Athani: ದೀರ್ಘ ದಂಡ ನಮಸ್ಕಾರ ಹರಕೆ ಸಲ್ಲಿಸುವಾಗ ಅಪಘಾತ: ಸ್ಥಳದಲ್ಲೇ ಯುವತಿ ಸಾವು
ಕೃಷ್ಣಾ ನದಿಯಿಂದ ದೇವಸ್ಥಾನದವರೆಗೆ ದೀರ್ಘ ದಂಡ ನಮಸ್ಕಾರ ಹರಕೆ ತೀರಿಸುವಾಗ ತಲೆ ಮೇಲೆ ಕಾರು ಹರಿದು ಯುವತಿ ಸಾವನ್ನಪ್ಪಿರುವಂತಹ ಭೀಕರ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ತೀರ್ಥ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ: ದೀರ್ಘ ದಂಡ ನಮಸ್ಕಾರ ಸಲ್ಲಿಸುವಾಗ ಅಹಿತಕರ (accident) ಘಟನೆ ಒಂದು ಆಕಸ್ಮಿಕವಾಗಿ ನಡೆದು ಹೋಗಿದೆ. ಕೃಷ್ಣಾ ನದಿಯಿಂದ ದೇವಸ್ಥಾನದವರೆಗೆ ದೀರ್ಘ ದಂಡ ನಮಸ್ಕಾರ ಹರಕೆ ತೀರಿಸುವಾಗ ತಲೆ ಮೇಲೆ ಕಾರು ಹರಿದು ಯುವತಿ (girl) ಸಾವನ್ನಪ್ಪಿರುವಂತಹ ಭೀಕರ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ತೀರ್ಥ ಗ್ರಾಮದಲ್ಲಿ ನಡೆದಿದೆ. ಐಶ್ವರ್ಯಾ ನಾಯಕ್(22) ಮೃತ ಯುವತಿ. ಜಾತ್ರೆ ಹಿನ್ನೆಲೆ ಐಶ್ವರ್ಯಾ ದೀರ್ಘ ದಂಡ ನಮಸ್ಕಾರ ಹಾಕುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಎರಡು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಮತ್ತೊಂದು ಪ್ರಕರಣದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಕರ್ತವ್ಯನಿರತ ಬೆಸ್ಕಾಂ ಸಿಬ್ಬಂದಿ ಸಾವನ್ನಪ್ಪಿರುವಂತಹ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಳ್ಳಿಪಾಳ್ಯದಲ್ಲಿ ನಡೆದಿದೆ. ಶರಣಬಸಪ್ಪ(30) ಮೃತ ಲೈನ್ಮ್ಯಾನ್. ಮೃತ ಸಿಬ್ಬಂದಿ ವಿಜಯಪುರ ಜಿಲ್ಲೆ ಮುದ್ದೇಬಿಹಾಳದ ಚಲುಮಿ ನಿವಾಸಿ.
ಶವಾಗಾರದ ಮುಂದೆ ಮೇಲಧಿಕಾರಿಗಳ ವಿರುದ್ಧ ನೌಕರ ಪ್ರತಿಭಟನೆ ಮಾಡಿದರು, ಸ್ಥಳಕ್ಕೆ ಬಾರದ ಬೆಸ್ಕಾಂ ಅಧಿಕಾರಿಗಳ ವಿರುದ್ಧ ನೌಕರರು ಆಕ್ರೋಶ ವ್ಯಕ್ತಪಡಿಸಿದರು. 9 ವರ್ಷಗಳಿಂದ ಬೆಸ್ಕಾಂನಲ್ಲಿ ಲೈನ್ಮ್ಯಾನ್ ಆಗಿದ್ದ ಶರಣಬಸಪ್ಪ, ನಿನ್ನೆ ರಾತ್ರಿ ಟ್ರಾನ್ಸಫಾರ್ಮರ್ ರಿಪೇರಿಗೆ ಹೋಗಿರುವಾಗ ದುರ್ಘಟನೆ ನಡೆದಿದೆ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಬಳ್ಳಾರಿ ಪೊಲೀಸ್ ವಸತಿ ಗೃಹದಲ್ಲಿ ಡಿಎಆರ್ ಪೊಲೀಸ್ ಪೇದೆ ಅನುಮಾನಾಸ್ಪದವಾಗಿ ಸಾವು
ಕೊಲೆ ಬೆದರಿಕೆ ಹಾಕಿ ಉಪಟಳ ಕೊಡುತ್ತಿದ್ದ ರೌಡಿ ಸೆರೆ
ಆನೇಕಲ್: ಕೊಲೆ ಬೆದರಿಕೆ ಹಾಕಿ ಉಪಟಳ ಕೊಡುತ್ತಿದ್ದ ರೌಡಿಯನ್ನು ಜಿಗಣಿ ಪೊಲೀಸರು ಸೆರೆ ಹಿಡಿದಿದ್ದಾರೆ. ಮಂಜೇಶ್ ಅಲಿಯಾಸ್ ಘಾಯಲ್ ಬಂಧಿತ ರೌಡಿ. 2017 ರಿಂದಲೂ ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ನಿನ್ನ ಹೆಸರಲ್ಲಿ ಸುಪಾರಿ ಇದೆ. ಐದು ಲಕ್ಷ ಕೊಡು ಬಿಡುತ್ತೇನೆ. ದುಡ್ಡು ಕೊಟ್ಟಿಲ್ಲ ಅಂದರೆ ನಿನ್ನ ಕೊಲ್ಲುತ್ತೇನೆ ಅಂತ ಕರೆ ಮಾಡಿ ಹಲವು ಅಂಗಡಿ ವ್ಯಾಪಾರಸ್ಥರಿಗೆ ಬೆದರಿಕೆ ಹಾಕುತ್ತಿದ್ದ. ಮಂಜೇಶ್ನ ಉಪಟಳಕ್ಕೆ ಜಿಗಣಿ ಜನರಿಗೆ ಆತಂಕ ಶುರುವಾಗಿತ್ತು. ಹಲವು ಪ್ರಕರಣಗಳಲ್ಲಿ ಆಸಾಮಿ ತಪ್ಪಿಸಿಕೊಂಡಿದ್ದ. ಸದ್ಯ ರೌಡಿ ಶೀಟ್ ತೆಗೆದು ಪೊಲೀಸರು ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ದೇವದಾಸಿಯಾಗಿದ್ದ ಮಹಿಳೆಯನ್ನ ಪ್ರೀತಿಸಿ ಬಾಳು ಕೊಟ್ಟಿದ್ದ, ಈಗ ಆಕೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ
ನಿದ್ರೆ ಮಂಪರಿನಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆದ ಕಾರು; ಪ್ರಾಣಾಪಾಯದಿಂದ ಪಾರು
ರಾಮನಗರ: ನಿದ್ರೆ ಮಂಪರಿನಲ್ಲಿ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದ ಘಟನೆ ನಗರದ ವಿವೇಕಾನಂದ ನಗರದ ಬಳಿ ನಡೆದಿದೆ. ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜು ಆಗಿದ್ದು, ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಡ್ಯದಿಂದ ರಾಮನಗರಕ್ಕೆ ಬರುವಾಗ ಈ ಅವಘಡ ಸಂಭವಿಸಿದೆ. ಇನ್ನು ಈ ಕುರಿತು ರಾಮನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ವ್ಯಕ್ತಿ ನೀರುಪಾಲು
ಗದಗ: ತಂಗಾಭದ್ರಾ ನದಿಯಲ್ಲಿ ಸ್ನಾನಕ್ಕೆಂದು ಇಳಿದ ವ್ಯಕ್ತಿಯೊಬ್ಬರು ನೀರುಪಾಲಾದ ಘಟನೆ ಮುಂಡರಗಿ ತಾಲೂಕಿನ ಸಿಂಗಟಾಲೂರು ಗ್ರಾಮದ ದೇಗುಲ ಬಳಿ ನಡೆದಿದೆ. ಕೋಟುಮಚಗಿ ಗ್ರಾಮದ ಚಂದ್ರಶೇಖರ್ (45) ಸಾವನ್ನಪ್ಪಿದ ವ್ಯಕ್ತಿ. ಕೊರ್ಲಹಳ್ಳಿ ಗ್ರಾಮಕ್ಕೆ ಜಾತ್ರೆಗೆ ಆಗಮಿಸಿದ್ದ ಚಂದ್ರಶೇಖರ್, ಸಿಂಗಟಾಲೂರ ದೇವಸ್ಥಾನ ಬಳಿ ನದಿಯಲ್ಲಿ ಸ್ಥಾನಕ್ಕೆ ಇಳಿದಿದ್ದಾರೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳೀಯರ ನೆರವಿನಿಂದ ನದಿಯಲ್ಲಿ ತೆಪ್ಪ ಹಾಕಿ ಶೋಧ ನಡೆಸುತ್ತಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.