ಬೆಂಗಳೂರು, ಜುಲೈ 02: 50:50 ಅನುಪಾತದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (Muda) ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ “ಇದು ಬಿಜೆಪಿಯವರ (BJP) ಕಾಲದಲ್ಲಿ ಆಗಿದ್ದು. 1 ಎಕರೆ 15 ಗುಂಟೆ ಜಮೀನು ನನ್ನ ಹೆಂಡತಿ ಹೆಸರಿನಲ್ಲಿದೆ. ಈ ಜಮೀನನ್ನು ಬಾಮೈದ ತೆಗೆದುಕೊಂಡು ಅರಿಶಿನ-ಕುಂಕಮ ರೀತಿಯಲ್ಲಿ ಉಡುಗೊರೆಯಾಗಿ ನನ್ನ ಪತ್ನಿಗೆ ಕೊಟ್ಟಿದ್ದಾನೆ. ನಾನು ಅಧಿಕಾರದಲ್ಲಿದ್ದಾಗ ಜಮೀನು ಖರೀದಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾನೂನು ಪ್ರಕಾರ 50:50 ಅನುಪಾತದಲ್ಲಿ ಜಮೀನು ಕೊಡುವುದಾಗಿ ಮುಡಾ ಹೇಳಿದೆ. ಆದರೆ ಮುಡಾದವರು ಜಮೀನನ್ನು ಸೈಟ್ ಮಾಡಿ ಹಂಚಿಬಿಟ್ಟರು. ಹಂಚಿದ ಮೇಲೆ ನಮಗೆ ಜಮೀನು ಇಲ್ಲದೆ ಹಾಗೆ ಆಯ್ತು. ಅದಕ್ಕೆ ಮುಡಾದವರು ನಿಮಗೆ 50:50 ಅನುಪಾತದಲ್ಲಿ ಜಮೀನು ಕೊಡುತ್ತೇವೆ ಅಂದರು. ಅದಕ್ಕೆ ಬೇರೆ ಕಡೆ ಜಮೀನು ಕೊಟ್ಟರು, ಇದು ತಪ್ಪಾ? ಕಾನೂನಿನ ಪ್ರಕಾರವೇ ನಮಗೆ ಜಮೀನು ಹಂಚಿದ್ದಾರೆ ಎಂದು ಹೇಳಿದರು.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ಹೆಸರು ಕೇಳಿ ಬರುತ್ತಿದೆ. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಫಲಾನುಭವಿ ಅಂತ ಹೇಳುತ್ತಿದ್ದಾರೆ. ಈ ಸಂಬಂಧ ಅನೇಕರು ಹಿಟ್ ಆ್ಯಂಡ್ ರನ್ ಹೇಳಿಕೆ ಕೊಡುತ್ತಿದ್ದಾರೆ. ದಾಖಲೆ ಇಲ್ಲದೆ ಸುಮ್ಮನೆ ಆರೋಪ ಮಾಡಬಾರದು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
ಇದನ್ನೂ ಓದಿ: ಮುಡಾ ಹಗರಣ: ಗೋಲ್ಮಾಲ್ ಸಿಎಂ 4000 ಕೋಟಿ ಗುಳುಂ, ಆರ್ ಅಶೋಕ ವಾಗ್ದಾಳಿ
2004ರಲ್ಲಿ ಕೆಸರೆ ಗ್ರಾಮದ ಸರ್ವೆ ನಂ.464ರಲ್ಲಿ 3.16 ಎಕರೆ, ಸರ್ವೆ ನಂ.464ರಲ್ಲಿ 3.16 ಎಕರೆ ಮಲ್ಲಿಕಾರ್ಜುನ್ ಎಂಬುವರಿಗೆ ಸೇರಿದೆ. 1988ರಲ್ಲಿ ದೇವನೂರು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಪಾರ್ವತಿ ಅವರಿಗೆ ಜಾಗವನ್ನು ದಾನ ಪತ್ರ ಮೂಲಕ ಕೊಟ್ಟಿದ್ದಾರೆ. 2007ರಲ್ಲಿ 50:50 ಅನುಪಾತದಲ್ಲಿ ಕಾನೂನಿನ ಮೂಲಕ ಪರಿಹಾರವಾಗಿ 71,457 ಚದರ ಅಡಿ ಜಾಗ ಕೊಡಬೇಕಿತ್ತು. ಆದರೆ, 38,284 ಚದರ ಅಡಿ ಜಾಗ ಕೊಟ್ಟಿದ್ದಾರೆ ಎಂದು ತಿಳಿಸಿದರು.
ವಿಜಯನಗರ ಬಡಾವಣೆಯಲ್ಲಿ 14 ನಿವೇಶನ ಕೊಟ್ಟಿದ್ದಾರೆ. ಇದರಿಂದ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ನಷ್ಟವೇ ಆಗಿದೆ. ಸಿಎಂ ಪತ್ನಿ ಪಾರ್ವತಿ ಅವರಿಗೆ 2021ರಲ್ಲಿ ಜಾಗ ಕೊಡಲಾಗಿದೆ. ಆಗ ಬಿಜೆಪಿ ಸರ್ಕಾರವೇ ಇತ್ತು, ಮುಡಾ ಪುಕ್ಕಟೆಯಾಗಿ ಕೊಟ್ಟಿಲ್ಲ ಎಂದು ಹೇಳಿದರು.
ನಗರಾಭಿವೃದ್ಧಿ ಸಚಿವರು ಮೈಸೂರಿಗೆ ಭೇಟಿ ನೀಡಿ ತನಿಖೆಗೆ ಆದೇಶ ಮಾಡಿದ್ದಾರೆ. ಹಿಂದೆ ಆಗಿರುವ ಬಗ್ಗೆ ಮಾಹಿತಿ ಇದೆ, ನಮ್ಮ ಸರ್ಕಾರ ಬಂದ ಮೇಲೆ 50:50 ಅನುಪಾತದಲ್ಲಿ ಸೈಟು ಹಂಚಿಕೆ ಆಗಿಲ್ಲ. ಅಧಿಕಾರ ವರ್ಗಾವಣೆ ಶಿಕ್ಷೆಯಲ್ಲ, ಅದು ಪ್ರಕ್ರಿಯೆ ಅಷ್ಟೇ. ತನಿಖೆ ವರದಿ ಬಂದ ಮೇಲೆ ಯಾರು ತಪ್ಪು ಮಾಡಿದ್ದಾರೆ ಅವರಿಗೆ ಕಾನೂನಾತ್ಮಕ ಶಿಕ್ಷೆ ಆಗುತ್ತದೆ ಎಂದು ಸಚಿವ ಹೆಚ್ ಸಿ ಮಹದೇವಪ್ಪ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:43 pm, Tue, 2 July 24