Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದ ಮತ್ತೊಬ್ಬನ ಬಂಧನ: ನಾಲಗೆ ಹರಿಬಿಟ್ಟ MES ಮುಖಂಡ

ಕನ್ನಡ ಮಾತಾಡು ಎಂದಿದ್ದ ಕಂಡಕ್ಟರ್‌ ಮೇಲೆಯೇ ಮನಬಂದಂತೆ ಥಳಿಸಿ ದರ್ಪ ತೋರಿದವರು ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ. ಈ ಸಂಬಂಧ ಅಪ್ರಾಪ್ತ ಸೇರಿ ನಾಲ್ಕು ಆರೋಪಿಗಳನ್ನ ಬಂಧಿಸಿದ್ದ ಪೊಲೀಸರು, ಇದೀಗ ಮತ್ತೊಬ್ಬನ್ನ ಲಾಕ್ ಮಾಡಿದ್ದಾರೆ. ಮೋಹನ್ ಹಂಚಿನಮನಿ ಎಂಬುವವನನ್ನ ಮಾರಿಹಾಳ ಪೊಲೀಸರು ಬಂಧಿಸಿದ್ದಾರೆ.

ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದ ಮತ್ತೊಬ್ಬನ ಬಂಧನ: ನಾಲಗೆ ಹರಿಬಿಟ್ಟ MES ಮುಖಂಡ
ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದ ಮತ್ತೊಬ್ಬನ ಬಂಧನ: ನಾಲಗೆ ಹರಿಬಿಟ್ಟ MES ಮುಖಂಡ
Follow us
Sahadev Mane
| Updated By: ಗಂಗಾಧರ​ ಬ. ಸಾಬೋಜಿ

Updated on: Feb 23, 2025 | 4:27 PM

ಬೆಳಗಾವಿ, ಫೆಬ್ರವರಿ 23: ಕನ್ನಡ ಮಾತನಾಡು ಎಂದಿದ್ದಕ್ಕೆ ಕೆಎಸ್​​ಆರ್​ಟಿಸಿ (KSRTC) ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದ ಮತ್ತೊಬ್ಬನನ್ನು ಬಂಧಿಸಲಾಗಿದೆ. 2 ದಿನಗಳ ಹಿಂದೆ ಕಂಡಕ್ಟರ್ ಮಹದೇವಪ್ಪ ದೂರು ದಾಖಲಿಸಿದ್ದರು. ಹೀಗಾಗಿ ಅಪ್ರಾಪ್ತ ಸೇರಿ ನಾಲ್ವರನ್ನು ಬಂಧಿಸಿದ್ದ ಪೊಲೀಸರು, ಇಂದು ಮತ್ತೋರ್ವ ಆರೋಪಿ ಮೋಹನ್ ಹಂಚಿನಮನಿ(25) ಅರೆಸ್ಟ್​ ಮಾಡಿದ್ದಾರೆ. ಸದ್ಯ ಮಾರಿಹಾಳ ಠಾಣೆ ಪೊಲೀಸರಿಂದ ಒಟ್ಟು ಐವರನ್ನು ಬಂಧಿಸಲಾಗಿದೆ.

ನಾಳೆ ಬೆಳಗಾವಿಗೆ ಸಚಿವ ರಾಮಲಿಂಗ ರೆಡ್ಡಿ ಭೇಟಿ

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾದ ಇನ್ನೂ ಕೆಲವು ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಇನ್ನೂ ಬಸ್ ಇಲ್ಲದೇ ಪ್ರಯಾಣಿಕರು ಪರದಾಡುತ್ತಿರುವ ಹಿನ್ನೆಲೆ ಸಂಸದ ಗೋವಿಂದ್ ಕಾರಜೋಳ ಕೂಡ ಸರ್ಕಾರ ಇದನ್ನ ಬಗೆ ಹರಿಸಿ, ಬಸ್ ಸಂಚಾರಕ್ಕೆ ಒತ್ತಾಯಿಸಿದ್ದಾರೆ. ಈ ಎಲ್ಲ ಬೆಳವಣಿಗೆ ನಡುವೆ ನಾಳೆ ಬೆಳಗಾವಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಆಗಮಿಸುತ್ತಿದ್ದು, ಸಾರಿಗೆ ಇಲಾಖೆಗೆ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದು ಬಸ್ ಆರಂಭದ ಕುರಿತು ಕೂಡ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಿದ್ದಾರೆ.

ಮಹಾರಾಷ್ಟ್ರದಲ್ಲಿ ಕನ್ನಡದ ಬಸ್​ಗಳಿಗೆ ಮಸಿ: ಬೆಳಗಾವಿ-ಮಹಾರಾಷ್ಟ್ರ ಸಂಚಾರ ಸ್ಥಗಿತ

ಕರ್ನಾಟಕ, ಮಹಾರಾಷ್ಟ್ರದಲ್ಲಿ ಮರಾಠಿ ಪುಂಡರಿಂದ ಭಾಷಾ ಕಿರಿಕ‌್ ಮುಂದುವರೆದಿದೆ. ಪುಣೆಯಲ್ಲಿ ಕರ್ನಾಟಕ ಸಾರಿಗೆ ಬಸ್ ತಡೆದು ಕಪ್ಪು ಮಸಿಯಿಂದ ಜೈ ಮಹಾರಾಷ್ಟ್ರ ಬರೆದು ಪುಂಡಾಟಿಕೆ ಮೆರೆದಿದ್ದಾರೆ. ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಮಹಾರಾಷ್ಟ್ರಕ್ಕೆ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ಕನ್ನಡಿಗ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣ: ಬೆಳಗಾವಿ ಗಡಿಯಲ್ಲಿ ನಿಜಕ್ಕೂ ನಡೆದಿದ್ದೇನು? ಇಲ್ಲಿದೆ ಸಂಪೂರ್ಣ ವಿವರ

ಎಂಇಎಸ್ ಮುಖಂಡ ಬೆಳಗಾವಿ ನೆಲದಲ್ಲಿ ನಿಂತು ಕನ್ನಡ ಸಂಘಟನೆಯವರಿಗೆ ನಾಲಾಯಕ ಎಂದು ನಾಲಿಗೆ ಹರಿ ಬಿಟ್ಟಿದ್ದಾರೆ. ಇತ್ತ ಘಟನೆ ಬಗ್ಗೆ ಸಂಸದ ಗೋವಿಂದ್ ಕಾರಜೋಳ ಕೂಡ ಪ್ರತಿಕ್ರಿಯೆ ನೀಡಿದ್ದು, ಆದರೆ ಬೆಳಗಾವಿಯ ಯಾವೊಬ್ಬ ನಾಯಕರು ಇದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ.

ಕರ್ನಾಟಕದ ಅಂಬಾರಿ ಬಸ್​​ಗೆ ಕಪ್ಪು ಮಸಿ

ಕನ್ನಡದಲ್ಲಿ ಮಾತಾಡು ಎಂದಿದ್ದಕ್ಕೆ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಗೂಂಡಾಗಿರಿ ಪ್ರಕರಣ ಗಡಿ ಜಿಲ್ಲೆಯಲ್ಲಿ ಭಾಷಾ ಬಾಂಧವ್ಯಕ್ಕೆ ಕೊಳ್ಳಿಯಿಟ್ಟಿದೆ. ಎಂಇಎಸ್, ಶಿವಸೇನೆ ಪುಂಡರ ಪುಂಡಾಟಿಕೆ ಬೆಳಗಾವಿ ಮತ್ತು ಮಹಾರಾಷ್ಟ್ರದಲ್ಲಿ ಮುಂದುವರೆದಿದೆ. ನಿನ್ನೆ ರಾತ್ರಿ ಮಹಾರಾಷ್ಟ್ರದ ಪುಣೆಯ ಸ್ವಾರಗೇಟ್​ನಲ್ಲಿ ಕರ್ನಾಟಕದ ಅಂಬಾರಿ ಬಸ್​​ಗೆ ಕಪ್ಪು ಮಸಿ ಹಚ್ಚಿದ್ದಾರೆ. ಶಿವಸೇನೆ ಪುಂಡರು ಕರ್ನಾಟಕದ ಬಸ್ ಮೇಲೆ ಕಪ್ಪು ಮಸಿಯಿಂದ ಜೈ ಮಹಾರಾಷ್ಟ್ರ ಮತ್ತು ಮರಾಠಾ ಮಾನುಸ ಅಂತಾ ಬರೆದು ಗೂಂಡಾವರ್ತನೆ ತೋರಿದ್ದಾರೆ.

ಬೆಳಗಾವಿ ಡಿಪೋಗೆ‌ ಸೇರಿದ್ದ ಅಂಬಾರಿ ಬಸ್ ಇಂದು ಬೆಳಗ್ಗೆ ಬೆಳಗಾವಿಗೆ ವಾಪಸ್ ಬಂದಿದೆ. ನಿನ್ನೆಯಷ್ಟೇ ಕೊಲ್ಲಾಪುರದಲ್ಲಿ ಶಿವಸೇನೆ ಪುಂಡರು ಕರ್ನಾಟಕ ಬಸ್​​ಗೆ ಭಗವಾ ಧ್ವಜ ಕಟ್ಟಿದ್ದರು. ಇದಾದ ಬಳಿಕ ‌ರಾತ್ರಿ ಮಸಿ ಬಳೆದು ಕೃತ್ಯ ಎಸಗಿದ್ದಾರೆ. ಇದರಿಂದ ಕರ್ನಾಟಕ ಮಹಾರಾಷ್ಟ್ರ ರಾಜ್ಯದ ಮಧ್ಯೆ ಸುಗಮ ಬಸ್ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಪುಣೆಯಲ್ಲಿ ಮಸಿ ಹಚ್ಚಿದ್ದರಿಂದ ಮಹಾರಾಷ್ಟ್ರ ಸರ್ಕಾರದ ಬಸ್​​ಗಳು ಕರ್ನಾಟಕ ರಾಜ್ಯದ ಕಾರ್ಯಾಚರಣೆಯನ್ನ ಸ್ಥಗಿತಗೊಳಿಸಿವೆ.

ಇತ್ತ ಬೆಳಗಾವಿಯಿಂದ ಸುಮಾರು 150ಕ್ಕೂ ಅಧಿಕ ಬಸ್​​ಗಳ ಕಾರ್ಯಾಚರಣೆ ಮಾಡುತ್ತಿದ್ದು, ಇಂದು ಬಹುತೇಕ ಬಸ್​ಗಳು ಗಡಿವರೆಗೂ ಮಾತ್ರ ಸಂಚರಿಸುತ್ತಿವೆ. ಆಗಾಗ ಒಂದು ಬಸ್​​ಗಳನ್ನ ಕಳುಹಿಸುತ್ತಿದ್ದು ಗಡಿಯಲ್ಲಿ ಬಿಗುವಿಣ ವಾತಾವರಣ ಇದ್ದರೆ, ಮಹಾರಾಷ್ಟ್ರ ಪ್ರವೇಶಿಸದಂತೆ ಸಾರಿಗೆ ಇಲಾಖೆಯವರು ಸೂಚನೆ ಕೊಟ್ಟು ಕಳಸ್ತಿದ್ದಾರೆ. ಇತ್ತ ಬಸ್​ಗಳೇ ಇಲ್ಲದ ಕಾರಣ ಬೆಳಗಾವಿ, ಕೊಲ್ಲಾಪುರ, ಪುಣೆಯಲ್ಲಿ ಕರ್ನಾಟಕದ ಪ್ರಯಾಣಿಕರು ಪರದಾಡುವಂತಾಗಿದೆ.

ಕನ್ನಡ ನೆಲದಲ್ಲೇ ನಿಂತು ನಾಲಗೆ ಹರಿಬಿಟ್ಟ MES ಮುಖಂಡ

ಇನ್ನೂ ಕಂಡಕ್ಟರ್ ಮೇಲೆ ಎಂಇಎಸ್ ಪುಂಡರ ಗೂಂಡಾಗಿರಿಯನ್ನ ಎಂಇಎಸ್ ಮುಖಂಡ ಶುಭಂ ಶಳಕೆ ಸಮರ್ಥಸಿಕೊಂಡಿದ್ದಾನೆ. ಕನ್ನಡಪರ ಹೋರಾಟಗಾರರು ನಾಲಾಯಕ ಎಂದು ಎಂಇಎಸ್ ಮುಖಂಡನ ಬೆಳಗಾವಿ ನೆಲದಲ್ಲಿ ನಿಂತುಕೊಂಡೇ ನಾಲಿಗೆ ಹರಿ ಬಿಟ್ಟಿದ್ದಾರೆ. ಎಂಇಎಸ್ ಮುಖಂಡ ಶುಭಂ ಶಳಕೆಯಿಂದ‌ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಕಂಡಕ್ಟರ್ ಬಾಲಕಿ ಜೊತೆಗೆ ಅಸಭ್ಯ ವರ್ತನೆ ಮಾಡಿದ್ದಾನೆ. ಅದಕ್ಕೆ ಪೊಲೀಸರು ಪೋಕ್ಸೋ ಕೇಸ್ ಹಾಕಿದ್ದಾರೆ. ಇಂತಹ ನೀಚ, ನಾಲಾಯಕ ಕಂಡಕ್ಟರ್, ಇಂತಹ ಕಂಡಕ್ಟರ್ ಪರ ನಿಂತ ಕನ್ನಡ ಪರ ಸಂಘಟನೆಗಳು ಸಹ ನಾಲಾಯಕರು ಅಂತಾ ಪುಂಡಾಟಿಕೆ ಪ್ರದರ್ಶನ ಮಾಡಿದ್ದಾರೆ. ಪದೇ ಪದೇ ಬೆಳಗಾವಿಯಲ್ಲಿ ಭಾಷಾ, ಗಡಿ ವಿವಾದ ಸೃಷ್ಟಿಸುತ್ತಿರೋ ಎಂಎಂಎಸ್ ಮುಖಂಡ. ಪ್ರಚೋದನಾತ್ಮಕ ಹೇಳಿಕೆ ಕೊಡ್ತಿದ್ದರು ಕಣ್ಣಮುಚ್ಚಿಕುಳಿತಿದ್ದಾರೆ ಪೊಲೀಸರು.

ಇದನ್ನೂ ಓದಿ: ಕಂಡಕ್ಟರ್​​ ಮೇಲೆ ಹಲ್ಲೆ: ಗಡಿಯಲ್ಲಿ ಉದ್ವಿಗ್ನ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಸಾರಿಗೆ ಬಸ್ ಸಂಚಾರ ಸ್ಥಗಿತ

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಪುಂಡಾಟಿಕೆಗೆ ಕಡಿವಾಣ ಇಲ್ಲದಂತಾಗಿದೆ. ಕನ್ನಡದ ನೆಲದ ಮೇಲೆ ನಿಂತು ಕನ್ನಡಿಗರನ್ನ ನಿಂದಿಸುವ ಇಂತಹ ನಾಡದ್ರೋಹಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು. ಅಲ್ಲದೇ ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕಿದೆ. ಬಂದ್ ಆಗಿರುವ ಬಸ್​​ಗಳ ಸಂಚಾರ ಆರಂಭಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಕೆಲಸ ಸರ್ಕಾರ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.