ಮತ್ತೆ ಗಣಿ ಲೂಟಿ ಸಂಕಷ್ಟಕ್ಕೆ ಸಿಲುಕಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ
ಗಣಿನಾಡು ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆಯ ಭೂತ ಮತ್ತೆ ಸದ್ದು ಮಾಡುತ್ತಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ನಡೆಸಿದ ಸರ್ವೇಯಲ್ಲಿ, ಆಂಧ್ರದ ಗಣಿ ಕಂಪನಿಗಳು ಕರ್ನಾಟಕದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿದ್ದು ದೃಢಪಟ್ಟಿದೆ. ಈ ಸ್ಫೋಟಕ ವರದಿಯಿಂದ ಜನಾರ್ದನ ರೆಡ್ಡಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಬಳ್ಳಾರಿ, ಡಿಸೆಂಬರ್ 28: ಅಕ್ರಮ ಗಣಿಗಾರಿಯ (Mining) ಭೂತ ಮತ್ತೆ ಗಣಿನಾಡು ಬಳ್ಳಾರಿಯಲ್ಲಿ ಸದ್ದು ಮಾಡುತ್ತಿದೆ. ಪಕ್ಕದ ರಾಜ್ಯ ಆಂಧ್ರದ ಗಣಿಗಾರಿಕೆ ಪರ್ಮಿಟ್ ಹೆಸರಲ್ಲಿ, ಕರ್ನಾಟಕದ ಭೂಮಿಯನ್ನೇ ಒತ್ತುವರಿ ಮಾಡಿಕೊಂಡಿರುವುದು ಇದೀಗ ಸಾಬೀತಾಗಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ನಡೆಸಿದ ಹೈಟೆಕ್ ಸರ್ವೇಯಲ್ಲಿ ಈ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಈ ಸ್ಪೋಟಕ ಮಾಹಿತಿಯಿಂದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿಗೆ (Janardhana Reddy) ಮತ್ತೆ ಸಂಕಷ್ಟ ಎದುರಾಗಿದೆ.
ಅಕ್ರಮ ಗಣಿಗಾರಿಯ ಭೂತ ಮತ್ತೆ ಗಣಿನಾಡು ಬಳ್ಳಾರಿಯಲ್ಲಿ ಸದ್ದು ಮಾಡುತ್ತಿದೆ. ಪಕ್ಕದ ರಾಜ್ಯ ಆಂಧ್ರದ ಗಣಿಗಾರಿಕೆ ಪರ್ಮಿಟ್ ಹೆಸರಲ್ಲಿ, ಕರ್ನಾಟಕದ ಭೂಮಿಯನ್ನೇ ಒತ್ತುವರಿ ಮಾಡಿಕೊಂಡಿರುವುದು ಇದೀಗ ಸಾಬೀತಾಗಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ನಡೆಸಿದ ಹೈಟೆಕ್ ಸರ್ವೇಯಲ್ಲಿ ಈ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ: Bengaluru Air Quality Alert: ಬಳ್ಳಾರಿ ಜನರಿಗೆ ಹೈ ಅಲರ್ಟ್ ನೀಡಿದ ತಜ್ಞರು, ರಾಜ್ಯದಲ್ಲಿ ಗಾಳಿಯ ಮಟ್ಟ ಕಳಪೆ
ಕಳೆದ ತಿಂಗಳು ನಿವೃತ್ತ ನ್ಯಾಯಾಧೀಶ ಸುಧಾಂಶ ಧುಲಿಯಾ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಆಂಧ್ರದ ರಾಯದುರ್ಗ ತಾಲೂಕಿನ ಮಲಪನಗುಡಿ ಗ್ರಾಮಕ್ಕೆ ಭೇಟಿ ನೀಡಿ ಡ್ರೋನ್ ಮೂಲಕ ಸರ್ವೇ ನಡೆಸಿತ್ತು. ಇದರಲ್ಲಿ ಅಂತರಗಂಗಮ್ಮ ಹೆಸರಿನ 68.50 ಹೆಕ್ಟೇರ್, ಸಿದ್ದಾಪುರದಲ್ಲಿನ ಬಿಐಒಸಿ ಕಂಪನಿಯ 27.12 ಹೆಕ್ಟೇರ್, ವೈ. ಮಹಾಬಲೇಶ್ವರಪ್ಪ ಸನ್ಸ್ ಹೆಸರಿನ 20.24 ಹೆಕ್ಟೇರ್, ಒಬಳಾಪುರಂ ಗ್ರಾಮದಲ್ಲಿನ ಒಎಂಸಿ ಹೆಸರಿನ 25.98 ಹೆಕ್ಟೇರ್, ಒಎಂಪಿ2 ಹೆಸರಿನ 39.50 ಹೆಕ್ಟೇರ್ ಪ್ರದೇಶಗಳಲ್ಲಿ ಗಣಿ ಗುತ್ತಿಗೆ ಸಂಬಂಧ ಎರಡು ಹಂತಗಳಲ್ಲಿ ಸರ್ವೇ ಮಾಡಿತ್ತು. ಈ ಸರ್ವೇಯಲ್ಲಿ ಜನಾರ್ದನ್ ರೆಡ್ಡಿ ಒಡೆತನದ ಓಎಂಸಿ 2 ಹೆಸರಿನಲ್ಲಿ 39.50 ಹೆಕ್ಟೇರ್, ಅಂತರಗಂಗಮ್ಮ ಹೆಸರಿನ 68.50 ಹೆಕ್ಟೇರ್ ಪ್ರದೇಶಗಳಲ್ಲಿ ಗಣಿಗುತ್ತಿಗೆ ಪ್ರದೇಶ ಮತ್ತು ಗಡಿಗಳ ಹೊಂದಾಣಿಕೆ ಆಗಿಲ್ಲ. ಈ ಕಂಪನಿಗಳು ಕರ್ನಾಟಕ ರಾಜ್ಯದಲ್ಲಿ ಅತಿಕ್ರಮಣ ಮಾಡಿವೆ ಎಂದು ವರದಿ ಸಲ್ಲಿಕೆ ಮಾಡಿದೆ.
ಜನಾರ್ದನ ರೆಡ್ಡಿ ಒಡೆತನದ ಒಎಂಸಿ ಕಂಪನಿ ಕರ್ನಾಟಕ ಮತ್ತು ಆಂಧ್ರದ ನಡುವಿನ ಅಂತಾರಾಜ್ಯ ಗಡಿ ನಾಶಪಡಿಸಿದೆ ಎಂಬ ಆರೋಪ ಮೊದಲಿನಿಂದಲೂ ಇದೆ. ಇದೀಗ ನ್ಯಾಯಮೂರ್ತಿ ಧುಲಿಯಾ ಸಮಿತಿ ಸರ್ವೇಯಲ್ಲಿ ಬಯಲಾಗಿದೆ. ಮೀಸಲು ಅರಣ್ಯ ಪ್ರದೇಶಗಳಾದ ವಿಠಲಾಪುರ, ತುಮಟಿ ಸೇರಿ ವಿವಿಧೆಡೆ ಅಕ್ರಮವಾಗಿ 28.90 ಲಕ್ಷ ಟನ್ ಅದಿರನ್ನು ಹೊರತೆಗೆದು ಅಕ್ರಮವಾಗಿ ಸಾಗಣೆ ಮಾಡಲಾಗಿದೆ ಎಂಬುದು ಸಾಬೀತಾಗಿ, ಸಿಬಿಐ ವಿಚಾರಣಾಧೀನ ನ್ಯಾಯಾಲಯ ರೆಡ್ಡಿಗೆ ಶಿಕ್ಷೆ ಪ್ರಕಟಿಸಿತ್ತು. ಅಮಿಕಸ್ ಕ್ಯೂರಿ ಹಾಗೂ ಆಂಧ್ರ ಪ್ರದೇಶದ ಸಮ್ಮಿರೆಡ್ಡಿ ಸಮಿತಿ ನೀಡಿದ ವರದಿ ಅನ್ವಯ ಸುಪ್ರೀಂಕೋರ್ಟ್ ಈ ಹೊಸ ಸಮಿತಿ ರಚಿಸಿತ್ತು.
ಇದನ್ನೂ ಓದಿ: ಹತ್ತು ಕೋಟಿ ರೂ ವಿದ್ಯಾರ್ಥಿಗಳ ಶುಲ್ಕ ಬಾಕಿ: ಆರ್ಥಿಕ ಸಂಕಷ್ಟದಲ್ಲಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ
ಸದ್ಯ ಈ ವರದಿಯಲ್ಲೂ ಅತಿಕ್ರಮಣ ನಡೆದಿದೆ ಎಂಬುದು ದೃಢಪಟ್ಟಿದ್ದು, ಇದೀಗ ಜನಾರ್ದನ್ ರೆಡ್ಡಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಇನ್ನು ನಿವೃತ್ತಿ ನ್ಯಾ. ದುಲಿಯಾ ವರದಿಗೆ ಗಣಿಗುತ್ತೆಗೆ ಮಾಲೀಕರಿಂದ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. 2026 ಜನವರಿ 05 ರಂದು ದೆಹಲಿಯಲ್ಲಿ ಸಭೆ ನಡೆಯಲಿದೆ. ದಾಖಲೆ ಸಲ್ಲಿಸದಿದ್ದರೆ ದುಲಿಯಾ ಸಮಿತಿ ವರದಿಯನ್ನ ಮೂರು ತಿಂಗಳ ಒಳಗೆ ಅಂತಿಮ ವರದಿ ಆಧಾರವಾಗಿ ಶಿಕ್ಷೆ ಪ್ರಕಟಿಸುವ ಸಾಧ್ಯತೆ ಇದೆ. ಇನ್ನು 29 ಲಕ್ಷ ಟನ್ ಅದಿರು ಮಾರಾಟ ಸಂಬಂಧ ಹಣ ವಸೂಲಿಗೆ ಆಗ್ರಹಿಸಿ ಗಣಿ ಉದ್ಯಮಿ ಟಪಾಲ್ ಗಣೇಶ್ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಈವರೆಗೆ ಕ್ರಮವಾಗಿಲ್ಲ ಅಂತಾರೆ ದೂರುದಾರ ಟಪಾಲ್ ಗಣೇಶ.
ಒಟ್ಟಿನಲ್ಲಿ ರಾಜ್ಯದ ಗಡಿ ಭಾಗವನ್ನ ಅಕ್ರಮವಾಗಿ ಒತ್ತುವರಿ ಮಾಡಿ ಅಲ್ಲಿ ಗಣಿ ಲೂಟಿ ಮಾಡಲಾಗಿದೆ ಎನ್ನುವುದು ನಿವೃತ್ತ ನ್ಯಾಯಾಧೀಶ ದುಲಿಯಾ ವರದಿಯಲ್ಲಿ ಸಾಬೀತಾಗಿದೆ. ಮುಂದಾಗುವ ಬೆಳವಣಿಗೆ ಬಗ್ಗೆ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



