29 ವರ್ಷದ ನಂತರ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧಿಕಾರ ಸಿಕ್ಕಿದೆ: ಲಿಂಗಾಯತರಿಗೆ ಅಧ್ಯಕ್ಷ ಸ್ಥಾನ ಎಂದ ಜಾರಕಿಹೊಳಿ
ಕುಂದಾನಗರಿ ಬೆಳಗಾವಿ ಅಂದ್ರೆ ರಾಜಕೀಯ ಮನೆತನಗಳ ಸಮರ. ಅದರಲ್ಲೂ ಕತ್ತಿ- ಜಾರಕಿಹೊಳಿ ಕುಟುಂಬದ ನಡುವೆ ರಾಜಕೀಯ ಜಿದ್ದಾಜಿದ್ದಿ ತೀರಾ ಸಾಮಾನ್ಯ. ಒಬ್ಬರಿಗೊಬ್ಬರು ಕತ್ತಿ ಮಸಿಯುತ್ತಲೇ ಇರುತ್ತಾರೆ. ಇದೀಗ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ (DCC Bank Election) ಮತ್ತೊಮ್ಮೆ ಬದ್ಧವೈರಿಗಳ ಕದನದಲ್ಲಿ ಜಾರಕಿಹೊಳಿ ಬ್ರದರ್ಸ್ ಕಮಾಲ್ ಮಾಡಿದ್ದಾರೆ.

ಬೆಳಗಾವಿ, (ಅಕ್ಟೋಬರ್ 19): ಕತ್ತಿ ಹಾಗೂ ಜಾರಕಿಹೊಳಿ ಕುಟುಂಬದ ನಡುವೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಜಾರಕಿಹೊಳಿ ಬ್ರದರ್ಸ್ ಗೆದ್ದು ಬೀಗಿದ್ದಾರೆ. ಈ ಮೂಲಕ 29 ವರ್ಷಗಳ ನಂತರ ಪೂರ್ಣ ಪ್ರಮಾಣದ ಅಧಿಕಾರ ಸಿಕ್ಕಿದೆ. ಇದರೊಂದಿಗೆ ಕತ್ತಿ ಕುಟುಂಬಕ್ಕೆ ಮುಖಭಂಗವಾಗಿದೆ. ಇನ್ನು ಬೆಳಗಾವಿ ಡಿಸಿಸಿ ಬ್ಯಾಂಕ್ ಅಧಿಕಾರ ಸಿಕ್ಕಿರುವ ಬಗ್ಗೆ ಮಾತನಾಡಿರುವ ಬಾಲಚಂದ್ರ ಜಾರಕಿಹೊಳಿ, ಬೆಳಗಾವಿ ಡಿಸಿಸಿ ಬ್ಯಾಂಕಿಗೆ ಲಿಂಗಾಯತ ಸಮಾಜದವರನ್ನ ಅಧ್ಯಕ್ಷರನ್ನಾಗಿ ಮಾಡುತ್ತೇವೆ ಎಂದು ಘೋಷಣೆ ಮಾಡಿದರು.
ಲಿಂಗಾಯತರಿಗೆ ಅಧ್ಯಕ್ಷ ಪಟ್ಟ
ಬೆಳಗಾವಿಯ ಖಾಸಗಿ ಹೊಟೆಲ್ ನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ಡಿಸಿಸಿ ಬ್ಯಾಂಕ್ ಪೂರ್ಣ ಪ್ರಮಾಣದ ಅಧಿಕಾರ ನಮಗೆ ಸಿಕ್ಕಿದೆ. ಹದಿನಾರು ಸ್ಥಾನಗಳ ಪೈಕಿ 13 ಸ್ಥಾನ ಗೆದಿದ್ದೇವೆ. 29 ವರ್ಷದ ನಂತರ ಮತ್ತೆ ಡಿಸಿಸಿ ಬ್ಯಾಂಕ್ ಪೂರ್ಣ ಪ್ರಮಾಣದ ಅಧಿಕಾರ ಸಿಕ್ಕಿದೆ. ಜಿಲ್ಲೆಯ ಮಹಾ ಜನತೆ, ರೈತರಿಗೆ, ಶಾಸಕರಿಗೆ ಧನ್ಯವಾದ . ಒಂದು, ಎರಡು ಸೀಟ್ ಗೆದ್ದವರನ್ನ ನಾವು ಅಧ್ಯಕ್ಷ ಮಾಡುತ್ತಾ ಹೋಗಿದ್ವಿ. ಅಧ್ಯಕ್ಷ, ಉಪಾಧ್ಯಕ್ಷ, ಅಪೆಕ್ಸ್ ಬ್ಯಾಂಕ್ ಡೈರೆಕ್ಟರ್ ನಮ್ಮವರನ್ನ ಮಾಡಿದ್ದೇವೆ. ಈಗ ಡಿಸಿಸಿ ಬ್ಯಾಂಕಿಗೆ ಲಿಂಗಾಯತ ಸಮಾಜದವರನ್ನ ಅಧ್ಯಕ್ಷರನ್ನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತೆ ಪಾರುಪತ್ಯ ಮೆರೆದ ಜಾರಕಿಹೊಳಿ ಬ್ರದರ್ಸ್, ನಡೆಯದ ಕತ್ತಿ ವರಸೆ
ರಮೇಶ್ ಕತ್ತಿಗೆ ಟಾಂಗ್ ಕೊಟ್ಟ ಜಾರಕಿಹೊಳಿ
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹದಿನಾರು ಸ್ಥಾನಗಳ ಪೈಕಿ 13 ಸ್ಥಾನ ಗೆದಿದ್ದೇವೆ. ನಮ್ಮಲ್ಲಿ ಸ್ವಲ್ಪ ಅಸಮಾಧಾನ ಇದ್ದವು ಅವನ್ನ ಸರಿ ಮಾಡಿಕೊಳ್ಳುತ್ತೇವೆ. ನಾವು ಇದ್ರೆ ಬ್ಯಾಂಕ್ ಅಂತಿದ್ದರು. ಅಂತವರಿಗೆ ಬ್ಯಾಂಕ್ ಸದೃಢ ಮಾಡಿ ಉತ್ತರ ಕೊಡುತ್ತೇವೆ. ರಾಜು ಕಾಗೆ, ಗಣೇಶ್ ಹುಕ್ಕೇರಿ ನಮ್ಮ ಬಣಕ್ಕೆ ಸಪೋರ್ಟ್ ಮಾಡುತ್ತಾರೆ. ಮೂರು ಜನ ಮಾತ್ರ ವಿರೋಧ ಇದೆ. ಚುನಾವಣೆ ಸಮಯದಲ್ಲಿ ಸಿಕ್ಕಾಪಟ್ಟೆ ಮಾತಾಡಿದ್ರು. ಬ್ಯಾಂಕ್ ಮೇಲೆ ಪರಿಣಾಮ ಬೀರಬಾರದು ಎಂದು ನಾವು ಮಾತಾಡಿಲ್ಲ. ನಾವು ಸುಮ್ಮನೆ ಇದ್ದೇವೆ ಅಂದ್ರೆ ಅದು ನಮ್ಮ ವಿಕ್ನೆಸ್ ಅಲ್ಲ. ಸಮಯ ಬಂದಾಗ ಎಲ್ಲರಿಗೂ ಉತ್ತರ ಕೊಡುತ್ತೇನೆ ಎಂದು ಪರೋಕ್ಷವಾಗಿ ರಮೇಶ್ ಕತ್ತಿಗೆ ಟಾಂಗ್ ಕೊಟ್ಟರು.
ಲಕ್ಷ್ಮಣ ಸವದಿಗೆ ಜಾರಕಿಹೊಳಿ ಸವಾಲ್
ನಮ್ಮವರೇ ಅಧ್ಯಕ್ಷರಾಗುತ್ತಾರೆ. ನಾನು ಐವತ್ತು ಕೋಟಿ ರೂಪಾಯಿ ಬೆಟ್ಟಿಂಗ್ ಕಟ್ಟುತ್ತೇನೆ. ಲಕ್ಷ್ಮಣ ಸವದಿ ಬೇಕಾದರೆ ಐವತ್ತು ಕೋಟಿ ಬೆಟ್ಟಿಂಗ್ ಕಟ್ಟಲಿ. ನಮ್ಮವರು ಆಗದಿದ್ದರೆ ಆಸ್ತಿ ಮಾರಿ ಐವತ್ತು ಕೋಟಿ ಕೊಡುತ್ತೇನೆ ಎಂದು ಸವದಿಗೆ ಸವಾಲು ಹಾಕಿದ ಬಾಲಚಂದ್ರ ಜಾರಕಿಹೊಳಿ, ಘಟಪ್ರಭಾ ಸಕ್ಕರೆ ಕಾರ್ಖಾನೆಯದ್ದು 33ಕೋಟಿ ರೂ. ಬಾಕಿ ಇದೆ. ಅದನ್ನ ಒನ್ ಟೈಮ್ ಸೆಟ್ಲಿಮೆಂಟ್ ಮಾಡಿ ಸಾಲ ವಸೂಲಿ ಶುರು ಮಾಡುತ್ತೇನೆ. ಬಹಳಷ್ಟು ಜನ ನಮ್ಮನ್ನ ಭೇಟಿಯಾಗಿ ಹೋಗುತ್ತಾರೆ. ಅದನ್ನೆಲ್ಲಾ ನಾವು ಹೊರಗೆ ಹೇಳಲು ಆಗುವುದಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ನನಗೆ ಯಾರು ಶತ್ರುಗಳಿಲ್ಲ. ಲಕ್ಷ್ಮಣ ಸವದಿಗೂ ನಮಗೂ ವೈಯಕ್ತಿಕವಾಗಿ ಎನೂ ಇಲ್ಲ. ಅವಿರೋಧವಾಗಿ ಆಯ್ಕೆಯಾಗಬೇಕು ಅಂದುಕೊಂಡಿದ್ದರು. ಅದು ಆಗದಿದ್ದಕ್ಕೆ ಸ್ವಲ್ಪ ಅಸಮಾಧಾನ ಆಗಿದ್ದಾರೆ ಎಂದು ಹೇಳಿದರು.
ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು
ಇನ್ನು ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಏಳು ಸ್ಥಾನಗಳಲ್ಲಿ ಇಂದು ನಾವು ನಾಲ್ಕು ಸ್ಥಾನ ಗೆದ್ದಿದ್ದೇವೆ. ರಾಮದುರ್ಗ ಹಾಗೂ ಹುಕ್ಕೇರಿಯಲ್ಲಿ ದಲ್ಲಿ ಸೋತಿದ್ದೇವೆ. ಮೊದಲೇ ಹೇಳಿದ ಹಾಗೇ ನಾವು ಗೆದ್ದಿದ್ದೇವೆ. ಗೆಲ್ಲುವುದಿಲ್ಲ ಎಂದಯ ಗೊತ್ತಿದ್ದೂ ಅಪಪ್ರಚಾರ ಮಾಡಿದರು. ಆದರೆ ಅದು ಯಾವುದು ಕೂಡ ವರ್ಕೌಟ್ ಆಗುವುದಿಲ್ಲ. ಜಾತಿ ಟ್ರಂಪ್ ಕಾರ್ಡ್ ವರ್ಕೌಟ್ ಆಗಿಲ್ಲ, ಜನರ ಉತ್ತರ ಕೊಟ್ಟಿದ್ದಾರೆ ಎಂದರು.
ಡಿಸಿಸಿ ಬ್ಯಾಂಕ್ ಚುನಾವಣೆ ದೊಡ್ಡ ಸುದ್ದಿಯಾಗಿದೆ. ಲಕ್ಷ್ಮಣ ಸವದಿ ಅವರು ಎಲ್ಲರೂ ಒಂದೇ ಗುಂಪಿನವರು ಎಂದು ಹೇಳಿ ಬೀಜ ಬಿತ್ತಿದ್ದಾರೆ. ಕೈಯಲ್ಲಿ ಚೀಟಿ ಹಿಡಿದು ಅಧ್ಯಕ್ಷ ನಮ್ಮವರು ಆಗುತ್ತಾರೆ ಎಂದು ಹೇಳಿದ್ದಾರೆ.ಅದು ಯಾವುದು ಕೂಡ ವರ್ಕೌಟ್ ಆಗುವುದಿಲ್ಲ. ಅಧ್ಯಕ್ಷ ಆಗುವವರೆಗೂ ಚರ್ಚೆ ಆಗಲಿ ಎಂದು ಹೊಸ ತಳಿ ಬಿಟ್ಟಿದ್ದಾರೆ ಎಂದು ಟಾಂಕ್ ಕೊಟ್ಟರು.



