SBI Bank Holalu: ಗ್ರಾಹಕರ ಜೊತೆ ಬ್ಯಾಂಕ್ ಮ್ಯಾನೇಜರ್ ಅಸಭ್ಯ ವರ್ತನೆ -ಬ್ಯಾಂಕಿನಲ್ಲೆ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾದ ರೈತ
ಇದೆ ವೇಳೆ ಶಾಖೆಯ ವ್ಯವಸ್ಥಾಪಕ ಗ್ರಾಹಕರಿಗೆ ಸರಿಯಾದ ಸೇವೆಗಳನ್ನು ನೀಡುತ್ತಿಲ್ಲ ಎಂದು ಬ್ಯಾಂಕಿಗೆ ಬಂದಿದ್ದ ಗ್ರಾಹಕ ಬಸವರಾಜ ಎಂಬುವವರು ಮಾತನಾಡಿ ಕಳೆದ ವಾರ ನಾನು ಬೇರೆ ಖಾತೆಗೆ ಹಣ ವರ್ಗಾವಣೆ ಮಾಡಲು ಬಂದರೆ ಅದರ ಸ್ಲಿಪ್ ಹರಿದು ನಮ್ಮ ಮೇಲೆ ಎಸೆದು ಅಸಭ್ಯ ವರ್ತನೆ ತೋರಿದ್ದು ಅಲ್ಲದೆ ಬ್ಯಾಂಕಿನಿಂದ ನಿಮ್ಮ ಖಾತೆಯನ್ನು ಬೇಕಾದರೆ ಕಿತ್ತುಕೊಂಡು ಹೋಗಿ ಎಂದು ಕೇವಲವಾಗಿ ಮಾತನಾಡಿದರು ಎಂದು ಅಲವತ್ತುಕೊಂಡರು.
ವಿಜಯನಗರ: ಅಡವಿಟ್ಟ ಚಿನ್ನವನ್ನು ಬಿಡಿಸಿಕೊಳ್ಳಲು ಬಂದ ಗ್ರಾಹಕನಿಗೆ ವಿನಾಕಾರಣ ಕಿರಿಕಿರಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಎಸ್.ಬಿ.ಐ ಬ್ಯಾಂಕ್ ವ್ಯವಸ್ಥಾಪಕರೊಬ್ಬರ ವಿರುದ್ಧ ಬೇಸತ್ತ ರೈತ ಗ್ರಾಹಕ ಬ್ಯಾಂಕಿನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾದ ಘಟನೆ ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ ನಡೆದಿದೆ.
ಏನು ಮಾಡೋದು ಸ್ವಾಮಿ ನನ್ನ ಜಮೀನು ನಿರ್ವಹಣೆಗಾಗಿ ನಮ್ಮ ಸಹೋದರಿಯರ 36 ಗ್ರಾಂ ಚಿನ್ನವನ್ನು ಅಡವಿಟ್ಟು ಈ ಬ್ಯಾಂಕಿನಲ್ಲಿ ಕಳೆದ 2021 ಮೇ ತಿಂಗಳಲ್ಲಿ 92 ಸಾವಿರ ರೂ ಸಾಲ ಪಡೆದಿದ್ದೆ. ಕಳೆದ ತಿಂಗಳು ನನ್ನ ಕಬ್ಬಿನ ಹಣ ಈ ಬ್ಯಾಂಕಿನಲ್ಲಿರುವ ನನ್ನ ಉಳಿತಾಯ ಖಾತೆಗೆ ಜಮಾವಣೆಗೊಂಡಿತ್ತು. ಅದರಲ್ಲಿ ವಹಿವಾಟು ನಡೆಸಿ ಚಿನ್ನ ಬಿಡಿಸಲೆಂದೆ 1 ಲಕ್ಷ 35 ಸಾವಿರ ರೂಪಾಯಿ ಹಣವನ್ನು ಖಾತೆಯಲ್ಲಿ ಉಳಿಸಿ, ಕಳೆದ ಮಾರ್ಚ್ 11ರಂದು ಬ್ಯಾಂಕಿಗೆ ಬಂದು ಲೆಕ್ಕ ಮಾಡಿಸಲಾಗಿ ಅಸಲು ಮತ್ತು ಬಡ್ಡಿ ಸೇರಿ ಒಟ್ಟು 98,885 ರೂಪಾಯಿ ಹಣ ಕಟ್ಟಬೇಕು ಎಂದರು.
ನನ್ನ ಉಳಿತಾಯ ಖಾತೆಯಲ್ಲಿ ಹಣ ಇದ್ದುದ್ದರಿಂದ ಅದನ್ನು ಸಾಲಕ್ಕೆ ಹಾಕಿಕೊಂಡು ಚಿನ್ನವನ್ನು ಬಿಟ್ಟು ಕೊಡಬೇಕೆಂದು ವ್ಯವಸ್ಥಾಪಕರಲ್ಲಿ ವಿನಂತಿಸಿದೆ. ಆಗ ವ್ಯವಸ್ಥಾಪಕರು 1 ಲಕ್ಷ ಹೋಲ್ಡ್ ಮಾಡಿಕೊಂಡಿದ್ದು ಅಲ್ಲದೆ, ಒಂದು ವಾರ ಬೆಳ್ಳಗ್ಗಿನಿಂದ ಸಂಜೆಯವರೆಗೂ ಊಟವಿಲ್ಲದೆ ಕೂಡಿಸಿಕೊಂಡು ಸತಾಯಿಸಿದರಲ್ಲದೆ 25 ಸಾವಿರ ಇನ್ಸೂರೆನ್ಸ್ ಮಾಡಿಸಿದರೆ ಮಾತ್ರ ಚಿನ್ನ ಬಿಟ್ಟು ಕೊಡುವುದಾಗಿ ಹೇಳುತ್ತಿದ್ದಾರೆ.
ಹೀಗೆ ಒಂದು ತಿಂಗಳಿಂದ ಪ್ರತಿದಿನ ಬ್ಯಾಂಕಿಗೆ ಅಲೆಯುತ್ತಿದ್ದೇನೆ. ಸಂಕಷ್ಟದಲ್ಲಿರುವ ರೈತರು ಹಣ ಪರುಪಾವತಿ ಮಾಡುವುದೇ ಕಷ್ಟಸಾಧ್ಯದ ಪರಿಸ್ಥಿತಿ ಇರುವಾಗ ನಾವು ಸಾಲ ಮರುಪಾವತಿ ಮಾಡುತ್ತೇವೆಂದರೆ ಇವರು ಈ ರೀತಿ ಕಿರುಕುಳ ಕೊಡುತ್ತಿದ್ದಾರೆ. ವ್ಯವಸ್ಥಾಪಕರ ಕಿರುಕುಳಕ್ಕೆ ಬೇಸತ್ತ ನಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದೇನೆ. ನನ್ನ ಸಾವಿಗೆ ಈ ವ್ಯವಸ್ಥಾಪಕರೆ ಕಾರಣ ಎಂದು ವಿಷ ಸೇವಿಸಲು ಮುಂದಾದ ಸಮೀಪದ ಹಿರೇಬನ್ನಿಮಟ್ಟಿ ಗ್ರಾಮದ ತುಮ್ಮಣ್ಣನವರ ಯಲ್ಲಪ್ಪ ಎಂಬ ರೈತನನ್ನು ಬ್ಯಾಂಕನಲ್ಲಿದ್ದ ಗ್ರಾಹಕರು ತಡೆದರಲ್ಲದೆ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡರು.
ಗ್ರಾಹಕರ ಜೊತೆ ಅಸಭ್ಯ ವರ್ತನೆ ಇದೆ ವೇಳೆ ಈ ಶಾಖೆಯ ವ್ಯವಸ್ಥಾಪಕರು ಗ್ರಾಹಕರಿಗೆ ಸರಿಯಾದ ಸೇವೆಗಳನ್ನು ನೀಡುತ್ತಿಲ್ಲ ಎಂದು ಬ್ಯಾಂಕಿಗೆ ಬಂದಿದ್ದ ಗ್ರಾಹಕ ಬಸವರಾಜ ಎಂಬುವವರು ಮಾತನಾಡಿ ಕಳೆದ ವಾರ ನಾನು ಬೇರೆ ಖಾತೆಗೆ ಹಣ ವರ್ಗಾವಣೆ ಮಾಡಲು ಬಂದರೆ ಅದರ ಸ್ಲಿಪ್ ಹರಿದು ನಮ್ಮ ಮೇಲೆ ಎಸೆದು ಅಸಭ್ಯ ವರ್ತನೆ ತೋರಿದ್ದು ಅಲ್ಲದೆ ಬ್ಯಾಂಕಿನಿಂದ ನಿಮ್ಮ ಖಾತೆಯನ್ನು ಬೇಕಾದರೆ ಕಿತ್ತುಕೊಂಡು ಹೋಗಿ ಎಂದು ಕೇವಲವಾಗಿ ಮಾತನಾಡಿದರು ಎಂದು ಅಲವತ್ತುಕೊಂಡರು.
ರೈತರಾದ ನಾವು ಸರಿಯಾದ ಸಮಯಕ್ಕೆ ಹಣ ಸಿಗದೆ ಪರದಾಡುತ್ತಿದ್ದೇವೆ. ಬ್ಯಾಂಕ್ ಸಿಬ್ಬಂದಿಯ ಈ ರೀತಿಯ ವರ್ತನೆಯಿಂದ ಬೇಸತ್ತು ಹೋಗಿದ್ದೇವೆ ಎಂದು ಬ್ಯಾಂಕಿಗೆ ಬಂದಿದ್ದ ನೂರಾರು ಗ್ರಾಹಕರು ಈ ವ್ಯವಸ್ಥಾಪಕರ ಬಗ್ಗೆ ಒಂದೊಂದು ರೀತಿಯ ಆರೋಪವನ್ನು ಮಾಡಿದರಲ್ಲದೆ ಕೂಡಲೆ ಈ ವ್ಯವಸ್ಥಾಪಕರನ್ನು ಬದಲಾಯಿಸಿ ಉತ್ತಮ ಸೇವೆ ನೀಡದಿದ್ದರೆ ಬ್ಯಾಂಕ್ ಬಂದ್ ಮಾಡಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬ್ಯಾಂಕಿನ ರೀಜನಲ್ ಮ್ಯಾನೇಜರ್: ಹೊಳಲು ಶಾಖೆಯಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತು ಅನೇಕ ಗ್ರಾಹಕರು ಕರೆ ಮಾಡಿ ತಿಳಿಸಿದ್ದಾರೆ. ಈ ಕುರಿತು ತನಿಖೆ ಮಾಡಿ ಕೂಡಲೆ ವ್ಯವಸ್ಥಾಪಕರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಬ್ಯಾಂಕಿನ ರೀಜನಲ್ ಮ್ಯಾನೇಜರ್ ರವಿ ರಾಮ್ ಪ್ರತಿಕ್ರಿಯೆ ನೀಡಿದ್ದಾರೆ.
Published On - 7:14 pm, Wed, 6 April 22