ಮಲೆನಾಡಿನ ಏಡಿಗೆ ಬೆಳಗಾವಿಯಲ್ಲಿ ಭಾರೀ ಬೇಡಿಕೆ; ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಖರೀದಿಗೆ ಮುಗಿಬಿದ್ದ ಜನತೆ
40 ರೂಪಾಯಿಂದ 120 ರೂಪಾಯಿ ವರೆಗೆ ಏಡಿಯಲ್ಲಿ ವೈವಿದ್ಯತೆ ಇದ್ದು, ಎಲ್ಲವೂ ಜೀವಂತ ಏಡಿಗಳಾಗಿರುವುದರಿಂದ ಗ್ರಾಹಕರು ಹೆಚ್ಚು ಉತ್ಸುಕರಾಗಿ ಖರೀದಿಸುತ್ತಿದ್ದಾರೆ ಎಂದು ವ್ಯಾಪಾರಿ ಹನುಮವ್ವ ತಿಳಿಸಿದ್ದಾರೆ.
ಬೆಳಗಾವಿ: ಕೊರೊನಾ ಕಾಲಘಟ್ಟದಲ್ಲಿ ಜನರು ತಮ್ಮ ಆಹಾರ ಪದ್ಧತಿಗೆ ಬಹಳ ಮಹತ್ವ ನೀಡುತ್ತಿದ್ದಾರೆ. ಪೋಷಕಾಂಶಯುಕ್ತ ಆಹಾರ ಸೇವನೆಯ ಕಡೆಗೆ ಗಮನಹರಿಸುತ್ತಿರುವ ಜನರು ಆ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಕೊಳ್ಳುತ್ತಿದ್ದಾರೆ. ಅದರಲ್ಲೂ ಕಾಲ ಕಾಲಕ್ಕೆ ಕೆಲವು ಆಹಾರಗಳು ಪ್ರಮುಖ ಪಾತ್ರ ವಹಿಸುತ್ತದೆ. ಇದೀಗ ಮುಂಗಾರು ಆರಂಭವಾಗಿದ್ದು, ಯಥೇಚ್ಛವಾಗಿ ಏಡಿ ಸಿಗುತ್ತಿದೆ. ಅದರಲ್ಲೂ ಮಲೆನಾಡಿನಲ್ಲಿ ಮಳೆಗಾಲ ಆರಂಭವಾದಾಗ ಏಡಿ ಹಿಡಿಯುವುದೇ ಒಂದು ಸಾಹಸವಾಗಿರುತ್ತದೆ. ಆದರೆ ಈ ಬಾರಿ ಮಲೆನಾಡಿನಲ್ಲಿ ಸಿಗುವ ಏಡಿಗೆ ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಬೇಡಿಕೆ ಉಂಟಾಗಿದ್ದು, ಜನರು ಏಡಿ ಖರೀದಿಸಲು ಮುಗಿಬಿಳುತ್ತಿದ್ದಾರೆ.
ಬೆಳಗಾವಿ ನಗರದ ಕ್ಯಾಂಪ್ ಏರಿಯಾ ಇದೀಗ ಏಡಿ ಮಾರ್ಕೆಟ್ ಆಗಿ ಬದಲಾಗಿದೆ. 30 ಕ್ಕೂ ಅಧಿಕ ಮಹಿಳೆಯರು ರಸ್ತೆ ಬದಿಯಲ್ಲಿ ಕುಳಿತು ಭರ್ಜರಿ ಏಡಿ ವ್ಯಾಪಾರ ಮಾಡುತ್ತಿದ್ದಾರೆ. ಲಾಕ್ಡೌನ್ನಿಂದಾಗಿ ಕಳೆದ ಮೂರು ತಿಂಗಳು ಈ ಮಹಿಳೆಯರಿಗೆ ಕೆಸಲವಿಲ್ಲದೆ ಪರದಾಡಿದ್ದರು. ಆದರೆ ಇದೀಗ ಲಾಕ್ಡೌನ್ ತೆರವಾಗುತ್ತಲೇ ಹಿಡಕಲ್ ಡ್ಯಾಂನಿಂದ ಕಪ್ಪು ಏಡಿ ಹಿಡಿದು ಬೆಳಗಾವಿ ನಗರಕ್ಕೆ ಬಂದು ಭರ್ಜರಿ ವ್ಯಾಪಾರ ಮಾಡುತ್ತಿದ್ದಾರೆ. ಒಬ್ಬೊಬ್ಬ ಮಹಿಳೆಯರೂ ದಿನಕ್ಕೆ 30 ರಿಂದ 50 ಕೆಜಿ ಏಡಿ ವ್ಯಾಪಾರ ಮಾಡುತ್ತಾರೆ. 40 ರೂಪಾಯಿಂದ 120 ರೂಪಾಯಿ ವರೆಗೆ ಏಡಿಯಲ್ಲಿ ವೈವಿದ್ಯತೆ ಇದ್ದು, ಎಲ್ಲವೂ ಜೀವಂತ ಏಡಿಗಳಾಗಿರುವುದರಿಂದ ಗ್ರಾಹಕರು ಹೆಚ್ಚು ಉತ್ಸುಕರಾಗಿ ಖರೀದಿಸುತ್ತಿದ್ದಾರೆ ಎಂದು ವ್ಯಾಪಾರಿ ಹನುಮವ್ವ ತಿಳಿಸಿದ್ದಾರೆ.
ದೂರ ಪ್ರದೇಶಗಳಿಂದ ಹುಡುಕಿ ಬಂದು ಏಡಿ ಖರೀದಿ ಮಾಡುತ್ತಿದ್ದಾರೆ. ಅದರಲ್ಲೂ ಕೊರೊನಾ ವೇಳೆಯಲ್ಲಿ ಏಡಿ ಸೇವಿಸುವುದು ಬಹಳ ಉತ್ತಮ ಎಂಬ ಭಾವನೆ ಜನರಲ್ಲಿದೆ. ಏಡಿ ಮಾಂಸದಲ್ಲಿ ಉಷ್ಣಾಂಶ ಜಾಸ್ತಿ ಇರುವುದರಿಂದ ಮತ್ತು ಕ್ಯಾಲ್ಸಿಯಂ ಅಂಶ ಹೆಚ್ಚಿರುವುದರಿಂದ ಕೊರೊನಾ ಸೇರಿದಂತೆ ಉಳಿದ ಕಾಯಿಲೆಗಳ ನಿಯಂತ್ರಣಕ್ಕೆ ಒಳ್ಳೆಯದ್ದು, ಏಡಿಯಲ್ಲಿ ರೋಗನಿರೋಧಕ ಶಕ್ತಿ ಇರುವುದೂ ಕೂಡ ನಿಜ ಎಂದು ಗ್ರಾಹಕ ನಾರಾಯಣ ಅಭಿಪ್ರಾಯಪಟ್ಟಿದ್ದಾರೆ.
ಸಾಮಾನ್ಯವಾಗಿ ಮಲೆನಾಡು ಪ್ರದೇಶಗಳಲ್ಲಿ ಹೊಳೆ, ನದಿ, ಕೆರೆಗಳಲ್ಲಿ ಏಡಿಗಳು ಯಥೇಚ್ಛವಾಗಿ ಸಿಗುತ್ತವೆ. ಏಡಿ ಮಲೆನಾಡು ಮಂದಿಯ ಅಚ್ಚುಮೆಚ್ಚಿನ ಆಹಾರವೂ ಹೌದು. ಬೆಳಗಾವಿಗೆ ಹಿಡ್ಕಲ್ ಜಲಾಶಯದ ಹಿನ್ನೀರಿನಲ್ಲಿ ಹಿಡಿಯುವ ಏಡಿಯನ್ನು ತರಲಾಗುತ್ತಿದ್ದು, ಒಂದೆಡೆ ಜನರಿಗೆ ರುಚಿಕರ ಏಡಿ ಸಿಕ್ಕರೆ ಮತ್ತೊಂದೆಡೆ ಹಲವು ಬಡ ಮಹಿಳೆಯರಿಗೆ ಉದ್ಯೋಗದ ರೂಪದಲ್ಲಿ ಜೀವನದ ದಾರಿಯೂ ಆಗಿದೆ.
ಇದನ್ನೂ ಓದಿ:
ಸರ್ವರೋಗಕ್ಕೂ ಏಡಿ ಸಾರು ಮದ್ದು, ಮಲೆನಾಡು ಏಡಿಗಳಿಗೆ ಫುಲ್ ಡಿಮ್ಯಾಂಡ್..!
ಒಂದೇ ತೆರನಾದ ಅಭ್ಯಾಸ ಬಿಡಿ; ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಹಾರ ಪದ್ಧತಿಯಲ್ಲಿ ವೈವಿಧ್ಯತೆ ಇರಲಿ
Published On - 1:38 pm, Fri, 25 June 21