ಬಳ್ಳಾರಿ, ಜನವರಿ 24: ಬಿಜೆಪಿ ನಾಯಕ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ನಡುವಣ ಬಿರುಕು ಹೆಚ್ಚಾಗಿದ್ದು, ಉಭಯ ನಾಯಕರು ಪತ್ರಿಕಾಗೋಷ್ಠಿ ಕರೆದು ಬಹಿರಂಗವಾಗಿಯೇ ಪರಸ್ಪರ ಕೆಸರೆರಚಿಕೊಂಡಿದ್ದಾರೆ. ಮತ್ತೊಂದೆಡೆ, ಕರ್ನಾಟಕದಲ್ಲಿ ಬಿಜೆಪಿ ಬಣ ರಾಜಕೀಯ ತೀವ್ರಗೊಂಡಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ರಾಮುಲು ವರ್ಸಸ್ ರೆಡ್ಡಿ ಸಮರ ಹೈಕಮಾಂಡ್ ಗಮನ ಸೆಳೆದಿದ್ದು, ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ.
ಸದ್ಯ ದೆಹಲಿ ಭೇಟಿಗೆ ರಾಮುಲು ಒಂದು ವಾರ ಸಮಯಾವಕಾಶ ಕೇಳಿದ್ದು, ಅದಕ್ಕೂ ಮುನ್ನ ಅತ್ಯಾಪ್ತರು, ಬೆಂಬಲಿಗರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಬಳ್ಳಾರಿ ನಿವಾಸದಲ್ಲೂ ಗುರುವಾರ ಸಾಲು ಸಾಲು ಸಭೆಗಳನ್ನು ನಡೆಸಿದ್ದರು. ಜನಾರ್ದನ ರೆಡ್ಡಿ ಪತ್ರಿಕಾಗೋಷ್ಠಿ ನಡೆಸಿ ಸಾಲುಸಾಲು ಆರೋಪಗಳನ್ನು ಮಾಡಿದ ಬೆನ್ನಲ್ಲೇ ರಾಮುಲು ನಿವಾಸದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಏತನ್ಮಧ್ಯೆ, ರಾಮುಲು ಹಾಗೂ ರೆಡ್ಡಿ ಮುನಿಸು ಪಕ್ಷದ ಮೇಲೆ ಪರಿಣಾಮ ಬೀರದಂತೆ ರಾಜ್ಯ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದೆ. ರಾಮುಲು ಅವರನ್ನು ಕರೆದು ಮಾತನಾಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ತಿಳಿಸಲಾಗಿದೆ. ಏನೇ ಗೊಂದಲ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸುವಂತೆ ದೆಹಲಿ ನಾಯಕರು ಸಂದೇಶ ರವಾನಿಸಿದ್ದಾರೆ. ಈ ಮೂಲಕ ಬಳ್ಳಾರಿಯ ಬಿಜೆಪಿ ಬಣ ಬಡಿದಾಟಕ್ಕೆ ಮುಲಾಮು ಹಚ್ಚಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ.
ಇತ್ತ ರಾಮುಲು ಆಪ್ತರು, ಬೆಂಬಲಿಗರಿಂದ ಅಭಿಪ್ರಾಯ ಸಂಗ್ರಹ ನಡೆಯುತ್ತಿದೆ. ರಾಮುಲು ಹೈಕಮಾಂಡ್ ಭೇಟಿಗೆ ಒಂದು ವಾರ ಕಾಲಾವಕಾಶ ಕೇಳಿದ್ದು, ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ದೆಹಲಿಗೆ ರಾಮುಲುರನ್ನು ಕರೆದುಕೊಂಡು ಬರುವ ಜವಾಬ್ದಾರಿಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಪಕ್ಷ ತೊರೆಯುವ ಮಾತನಾಡುತ್ತಿದ್ದಂತೆಯೇ ಶ್ರೀರಾಮುಲುಗೆ ದಿಲ್ಲಿಯಿಂದ ಫೋನ್ ಕರೆ
ಗುರುವಾರ ಪತ್ರಿಕಾಗೋಷ್ಠಿ ನಡೆಸಿದ್ದ ಜನಾರ್ದನ ರೆಡ್ಡಿ, ಶ್ರೀರಾಮುಲು ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದರು. ಅಲ್ಲದೆ, ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಮಣಿಸುವುದಕ್ಕಾಗಿ ಶ್ರೀರಾಮುಲು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ಡಿಸಿಎಂ ಡಿಕೆ ಶಿವಕುಮಾರ್ ಯತ್ನಿಸುತ್ತಿದ್ದಾರೆ ಎಂದು ರೆಡ್ಡಿ ಸ್ಫೋಟಕ ಆರೋಪ ಮಾಡಿದ್ದರು. ಆದರೆ ಇದನ್ನು ಡಿಕೆ ಶಿವಕುಮಾರ್ ಅಲ್ಲಗಳೆದಿದ್ದಾರೆ. ಈ ಎಲ್ಲದರ ಬೆನ್ನಲ್ಲೇ ರಾಮುಲು ಕೂಡ ರೆಡ್ಡಿಗೆ ತಿರುಗೇಟು ನೀಡಿದ್ದರು. ನಂತರ ಹೈಕಮಾಂಡ್ ಭೇಟಿಯಾಗುವ ನಿರ್ಧಾರಕ್ಕೆ ಬಂದಿದ್ದರಾದರೂ, ದಿಢೀರಾಗಿ ಒಂದು ವಾರ ಕಾಲಾವಕಾಶ ಕೇಳಿದ್ದಾರೆ. ಇದು ಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ