ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ಫಲಿತಾಂಶ ಪ್ರಕಟ: ಜಾರಕಿಹೊಳಿ ಟೀಂಗೆ ಸ್ಪಷ್ಟ ಬಹುಮತ
ನ್ಯಾಯಾಲಯ ಮೆಟ್ಟಿಲೇರಿದ್ದರಿಂದ ತಡೆ ಹಿಡಿಯಲಾಗಿದ್ದ ಬೆಳಗಾವಿ (Belagavi) ಜಿಲ್ಲೆಯ ನಾಲ್ಕು ತಾಲೂಕಿನ ಡಿಸಿಸಿ ಬ್ಯಾಂಕ್ (DCC Bank Election) ನಿರ್ದೇಶಕ ಸ್ಥಾನದ ಚುನಾವಣೆ ಫಲಿತಾಂಶ ಇಂದು (ನವೆಂಬರ್ 02) ಪ್ರಕಟವಾಗಿದ್ದು, ಜಾರಕಿಹೊಳಿ ಟೀಂ ಮೇಲುಗೈ ಸಾಧಿಸಿದೆ. ಇನ್ನು ಯಾರ್ಯಾರು ಎಷ್ಟೆಷ್ಟು ಮತಗಳಿಂದ ಗೆದ್ದಿದ್ದಾರೆ ಎನ್ನುವ ವಿವರ ಇಲ್ಲಿದೆ.

ಬೆಳಗಾವಿ, (ನವೆಂಬರ್ 02): ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ (Belagavi DCC Bank Election) ನಾಲ್ಕು ಕ್ಷೇತ್ರಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ರಮೇಶ ಕತ್ತಿ, ಅಣ್ಣಾಸಾಹೇಬ ಜೊಲ್ಲೆ ಸೇರಿದಂತೆ ನಾಲ್ವರು ವಿಜೇತರಾಗಿದ್ದಾರೆ. ನ್ಯಾಯಾಲಯದ ಆದೇಶದಂತೆ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಗಿದ್ದು, ಜಾರಕಿಹೊಳಿ ಟೀಂ ಸ್ಪಷ್ಟಬಹುಮತ ಸಿಕ್ಕಿದೆ. ಇನ್ನು ಮುಂದಿನ 15 ದಿನಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಲಿದ್ದು, ಯಾರು ಅಧ್ಯಕ್ಷರಾಗಿಲಿದ್ದಾರೆ ಎನ್ನುವುದನ್ನು ಜಾರಕಿಹೊಳಿ ಬ್ರದರ್ಸ್ (Jarkiholi Brothers) ತೀರ್ಮಾನಿಸಲಿದ್ದಾರೆ. ಹೀಗಾಗಿ ಅಧ್ಯಕ್ಷರ ಆಯ್ಕೆ ತೀವ್ರ ಕುತೂಹಲ ಮೂಡಿಸಿದೆ.
ಡಿಸಿಸಿ ಬ್ಯಾಂಕಿನ 16 ನಿರ್ದೇಶಕರ ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಇನ್ನುಳಿದ 7 ಸ್ಥಾನಗಳಿಗೆ ಅಕ್ಟೋಬರ್ 19ರಂದು ಮತದಾನವಾಗಿತ್ತು. ಇನ್ನು ಅಂದು ಸಂಜೆಯೇ ರಾಮದುರ್ಗ, ಅಥಣಿ ಹಾಗೂ ರಾಯಬಾಗ ಕ್ಷೇತ್ರಗಳ ನಿರ್ಧೆಶಕರ ಫಲಿತಾಂಶ ಪ್ರಕಟವಾಗಿತ್ತು.ಆದ್ರೆ, ಹುಕ್ಕೇರಿ, ನಿಪ್ಪಾಣಿ ಬೈಲಹೊಂಗಲ ಮತ್ತಯ ಚನ್ನಮ್ಮನ ಕಿತ್ತೂರು ಕ್ಷೇತ್ರಗಳಿಂದ ಗೆದ್ದವರು ಯಾರು ಸೋತವರು ಯಾರು ಎಂಬುವುದು ಖಚಿತವಾಗಿತ್ತಾದರೂ ಕೋರ್ಟ್ ತಡೆಯಾಜ್ಞೆ ಹಿನ್ನೆಲೆಯಲ್ಲಿ ಫಲಿತಾಂಶ ಘೋಷಣೆ ಆಗಿರಲಿಲ್ಲ.
ಇದನ್ನೂ ಓದಿ: 29 ವರ್ಷದ ನಂತರ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧಿಕಾರ ಸಿಕ್ಕಿದೆ: ಲಿಂಗಾಯತರಿಗೆ ಅಧ್ಯಕ್ಷ ಸ್ಥಾನ ಎಂದ ಜಾರಕಿಹೊಳಿ
ಈಗ ಚುನಾವಣೆ ಫಲಿತಾಂಶ ಪ್ರಕಟಕ್ಕೆ ನ್ಯಾಯಾಲಯದಿಂದ ಆದೇಶ ದೊರೆತ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಶ್ರವಣ ನಾಯ್ಕ ಅವರು ಇಂದು (ನವೆಂಬರ್ 02) ಮತ ಎಣಿಕೆ ಪ್ರಕ್ರಿಯೆ ನಡೆಸಿ ಫಲಿತಾಂಶ ಪ್ರಕಟಿಸಿದರು. ಬೈಲಹೊಂಗಲ, ಕಿತ್ತೂರು, ನಿಪ್ಪಾಣಿ ಹಾಗೂ ಹುಕ್ಕೇರಿ ತಾಲೂಕಿನ ಫಲಿತಾಂಶ ಪ್ರಕಟವಾಗಿದೆ. ಬೈಲಹೊಂಗಲದಿಂದ ಮಹಾಂತೇಶ ದೊಡ್ಡಗೌಡರ್ 54 ಮತದಿಂದ ಆಯ್ಕೆಯಾಗಿದ್ದರೆ, ಕಿತ್ತೂರಿನಿಂದ ನಾನಾಸಾಹೇಬ್ ಪಾಟೀಲ್ 17 ಮತ ಪಡೆದು ಆಯ್ಕೆಯಾಗಿದ್ದಾರೆ.
ಇನ್ನು ನಿಪ್ಪಾಣಿಯಿಂದ ಅಣ್ಣಾಸಾಬ್ ಜೊಲ್ಲೆ 71 ಮತ ಪಡೆದು ಆಯ್ಕೆಯಾಗಿದ್ದು, ಹುಕ್ಕೇರಿಯಿಂದ ರಮೇಶ್ ಕತ್ತಿ 59 ಮತ ಪಡೆದು ಆಯ್ಕೆಯಾಗಿದ್ದಾರೆ. ಆ ಮೂಲಕವಾಗಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಟೀಂಗೆ ಸ್ಪಷ್ಟ ಬಹುಮತ ಸಿಕ್ಕಿದ್ದು, ಈಗ ಅಧ್ಯಕ್ಷ ಯಾರಾಗಲಿದ್ದಾರೆ ಎನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಜಾರಕಿಹೊಳಿ ಬ್ರದರ್ಸ್ ಹೇಳಿದಂತೆ ಲಿಂಗಾಯತ ಸಮುದಾಯದವರೇ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಲಿದ್ದಾರೆ. ಹೀಗಾಗಿ ಲಿಂಗಾಯತ ಸಮುದಾಯಕ್ಕೆ ಸೇರಿದ ಬಿಜೆಪಿ ಮಾಜಿ ಸಂಸದ ಅಣ್ಣ ಸಾಹೇಬ್ ಜೊಲ್ಲೆ ಸೇರಿದಂತೆ ಇತರ ಅಧ್ಯಕ್ಷ ಸ್ಥಾನ ರೇಸಿನಲ್ಲಿದ್ದು, ಅಂತಿಮವಾಗಿ ಯಾರನ್ನು ಮಾಡಬೇಕೆಂದು ಜಾರಕಿಹೊಳಿ ಬ್ರದರ್ಸ್ ನಿರ್ಧರಿಸಲಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಗೆದ್ದು ಬೀಗುತ್ತಿದ್ದ ಜಾರಕಿಹೊಳಿ ಬ್ರದರ್ಸ್ಗೆ ಶಾಕ್ ಕೊಟ್ಟ ಸವದಿ ಸಹೋದರರು
ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದ ಅಣ್ಣಾಸಾಬ್ ಜೊಲ್ಲೆ
ಇನ್ನು ನಿಪ್ಪಾಣಿ ನಿರ್ದೇಶಕರಾಗಿ ಆಯ್ಕೆಯಾದ ಮಾಜಿ ಸಂಸದ ಅಣ್ಣಾಸಾಬ್ ಜೊಲ್ಲೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಹೈಕೋರ್ಟ್ ಆದೇಶದಂತೆ ಇವತ್ತು ಫಲಿತಾಂಶ ಘೋಷಣೆ ಮಾಡಿದ್ದಾರೆ. ಚುನಾವಣೆಯಲ್ಲಿ ನಾನು ಸೇರಿಸಿ ನಾಲ್ಕು ಮತಕ್ಷೇತ್ರದ ಫಲಿತಾಂಶ ಬಂದಿದೆ.71 ಮತಗಳನ್ನ ಗಳಿಸುವುದರ ಮೂಲಕ ಡಿಸಿಸಿ ಬ್ಯಾಂಕ್ ಗೆ ಆಯ್ಕೆಯಾಗಿದ್ದೇನೆ. ಇನ್ನೊಂದು 15 ದಿನಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು. ನಾನು ಸೇರಿದಂತೆ ಎಲ್ಲರೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿರುವೆ. ನಾವೆಲ್ಲರೂ ಜಾರಕಿಹೊಳಿ ಬ್ರದರ್ಸ್ ಬಣದಲ್ಲಿ ಇದ್ದೇವೆ. ಬಾಲಚಂದ್ರ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಜೊತೆಗೆ ಚರ್ಚಿಸಿ ಅಧ್ಯಕ್ಷರ ಆಯ್ಕೆ ಮಾಡುತ್ತೇವೆ ಎಂದರು.



