ಸಂಡೂರ ವಿಧಾನಸಭೆ ಉಪ ಚುನಾವಣೆ: ಕಾಂಗ್ರೆಸ್​ನಿಂದ ತುಕಾರಾಂ, ಬಿಜೆಪಿಯಿಂದ ಶ್ರೀರಾಮುಲು ಕುಟುಂಬ ಲಾಬಿ

Sandur Assembly constituency by election; ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ಇದೀಗ ರಾಜ್ಯದಲ್ಲಿ ತೆರವಾಗಿರುವ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಕಾವು ನಿಧಾನವಾಗಿ ಏರತೊಡಗಿದೆ. ಬಳ್ಳಾರಿಯ ಸಂಡೂರ ಕೂಡ ಅವುಗಳಲ್ಲೊಂದು. ಸಂಡೂರ ವಿಧಾನಸಭೆ ಉಪ ಚುನಾವಣೆ ಟಿಕೆಟ್ ಲಾಬಿ ಕುರಿತ ವರದಿ ಇಲ್ಲಿದೆ.

ಸಂಡೂರ ವಿಧಾನಸಭೆ ಉಪ ಚುನಾವಣೆ: ಕಾಂಗ್ರೆಸ್​ನಿಂದ ತುಕಾರಾಂ, ಬಿಜೆಪಿಯಿಂದ ಶ್ರೀರಾಮುಲು ಕುಟುಂಬ ಲಾಬಿ
ಕಾಂಗ್ರೆಸ್​ನಿಂದ ತುಕಾರಾಂ, ಬಿಜೆಪಿಯಿಂದ ಶ್ರೀರಾಮುಲು ಕುಟುಂಬ ಲಾಬಿ
Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: Ganapathi Sharma

Updated on: Jun 26, 2024 | 9:21 AM

ಬಳ್ಳಾರಿ, ಜೂನ್ 26: ಗಣಿನಾಡು ಬಳ್ಳಾರಿಯ ಸಂಡೂರ ವಿಧಾನಸಭಾ (Sandur Assembly constituency) ಕ್ಷೇತ್ರದಲ್ಲಿ ಮತ್ತೆ ಉಪ ಚುನಾವಣೆ ಕಾವು ಜೋರಾಗುತ್ತಿದೆ. ಈ ಹಿಂದೆ ಶಾಸಕರಾಗಿ ಗೆದ್ದಿದ್ದ ಇ ತುಕಾರಾಂ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಸಂಸದರಾಗಿದ್ದಾರೆ. ಹೀಗಾಗಿ ಸಂಡೂರ ವಿಧಾನ ಸಭಾ ಕ್ಷೇತ್ರಕ್ಕೆ ರಾಜೀನಾಮೆ ಕೊಡಬೇಕಾದ ಪರಿಸ್ಥಿತಿ ಬಂತು. ಇ ತುಕಾರಾಂ ರಾಜೀನಾಮೆ ಬಳಿಕ ರಾಷ್ಟ್ರೀಯ ಪಕ್ಷಗಳ ಟಿಕೆಟ್‌ಗಾಗಿ ಭರ್ಜರಿ ಲಾಬಿ ಶುರುವಾಗಿದೆ. ಈಗಾಗಲೇ ಕಾಂಗ್ರೆಸ್ ನಿಂದ ಇ ತುಕಾರಾಂ (E Tukaram) ಕುಟುಂಬಕ್ಕೆ ಟಿಕೆಟ್ ನೀಡಲಾಗುತ್ತದೆ ಎಂಬ ಮಾಹಿತಿ ಹರಿದಾಡುತ್ತಿದೆ. ಸಂಸದರ ಪುತ್ರಿ ಚೈತನ್ಯ ತುಕಾರಾಂಗೆ ಟಿಕೆಟ್ ನೀಡಬೇಕು ಎನ್ನುವುದು ಸಂಸದರ ಒತ್ತಾಯವಾಗಿದೆ‌‌. ಇದರ ಮದ್ಯ ಸಂತೋಷ್ ಲಾಡ್ ಕೂಡ ತನ್ನದೆ ಕ್ಯಾಂಡಿಡೇಟ್‌ಗೆ ಟಿಕೆಟ್ ಕೊಡಿಸುವ ತಂತ್ರ ಕೂಡ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇವರ ನಡುವೆ ಕಾಂಗ್ರೆಸ್ (Congress) ಟಿಕೆಟ್ ಯಾರ ಪಾಲಾಗುತ್ತೆ ಎನ್ನುವ ಕುತೂಹಲ ಮೂಡಿದೆ.

ಅತ್ತ ಟಿಕೆಟ್‌ಗಾಗಿ ಬಿಜೆಪಿಯಲ್ಲೂ ತೆರೆಮರೆ ಕಸರತ್ತು ಜೋರಾಗಿಯೇ ಸಾಗಿದೆ. ಈಗಾಗಲೇ ಜನಾರ್ದನ ರೆಡ್ಡಿ ಆಪ್ತ ದಿವಾಕರ ಬಾಬು ತಮಗೆ ಟಿಕೆಟ್ ನೀಡಬೇಕು ಅಂತಾ ಶತ ಪ್ರಯತ್ನ ಮಾಡುತ್ತಿದ್ದಾರೆ. ಈ ಮದ್ಯೆ ಶ್ರೀರಾಮುಲು ಕೂಡ ಟಿಕೆಟ್​​ಗಾಗಿ ಲಾಬಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಈಗಾಗಲೇ ಕಳೆದ ವಿಧಾನ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಗೇಂದ್ರ ವಿರುದ್ಧ ಸೋತಿದ್ದ ರಾಮುಲು ಮತ್ತೆ ಲೋಕಸಭಾ ಯಲ್ಲಿ ಸ್ಪರ್ಧೆ ಮಾಡಿ ತುಕಾರಾಂ ವಿರುದ್ಧ ಸೋಲನುಭವಿಸಿದ್ದಾರೆ. ಬಳಿಕ ಈಗ ಮತ್ತೆ ಸಂಡೂರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಯಾಗಿ ಶ್ರೀರಾಮುಲು ಹೆಸರು ಜೋರಾಗಿಯೇ ಕೇಳಿಸುತ್ತಿದೆ.

ಇದನ್ನೂ ಓದಿ: ಕೇಂದ್ರದ ಒಪ್ಪಿಗೆ ನಂತರವೂ ಬಳ್ಳಾರಿ ದೇವದಾರಿ ಬೆಟ್ಟದಲ್ಲಿ ಗಣಿಗಾರಿಕೆಗೆ ರಾಜ್ಯ ತಡೆ, ಹೆಚ್​​​ಡಿಕೆಗೆ ಹಿನ್ನಡೆ

ಒಟ್ಟಿನಲ್ಲಿ ಸಂಡೂರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆ ಕಾವು ಜೋರಾಗಿದ್ದು ರಾಷ್ಟ್ರೀಯ ಪಕ್ಷಗಳ ಟಿಕೆಟ್ ಗಾಗಿ ಭರ್ಜರಿ ಲಾಬಿ ನಡೆಯುತ್ತಿದೆ. ಯಾವ ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆ, ಜೊತೆಗೆ ಬರುವ ಚುನಾವಣೆಯನ್ನ ಜನ ಯಾರ ಕೈ ಹಿಡಿಯುತ್ತಾರೆ ಎನ್ನುವುದನ್ನ ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ