ಮಕ್ಕಳ್ಳಿಗೆ ಬೇಡವಾದ ಜನ್ಮಕೊಟ್ಟ ಪೋಷಕರು: ವೃದ್ಧಾಶ್ರಮವಾದ ಬೆಳಗಾವಿ ಬಿಮ್ಸ್ ಆಸ್ಪತ್ರೆ
ಬಿಮ್ಸ್ ಆಸ್ಪತ್ರೆಯಲ್ಲಿ ವೃದ್ಧರು ಮತ್ತು ಅನಾರೋಗ್ಯದಿಂದ ಬಳಲುವ ವ್ಯಕ್ತಿಗಳನ್ನು ಅವರ ಕುಟುಂಬದ ಸದಸ್ಯರು ಬಿಟ್ಟುಹೋಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಚಿಕಿತ್ಸೆಗೆ ಅಂತ ಆಸ್ಪತ್ರೆಗೆ ಸೇರಿಸಿ ಹೋಗುವ ಮಕ್ಕಳು ವಾಪಸ್ ಬರೋದೆ ಇಲ್ಲ. ಆಸ್ಪತ್ರೆ ಸಿಬ್ಬಂದಿಗಳು ಚಿಕಿತ್ಸೆ ಮತ್ತು ಆರೈಕೆ ಮಾಡಿದ್ದು, ಕುಟುಂಬಸ್ಥರು ನಿರ್ಲಕ್ಷ್ಯ ಕಾಳಜಿಗೆ ಕಾರಣವಾಗಿದೆ.

ಬೆಳಗಾವಿ, ಮಾರ್ಚ್ 17: ಮಕ್ಕಳಿಲ್ಲ ಮಕ್ಕಳಿಲ್ಲ ಎಂದು ಅದೇಷ್ಟೋ ಜನ ಕಂಡ ಕಂಡ ದೇವರ ಮೊರೆ ಹೋಗುತ್ತಾರೆ. ವೈದ್ಯರ ಬಳಿ ಲಕ್ಷ ಲಕ್ಷ ರೂ ಕೊಟ್ಟು ಚಿಕಿತ್ಸೆ ಪಡೆಯುತ್ತಾರೆ. ಆದರೆ ಇಲ್ಲಿ ಮಕ್ಕಳಿಗೆ ಜನ್ಮ ಕೊಟ್ಟು, ಓದಿಸಿ, ಬೆಳೆಸಿದ ಪೋಷಕರೇ (parents) ಕೊನೆಗಾಲದಲ್ಲಿ ಮಕ್ಕಳಿಗೆ ಬೇಡವಾಗಿದ್ದಾರೆ. ಚಿಕಿತ್ಸೆಗೆ ಅಂತ ಆಸ್ಪತ್ರೆಗೆ ಸೇರಿಸಿ ಹೋಗುವ ಮಕ್ಕಳು (Children’s) ವಾಪಸ್ ಬರೋದೆ ಇಲ್ಲ. ಈವರೆಗೂ ಬಿಮ್ಸ್ ಆಸ್ಪತ್ರೆಯಲ್ಲಿ ಅದೆಷ್ಟೋ ಜನರನ್ನ ಹೀಗೆ ಬಿಟ್ಟು ಹೋಗಿದ್ದಾರೆ? ಈಗ ಅವರ ಸ್ಥಿತಿಗತಿ ಏನು? ಟಿವಿ9 ಕ್ಯಾಮರಾ ಮುಂದೆ ಕಣ್ಣೀರಿಟ್ಟು ಕೇಳಿಕೊಂಡಿದ್ದು ಏನು ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ.
ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಇದನ್ನು ನಿಭಾಯಿಸಲು ಇಲ್ಲಿರುವ ವೈದ್ಯರು ಹರಸಾಹಸ ಪಡುವ ಸ್ಥಿತಿ ಇದೆ. ಆದರೆ ವೈದ್ಯರಿಗೆ ತಲೆನೋವು ಆಗಿರೋದು ಮಕ್ಕಳಿಗೆ ಬೇಡವಾದ ಪೋಷಕರು. ಮನೆಯಲ್ಲಿ ಪೋಷಕರನ್ನು ನೋಡಿಕೊಳ್ಳಲು ಸಾಧ್ಯವಾಗದೇ ಅನೇಕರು ಬಂದು ಆಸ್ಪತ್ರೆಗೆ ದಾಖಲು ಮಾಡಿ ಹೋಗುತ್ತಾರೆ. ಬಳಿಕ ಆಸ್ಪತ್ರೆಗೆ ಬಂದು ಏನಾಗಿದೆ ಎಂದು ನೋಡಲು ಸಹ ಹೋಗಲ್ಲ.
ಇದನ್ನೂ ಓದಿ: ಈ ವೃದ್ದನಿಗೆ ಕೊಪ್ಪಳ ಜಿಲ್ಲಾಸ್ಪತ್ರೆಯೇ ಮನೆ: ಇಲ್ಲಿರುವ ಸಿಬ್ಬಂದಿಗಳೇ ಸಂಬಂಧಿಕರು
ಮಕ್ಕಳು ಆಸ್ಪತ್ರೆಗೆ ಬಂದು ಆಸ್ತಿ ಪತ್ರಕ್ಕೆ ಸಹಿ ಹಾಕಿಸಿಕೊಂಡು ಹೋಗಿರೋ ಘಟನೆಗಳು ಸಹ ಅನೇಕ ಸಂದರ್ಭದಲ್ಲಿ ನಡೆದಿವೆ. ಹೀಗೆ ಬಿಟ್ಟು ಹೋಗಿರೋ ವೃದ್ಧರಿಗೆ ಚಿಕಿತ್ಸೆ ನೀಡಿ, ಆರೈಕೆ ಮಾಡಿ ಅವರ ಮಕ್ಕಳಿಗೆ ಪೊಲೀಸರು ಮೂಲಕ ಸಂಪರ್ಕಿಸಿ, ಮಾಹಿತಿ ನೀಡಿ ಅವರನ್ನು ಮನೆಗೆ ಕಳುಹಿಸುವ ಕೆಲಸವನ್ನು ಬಿಮ್ಸ್ ವೈದ್ಯರು ಮಾಡುತ್ತಿದ್ದಾರೆ. ಕೇವಲ ಬೆಳಗಾವಿಯವರೇ ಅಷ್ಟೇ ಅಲ್ಲದೇ ದೇಶದ ವಿವಿಧ ಮೂಲೆಗಳಿಂದ ಬಂದು ದಾಖಲಾಗಿ ವಿವಿಧ ರೋಗದಿಂದ ಬಳಲುತ್ತಿದ್ದವರಿಗೆ ಇಲ್ಲಿ ಚಿಕಿತ್ಸೆ ನೀಡಲಾಗಿದೆ. ಜೊತೆಗೆ ವೈದ್ಯಕೀಯ ಸಿಬ್ಬಂದಿಗಳೇ ಅವರನ್ನ ಜೋಪಾನ ಮಾಡುವ ಕೆಲಸ ಮಾಡುತ್ತಿದ್ದಾರೆ.
ಎರಡು ವರ್ಷದಲ್ಲಿ 152 ಪ್ರಕರಣಗಳು
ಅನಾರೋಗ್ಯ ಹಾಗೂ ವೃದ್ಧಾಪ್ಯದಲ್ಲಿ ಮಕ್ಕಳಿಗೆ ಪೋಷಕರೇ ಬೇಡವಾಗಿದ್ದಾರೆ. ಹೀಗೆ ಬೇಡವಾದ ಪೋಷಕರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಮಕ್ಕಳು ಹೋಗುತ್ತಿದ್ದಾರೆ. ಕಳೆದ ಎರಡು ವರ್ಷದಲ್ಲಿ ಈ ರೀತಿಯ 152 ಪ್ರಕರಣಗಳು ಬಿಮ್ಸ್ನಲ್ಲಿ ನಡೆದಿವೆ. ಅನಾರೋಗ್ಯ ನೆಪ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡುತ್ತಾರೆ. ಬಳಿಕ ಪೋಷಕರು ಗುಣಮುಖರಾದ ಬಳಿಕವು ಮನೆಗೆ ಕರೆದುಕೊಂಡು ಹೋಗಲು ಹಿಂದೆಟು ಹಾಕುತ್ತಾರೆ.
ಇನ್ನೂ ಹೊರ ರಾಜ್ಯಕ್ಕೆ 17 ಜನ ವೃದ್ಧರನ್ನು ಮನೆಗೆ ತಲುಪಿಸಿದ್ದು, ಇನ್ನೂ ರಾಜ್ಯದ ವಿವಿಧ ಜಿಲ್ಲೆಗಳಗೆ 73 ಜನ ವೃದ್ಧರನ್ನು ಕಳುಹಿಸಿದ್ದಾರೆ. ಅಷ್ಟೇ ಅಲ್ಲದೇ ಇನ್ನೂ ಮಕ್ಕಳಿಲ್ಲ ಹಾಗೂ ಮಕ್ಕಳಿದ್ದು ಪೋಷಕರನ್ನು ಕರೆದುಕೊಂಡು ಹೋಗದ 62 ಜನರನ್ನು ವೃದ್ಧಾಶ್ರಮಕ್ಕೆ ಕಳುಹಿಸಿದ್ದಾರೆ ಬಿಮ್ಸ್ ಸಿಬ್ಬಂದಿ. ಇನ್ನೂ ಕೆಲವರಿಗೆ ಸಂಪರ್ಕ ಮಾಡಿದರೂ ತಮಗೆ ಸಂಬಂಧ ಇಲ್ಲಾವಿಲ್ಲ ಎನ್ನುತ್ತಿದ್ದರೆ, ಇನ್ನೂ ಕೆಲವರು ಸಂಪರ್ಕಕ್ಕೆ ಸಿಗ್ತಿಲ್ಲ. ಇದೇ ಕಾರಣಕ್ಕೆ ಸದ್ಯ 27 ಜನ ರೋಗಿಗಳು ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದರ ಜೊತೆಗೆ ಆರೈಕೆ ಕೂಡ ಮಾಡಲಾಗುತ್ತಿದೆ.
ಸದ್ಯ ಚಿಕಿತ್ಸೆ ಪಡೆಯುತ್ತಿರುವ 27 ಜನರ ಪೈಕಿ ನಾಲ್ಕು ಜನ ಟಿವಿ9 ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಕುಟುಂಬಸ್ಥರ ಭೇಟಿಗಾಗಿ ಅಂಗಲಾಚುತ್ತಿದ್ದಾರೆ. ಅಷ್ಟಕ್ಕೂ ಅವರೆಲ್ಲಾ ಯಾರು, ಯಾವ ಊರಿನವರು, ಅವರ ಹಿನ್ನಲೆ ಏನು ಅಂತ ನೋಡುವುದಾದರೆ.
ಕೇಸ್ ನಂಬರ್ 1
ವಕೀಲ ಎನ್ ಎಚ್ ಅತ್ತಾರ (69) ಬೆಳಗಾವಿ ನಗರದ ನಿವಾಸಿ. ವೃತ್ತಿಯಲ್ಲಿ ವಕೀಲರಾಗಿದ್ದ ಇವರಿಗೆ ಐದು ತಿಂಗಳ ಹಿಂದೆ ಕಾಲಿಗೆ ನೋವಾಗಿ ಹುಳ ಬೀಳಲಾರಂಭಿಸಿವೆ. ಈ ವೇಳೆ ಇದ್ದ ಒಬ್ಬ ಮಗ ಹಾಗೂ ಹೆಂಡತಿ ಈತನನ್ನ ಮನೆಯಲ್ಲೇ ಬಿಟ್ಟು ಸಂಬಂಧಿಕರ ಮನೆ ಸೇರಿದ್ದರು. ಇದರಿಂದ ನೊಂದು ಡಿಸೆಂಬರ್ 2024ರಂದು ಮನೆ ಬಿಟ್ಟು ಬಂದು ಬಿಮ್ಸ್ ಆಸ್ಪತ್ರೆಗೆ ದಾಖಲಾಗಿ ಅಂದಿನಿಂದ ಅಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಷ್ಟು ದಿನ ಕಳೆದರೂ ಗುಣಮುಖರಾಗ್ತಿರುವ ಅತ್ತಾರ್ ಅವರನ್ನ ನೋಡಲು ಹೆಂಡತಿ ಮಗ ಬಂದಿಲ್ಲ. ಸ್ವಂತ ಮನೆ ಹಾಗೂ ಆಸ್ತಿ ಇದ್ರೂ ಕೇರ್ ಮಾಡ್ತಿಲ್ಲ ಅಂತಾ ಬೇಜಾರು ಹೊರ ಹಾಕ್ತಿದ್ದಾರೆ.
ಕೇಸ್ ನಂಬರ್ 2
ಪರಶುರಾಮ್ (72) ಗದಗ ನಗರದ ನಿವಾಸಿ. ಇವರಿಗೆ ಮದುವೆಯಾಗಿ ಹೆಂಡತಿ ಹಾಗೂ ಇಬ್ಬರು ಮಕ್ಕಳಿದ್ದು, ಮಗಳ ಮದುವೆ ಮಾಡಿದ್ದಾರೆ. ಮಗ ಇದ್ದು ದುಡಿದು ಕೆಲಸ ಮಾಡಿ ಮನೆ ನಡೆಸುತ್ತಿದ್ದಾನೆ. ಮನೆಯವರು ಕಾಟ ತಾಳಲಾರದೇ ಊರು ಬಿಟ್ಟಿದ್ದ ಪರಶುರಾಮ್ಗೆ ಹದಿನೈದು ದಿನದ ಹಿಂದೆ ಬಿಮ್ಸ್ ಆಸ್ಪತ್ರೆಗೆ ಯಾರೋ ಸೇರಿಸಿ ಹೇಳದೇ ಹೋಗಿದ್ದಾರೆ. ಇವರೆಗೂ ಈತನನ್ನ ನೋಡಲು ಯಾರು ಕೂಡ ಬಂದಿಲ್ಲ. ಮನೆಯವರನ್ನ ನೆನೆದು ಪರಶುರಾಮ ಕಣ್ಣೀರಿಡ್ತಿದ್ದಾರೆ. ಜೊತೆಗೆ ಅವರು ಬಂದರೆ ಹೋಗುವುದಾಗಿ ಕೂಡ ಹೇಳ್ತಿದ್ದಾರೆ. ತಾವು ಆಸ್ಪತ್ರೆಯಲ್ಲಿರುವ ವಿಚಾರ ಕುಟುಂಬಸ್ಥರಿಗೆ ಗೊತ್ತಿಲ್ಲ ಯಾರೋ ಸೇರಿಸಿ ಹೋಗಿದ್ದಾರೆ ಅಂತಾ ಹೇಳ್ತಿದ್ದಾರೆ.
ಕೇಸ್ ನಂಬರ್ 3
ಪ್ರಸಾದ್, ಬೆಳಗಾವಿ ನಗರದ ಚವಾಟಗಲ್ಲಿಯ ನಿವಾಸಿ. ಇವರಿಗೂ ಮದುವೆಯಾಗಿ ಹೆಂಡತಿ ಹಾಗೂ ಒಬ್ಬ ಮಗನಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡ್ತಿದ್ದ ಪ್ರಸಾದ್ ಅವರಿಗೆ ಕೆಲ ದಿನಗಳಿಂದ ಅನಾರೋಗ್ಯ ಉಂಟಾಗಿ ಸಮಸ್ಯೆ ಎದುರಿಸುತ್ತಿದ್ದರು. ಇದರಿಂದ ತಾವೇ ಬಂದು ಆಸ್ಪತ್ರೆಗೆ ದಾಖಲಾಗಿದ್ದು, ತಿಂಗಳಾಗ್ತಾ ಬಂದ್ರೂ ಯಾರು ಕೂಡ ನೋಡಲು ಬಂದಿಲ್ಲ. ಮಗ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದು, ಆತನೂ ಕೂಡ ಬಂದಿಲ್ಲ. ಸ್ವಂತ ಮನೆ ಇದೆ. ಆದರೆ ಅವರೇ ಇದ್ದು ತಮಗೆ ಕೆರ್ ಮಾಡ್ತಿಲ್ಲ, ನೋಡಲು ಬರ್ತಿಲ್ಲ ಅಂತಾ ನೋವು ತೊಡಿಕೊಂಡಿದ್ದಾರೆ.
ಕೇಸ್ ನಂಬರ್ 4
ಗಂಗವ್ವಾ, ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮೇಲ್ಮಟ್ಟಿ ಗ್ರಾಮದ ನಿವಾಸಿ. ಮದುವೆಯಾಗದ ಇವರಿಗೆ ಅಣ್ಣ ಹಾಗೂ ತಮ್ಮ ಇದ್ದಾರೆ. ತಾಯಿ-ತಂದೆ ಇರೋವರೆಗೂ ಅವರ ಜೊತೆಗೆ ಇದ್ದ ಗಂಗವ್ವಾಗೆ ಒಂದು ವರ್ಷದಿಂದ ಅನಾರೋಗ್ಯ ಕಾಡತೊಡಗಿದೆ. ಆಗ ಬಂದು ಆಸ್ಪತ್ರೆಗೆ ಸೇರಿಸಿ ಹೋದ ಕುಟುಂಬಸ್ಥರು ಈವರೆಗೂ ನೋಡಲು ಬಂದಿಲ್ಲ, ಆದರೆ ತವರು ಮನೆ ಆಸ್ತಿ ಗಂಗವ್ವ ಹೆಸರಿನಲ್ಲಿದ್ದು ಅದಕ್ಕಾದ್ರೂ ನೋಡಲು ಬಂದಿಲ್ಲ. ಇತ್ತ ಎಷ್ಟೇ ಸಂಕಟ ಇದ್ರೂ ತನ್ನನ್ನಾ ಎಲ್ಲರೂ ನೋಡಲು ಬರ್ತಾರೆ ಅಂತಾ ಗಂಗವ್ವ ಹೇಳುವುದು ಮನಕಲಕುವಂತಿದೆ.
ಇದನ್ನೂ ಓದಿ: ವಿಧಾನಸೌಧದ ಮುಂದೆ ಸಲ್ಲೇಖನ ವ್ರತ: ಕಣ್ಣೀರಿಡುತ್ತಲ್ಲೇ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ಒಟ್ಟಿನಲ್ಲಿ ಆಸ್ಪತ್ರೆಗೆ ಪೋಷಕರನ್ನು ದಾಖಲಿಸಿ ಆರೋಗ್ಯ ಸಮಸ್ಯೆ ನೆಪ ಹೇಳಿ ಎಸ್ಕೆಪ್ ಆಗುತ್ತಿದ್ದಾರೆ ಮಕ್ಕಳು. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಅವರಿಗೆ ಒಳ್ಳೆಯ ಸಂಸ್ಕಾರ ಕೊಡಲು ತಮ್ಮ ಜೀವನವನ್ನೇ ಮುಡಿಪಾಗಿ ಇಡೋ ಪೋಷಕರು. ಕೊನೆಕಾಗದಲ್ಲಿ ಮಕ್ಕಳಿಗೆ ಬೇಡವಾಗುತ್ತಿದ್ದಾರೆ, ಇದು ಸಮಾಜದ ಒಂದು ದುರಂತವೇ ಆಗಿದೆ. ಇನ್ನಾದರೂ ಈ ಮಕ್ಕಳು ಆತ್ಮ ವಿಮರ್ಷೆ ಮಾಡಿಕೊಳ್ಳಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:19 pm, Mon, 17 March 25