ಶಾಲಾ ಸಮವಸ್ತ್ರದಂತೆ ಆಹಾರದಲ್ಲಿಯೂ ಏಕತೆ ಬೇಕು, ಸಸ್ಯಾಹಾರ ಇರಲಿ -ಮೊಟ್ಟೆ ಬೇಡ: ಅಖಿಲ ಭಾರತ ಸಸ್ಯಾಹಾರಿ ಒಕ್ಕೂಟ ಆಶಯ
ಆಹಾರದಲ್ಲಿ ಭೇದಭಾವ ಬೇಡ. ಶಾಲಾ ಸಮವಸ್ತ್ರದಲ್ಲಿ ಏಕತೆ ಇದೆ. ಹಾಗೆಯೇ ಆಹಾರದಲ್ಲಿ ಏಕರೀತಿ ಇರಬೇಕು, ಸಸ್ಯಾಹಾರ ಬೇಕು, ಮೊಟ್ಟೆ ಬೇಡ ಎಂದು ಹುನಗುಂದ ತಾಲ್ಲೂಕಿನ ಕೂಡಲಸಂಗಮದ ಬಸವ ಧರ್ಮಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಬೆಳಗಾವಿಯಲ್ಲಿ ಹೇಳಿದರು.
ಬೆಳಗಾವಿ: ಶಾಲಾ ಮಕ್ಕಳಿಗೆ ಮೊಟ್ಟೆ ಬೇಡ ಎಂದು ಅಖಿಲ ಭಾರತ ಸಸ್ಯಾಹಾರಿಗಳ ಒಕ್ಕೂಟದಿಂದ ಬೆಳಗಾವಿ ಚೆನ್ನಮ್ಮ ವೃತ್ತದ ಬಳಿ ಪ್ರತಿಭಟನೆ ನಡೆದಿದೆ. ಬಸವ ಧರ್ಮಪೀಠದ ಶರಣರು, ವಿವಿಧ ಮಠಾಧೀಶರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಸರಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕೂಡಲಸಂಗಮದ ಬಸವ ಧರ್ಮಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಕರ್ನಾಟಕದಲ್ಲಿ ಬಹುಸಂಖ್ಯಾತರು ಸಸ್ಯಾಹಾರಿಗಳಿದ್ದಾರೆ. ಮೊಟ್ಟೆ ಮಾಂಸಾಹಾರ ಆಗಿರೋದರಿಂದ ಅದು ಬೇಡ ಎಂಬುದು ನಮ್ಮ ವಾದ. ಸರಕಾರ ಮೊಟ್ಟೆ ಯೋಜನೆ ಹಿಂಪಡೆಯಬೇಕು. ಮೊಟ್ಟೆ ಮಾತ್ರ ಪೌಷ್ಟಿಕ ಆಹಾರವಲ್ಲ. ಹಣ್ಣು ಹಂಪಲುಗಳು ಅದಕ್ಕಿಂತ ಪೌಷ್ಟಿಕಾಂಶ ಹೊಂದಿವೆ. ಮೊಟ್ಟೆ ಬದಲು ಹಣ್ಣು ಹಂಪಲು, ಹಾಲು ಕೊಡಿ. ನಾವು ಯಾವುದೇ ಜನರ ತಿನ್ನುವ ಹಕ್ಕನ್ನು ಕಸಿಯುತ್ತಿಲ್ಲ. ಮಾಂಸಾಹಾರಿಗಳು ಸಸ್ಯಾಹಾರ ಸೇವಿಸುವುದರಿಂದ ಸಸ್ಯಾಹಾರ ಮಾತ್ರ ಕೊಡಿ ಎಂಬುದು ನಮ್ಮ ಉದ್ದೇಶ. ಈ ಬಗ್ಗೆ ನಾವು ಮುಖ್ಯಮಂತ್ರಿ ಬೊಮ್ಮಾಯಿಗೆ ಮನವಿ ಮಾಡುತ್ತೇವೆ. ಆಹಾರದಲ್ಲಿ ಭೇದಭಾವ ಬೇಡ. ಶಾಲಾ ಸಮವಸ್ತ್ರದಲ್ಲಿ ಏಕತೆ ಇದೆ. ಹಾಗೆಯೇ ಆಹಾರದಲ್ಲಿ ಏಕರೀತಿ ಇರಬೇಕು, ಸಸ್ಯಾಹಾರ ಬೇಕು, ಮೊಟ್ಟೆ ಬೇಡ ಎಂದು ಮಾತೆ ಗಂಗಾದೇವಿ ಹೇಳಿದರು.
ಸರಕಾರ ಮೊಟ್ಟೆ ಕೊಡೋದನ್ನು ನಿಲ್ಲಿಸಲೇಬೇಕು. ನಾವು ಇಲ್ಲಿಂದ ಸುವರ್ಣ ಸೌಧಕ್ಕೆ ಮೆರವಣಿಗೆ ಹೋಗುತ್ತೇವೆ. ಮೊಟ್ಟೆ ಕೊಡೋದನ್ನು ಕೈ ಬಿಡಿ. ಕೊಡೋದೆ ನಿಮ್ಮ ಉದ್ದೇಶ ಆದರೆ ಪ್ರತ್ಯೇಕ ಶಾಲೆ, ಅಂಗನವಾಡಿ ತೆರೆದು ಸಸ್ಯಾಹಾರ ಊಟ ಕೊಡಿ. ಸಂಜೆಯೊಳಗೆ ಸರಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಇಲ್ಲದಿದ್ದರೆ ಉಗ್ರಹೋರಾಟ ಕೈಗೊಳ್ಳುತ್ತೇವೆ ಎಂದು ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಇದೇ ಸಂದರ್ಭದಲ್ಲಿ ಹೇಳಿದರು.
ಮಕ್ಕಳಿಗೆ ಮೊಟ್ಟೆ ತಿನ್ನಲು ಒತ್ತಡ ಹೇರಿಲ್ಲ; ಯಾವುದೇ ಕಾರಣಕ್ಕೂ ಶಾಲೆಗಳನ್ನು ಮುಚ್ಚಲ್ಲ: ಬಿ.ಸಿ ನಾಗೇಶ್ ಸ್ಪಷ್ಟನೆ ಮಂಡ್ಯ: ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ತಿನ್ನಲು ಒತ್ತಡ ಹೇರಿಲ್ಲ. ಮಕ್ಕಳು ಅಪೌಷ್ಟಿಕತೆಯಿಂದ ತುಂಬಾ ಒದ್ದಾಡುತ್ತಿದ್ದಾರೆ. ಮಕ್ಕಳ ಮೇಲೆ, ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಸರ್ಕಾರ ಈ ಯೋಜನೆ ಜಾರಿ ಮಾಡಿದೆ. ಪ್ರೊಟೀನ್ಗಾಗಿ ಮೊಟ್ಟೆ ನೀಡಲಾಗುತ್ತಿದೆ. ತಜ್ಞರು ಸಹ ಹೀಗೆ ಸಲಹೆ ನೀಡಿದ್ದಾರೆ. ನಾವು ಮಕ್ಕಳ ಮೇಲೆ ಒತ್ತಡ ಹೇರಿಲ್ಲ. ಮಕ್ಕಳಿಗೆ ಬಾಳೆ ಹಣ್ಣು ಕೂಡ ಕೊಡ್ತಿದ್ದೇವೆ. ಪ್ರೊಟೀನ್ ಯುಕ್ತ ಪದಾರ್ಥ ಆಯ್ಕೆ ಮಾಡ್ತಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಇತ್ತೀಚೆಗೆ ಸ್ಪಷ್ಟನೆ ನೀಡಿದ್ದಾರೆ.
ಕೆಲವೇ ದಿನಗಳಲ್ಲಿ 15 ಸಾವಿರ ಶಿಕ್ಷಕರ ನೇಮಕಕ್ಕೆ ಆದೇಶ ಹೊರಡಿಸಲಾಗುತ್ತದೆ. ಅನೇಕ ವರ್ಷಗಳಿಂದ ರಾಜ್ಯದಲ್ಲಿ ಶಿಕ್ಷಕರ ಕೊರತೆ ಇದೆ. 15 ಸಾವಿರ ಪೋಸ್ಟ್ ಪೂರ್ಣ ಮಾಡಲಾಗುತ್ತದೆ. ಕೆಲವೆ ದಿನಗಳ ನೋಟಿಫಿಕೇಷನ್ ಮಾಡಲಾಗುತ್ತದೆ. ಶಾಲಾ ಕೊಠಡಿಗಳ ಕೊರತೆ ಇದೆ, ಸರಿಪಡಿಸುತ್ತೇವೆ. ಮುಂದಿನ ವರ್ಷ ಅಕಾಡೆಮಿ ಕೇರ್ ಒಳಗಡೆ NET ಅನುಷ್ಟಾನಕ್ಕೆ ತರುವ ಕೆಲಸ ಮಾಡ್ತೇವೆ. ಯಾವುದೇ ಕಾರಣಕ್ಕೂ ಶಾಲೆಗಳನ್ನ ಮುಚ್ಚಲ್ಲ. ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬಿ.ಸಿ. ನಾಗೇಶ್ ಈ ಹಿಂದೆ ಹೇಳಿದ್ದಾರೆ.
ಮೊಟ್ಟೆ ಸೇವಿಸದ ಮಕ್ಕಳಿಗೆ ಬಿಸಿಯೂಟದಲ್ಲಿ ಬಾಳೆಹಣ್ಣಿನ ಬದಲು ಶೇಂಗಾ ಚಿಕ್ಕಿ ನೀಡಲು ಸರ್ಕಾರ ನಿರ್ಧಾರ
ಬೆಂಗಳೂರು: ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆಗಳನ್ನು ನೀಡುವ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಮಕ್ಕಳಿಗೆ ಶಾಲೆಯಲ್ಲಿ ಮೊಟ್ಟೆಗಳನ್ನು ಕೊಡಬೇಕೇ? ಬೇಡವೇ? ಎಂಬ ಬಗ್ಗೆ ಜನರಲ್ಲಿ ತೀವ್ರ ಚರ್ಚೆಗಳು ನಡೆದಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ನೀಡುವ ತೀರ್ಮಾನಕ್ಕೆ ಬಂದಿತ್ತು. ಆದರೆ, ಬಾಳೆಹಣ್ಣಿನಲ್ಲಿ ಮೊಟ್ಟೆಯಷ್ಟು ಪೌಷ್ಠಿಕಾಂಶ ಇಲ್ಲದ ಕಾರಣದಿಂದ ಬಾಳೆಹಣ್ಣಿನ ಬದಲಾಗಿ ಶೇಂಗಾ ಚಿಕ್ಕಿ (ಶೇಂಗಾ ಮಿಠಾಯಿ) ನೀಡಲು ಸರ್ಕಾರ ನಿರ್ಧರಿಸಿದೆ.
ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ 1ರಿಂದ 8ನೇ ತರಗತಿವರೆಗಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ನೀಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆ ಹಣ್ಣಿನ ಬದಲು ಶೇಂಗಾ ಮತ್ತು ಬೆಲ್ಲದಿಂದ ತಯಾರಿಸಿದ ಚಿಕ್ಕಿ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ: ಮೊಟ್ಟೆ ಬದಲು ತಾಯಿ ಕೈಗೆ ದುಡ್ಡು ಕೊಟ್ಟರೆ ಇನ್ನೂ ಚೆನ್ನಾಗಿ ಆಹಾರ ಹಾಕಬಹುದು: ಶೋಭಾ ಕರಂದ್ಲಾಜೆ
ಇದನ್ನೂ ಓದಿ: Health Tips: ಮೊಟ್ಟೆಗಿಂತಲೂ ಹೆಚ್ಚು ಪ್ರೋಟೀನ್ ಇರುವ 5 ಸಸ್ಯಾಹಾರಿ ಆಹಾರಗಳಿವು
Published On - 1:38 pm, Mon, 20 December 21