ಬೆಳಗಾವಿ ಅಧಿವೇಶನ: ಇಂದಿನಿಂದ ಚಳಿಗಾಲದ ಅಧಿವೇಶನ ಶುರು, ಸರ್ಕಾರಕ್ಕೆ ಚಳಿ ಬಿಡಿಸಲು ಪ್ರತಿಪಕ್ಷ ಸಜ್ಜು
Karnataka Assembly Winter Session 2023: ಇಂದಿನಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ಆರಂಭ ಆಗಲಿದೆ. ಈ ಬಾರಿಯೂ ಪ್ರತಿಭಟನೆಗಳ ಕಾವು ಸರ್ಕಾರ ತಟ್ಟಲ್ಲಿದ್ದು ಸುವರ್ಣ ವಿಧಾನಸೌಧದ ಒಂದು ಕಿಮೀ ವ್ಯಾಪ್ತಿಯಲ್ಲಿ ಸುತ್ತಮುತ್ತ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಬೆಳಗಾವಿ, ಡಿ.04: ಕುಂದಾನಗರಿ ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲ ಅಧಿವೇಶನ ಆರಂಭ ಆಗಲಿದೆ (Belagavi Assembly Winter Session). ಬೆಳಗಾವಿಯಲ್ಲಿ ನಡೆಯುವ 12ನೇ ಅಧಿವೇಶನಕ್ಕೆಎಲ್ಲಾ ರೀತಿಯ ಸಿದ್ದತೆಗಳನ್ನ ಈಗಾಗಲೇ ಬೆಳಗಾವಿ ಜಿಲ್ಲಾಡಳಿತ ಸಂಪೂರ್ಣವಾಗಿ ಮಾಡಿಕೊಂಡಿದೆ. ಮಂತ್ರಿಗಳು, ಶಾಸಕರು, ಅಧಿಕಾರಿ ವರ್ಗ, ಪೊಲೀಸ್ ಸಿಬ್ಬಂದಿ ಹೀಗೆ ಪ್ರತಿಯೊಬ್ಬರಿಗೂ ವಾಸ್ತವ್ಯದ ವ್ಯವಸ್ಥೆ ಜೊತೆಗೆ ಊಟದ ವ್ಯವಸ್ಥೆ ಕೂಡ ಆಗಿದೆ. ಇತ್ತ ಈ ಬಾರಿಯೂ ಪ್ರತಿಭಟನೆಗಳ ಕಾವು ಸರ್ಕಾರ ತಟ್ಟಲ್ಲಿದ್ದು ಜೊತೆಗೆ ಎಂಇಎಸ್ (MES) ಮತ್ತೆ ಕ್ಯಾತೆ ತೆಗೆದಿದ್ದು ಪೊಲೀಸರು ಖಡಕ್ ವಾರ್ನ್ ಕೊಟ್ಟಿದ್ದಾರೆ. ಸುವರ್ಣ ವಿಧಾನಸೌಧದ ಒಂದು ಕಿಮೀ ವ್ಯಾಪ್ತಿಯಲ್ಲಿ ಸುತ್ತಮುತ್ತ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಇಂದಿನಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ಆರಂಭ ಆಗಲಿದೆ. ಇದಕ್ಕೆ ಬೇಕಾದ ಸಿದ್ದತೆಯನ್ನ ಬೆಳಗಾವಿ ಜಿಲ್ಲಾಡಳಿತ ಕಳೆದ ಒಂದು ತಿಂಗಳಿಂದ ಮಾಡಿಕೊಂಡು ಬಂದಿದ್ದು ಇದೀಗ ಎಲ್ಲದ್ದಕ್ಕೂ ಸಜ್ಜಾಗಿದೆ. ಸುವರ್ಣ ವಿಧಾನಸೌಧದಲ್ಲಿ ಸ್ವಚ್ಛತೆಯಿಂದ ಹಿಡಿದು ಲೈಟಿಂಗ್ ವ್ಯವಸ್ಥೆ, ಸಚಿವರಿಗೆ ಕೊಠಡಿ ಹಂಚಿಕೆ ಎಲ್ಲವೂ ಕೂಡ ಆಗಿದ್ದು ಇಂದು 11 ಗಂಟೆಗೆ ಅಧಿವೇಶನ ಆರಂಭಗೊಳ್ಳಲಿದೆ. ಇನ್ನೂ ಸುವರ್ಣ ವಿಧಾನಸೌಧದಲ್ಲಿ ನಾಲ್ಕು ಕಡೆಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಸೌಧದ ಸುತ್ತಮುತ್ತ ಪಾರ್ಕಿಂಕ್ ವ್ಯವಸ್ಥೆ ಆಗಿದೆ. ಇತ್ತ ಸೌಧದ ಹೊರಗೆ, ಪ್ರತಿಭಟನಾ ಸ್ಥಳ ಸೇರಿದಂತೆ ಸುತ್ತಲೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಒಂದು ಕಂಟ್ರೋಲ್ ರೂಮ್ ಇದ್ದು ಅದರಲ್ಲಿ ಎಲ್ಲವನ್ನೂ ಕಂಟ್ರೋಲ್ ಮಾಡಿಕೊಳ್ಳಲಾಗಿದೆ.
17.5ಕೋಟಿ ವೆಚ್ಚದಲ್ಲಿ ಅಧಿವೇಶನ
ಸಚಿವರು, ಶಾಸಕರು ಮತ್ತು ಅಧಿಕಾರಿಗಳಿಗೆ ಈಗಾಗಲೇ ಎರಡು ಸಾವಿರ ರೂಮ್ ಗಳು ಹಂಚಿಕೆಯಾಗಿದ್ದು ಅಲ್ಲೇ ಊಟದ ವ್ಯವಸ್ಥೆ ಕೂಡ ಮಾಡಿದ್ದಾರೆ. ಚೀನಾ ವೈರಸ್ ಆತಂಕ ಹಿನ್ನೆಲೆ ಈ ಬಾರಿ ಸಚಿವರು ಶಾಸಕರು ತಂಗುವ ಹೋಟೆಲ್ಗಳಲ್ಲೇ ಒಂದೊಂದು ವೈದ್ಯರ ತಂಡ ನೇಮಕ ಜೊತೆಗೆ ಒಂದೊಂದು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಇತ್ತ ಸುವರ್ಣ ವಿಧಾನಸೌಧದಲ್ಲಿ ಒಂದು ಮಿನಿ ಆಸ್ಪತ್ರೆ ಕೂಡ ಮಾಡಲಾಗಿದೆ. ಹೀಗೆ ಅಧಿವೇಶನಕ್ಕೆ 16ಜನರ ವೈದ್ಯರ ಪ್ರತ್ಯೆಕ ತಂಡ ಮಾಡಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗಿದೆ. ಒಟ್ಟು 17.5ಕೋಟಿ ವೆಚ್ಚದಲ್ಲಿ ಅಧಿವೇಶನ ನಡೆಸುತ್ತಿದ್ದು ಈ ಬಜೆಟ್ ನಲ್ಲೇ ಕಡಿಮೆ ಮಾಡಲು ಜಿಲ್ಲಾಡಳಿತ ಪ್ಲ್ಯಾನ್ ಮಾಡಿಕೊಂಡಿದ್ದು ಇರೋದ್ರಲ್ಲೇ ಒಳ್ಳೆಯ ಸೌಲಭ್ಯ ಕೊಟ್ಟು ಖರ್ಚು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಬಾರಿ ಅಧಿವೇಶನ ನೋಡಲು ಬರುವ ಮಕ್ಕಳಿಗೆ ಐದು ಮಿನಿ ಬಸ್ ವ್ಯವಸ್ಥೆ, ಯುವಜನ ಸೇವೆ ವತಿಯಿಂದ ಸೌಧದಲ್ಲಿ ಆರ್ಟಿಫಿಶಿಯಲ್ ವಾಲ್ ಕ್ಲೈಮಿಂಗ್ ಮಕ್ಕಳಿಗೆ ಕೊಡಲಾಗುತ್ತಿದೆ ಜೊತೆಗೆ ಸುವರ್ಣ ಸೌಧದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಮಾಡಲಾಗುತ್ತಿದೆ ಎಂದು ಡಿಸಿ ನಿತೇಶ್ ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಅಧಿವೇಶನ: ಕೋರಂಗೆ ಬೇಗ ಬಂದ ಸದಸ್ಯರಿಗೆ ವಿಶೇಷ ಟೀ ಕಪ್ ವಿತರಣೆ, ತಡವಾಗಿ ಬಂದವರಿಗೆ ಪ್ರಶಸ್ತಿ: ಸ್ಪೀಕರ್ ಯುಟಿ ಖಾದರ್
ಅಧಿವೇಶನದ ಭದ್ರತೆಗೆ ಐದು ಸಾವಿರ ಜನ ಪೊಲೀಸ್ ಸಿಬ್ಬಂದಿ ನಿಯೋಜನೆ
ಇನ್ನೂ ಒಂದು ಕಡೆ ಅಧಿವೇಶನಕ್ಕೆ ಬೇಕಾದ ಸಿದ್ದತೆಗಳನ್ನ ಜಿಲ್ಲಾಡಳಿತ ಮಾಡಿಕೊಂಡಿದ್ದು ಮತ್ತೊಂದೆಡೆ ಪೊಲೀಸ್ ಇಲಾಖೆ ಕೂಡ ಬಂದೋಬಸ್ತ್ ಸಲುವಾಗಿ ಎಲ್ಲಾ ರೀತಿಯಲ್ಲಿ ಸಜ್ಜಾಗಿದೆ. ಹೊರ ಜಿಲ್ಲೆಗಳಿಂದ ಈಗಾಗಲೇ ಸಾಕಷ್ಟು ಪೊಲೀಸ್ ಸಿಬ್ಬಂದಿ ಆಗಮಿಸಿದ್ದು ಶಿಪ್ಟ್ ಮಾದರಿಯಲ್ಲಿ ಎಲ್ಲ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. ಬೆಳಗಾವಿ ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಎಸ್ ನೇತೃತ್ವದಲ್ಲಿ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಅಧಿವೇಶನ ಕರ್ತವ್ಯಕ್ಕೆ ಅಂತಾ ಐದು ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿದ್ದಾರೆ. 5 ಎಸ್ಪಿ, 12 ಎಎಸ್ಪಿ, 42ಡಿವೈಎಸ್ಪಿ, ನೂರು ಜನ ಸಿಪಿಐ, 250 ಪಿಎಸ್ಐ, ಮೂರುವರೆ ಸಾವಿರ ಸಿಬ್ಬಂದಿ, 35 ಕೆಎಸ್ಆರ್ಪಿ ತುಕಡಿ ಸೇರಿ ಬಾಂಬ್ ನಿಷ್ಕ್ರೀಯ ದಳ ನಿಯೋಜನೆ ಮಾಡಿ ಅವರಿಗೆ ಉಳಿದುಕೊಳ್ಳಲು ವಾಸ್ತವ್ಯದ ವ್ಯವಸ್ಥೆ ಕೂಡ ಆಗಿದೆ.
ಸುವರ್ಣ ಸೌಧದ ಎರಡು ಕಿಮೀ ದೂರದಲ್ಲಿ ಎರಡು ಸಾವಿರ ಪೊಲೀಸರಿಗೆ ಜರ್ಮನ್ ಟೆಂಟ್ ನಿಂದ ಬೃಹತ್ ಟೌನ್ ಶೀಪ್ ನಿರ್ಮಾಣ ಮಾಡಿದ್ದು ಕಾಟ್, ಬೆಡ್, ಹಾಸಿಗೆ ಸೇರಿ ಊಟದ ವ್ಯವಸ್ಥೆಯನ್ನ ಒಂದೇ ಕಡೆ ಮಾಡಲಾಗಿದೆ. ಇನ್ನೂಳಿದ ಸಿಬ್ಬಂದಿಗೆ ಕಲ್ಯಾಣ ಮಂಟಪ, ಕೆಎಸ್ಆರ್ಪಿ ಮಚ್ಚೆ ಹಾಲ್, ಮುಕ್ತಿ ಮಠ, ರೈತ ಭವನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದೇ ವೇಳೆ ಎಂಇಎಸ್ ಪುಂಡರು ಅಧಿವೇಶನವನ್ನ ವಿರೋಧಿಸಿ ಈ ಬಾರಿಯೂ ಮಹಾಮೇಳ ಮಾಡಲು ಹೊರಟ್ಟಿದ್ದು ಈಗಾಗಲೇ ಅವರಿಗೆ ಅನುಮತಿಯನ್ನ ನಗರ ಪೊಲೀಸ್ ಆಯುಕ್ತರು ನಿರಾಕರಿಸಿದ್ದಾರೆ. ಜೊತೆಗೆ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಕೂಡ ಮಾಡಿದ್ದು ಅನುಮತಿ ಪಡೆದವರಿಗೆ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ. ಇತ್ತ ಅನುಮತಿ ನಿರಾಕರಿಸಿದ್ರೂ ಪುಂಡ ಸಂಘಟನೆ ಕಾರ್ಯಕರ್ತರು ವ್ಯಾಕ್ಸಿನ್ ಡಿಪೋ ಬಳಿ ಆಗಮಿಸಿ ಮಹಾಮೇಳ ಮಾಡುವುದಾಗಿ ಪೊಲೀಸರಿಗೆ ತಿಳಿಸಿದ್ದು ಒಂದು ವೇಳೆ ಕಾರ್ಯಕ್ರಮ ಮಾಡಲು ಬಂದ್ರೇ ಬಂಧಿಸುವುದಾಗಿ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅಧಿವೇಶನದ ಮೊದಲ ದಿನವೇ ಸಾಲು ಸಾಲು ಪ್ರತಿಭಟನೆ
ಇನ್ನೂ ಅಧಿವೇಶನ ಬಂದ್ರೆ ಸಾಕು ಸಾಲು ಸಾಲು ಪ್ರತಿಭಟನೆಗಳು ಆರಂಭ ಆಗಿ ಬಿಡ್ತವೆ. ಈ ಬಾರಿ ಪ್ರತಿಭಟನೆ ಸಂಖ್ಯೆ ಕಡಿಮೆ ಮಾಡಲು ಪ್ರಯತ್ನ ಪಟ್ಟರೂ ಆಗಿಲ್ಲ. ಇದರಿಂದ ಇಂದು ಮೊದಲನೇ ದಿನವೇ ರೈತ ಸಂಘಟನೆಗಳ ಹೋರಾಟದ ಬಿಸಿ ಸರ್ಕಾರಕ್ಕೆ ತಟ್ಟಲಿದೆ. ಕೊಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಹೋರಾಟ ನಡೆಯಲಿದ್ದು ವಿವಿಧ ಬೇಡಿಕೆ ಈಡೇರಿಕೆಗಾಗಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಲಿವೆ. ಹೋರಾಟಕ್ಕೆಂದೆ ಪ್ರತ್ಯೇಕ ಜಾಗ ಗುರುತಿಸಿ ಅಲ್ಲಿ ಪೆಂಡಾಲ್ ವ್ಯವಸ್ಥೆ ಕೂಡ ಜಿಲ್ಲಾಡಳಿತ ಮಾಡಿದೆ.
ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:12 am, Mon, 4 December 23