸವರಾರರನ್ನು ರಕ್ಷಿಸಲು ಜಿಲ್ಲಾಡಳಿತ ಟ್ರಾಫಿಕ್ ಸಿಗ್ನಲ್​​ಗಳ ಬಳಿ ನೆರಳಿಗೆ ವ್ಯವಸ್ಥೆ ಮಾಡಿಕೊಡಬೇಕು. ಅಲ್ಲಲ್ಲಿ ನೀರಿನ ಕುಟೀರಗಳನ್ನ ಸ್ಥಾಪಿಸಿ ಜನರ ದಾಹ ತೀರಿಸುವ ಕೆಲಸ ಮಾಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹ. ಬಿಸಿಲಿನ ಕಾರಣ ಜನ ಹೆಚ್ಚಾಗಿ ತಂಪು ಪಾನೀಯಗಳ ಮೊರೆ ಹೋಗ್ತಿರೋದ್ರಿಂದ ಇದನ್ನೇ ಬಂಡವಾಳ ಮಾಡಿಕೊಂಡ ವ್ಯಾಪಾರಿಗಳು ಅವುಗಳ ದರವನ್ನೂ ಏರಿಕೆ ಮಾಡಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ. ಸೆಕೆಗೆ ಹೈರಾಣಾಗಿರುವ ಗಣಿ ನಾಡಿನ ಮಂದಿ ಒಮ್ಮೆ ಮಳೆ ಬರಲಪ್ಪಾ ಎಂದು ಪ್ರಾರ್ಥನೆ ಕೂಡ ಮಾಡುತ್ತಿದ್ದಾರೆ. ಈ ಹಿಂದೆ ಯಾವ ವರ್ಷವು ಇಷ್ಟು ಪ್ರಮಾಣದ ಬಿಸಿಲು ಇರಲಿಲ್ಲ. ಈ ವರ್ಷ ಮಾತ್ರ ಅಬ್ಬಾ ಅದೆಂತಾ ಸೆಕೆ ಎಂಬು ಉದ್ಗಾರದ ಮಾತುಗಳೂ ಕೇಳಿಬಂದಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:55 pm, Wed, 4 March 26

Follow Us