ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್ ಭೇಟಿ ಬಗ್ಗೆ ಬಸನಗೌಡ ಯತ್ನಾಳ ಲೇವಡಿ

ಬಿಜೆಪಿ ಕೇಂದ್ರ ಸಮಿತಿಯ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್ ಕರ್ನಾಟಕ ಭೇಟಿಯ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಯತ್ನಾಳ ವ್ಯಂಗ್ಯವಾಡಿದ್ದಾರೆ.

  • Publish Date - 6:10 pm, Wed, 30 June 21 Edited By: Ghanashyam D M | ಡಿ.ಎಂ.ಘನಶ್ಯಾಮ
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್ ಭೇಟಿ ಬಗ್ಗೆ ಬಸನಗೌಡ ಯತ್ನಾಳ ಲೇವಡಿ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಬೆಂಗಳೂರು: ಬಿಜೆಪಿ ಕೇಂದ್ರ ಸಮಿತಿಯ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್ ಕರ್ನಾಟಕ ಭೇಟಿಯ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಯತ್ನಾಳ ವ್ಯಂಗ್ಯವಾಡಿದ್ದಾರೆ. ‘ಅರುಣ್ ಸಿಂಗ್ ಬರುವಾಗಲೇ ಗೊತ್ತಿತ್ತು ಏನು ಹೇಳುತ್ತಾರೆ ಎನ್ನುವುದು ಗೊತ್ತಿತ್ತು. ವಿಮಾನ ನಿಲ್ದಾಣದಿಂದಲೇ ಅರುಣ್​ ಸಿಂಗ್ ಮಾತು ಆರಂಭಿಸಿದ್ದರು. ಒಬ್ಬ ಪ್ರಧಾನಿಗೆ ಸಿಗುವಷ್ಟು ಪ್ರಚಾರ ಅವರಿಗೆ ಸಿಕ್ಕಿತ್ತು. ಅರುಣ್ ಸಿಂಗ್ ಏರ್​ಪೋರ್ಟ್​ನಿಂದ ಬಂದಿದ್ದೇನು, ಕುಮಾರಕೃಪಾ ಗೆಸ್ಟ್​ಹೌಸ್​ನಲ್ಲಿ ಕೈಬೀಸಿದ್ದೇನು’ ಎಂದು ಲೇವಡಿ ಮಾಡಿದರು.

ನನಗೆ ಈ ಎಲ್ಲ ವಿಷಯ ಗೊತಿತ್ತು. ಹೀಗಾಗಿಯೇ ನಾನು ಅರುಣ್ ಸಿಂಗ್ ಭೇಟಿ ಮಾಡಲಿಲ್ಲ. ವಿಜಯೇಂದ್ರ ಎಲ್ಲರನ್ನೂ ಮ್ಯಾನೇಜ್ ಮಾಡ್ತಾರೆ. ದುಷ್ಟರ ಸಂಹಾರ ಆಗಿಯೇ ಆಗುತ್ತೆ. ಆದರೆ ಅದಕ್ಕೂ ಕಾಲ ಕೂಡಿ ಬರಬೇಕು ಎಂದು ಯಡಿಯೂರಪ್ಪ ಕುಟುಂಬದ ವಿರುದ್ಧ ಹರಿಹಾಯ್ದರು.

ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಏನೇನೋ ಅದು ಇದೂ ಮಾಡ್ತಾರೆ ಅದರ ಪರಿಣಾಮ ಮುಂದೆ ಅನುಭವಿಸುತ್ತಾರೆ. ಹಾಲಿ ಸಿಎಂ ಜೈಲಿಗೆ ಹೋದ ಉದಾಹರಣೆ ಇದೆ. ಮುಂದೆಯೂ ಹೀಗೆ ಆಗಬಾರದು ಎನ್ನುವುದು ನಮ್ಮ ಆಶಯ. ಪ್ರಧಾನಿ ನರೇಂದ್ರ ಮೋದಿ ಸಹ ಭ್ರಷ್ಟಾಚಾರ ಸಹಿಸುವುದಿಲ್ಲ ಎಂಬ ವಿಶ್ವಾಸ ಇದೆ. ಆ ವಿಶ್ವಾಸ ಫಲ ಕೊಡುತ್ತದೆ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂದು ಮಾರ್ಮಿಕವಾಗಿ ನುಡಿದರು. ಎಂಟು ಹತ್ತು ಸಾವಿರ ಕೋಟಿ ಇದೆ ಅಂತ ಮಠಗಳನ್ನು ಖರೀದಿ ಮಾಡಿದರೆ ಹೆಚ್ಚು ದಿನ ನಡೆಯುವುದಿಲ್ಲ ಎಂದು ಹೇಳಿದರು.

ಮುರುಗೇಶ್ ನಿರಾಣಿ ಅವರ ಹೆಸರು ಪ್ರಸ್ತಾಪಿಸದೇ ಆಕ್ರೋಶ ಹೊರಹಾಕಿದ ಬಸನಗೌಡ ಯತ್ನಾಳ್, ಪಂಚಮಸಾಲಿ ಮೀಸಲಾತಿ ಹೋರಾಟ ನಿಂತಿಲ್ಲ. ಆ ಹೋರಾಟದಲ್ಲಿ ಒಬ್ಬ ರಾಜಕಾರಣಿ ನಗ್ನನಾಗಿದ್ದಾನೆ ಎಂದು ಏಕವಚನದಲ್ಲಿ ಮಾತನಾಡಿದರು.

ಕೆಲವರು ಯಡಿಯೂರಪ್ಪ ನಮ್ಮ ನಾಯಕ ಎಂದು ಹೊರಗೆ ಹೇಳುತ್ತಾರೆ. ಆದರೆ ಒಳಗೆ ಹೋಗಿ ಯಾವಾಗ ಬೇಕಾದರೂ ಮುಖ್ಯಮಂತ್ರಿಯನ್ನು ಬದಲಿಸಿ ಎನ್ನುತ್ತಾರೆ. ಆದಷ್ಟೂ ಬೇಗ ಮುಖ್ಯಮಂತ್ರಿಯನ್ನು ಬದಲಿಸಿ ಎಂದು ಒಳಗೊಳಗೆ ಮಾತನಾಡುವವರು ಹೊರಗೆ ಬಂದು ಜಯಕಾರ ಹಾಕುತ್ತಾರೆ. ನಾನು ಅಂಥವನಲ್ಲ ಎಂದು ಹೇಳಿದರು.

ಯತ್ನಾಳ್ ಆರೋಪಕ್ಕೆ ನಿರಾಣಿ ಬೇಸರ
ತಮ್ಮ ವಿರುದ್ಧ ಶಾಸಕ ಬಸನಗೌಡ ಯತ್ನಾಳ ಮಾಡಿರುವ ಆರೋಪಗಳಿಗೆ ಸಚಿವ ಮುರುಗೇಶ್ ನಿರಾಣಿ ಬೇಸರ ವ್ಯಕ್ತಪಡಿಸಿದ್ದಾರೆ. ಹಾದಿಬೀದಿಯಲ್ಲಿ ನಿಂತು ಮಾತಾಡೋವರಿಗೆ ನಾನು ಉತ್ತರಕೊಡಲ್ಲ. ವೀರಶೈವ ಸಮುದಾಯ ಪ್ರಬುದ್ಧವಾಗಿದೆ. ಯಾರು‌ ದುರ್ಬಲರು ಅನ್ನೋದನ್ನು ತೀರ್ಮಾನ ಮಾಡುತ್ತೆ. ಕೇವಲ ಪಂಚಮಸಾಲಿ ಸಮುದಾಯ ಪರ ನಾನು ಹೋರಾಡುತ್ತಿಲ್ಲ, ಇಡೀ ವೀರಶೈವ ಲಿಂಗಾಯತ ಪರ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

(Basanagouda Yatnal comments on BJP Karnataka In Charge Arun Singh)

ಇದನ್ನೂ ಓದಿ: Karnataka BJP: ಯೋಗೇಶ್ವರ್ -ಯತ್ನಾಳ್ ರಹಸ್ಯ ಭೇಟಿ, ರಮೇಶ್ ಜಾರಕಿಹೊಳಿ ದಿಢೀರ್‌ ದೆಹಲಿಗೆ; ಬಿಜೆಯಲ್ಲಿ ಮತ್ತೆ ತಳಮಳ

ಇದನ್ನೂ ಓದಿ: ಫೇಸ್​ಬುಕ್ ಪೋಸ್ಟ್ ಮೂಲಕ ಸಿಎಂ ಯಡಿಯೂರಪ್ಪ ಕುಟುಂಬವನ್ನು ಕುಟುಕಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್