AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಬಹುತೇಕ ಕಡೆ ಮಳೆ: ಆದರೆ ಬೆಳಗಾವಿ-ಬಳ್ಳಾರಿಯಲ್ಲಿ ಮುಂದುವರಿದ ಬರದ ಬರೆ, ಏನಿದೆ ಚಿತ್ರಣ

ಭೀಕರ ಬರದಿಂದ ಕಂಗೆಟ್ಟಿದ್ದ ರಾಜ್ಯದಲ್ಲಿ ಬಹುತೇಕ ಕಡೆ ಮಳೆಯಾಗುತ್ತಿದ್ದು ಮತ್ತೆ ಸುಭಿಕ್ಷತೆ ಕಾಣುವಂತಾಗಿದೆ. ಆದ್ರೆ ಬೆಳಗಾವಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮಾತ್ರ ಬರದ ಬರೆ ಮುಂದುವರಿದಿದೆ. ಏನಿದೆ ಅಲ್ಲಿನ ಸದ್ಯದ ಚಿತ್ರಣ ಎಂದು ನೋಡುವುದಾದರೆ ಬೆಳಗಾವಿ ಜಿಲ್ಲೆಯಾದ್ಯಂತ ‌ತೀವ್ರ ಬರ ಮುಂದುವರಿದಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ಬಹಳಷ್ಟು ಕೆರೆ ಕಟ್ಟೆಗಳು ಖಾಲಿಯಾಗಿದ್ದವು. ಬಳ್ಳಾರಿಯ ಕೆರೆಗಳಲ್ಲಿ ನೀರಿಲ್ಲದ ಹಿನ್ನೆಲೆ, ಅಂತರ್ಜಲ ಮಟ್ಟ ಕುಸಿದಿದೆ. ನೀರಿಗಾಗಿ ಜನರ ನಿತ್ಯ ಪರದಾಡುವಂತಾಗಿದೆ.

ರಾಜ್ಯದಲ್ಲಿ ಬಹುತೇಕ ಕಡೆ ಮಳೆ: ಆದರೆ ಬೆಳಗಾವಿ-ಬಳ್ಳಾರಿಯಲ್ಲಿ ಮುಂದುವರಿದ ಬರದ ಬರೆ, ಏನಿದೆ ಚಿತ್ರಣ
ರಾಜ್ಯದಲ್ಲಿ ಬಹುತೇಕ ಮಳೆ: ಆದ್ರೆ ಬೆಳಗಾವಿ-ಬಳ್ಳಾರಿಯಲ್ಲಿ ಮುಂದುವರಿದ ಬರ
TV9 Web
| Updated By: ಸಾಧು ಶ್ರೀನಾಥ್​|

Updated on:May 14, 2024 | 11:23 AM

Share

ಬೆಳಗಾವಿ/ಬಳ್ಳಾರಿ: ಭೀಕರ ಬರದಿಂದ ಕಂಗೆಟ್ಟಿದ್ದ ರಾಜ್ಯದಲ್ಲಿ ಬಹುತೇಕ ಕಡೆ ಮಳೆಯಾಗುತ್ತಿದ್ದು (Rainfall in Karnataka) ಮತ್ತೆ ಸುಭಿಕ್ಷತೆ ಕಾಣುವಂತಾಗಿದೆ. ಆದ್ರೆ ಬೆಳಗಾವಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮಾತ್ರ ಬರದ ಬರೆ (drought) ಮುಂದುವರಿದಿದೆ. ಏನಿದೆ ಅಲ್ಲಿನ ಸದ್ಯದ ಚಿತ್ರಣ ಎಂದು ನೋಡುವುದಾದರೆ ಬೆಳಗಾವಿ ಜಿಲ್ಲೆಯಾದ್ಯಂತ ‌ತೀವ್ರ ಬರ ಮುಂದುವರಿದಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ಬಹಳಷ್ಟು ಕೆರೆ ಕಟ್ಟೆಗಳು ಖಾಲಿಯಾಗಿದ್ದವು, ಅವುಗಳಲ್ಲಿ ಈಗ ಜೀವಜಲ ಒಂದು ತೊಟ್ಟು ಸಹ ಇಲ್ಲದಂತಾಗಿದೆ. ಬೆಳಗಾವಿ ‌ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಗೆ ಒಳಪಟ್ಟ ಒಟ್ಟು ‌320 ಕೆರೆಗಳು ಇವೆ. 320 ಕೆರೆಗಳು ಪೈಕಿ 200 ಕೆರೆಗಳು ಸಂಪೂರ್ಣ ಖಾಲಿ ಖಾಲಿಯಾಗಿವೆ. ಇನ್ನುಳಿದ 72 ಕೆರೆಗಳಲ್ಲಿ ಶೇ‌. 30 ರಷ್ಟು ಮಾತ್ರ ನೀರು ಇದೆ (belagavi, ballari).

15 ಕೆರೆಗಳಲ್ಲಿ ಶೇ. 50 ರಷ್ಟು ಹಾಗೂ ಮೂರೇ ಮೂರು ಕೆರೆಗಳಲ್ಲಿ ಶೇ. 99 ರಷ್ಟು ನೀರಿನ ಸಂಗ್ರಹ ಇದೆ. ನೀರಿನಿಂದ ಕಂಗೊಳಿಸಬೇಕಿದ್ದ ಕೆರೆಗಳ ಒಡಲಿನಲ್ಲಿ ಬಿರುಕು ಕಾಣಿಸಿಕೊಂಡಿವೆ. ಸರ್ಕಾರದ ಮಹತ್ವಾಕಾಂಕ್ಷೆಯ ಕೆರೆ ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಬಂದಿಲ್ಲ. ಕೆರೆ ಬತ್ತಿರುವ ಕಾರಣಕ್ಕೆ ಅಂತರ್ಜಲ ಮಟ್ಟ ಕುಸಿದಿದೆ. ‌ಬೋರ್‌ವೆಲ್‌ಗಳ ಕಾರ್ಯವೂ ಸಂಪೂರ್ಣ ಸ್ಥಗಿತಗೊಂಡಿವೆ. ಅಂದಹಾಗೆ ಈ ಕೆರೆಗಳೆಲ್ಲವೂ ಬೆಳಗಾವಿ ಜಿಲ್ಲೆಯ 30,813 ಹೆಕ್ಟೇರ್ ಕೃಷಿ ‌ಪ್ರದೇಶಕ್ಕೆ ಅನುಕೂಲ ಕಲ್ಪಿಸುತ್ತಿದ್ದವು. ಕೆರೆ ತೀರದ ಪ್ರದೇಶಗಳಲ್ಲಿ ಈಗ ಕುಡಿಯುವ ನೀರಿಗೆ ಹಾಹಾಕಾರ ಹೆಚ್ಚಾಗಿದೆ. ನೀರಿಲ್ಲದೇ ಜನ-ಜಾನುವಾರು ಕಂಗಾಲಾಗಿದ್ದು ಕಬ್ಬು, ತರಕಾರಿ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ.

ಇನ್ನು ರಣ ಬಿಸಿಲಿನ ಬಳ್ಳಾರಿ ಜಿಲ್ಲೆಯ ಪರಿಸ್ಥಿತಿ ಈಗಂತೂ ಮತ್ತಷ್ಟು ಆತಂಕಕಾರಿಯಾಗಿದೆ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಬೇಸಿಗೆ ಮುಗಿಯುತ್ತಾ ಬಂದಿದ್ದು ಮಳೆ ಬಿರುಸು ಜೋರಾಗುತ್ತಿದೆ. ಆದರೆ ರಣ ಬಿಸಿಲು ಖ್ಯಾತಿಯ ಬಳ್ಳಾರಿಯಲ್ಲಿ ಮಳೆ ಕೊರೆತೆಯಾಗಿ ಕೆರೆಗಳು ಬತ್ತಿವೆ. ಕೆರೆಗಳು ಹನಿ ನೀರಿಲ್ಲದೆ ಒಣಗುತ್ತಿವೆ. ಬಳ್ಳಾರಿ ಜಿಲ್ಲೆಯಾದ್ಯಂತ 30 ಕ್ಕೂ ಹೆಚ್ಚು ಕೆರೆಗಳು ನೀರಿಲ್ಲದೆ ಬರಡು ಬರಡಾಗಿವೆ. ಜಿಲ್ಲೆಯಾದ್ಯಂತ 67 ಕೆರೆಗಳಿವೆ, ಅದರಲ್ಲಿ 30 ಕ್ಕೂ ಹೆಚ್ಚು ಕೆರೆಗಳಲ್ಲಿ ನೀರಿಲ್ಲವಾಗಿದೆ.

ಇದನ್ನೂ ಓದಿ: Karnataka Rains: ಕರ್ನಾಟಕದ ಕರಾವಳಿ, ಶಿವಮೊಗ್ಗ, ಕೊಡಗು ಸೇರಿದಂತೆ ಹಲವೆಡೆ ಬಿರುಗಾಳಿ ಸಹಿತ ಮಳೆಯ ಮುನ್ಸೂಚನೆ

ಬಳ್ಳಾರಿಯ ಕೆರೆಗಳಲ್ಲಿ ನೀರಿಲ್ಲದ ಹಿನ್ನೆಲೆ, ಅಂತರ್ಜಲ ಮಟ್ಟ ಕುಸಿದಿದೆ. ನೀರಿಗಾಗಿ ಜನರ ನಿತ್ಯ ಪರದಾಡುವಂತಾಗಿದೆ. ನಗರ, ಗ್ರಾಮೀಣ ಪ್ರದೇಶಗಳಲ್ಲಿ ನೀರಿಗೆ ಹಾಹಾಕಾರ ಎದ್ದಿದೆ. ಬಳ್ಳಾರಿ ಗ್ರಾಮೀಣ ಭಾಗದ ರೂಪನಗುಡಿ ಕೆರೆಯಲ್ಲಿ ಒಂದು ಹನಿ ನೀರಿಲ್ಲದೆ ಬರಡಾಗಿದೆ. ಮಳೆಗಾಲದಲ್ಲಿ ಕೆರೆ ತುಂಬಿಸುವ ವ್ಯವಸ್ಥೆ ಮಾಡಬೇಕು ಅಂತಾ ಜನರು ಒತ್ತಾಯ ಮಾಡಿದ್ದಾರೆ.

ಟಿಬಿ ಡ್ಯಾಂ ನಿಂದ ಕೆರೆಗಳಿಗೆ ನೀರು ಹರಿಸಲು ಒತ್ತಾಯ:

ಭೀಕರ ಬರ ಪರಿಸ್ಥಿತಿಯಿಂದಾಗಿ ನದಿಗಳಿಂದ ಕೆರೆಗಳ ತುಂಬಿಸುವ ಯೋಜನೆ ತರಲು ಇಲ್ಲಿನ ರೈತಾಪಿ ಜನರು ಒತ್ತಾಯ ಮಾಡಿದ್ದಾರೆ. ಇನ್ನು ವಿಜಯನಗರ ಜಿಲ್ಲೆ ವ್ಯಾಪ್ತಿಯಲ್ಲಿ 91 ಕೆರೆಗಳಿವೆ. 91 ಕೆರೆಗಳಲ್ಲಿ 50 ಕ್ಕೂ ಹೆಚ್ಚು ಕೆರೆಗಳು ನೀರಿಲ್ಲದೆ ಒಣಗಿವೆ. ಅವಳಿ‌ ಜಿಲ್ಲೆಯಲ್ಲಿ ಮಳೆಯಾಗದಿದ್ದರೆ ನೀರಿನ ಅಭಾವ ಮತ್ತಷ್ಟು ಭೀಕರವಾಗಿ ಕಾಡಲಿದೆ. ಅವಳಿ ಜಿಲ್ಲೆಯಲ್ಲಿ ಒಟ್ಟು 158 ಕೆರೆಗಳಿವೆ. ಅದರಲ್ಲಿ ಶೇಕಡಾ 60 % ಕೆರೆಗಳಲ್ಲಿ ನೀರಿಲ್ಲದೆ ಜನರ ಪರಿಸ್ಥಿತಿ ಶೋಚನೀಯವಾಗಿದೆ.

ಮಳೆ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:22 am, Tue, 14 May 24