ಬಳ್ಳಾರಿ: ನನ್ನ ಹೆಸರು ಕೆಡಿಸಲು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಕರೆಂಟ್ ಹೋದ ಬಳಿಕ ಕೆಲವರು ಕರೆ ಮಾಡಿ ಮಾತಾಡಿದ್ದಾರೆ. ಆ ಆಡಿಯೋ ಸಂಗ್ರಹಿಸುತ್ತಿರುವೆ ಎಂದು ಬಳ್ಳಾರಿ ವಿಮ್ಸ್ ನಿರ್ದೇಶಕ ಗಂಗಾಧರಗೌಡ ಸ್ಫೋಟಕ ಹೇಳಿಕೆ ನೀಡಿದರು. ರೋಗಿಗಳು ಸತ್ತ ಬಳಿಕ ಶವವಿಟ್ಟು ಪ್ರತಿಭಟನೆಗೆ ಪ್ಲ್ಯಾನ್ ಮಾಡಿದ್ರು. ನನ್ನ ವಿರುದ್ಧ ಷಡ್ಯಂತ್ರ ನಡೆಸಿದವರ ವಿರುದ್ಧ ದೂರು ನೀಡುತ್ತೇನೆ. ಪೊಲೀಸರಿಗೆ ದೂರು ನೀಡಿ ಕಾನೂನು ಹೋರಾಟ ಮಾಡುವೆ ಎಂದು ಹೇಳಿದರು. ವಿಮ್ಸ್ನಲ್ಲಿ ಮೂವರ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ನಿರ್ದೇಶಕರ ಮೇಲಿನ ಸಿಟ್ಟಿಗೆ ಬಡರೋಗಿಗಳನ್ನ ಬಲಿ ಪಡೆದ್ರಾ ಎನ್ನುವ ಮಾತುಗಳು ಕೇಳಿಬರುತ್ತಿವೆ. ವಿಮ್ಸ್ನ ನಿರ್ದೇಶಕರನ್ನ ಕೆಳಗಿಳಿಸುವುದಕ್ಕೆ ಕರೆಂಟ್ ಕಟ್ ಮಾಡಲಾಗಿದೆ ಎನ್ನಲಾಗುತ್ತಿದ್ದು, ಷಡ್ಯಂತ್ರದ ಕುರಿತು ಬಳ್ಳಾರಿ ವಿಮ್ಸ್ ನಿರ್ದೇಶಕರಿಂದ ಮಾಹಿತಿ ನೀಡಲಾಗಿದೆ. ನಾಳೆ ಬಳ್ಳಾರಿಗೆ ಆರೋಗ್ಯ ಸಚಿವ ಸುಧಾಕರ್ ಭೇಟಿ ನೀಡಲಿದ್ದು, ವಿಮ್ಸ್ಗೆ ಭೇಟಿ ನೀಡಿ ದುರಂತದ ಕುರಿತು ಸಚಿವರ ಪರಿಶೀಲನೆ ಮಾಡಲಿದ್ದಾರೆ.
ನಿರ್ದೇಶಕರನ್ನು ಸುಧಾಕರ್ ನೇಮಕ ಮಾಡಿಲ್ಲ
ಪ್ರಕರಣ ಕುರಿತು ಸಚಿವ ಸುಧಾಕರ್ ಮಾತನಾಡಿದ್ದು, ಸಮಸ್ಯೆ ಇದ್ದಿದ್ದರಿಂದಲೇ ರೋಗಿಗಳು ವೆಂಟಿಲೇಟರ್ನಲ್ಲಿದ್ರು. ಆದ್ರೆ ಘಟನೆಗೆ ಇದೇ ಕಾರಣ ಅಂತ ಈ ಹಂತದಲ್ಲಿ ಹೇಳಲು ಆಗಲ್ಲ. ಶಾಸಕ ಸೋಮಶೇಖರ ರೆಡ್ಡಿ ಅವರು ನಿರ್ದೇಶಕರ ವಿಚಾರ ಮಾತಾಡಿದಾರೆ. ವಿಮ್ಸ್ ನಿರ್ದೇಶಕರ ನೇಮಕ ನಿಯಮದಂತೆ ಆಗಿದೆ. ಸಮಿತಿಯ ಮೂಲಕ ನಿರ್ದೇಶಕರ ನೇಮಕ ಆಗುತ್ತದೆ.
ಅರ್ಹರನ್ನು ಸಂದರ್ಶನ ಮೂಲಕ ನಿರ್ದೇಶಕರನ್ನು ಸಮಿತಿ ನೇಮಿಸುತ್ತದೆ. ಸರ್ಕಾರದ ನಿಬಂಧನೆಗಳ ಅನ್ವಯ ನೇಮಕ ಆಗಿದೆ.
ನಿರ್ದೇಶಕರನ್ನು ಸುಧಾಕರ್ ನೇಮಕ ಮಾಡಿಲ್ಲ. ಆನಂದ್ ಸಿಂಗ್, ಶ್ರೀರಾಮುಲು, ಕರುಣಾಕರ ರೆಡ್ಡಿ ಇದ್ದಾರೆ. ನಿರ್ದೇಶಕರ ನೇಮಕ ಯಾವ ರೀತಿ ಆಗಿದೆ ಅಂತ ಅವರನ್ನು ಕೇಳಲಿ. ಸೋಮಶೇಖರ್ ರೆಡ್ಡಿ ಜವಾಬ್ದಾರಿಯಿಂದ ಮಾತಾಡಬೇಕಾಗುತ್ತದೆ ಎಂದು ಹೇಳಿದರು.
ಪ್ರಾಯೋಜಿತ ಕೊಲೆ ಎಂಬ ಹೇಳಿಕೆ ಬಹಳ ನೋವು ತಂದಿದೆ: ಸಚಿವ ಸುಧಾಕರ್
ವಿಮ್ಸ್ ದುರಂತ ಸರ್ಕಾರಿ ಪ್ರಾಯೋಜಿತ ಕೊಲೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಆರೋಗ್ಯ ಸಚಿವ ಸುಧಾಕರ್ ಬೇಸರ ವ್ಯಕ್ತಪಡಿಸಿದ್ದು, ಪ್ರಾಯೋಜಿತ ಕೊಲೆ ಎಂಬ ಹೇಳಿಕೆ ಬಹಳ ನೋವು ತಂದಿದೆ. ಇದು ಒಬ್ಬ ನಾಯಕರು ಹೇಳುವ ಮಾತಲ್ಲ.
2017ರಲ್ಲಿ ಸಿದ್ದರಾಮಯ್ಯ ಕೆಪಿಎಂಇ ಕಾಯ್ದೆ ತರಲು ಹೊರಟಾಗ ವೈದ್ಯರು ಮೂರು ದಿನ ಬಂದ್ ಮಾಡಿದ್ದಾಗ ಎಷ್ಟು ಸಾವಾಗಿದ್ದವು? 70-80 ಜನ ಸಾವು, ಇದಕ್ಕೆ ಸಿದ್ದರಾಮಯ್ಯ ಹೊಣೆ ಅನ್ನಬಹುದಲ್ವಾ? ಸ್ಪೀಕರ್ ಅನುಮತಿ ಕೊಟ್ರೆ ಸದನದಲ್ಲಿ ಇದನ್ನ ಪ್ರಸ್ತುತ ಪಡಿಸ್ತೇನೆ ಎಂದು ಹೇಳಿದರು.
ಸಿದ್ದರಾಮಣ್ಣ ಜವಾಬ್ದಾರಿಯಿಂದ ಹೇಳಿಕೆ ಕೊಡಲಿ. ನಾಯಕರಾದವರು ಬಹಳ ಜವಾಬ್ದಾರಿಯಿಂದ ಮಾತಾಡಬೇಕು. ಪ್ರಕರಣದ ತನಿಖೆಗೆ ಸಮಿತಿ ರಚಿಸಲಾಗಿದ್ದು ತನಿಖೆ ಆಗುತ್ತಿದೆ. ಬೆಸ್ಕಾಂ ಅಭಿಪ್ರಾಯವೂ ತೆಗೆದುಕೊಳ್ಳುತ್ತಿದ್ದಾರೆ. ಇದು ಬಹಳ ಸೂಕ್ಷ್ಮ ವಿಚಾರ, ಸಮಿತಿ ತನಿಖೆ ಮಾಡುತ್ತಿದೆ. ಪ್ರಾಥಮಿಕ ತನಿಖೆಯ ಮಾಹಿತಿ ಈ ಹಂತದಲ್ಲಿ ಹೇಳುವುದಿಲ್ಲ ಎಂದು ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆ ಸಚಿವ ಸುಧಾಕರ್ ಹೇಳಿಕೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:23 pm, Sat, 17 September 22