
ಹೋರಾಟ ಆರಂಭಿಸುವುದು ಸುಲಭವಲ್ಲ. ಜನರ ಬೆಂಬಲವಿಲ್ಲದೆ, ಸರ್ಕಾರದ ಯೋಜನೆಯ ವಿರುದ್ಧ, ಪ್ರಕೃತಿಯ ಪರವಾಗಿ ಧ್ವನಿ ಎತ್ತುವುದು ಇನ್ನೂ ಕಷ್ಟ. ಬೇಡ್ತಿ ನದಿ ಉಳಿಸುವ ಸತ್ಯಾಗ್ರಹ ಶುರುವಾದಾಗ ಜನರ ಪ್ರತಿಕ್ರಿಯೆ ಹಲವು ಬಗೆಯಾಗಿತ್ತು.
“ಮಾಗೋಡು, ಕಾರವಾರ ಅಂತ ಎಲ್ಲೆಲ್ಲೋ ಸತ್ಯಾಗ್ರಹ ಮಾಡಿದರೆ ಸರ್ಕಾರದ ಕೆಲಸ ನಿಲ್ಲುತ್ತದೆಯೇ? ಆ ಅನಸೂಯಾ ಶರ್ಮಾಳಿಗೆ ಬೇರೆ ಕೆಲಸವಿಲ್ಲವೇ?” ಎಂಬ ನೋವಿನ ಮಾತುಗಳಿಂದ ಹೋರಾಟಗಾರರ ಆತ್ಮವಿಶ್ವಾಸ ಕುಗ್ಗಿಸುವ ಪ್ರಯತ್ನ ನಡೆಯಿತು.
“ಏನಾದರೂ ಸಾಧಿಸಿದರೆ ಆಗ ನಾವೂ ಜೊತೆಯಾಗೋಣ” ಎಂದು ಕಾದು ನೋಡಿದವರು.
“ಭಾಗವಹಿಸಿದರೆ ಯಾವ ಸಮಸ್ಯೆ ಎದುರಾಗುತ್ತದೋ? ಎಲ್ಲರಿಗೆ ಆದಂತೆ ನಮಗೂ ಆಗುತ್ತದೆ” ಎಂದು ನಿಷ್ಕ್ರಿಯರಾದವರು.
ದೂರದಲ್ಲಿ ನಿಂತು ಧೈರ್ಯದ ಮಾತಾಡುವುದು ಸುಲಭ. ಆದರೆ ಮುಂಚೂಣಿಯಲ್ಲಿ ನಿಂತು ಟೀಕೆ, ಅಪಹಾಸ್ಯ, ಒತ್ತಡ ಎದುರಿಸುವುದು ಕಷ್ಟ.
ಇಷ್ಟೆಲ್ಲಾ ವಿರೋಧದ ನಡುವೆಯೂ ಕೆಲವರು ತಮ್ಮ ಪ್ರಯತ್ನದ ಮೇಲೆ ನಂಬಿಕೆ ಕಳೆದುಕೊಳ್ಳಲಿಲ್ಲ. “ನಮ್ಮ ನದಿ ಉಳಿಸಲು ನಾವು ಹೋರಾಡಲೇಬೇಕು” ಎಂಬ ದೃಢ ಸಂಕಲ್ಪದಿಂದ ಮುಂದೆ ಸಾಗಿದರು. ಅವರ ಸ್ನೇಹ, ಸಹಕಾರ, ನಿರಂತರ ಪ್ರಯತ್ನ ಮತ್ತು ನಿಸ್ವಾರ್ಥ ಸೇವೆಯಿಂದಲೇ ಬೇಡ್ತಿ ಯೋಜನೆ ವಿರುದ್ಧದ ಹೋರಾಟಕ್ಕೆ ನಾಂದಿಯಾಯಿತು.
ಅಂದು ಜನಜಾಗೃತಿ ಮೂಡಿಸುವುದು ಮುಖ್ಯವಾಗಿತ್ತು. ಇಂದು ನಮ್ಮ ಕೈಯಲ್ಲಿ ದಾಖಲೆಗಳಿವೆ, ಅಧಿಕೃತ ಪತ್ರಗಳಿವೆ, ಸರ್ಕಾರದ ಉತ್ತರಗಳಿವೆ, ನದಿ ನೀರಿನ ಲಭ್ಯತೆಯ ಬಗ್ಗೆ ಪ್ರಶ್ನೆಗಳಿವೆ. ಹಾಗಾಗಿ ಕೇವಲ ವಿರೋಧ ಸಾಕಾಗದು. ವೈಜ್ಞಾನಿಕ ದತ್ತಾಂಶ, ಕಾನೂನು ಹೋರಾಟ ಮತ್ತು ಜನಸಹಭಾಗಿತ್ವದ ಮೂಲಕ ಯೋಜನೆಯನ್ನು ಸಂಪೂರ್ಣ ರದ್ದುಗೊಳಿಸುವತ್ತ ಸಾಗಬೇಕು.
ಇದು ಒಬ್ಬ ವ್ಯಕ್ತಿಯ ಅಥವಾ ಒಂದು ಸಂಘಟನೆಯ ಹೋರಾಟವಲ್ಲ. ಬೇಡ್ತಿ, ಅಘನಾಶಿನಿ, ಗಂಗಾವಳಿ ನದಿಗಳನ್ನು ಮತ್ತು ಪಶ್ಚಿಮಘಟ್ಟದ ಪರಿಸರವನ್ನು ಉಳಿಸುವ ಹೋರಾಟ. ಪ್ರತಿ ಗ್ರಾಮದಲ್ಲೂ ಜಾಗೃತಿ ಮೂಡಬೇಕು.
ನೀರಿನ ವೈಜ್ಞಾನಿಕ ದತ್ತಾಂಶ ಸಾರ್ವಜನಿಕವಾಗಲಿ:
ಬೇಡ್ತಿ–ಗಂಗಾವಳಿ ನದಿಗಳ ಮಳೆಗಾಲ ಮತ್ತು ಬೇಸಿಗೆಯ ಹರಿವಿನ ಕನಿಷ್ಠ 20 ವರ್ಷಗಳ ಪರಿಶೀಲಿತ ದಾಖಲೆಗಳನ್ನು ಕೇಳಬೇಕು:
ಈ ಪ್ರಶ್ನೆಗಳಿಗೆ ವೈಜ್ಞಾನಿಕ ಉತ್ತರ ಸಿಗುವವರೆಗೆ ಯೋಜನೆಯ ಮುಂದಿನ ಯಾವ ಪ್ರಕ್ರಿಯೆಯೂ ನಡೆಯಬಾರದು ಎಂದು ಒತ್ತಾಯಿಸಬೇಕು.
ನಮ್ಮ ಬೇಡಿಕೆ ಯೋಜನೆಯನ್ನು ತಾತ್ಕಾಲಿಕವಾಗಿ ತಡೆಯುವುದಲ್ಲ. ಬೇಡ್ತಿ–ವರದಾ ಮತ್ತು ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆಗಳನ್ನು ಸಂಪೂರ್ಣ ರದ್ದುಗೊಳಿಸಬೇಕು. ನೀರಿನ ದತ್ತಾಂಶ ಮತ್ತು ಪರಿಸರ ಅಧ್ಯಯನಗಳಿಲ್ಲದೆ DPR, PFR, ಸಮೀಕ್ಷೆ ಸೇರಿದಂತೆ ಯಾವುದೇ ಮುಂದಿನ ಪ್ರಕ್ರಿಯೆ ಮುಂದುವರಿಸಬಾರದು.
ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಮತ ಕೇಳಲು ಬರುವ ಪ್ರತಿ ಅಭ್ಯರ್ಥಿಯನ್ನೂ ಕೇಳಬೇಕು: “ಬೇಡ್ತಿ ಮತ್ತು ಅಘನಾಶಿನಿ ನದಿಗಳನ್ನು ಉಳಿಸುವ ಪರವಾಗಿ ನೀವು ನಿಲ್ಲುತ್ತೀರಾ? ಯೋಜನೆ ರದ್ದುಗೊಳಿಸಲು ನಿಮ್ಮ ಸ್ಪಷ್ಟ ನಿಲುವೇನು?” ಮಾತಿನ ಭರವಸೆ ಸಾಲದು, ಲಿಖಿತ ಬೆಂಬಲ ಬೇಕು.
ನದಿ ಎಂದರೆ ಕೇವಲ ನೀರಿನ ಹರಿವಲ್ಲ. ಅದು ಕೃಷಿ, ಕುಡಿಯುವ ನೀರು, ಅರಣ್ಯ, ಜೀವವೈವಿಧ್ಯ, ಮೀನುಗಾರಿಕೆ ಮತ್ತು ಮುಂದಿನ ಪೀಳಿಗೆಯ ಬದುಕಿನ ಆಧಾರ. ಅಧ್ಯಯನ, ದಾಖಲೆ ಸಂಗ್ರಹ, ಜನಜಾಗೃತಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಸತ್ಯವನ್ನು ಜನರಿಗೆ ತಲುಪಿಸುವ ಕೆಲಸ ಯುವಜನರಿಂದ ಆಗಬೇಕು.
ಯಾರು ಮೊದಲು ಹೋರಾಡಿದರು, ಯಾರ ಹೆಸರು ಪ್ರಚಾರವಾಯಿತು, ಯಾರು ಹೆಚ್ಚು ಮಾತಾಡಿದರು ಎನ್ನುವುದಕ್ಕಿಂತ ನದಿ ಉಳಿಯುವುದು ಮುಖ್ಯ. ವ್ಯಕ್ತಿಗಿಂತ ಹೋರಾಟ ದೊಡ್ಡದು, ಸಂಘಟನೆಗಿಂತ ನದಿ ದೊಡ್ಡದು, ವೈಯಕ್ತಿಕ ಪ್ರತಿಷ್ಠೆಗಿಂತ ಪಶ್ಚಿಮಘಟ್ಟದ ಭವಿಷ್ಯ ದೊಡ್ಡದು. ಅಂದು ಅಪಹಾಸ್ಯ ಮಾಡಿದವರು ಇಂದು ಏನು ಹೇಳುತ್ತಾರೆ ಎನ್ನುವುದು ಮುಖ್ಯವಲ್ಲ. ಅಂದು ಸುಮ್ಮನಿದ್ದವರು ಇಂದು ಕೈಜೋಡಿಸುತ್ತಾರೆಯೇ, ಅಂದು ದೂರದಿಂದ ನೋಡಿದವರು ಇಂದು ಮುಂಚೂಣಿಗೆ ಬರುತ್ತಾರೆಯೇ ಎನ್ನುವುದು ಮುಖ್ಯ.
ಆರಂಭದಲ್ಲಿ ಕೆಲವರಷ್ಟೇ ಇದ್ದರು. ಆದರೆ ನದಿ ಉಳಿಸುವ ಹೊಣೆ ಇಂದು ನಮ್ಮೆಲ್ಲರ ಮೇಲಿದೆ. ನಾಳೆ ನಮ್ಮ ಮಕ್ಕಳು, ಮೊಮ್ಮಕ್ಕಳು “ನಮ್ಮ ಊರಿನ ನದಿ ಉಳಿಸಲು ನೀವು ಏನು ಮಾಡಿದಿರಿ?” ಎಂದು ಕೇಳಿದಾಗ ನಮ್ಮಲ್ಲಿ ಉತ್ತರ ಇರಬೇಕು. “ನಾವು ಪ್ರಯತ್ನಿಸಿದ್ದೆವು” ಎಂದು ಹೆಮ್ಮೆಯಿಂದ ಹೇಳುವ ಅವಕಾಶವನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ಇದು ಯಾರ ವಿರುದ್ಧದ ಹೋರಾಟವೂ ಅಲ್ಲ; ನಮ್ಮ ನದಿಗಳ ಪರವಾದ ಹೋರಾಟ.
ಬೇಡ್ತಿ–ವರದಾ ನದಿ ಜೋಡಣೆ ಬೇಡ. ಅಘನಾಶಿನಿ–ವೇದಾವತಿ ನದಿ ಜೋಡಣೆ ಬೇಡ.
ನಮ್ಮ ಸಂಕಲ್ಪ: ನದಿಗಳನ್ನು ಉಳಿಸೋಣ, ಪಶ್ಚಿಮಘಟ್ಟವನ್ನು ರಕ್ಷಿಸೋಣ, ಮುಂದಿನ ಪೀಳಿಗೆಗೆ ಜೀವಂತ ನದಿಗಳನ್ನು ಬಿಟ್ಟುಹೋಗೋಣ!
ಲೇಖನ: ಡಾ. ರವಿಕಿರಣ ಪಟವರ್ಧನ, ಆಯುರ್ವೇದ ವೈದ್ಯರು, ಪಟವರ್ಧನ್ ಆಯುರ್ವೇದ, ಶಿರಸಿ
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.