ಬೆಂಗಳೂರು ಬ್ಲಾಸ್ಟ್ ಬಗ್ಗೆ ಅಮಿತ್ ಶಾ ಗಂಭೀರ ಆರೋಪ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕೇಂದ್ರ ಗೃಹ ಸಚಿವ

| Updated By: Ganapathi Sharma

Updated on: May 03, 2024 | 2:48 PM

ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಹುಕ್ಕೇರಿಯಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಸಮಾವೇಶ ಉದ್ದೇಶಿಸಿ ಮಾತನಾಡಿದ ಕೇಂದ್ರ ಗ್ರಹ ಸಚಿವ ಅಮಿತ್ ಶಾ, ಬೆಂಗಳೂರು ಬ್ಲಾಸ್ಟ್ ಸಂಬಂಧ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅಮಿತ್ ಶಾ ನೀಡಿದ ಸ್ಪೋಟಕ ಮಾಹಿತಿಯ ವಿವರ ಇಲ್ಲಿದೆ.

ಬೆಂಗಳೂರು ಬ್ಲಾಸ್ಟ್ ಬಗ್ಗೆ ಅಮಿತ್ ಶಾ ಗಂಭೀರ ಆರೋಪ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕೇಂದ್ರ ಗೃಹ ಸಚಿವ
ಅಮಿತ್ ಶಾ
Follow us on

ಚಿಕ್ಕೋಡಿ, ಮೇ 3: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದಲ್ಲಿ (Rameshwaram Cafe Bomb blast cas) ಎಸ್​​ಡಿಪಿಐ (SDPI) ಕೈವಾಡ ಇದೆ ಎಂಬುದನ್ನು ರಾಷ್ಟ್ರೀಯ ತನಿಖಾ ದಳ (NIA) ಬಯಲಿಗೆಳೆದಿದೆ. ಅಂಥ ಎಸ್​ಡಿಪಿಐ ಸಹಕಾರ ಪಡೆದು ಕಾಂಗ್ರೆಸ್ ಚುನಾವಣೆ ಎದುರಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಗಂಭೀರ ಆರೋಪ ಮಾಡಿದರು. ಬೆಳಗಾವಿಯ ಹುಕ್ಕೇರಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಈ ದೇಶಕ್ಕೆ ಅಂಟಿದ್ದ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಿದರು. ಆದರೆ, ಕರ್ನಾಟಕದ ಕಾಂಗ್ರೇಸ್ ಸರ್ಕಾರ ಎಸ್‌ಡಿಪಿಐಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆ‌. ಎಸ್‌ಡಿಪಿಐ ಸಹಕಾರ ಪಡೆದು ಚುನಾವಣೆ ಎದುರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕವನ್ನು ರಕ್ಷಿಸುತ್ತಾರೆ ಮೋದಿ: ಶಾ

ಬೆಂಗಳೂರಿನಲ್ಲಿ ಬಾಂಬ್ ಸ್ಫೋಟವಾದಾಗ ಆರಂಭದಲ್ಲಿ ಕಾಂಗ್ರೆಸ್ ಪಕ್ಷದವರು ಗ್ಯಾಸ್ ಸಿಲಿಂಡರ್ ಸ್ಫೋಟ ಎಂದು ವಾದಿಸಿದ್ದರು. ನಂತರ ಎನ್​ಐಎ ತನಿಖೆ ನಡೆಸಿ ಎಸ್‌ಡಿಪಿಐ ಸಂಚಿರುವುದನ್ನು ಹೊರಹಾಕಿತು. ನೀವು ಚಿಂತೆ ಮಾಡಬೇಡಿ, ಕಾಂಗ್ರೆಸ್ ಸರ್ಕಾರ ಎನೇ ಮಾಡಲಿ‌. ನೀವು ಅಣ್ಣಾಸಾಹೇಬ್ ಜೊಲ್ಲೆಗೆ ಮತ ನೀಡಿ ಅವರನ್ನು ಗೆಲ್ಲಿಸಿ. ಮತ್ತೊಮ್ಮೆ ಮೋದಿಯನ್ನ ಪ್ರಧಾನಿ ಮಾಡಿ. ಮೋದಿಯವರು ಕರ್ನಾಟಕವನ್ನು ರಕ್ಷಣೆ ಮಾಡುತ್ತಾರೆ ಎಂದು ಅಮಿತ್ ಶಾ ಹೇಳಿದರು.

ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆಯನ್ನು ಭಾಷಣದಲ್ಲಿ ಉಲ್ಲೇಖಿಸಿದ ಶಾ‌, ಆ ಪ್ರಕರಣ ವೈಯಕ್ತಿಕ ಎಂದು ಕಾಂಗ್ರೆಸ್​​ನವರು ಹೇಳಿದ್ದರು‌. ಆದರೆ, ಮತಾಂತರ ಆಗಲು ಒಪ್ಪದ್ದಕ್ಕೆ ನೇಹಾ ಹತ್ಯೆಯಾಗಿದೆ. ಈ ಪ್ರಕರಣದಲ್ಲಿ ನ್ಯಾಯ ಸಿಗಬೇಕು ಅಂದರೆ ಸಿಬಿಐಗೆ ವಹಿಸಬೇಕು. ಆಗ ಅನ್ಯಾಯ ಮಾಡಿದವರಿಗೆ ತಲೆ ಕೆಳಗೆ ಮಾಡಿ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಶಾ ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗುಡುಗು

ಕಾಂಗ್ರೆಸ್ ‌ಅಭ್ಯರ್ಥಿಯ ತಂದೆ ಅನಧಿಕೃತವಾಗಿ ಗಣಿಗಾರಿಕೆ ಮಾಡುತ್ತಾರೆ. ಅವರ ಕುಟುಂಬಸ್ಥರು ಗುಡ್ಡ ಕಟಾವು ಮಾಡಿ ಜಾಗ ಕಬ್ಜಾ ಮಾಡಿದ್ದಾರೆ. ಹಿಂದೂ ಸಂಸ್ಕೃತಿ ಹಾಗೂ ಹಿಂದೂ ಮಹಾನ್ ನಾಯಕರನ್ನು ಅಪಮಾನಿಸುತ್ತಾರೆ. ಶಿವಾಜಿ ಮಹಾರಾಜ ಮತ್ತು ಸಂಭಾಜಿ ಮಹಾರಾಜರ ಬಗ್ಗೆ ಕೆಟ್ಟದಾಗಿ ಮಾತನಾಡ್ತಾರೆ. ಕಳ್ಳಬಟ್ಟಿ ಸಾರಾಯಿ ತಯಾರಿಸುವವರು ಇವರ ಜೊತೆಗೆ ಇದ್ದಾರೆ‌. ಸಾವಿರಾರು ಎಕರೆ ಜಮೀನುಗಳನ್ನ ಕಬಳಿಸಿದ್ದಾರೆ. ಕಮಿಷನ್ ಪಡೆಯಲು ಅವರ ಏಜೆಂಟರು ನಿರತರಾಗಿದ್ದಾರೆ ಎಂದು ಜಾರಕಿಹೊಳಿ‌ ಕುಟುಂಬದ ವಿರುದ್ಧವೇ ಶಾ ಗಂಭೀರ ಆರೋಪ ಮಾಡಿದ್ದಾರೆ.

ರೈತರಿಗೆ ಸಿಗಬೇಕಾದ ಹಣ ತಡೆಹಿಡಿದ ಕಾಂಗ್ರೆಸ್ ಸರ್ಕಾರ: ಶಾ ಕಿಡಿ

ಬಿಜೆಪಿ ಆಡಳಿತ ಇದ್ದಾಗ 10 ಸಾವಿರ ರೂ. ಹಣವನ್ನು ರೈತರಿಗೆ ಕೊಡ್ತಿದ್ದೆವು. ಆದರೆ ಅದನ್ನ ಈ ಸರ್ಕಾರ ಬಂದ್ ಮಾಡಿದೆ‌. ರೈತರ ಪರವಾಗಿ ಇದ್ದೇವೆ ಅನ್ನೋ ಈ ಸರ್ಕಾರ ಯಾಕೆ ರೈತರಿಗೆ ರಾಜ್ಯದ ವತಿಯಿಂದ ಕೊಡುತ್ತಿದ್ದ 4000 ರೂ. ಸ್ಥಗಿತಗೊಳಿಸಿದೆ ಎಂದು ಶಾ ಪ್ರಶ್ನಿಸಿದರು. ಸಿಎಂ ಸಿದ್ದರಾಮಯ್ಯ ಇದಕ್ಕೆ ಉತ್ತರ ‌ಕೊಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಬಾಗಲಕೋಟೆ: ನೇಹಾ ಕೊಲೆ ಲವ್ ಜಿಹಾದ್ ಎಂದ ಅಮಿತ್ ಶಾಗೆ ಸಿದ್ದರಾಮಯ್ಯ ತಿರುಗೇಟು

ಹತ್ತು ತಿಂಗಳಲ್ಲಿ ಕರ್ನಾಟಕವನ್ನ ಬರ್ಬಾದ್ ಮಾಡಲಾಗಿದೆ‌. ವೋಟ್ ಹಾಕದಿದ್ದರೆ ಕರೆಂಟ್ ಕಟ್ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ರಾಹುಲ್ ಬಾಬಾ ಆ್ಯಂಡ್ ಕಂಪನಿ ಈ ದೇಶವನ್ನು ಸುರಕ್ಷಿತವಾಗಿ ಇಡಲ್ಲ. ಕೇವಲ ಮೋದಿಯವರು ಮಾತ್ರ ದೇಶವನ್ನು ಸುರಕ್ಷಿತವಾಗಿ ಇಡಬಲ್ಲರು. ಉರಿ ಮತ್ತು ಫುಲ್ವಾಮಾದಲ್ಲಿ ಘಟನೆ ನಡೆದಾಗ ಭಾರತದಲ್ಲಿ ಮನಮೋಹನ್ ಸಿಂಗ್ ಅಧಿಕಾರ ಇರಲಿಲ್ಲ. ಬದಲಾಗಿ ಮೋದಿ ಸರ್ಕಾರ ಇತ್ತು. ಹೀಗಾಗಿ ಪಾಕಿಸ್ತಾನದ ಒಳಹೊಕ್ಕು ಸರ್ಜಿಕಲ್‌ಸಟ್ರೈಕ್ ಮಾಡಲಾಯ್ತು. ಹತ್ತು ವರ್ಷದಲ್ಲಿ ಆರ್ಥಿಕ ಸ್ಥಿತಿ 11 ನೇ ಸ್ಥಾನದಿಂದ 5 ನೇ ಸ್ಥಾನಕ್ಕೇರಿದೆ. ಮೂರನೇ ಬಾರಿಗೆ ಮೋದಿ ಪ್ರಧಾನಿಯಾದ್ರೇ ದೇಶದ ಆರ್ಥಿಕ ಸ್ಥಿತಿಯಲ್ಲೂ ಮೂರನೇ ಸ್ಥಾನಕ್ಕೇರಲಿದೆ ಎಂದು ಶಾ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ