ಆಸ್ಪತ್ರೆಯಲ್ಲಿ ಆರೋಪಿಯ ಸುಳ್ಳಿನ ನಾಟಕ ಬಯಲು: ಚಿಕನ್ ಪಾರ್ಟಿ ಕೊಲೆಯಲ್ಲಿ ಅಂತ್ಯ
ಬೆಳಗಾವಿಯ ಮೂಡಲಗಿಯಲ್ಲಿ ಚಿಕನ್ ಪಾರ್ಟಿ ವೇಳೆ ಹೆಚ್ಚಿನ ಪೀಸ್‌ಗಾಗಿ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಅದೇ ರೀತಿ, ಚಿಕ್ಕಮಗಳೂರಿನ ಭದ್ರಾ ಬ್ಯಾಕ್‌ವಾಟರ್ ಬಳಿ ಮದ್ಯ ಸೇವಿಸಿ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಪಾರ್ಟಿಗಳಲ್ಲಿ ಅಜಾಗರೂಕತೆ, ಮದ್ಯಪಾನ ದುರಂತಕ್ಕೆ ದಾರಿ ಮಾಡಿಕೊಡಬಹುದು ಎಂಬುದನ್ನು ಈ ಘಟನೆಗಳು ತೋರಿಸಿವೆ. ಸುರಕ್ಷತೆ ಹಾಗೂ ಎಚ್ಚರಿಕೆ ಅಗತ್ಯ.

ಬೆಳಗಾವಿ, ಸೆ.1: ಚಿಕನ್ ಪಾರ್ಟಿ ಮಾಡುವಾಗ ಹೆಚ್ಚಿನ ಪೀಸ್‌ಗಾಗಿ ನಡೆದ ಸಣ್ಣ ಗಲಾಟೆಯೊಂದು ಕೊಲೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಸಂಭವಿಸಿದೆ. ಉತ್ತರ ಪ್ರದೇಶ ಮೂಲದ ಸೀತಾರಾಮ್ ಕೊಲೆಯಾದ ದುರ್ದೈವಿ. ಕೃತ್ಯ ಎಸಗಿದ ಆರೋಪಿ ಅರುಣ್‌ಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೃತ ಸೀತಾರಾಮ್ ಹಾಗೂ ಆರೋಪಿ ಅರುಣ್‌ಕುಮಾರ್ ಇಬ್ಬರೂ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಪುರನ್‌ಪುರ ತಾಲೂಕಿನ ಕಬೀರಗಂಜ್ ಗ್ರಾಮದ ನಿವಾಸಿಗಳು. ಇಬ್ಬರೂ ಮೂಡಲಗಿ ಪಟ್ಟಣದ ‘ಪ್ರಿಯಾ ಸ್ಟೀಲ್ ಕಂಪನಿ’ಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಪಾರ್ಟಿ ಮಾಡುವಾಗ ತನಗೆ ಹೆಚ್ಚಿನ ಚಿಕನ್ ಪೀಸ್ ಬೇಕು ಎಂಬ ವಿಚಾರಕ್ಕೆ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದೆ. ಸೀತಾರಾಮ್ ಜಾಸ್ತಿ ಪೀಸ್ ಹಾಕಿಕೊಂಡಿದ್ದಕ್ಕೆ ಕೋಪಗೊಂಡ ಅರುಣ್‌ಕುಮಾರ್, ಆತನ ಎದೆಗೆ ಚಾಕುವಿನಿಂದ ಇರಿದಿದ್ದಾನೆ.
ಚಾಕು ಇರಿದ ನಂತರ ಆರೋಪಿ ಅರುಣ್‌ಕುಮಾರ್, ಸೀತಾರಾಮ್‌ನನ್ನು ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಮುಂದಾಗಿದ್ದ. ಈ ವೇಳೆ ಆತ ಕಟ್ಟಡದ ಮೇಲಿಂದ ಬಿದ್ದಿದ್ದಾನೆ ಎಂದು ವೈದ್ಯರ ಬಳಿ ಸುಳ್ಳು ಹೇಳಿ ನಂಬಿಸಲು ಯತ್ನಿಸಿದ್ದಾನೆ.
ಆದರೆ ಮರಣೋತ್ತರ ಪರೀಕ್ಷೆ ವೇಳೆ ಎದೆಗೆ ಚಾಕು ಇರಿದು ಕೊಲೆ ಮಾಡಲಾಗಿರುವುದು ಬಹಿರಂಗವಾಗಿದೆ. ತಕ್ಷಣ ಎಚ್ಚೆತ್ತ ಸರ್ಕಾರಿ ಆಸ್ಪತ್ರೆಯ ವೈದ್ಯರು ಘಟಪ್ರಭಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನೇಪಾಳ ಜಲಪ್ರಳಯದ ಭೀಕರತೆ: ನುವಾಕೋಟ್‌ನಲ್ಲಿ ಒಂದೇ ಮನೆಯೊಳಗೆ ಹೂತುಹೋಗಿದ್ದ 23 ಮೃತದೇಹಗಳು ಪತ್ತೆ
ಮದ್ಯ ಸೇವಿಸಿ ಭದ್ರಾ ಬ್ಯಾಕ್‌ವಾಟರ್‌ನಲ್ಲಿ ಈಜಲು ಹೋದ ಯುವಕ ನೀರುಪಾಲು
ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿ ಭದ್ರಾ ಬ್ಯಾಕ್‌ವಾಟರ್‌ನಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರಂತ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಭೈರನಕಟ್ಟೆ ಸಮೀಪ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ನಿವಾಸಿ ನಿಖಿಲ್ ಆರ್ ಸಿಂಗ್ (23) ಮೃತಪಟ್ಟ ಯುವಕ. ನಿನ್ನೆ ಸಂಜೆ ನಿಖಿಲ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಎನ್.ಆರ್.ಪುರ ತಾಲೂಕಿನ ಭೈರನಕಟ್ಟೆ ಬಳಿಯ ಭದ್ರಾ ಬ್ಯಾಕ್‌ವಾಟರ್ ಸಮೀಪ ಮದ್ಯ ಸೇವಿಸಿ ಪಾರ್ಟಿ ಮಾಡಿದ್ದರು. ಪಾರ್ಟಿ ಮಾಡಿದ ನಂತರ ಮೂವರೂ ಈಜಲು ನೀರಿಗಿಳಿದಿದ್ದಾರೆ. ಈ ವೇಳೆ ನಿಖಿಲ್ ನೀರಿನ ಆಳಕ್ಕೆ ಸಿಲುಕಿ ನೀರುಪಾಲಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬ್ಯಾಕ್‌ವಾಟರ್‌ನಿಂದ ನಿಖಿಲ್ ಮೃತದೇಹವನ್ನು ಹೊರತೆಗೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




