ED Raid: ಕಾಂಗ್ರೆಸ್ ಶಾಸಕ ನಾರಾಭರತ್ ರೆಡ್ಡಿ ನಿವಾಸದ ಮೇಲೆ ಇಡಿ ದಾಳಿ
ಬಳ್ಳಾರಿ ಕಾಂಗ್ರೆಸ್ ಶಾಸಕ ನಾರಾಭರತ್ ರೆಡ್ಡಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶನಿವಾರ (ಫೆ.10) ಬೆಳಗ್ಗೆ 6.30ಕ್ಕೆ ಏಕಕಾಲಕ್ಕೆ ಶಾಸಕ ನಾರಾಭರತ ರೆಡ್ಡಿ ಮನೆ, ತಂದೆಯ ಕಚೇರಿ, ಚಿಕ್ಕಪ್ಪ ಪ್ರತಾಪ ರೆಡ್ಡಿ ಮನೆ ಮತ್ತು ಕಚೇರಿಯ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ.
ಬಳ್ಳಾರಿ, ಫೆಬ್ರವರಿ 10: ಆದಾಯ ಮೀರಿ ಆಸ್ತಿಗಳಿಕೆ ಆರೋಪ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ನಾರಾಭರತ್ ರೆಡ್ಡಿ (MLA Nara Bharath Reddy) ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಜಾರಿ ನಿರ್ದೇಶನಾಲಯದ 20 ಅಧಿಕಾರಿಗಳ ನಾಲ್ಕು ತಂಡ ಇಂದು (ಫೆ.10) ಬೆಳಗ್ಗೆ 6.30ಕ್ಕೆ ಏಕಕಾಲಕ್ಕೆ ಶಾಸಕ ನಾರಾಭರತ ರೆಡ್ಡಿ ಮನೆ, ತಂದೆಯ ಕಚೇರಿ, ಚಿಕ್ಕಪ್ಪ ಪ್ರತಾಪ ರೆಡ್ಡಿ ಮನೆ ಮತ್ತು ಕಚೇರಿಯ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾವೆ. ಶಾಸಕ ನಾರಾಭರತ್ ರೆಡ್ಡಿ ಕುಟುಂಬ ಗ್ರಾನೈಟ್ ಬಿಸಿನೆಸ್ ಮಾಡುತ್ತಿದೆ.
ನಗರದ ನೆಹರು ಕಾಲೋನಿಯಲ್ಲಿರುವ ಶಾಸಕ ಭರತ್ ರೆಡ್ಡಿ ಮತ್ತು ಅವರ ಚಿಕ್ಕಪ್ಪ ಪ್ರತಾಪರೆಡ್ಡಿ ಅವರ ಮನೆ ಮೇಲೆ ಹಾಗೂ ಗಾಂಧಿನಗರದಲ್ಲಿರುವ ಶಾಸಕರ ತಂದೆ ಸೂರ್ಯನಾರಾಯಣ ರೆಡ್ಡಿ ಕಚೇರಿ, ಶಾಸಕರ ಆಪ್ತ ರತ್ನಬಾಬು, ಸೋದರ ಸಂಬಂಧಿ ಅನಿಲ್ ಮನೆ ಮೇಲೆ ದಾಳಿ ಮಾಡಿ, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಇನ್ನು ಬೆಂಗಳೂರಿನಿಂದ 7 ವಾಹನಗಳಲ್ಲಿ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಸಿಆರ್ ಪಿಎಫ್ ಭದ್ರತಾ ಸಿಬ್ಬಂದಿಗಳೊಂದಿಗೆ ಆಗಮಿಸಿ ದಾಳಿ ಮಾಡಿದ್ದಾರೆ. ಶಾಸಕ ಕಚೇರಿಯಲ್ಲಿ ನಿಲ್ಲಿಸಿರುವ ಸ್ಕಾರ್ಫಿಯೋ ವಾಹನದಲ್ಲಿನ ವಸ್ತುಗಳನ್ನು ಪರಿಶೀಲಿಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಶಾಸಕರು ಬಳ್ಳಾರಿ ನಗರದಲ್ಲಿಯೇ ಇದ್ದಾರೆ ಎಂದು ಹೇಳಲಾಗುತ್ತಿದೆ. ಶಾಸಕರ ಕುಟುಂಬಕ್ಕೆ ಸಂಬಂಧಿಸಿದಂತೆ ಗ್ರಾನೈಟ್ ವ್ಯವಹಾರ ಇದೆ, ಒಂದು ವರ್ಷದ ಹಿಂದೆ ಶಾಸಕರ ತಂದೆ ಸೂರ್ಯನಾರಾಯಣ ರೆಡ್ಡಿ ಅವರ ಕಚೇರಿಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರು.
ಇದನ್ನೂ ಓದಿ: ಶಾಸಕ ಜನಾರ್ದನ ರೆಡ್ಡಿ ಬಿಜೆಪಿಗೆ ಬಂದರೆ ಮತ್ತೆ ಬಲ ಬರುತ್ತೆ: ಮಾಜಿ ಶಾಸಕ ಸೋಮಶೇಖರ ರೆಡ್ಡಿ
ನಂತರದಲ್ಲಿ ಈಗ ಇಡಿ ದಾಳಿ ನಡೆಸಿದೆ. ಇನ್ನು ಶಾಸಕರ ಚಿಕ್ಕಪ್ಪ ನಾರಾ ಪ್ರತಾಪ ರೆಡ್ಡಿ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಅಲ್ಲೂ ಪರಿಶೀಲನೆ ಮುಂದೆವರೆಸಿದ್ದಾರೆ. ಪ್ರತಾಪ ರೆಡ್ಡಿ ವಿಧಾನ ಪರಿಷತ್ ಪದವೀಧರ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಯಾಗಲು ಸಿದ್ಧತೆಯಲ್ಲಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು ಅವರಿಗೆ ಟಿಕೆಟ್ ನೀಡದಿದ್ದರಿಂದ ಆಮ್ ಆದ್ಮಿ ಪಾರ್ಟಿ ಇಂದ ಸ್ಪರ್ಧಿಸ ಸಿದ್ದತೆ ನಡೆಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಸೋತಿದ್ದರು. ಈಗ ಮತ್ತೊಮ್ಮೆ ಚುನಾವಣೆ ಅಖಾಡಕ್ಕೆ ರೆಡಿಯಾಗಿದ್ದಾರೆ ಈ ಹೊತ್ತಲ್ಲಿ ಇಡಿ ದಾಳಿ ನಡೆದಿದೆ. ಇನ್ನು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಗಾವರಾಳ ಗ್ರಾಮದಲ್ಲಿ ಬಳ್ಳಾರಿ ಶಾಸಕ ಭರತ್ ರೆಡ್ಡಿ ಅವರಿಗೆ ಸೇರಿದ ಗ್ರಾನೈಟ್ ಕ್ವಾರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಗಾವರಾಳ ಗ್ರಾಮದಲ್ಲಿರುವ ಎಸ್ ಆರ್ ಇ ಗ್ರಾನೈಟ್ ಕ್ವಾರಿಗಳು ಒಟ್ಟು ಮೂರು ಕ್ವಾರಿಗಳ ಮೇಲೆ ದಾಳಿ ನಡಸಿ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ರಾಷ್ಟ್ರ ಒಡೆಯುವುದರಲ್ಲಿ ಕಾಂಗ್ರೆಸ್ನವರು ನಿಸ್ಸೀಮರು-ಸಿಟಿ ರವಿ
ದಾಳಿಯ ವೇಳೆಯಲ್ಲಿ ಕೆಲ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ದಾಳಿಯ ವಿಷಯ ತಿಳಿಯುತ್ತಿದ್ದಂತೆ ಕಾಂಗ್ರೆಸ್ ನಾಯಕರು ಶಾಸಕರ ಕಚೇರಿಯ ಮುಂದೆ ಧಾವಿಸಿ, ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ದಾಳಿಯ ಹಿಂದೆ ಕೇಂದ್ರದ ಕೈವಾಡ ಇದೆ, ಕೇವಲ ಕಾಂಗ್ರೆಸ್ ನಾಯಕರ ಮನೆ ಮೇಲೆ ದಾಳಿಯಾಗುತ್ತೆ, ಯಾಕೆ ಬಿಜೆಪಿ ನಾಯಕರು ಯಾವುದು ಬಿಸಿನೆಸ್ ಮಾಡಲ್ವಾ, ಲೋಕ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ದಾಳೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದರು.
ಒಂದು ಕಡೆ ಲೋಕಸಭಾ ಚುನಾವಣೆ ಹತ್ತಿರ ಆಗುತ್ತಿದ್ದು, ಈ ಸಮಯದಲ್ಲಿ ಇಡಿ ದಾಳಿ ಹಲವಾರು ಅನುಮಾನಕ್ಕೆ ಕಾರಣವಾಗಿದೆ, ದಾಳಿಯಲ್ಲಿ ಈಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು ಏನು ಎನ್ನುವ ಸತ್ಯ ಹೊರಬಂದಾಗ ಮಾತ್ರ ಪ್ರಕರಣ ಒಂದು ತಾರ್ಕಿಕ ಅಂತ್ಯ ಕಾಣಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:19 am, Sat, 10 February 24