ಕಂಡಕ್ಟರ್ ಮೇಲೆ ಹಲ್ಲೆ: ಗಡಿಯಲ್ಲಿ ಉದ್ವಿಗ್ನ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಸಾರಿಗೆ ಬಸ್ ಸಂಚಾರ ಸ್ಥಗಿತ
ಬೆಳಗಾವಿಯ ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಾರಾಷ್ಟ್ರ ಸರ್ಕಾರ ಕರ್ನಾಟಕಕ್ಕೆ ಬರುವ ಸಾರಿಗೆ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿದೆ. ಆದರೆ, ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಬಸ್‌ಗಳು ಎಂದಿನಂತೆ ಸಂಚರಿಸುತ್ತಿವೆ. ಮಹಾರಾಷ್ಟ್ರದ ಬಸ್‌ಗಳು ಬೆಳಗಾವಿ ಗಡಿವರೆಗೆ ಮಾತ್ರ ಬರುತ್ತಿವೆ. ಈ ಘಟನೆಯಿಂದ ಗಡಿ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿದೆ.

ಬೆಳಗಾವಿ, ಫೆಬ್ರವರಿ 22: ಕನ್ನಡ ಮಾತಾಡಿ ಅಂದಿದ್ದಕ್ಕೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಬಸ್ ಕಂಡಕ್ಟರ್ (conductor) ಮೇಲೆ ಹಲ್ಲೆ ಮಾಡಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣ ಖಂಡಿಸಿ ಜನರು ಪ್ರತಿಭಟನೆ ಮಾಡುತ್ತಿದ್ದಾರೆ. ಸದ್ಯ ಬೆಳಗಾವಿ ಗಡಿಯಲ್ಲಿ ತ್ವೇಷಮಯ ವಾತಾವರಣ ಹಿನ್ನೆಲೆ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಸಾರಿಗೆ ಬಸ್ ಸಂಚಾರವನ್ನು ಮಹಾರಾಷ್ಟ್ರ ಸರ್ಕಾರ ಸ್ಥಗಿತಗೊಳಿಸಿದೆ.
ಮರಾಠಿ ಬರಲ್ಲ.. ಕನ್ನಡ ಮಾತಾಡಿ ಅಂದಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಮರಾಠಿಗರ ಈ ಪುಂಡಾಟಕ್ಕೆ ಕಂಡಕ್ಟರ್ ಕಣ್ಣೀರು ಹಾಕಿದ್ದರು. ಸದ್ಯ ನಾಲ್ವರನ್ನು ಬಂಧಿಸಲಾಗಿದೆ. ಈ ನಡುವೆ ಮಹಾರಾಷ್ಟ್ರ ಸರ್ಕಾರ ಕರ್ನಾಟಕಕ್ಕೆ ಬರುವ ಸಾರಿಗೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದೆ. ಹೀಗಾಗಿ ಬೆಳಗಾವಿ ಗಡಿವರೆಗೂ ಮಾತ್ರ ಮಹಾರಾಷ್ಟ್ರ ಸಾರಿಗೆ ಬಸ್‌ಗಳು ಬರುತ್ತಿವೆ. ಆದರೆ ಕರ್ನಾಟಕದಿಂದ ಎಂದಿನಂತೆ ಮಹಾರಾಷ್ಟ್ರದ ವಿವಿಧ ಕಡೆಗೆ ರಾಜ್ಯದ ಸಾರಿಗೆ ಬಸ್‌ಗಳು ಸಂಚಾರ ಮಾಡುತ್ತಿವೆ.
ಇದನ್ನೂ ಓದಿ: ಬೆಳಗಾವಿ: ಕನ್ನಡ ಮಾತನಾಡು ಎಂದಿದ್ದಕ್ಕೆ ಹಲ್ಲೆ: ಸಂತ್ರಸ್ತ ನಿರ್ವಾಹಕನ ವಿರುದ್ಧವೇ ಪೋಕ್ಸೋ ಕೇಸ್
ಸರ್ಕಾರಿ ಬಸ್ ಕಂಡಕ್ಟರ್ ಮಹಾದೇವಪ್ಪ ಮತ್ತು ಚಾಲಕ ಕತ್ತಲ್ ಸಾಬ್ ನಿನ್ನೆ ಎಂದಿನಂತೆ ಬೆಳಗಾವಿ ಸಿಟಿಯಿಂದ ಪಂಥ ಬಾಳೇಕುಂದ್ರಿಗೆ ಹೊರಟ್ಟಿದ್ದರು. ಆಗ ಯುವತಿಯೊಬ್ಬಳು 2 ಫ್ರೀ ಟಿಕೆಟ್ ತಗೊಂಡಿದ್ದಾಳೆ. ಇನ್ನೊಬ್ಬರು ಯಾರು ಅಂತಾ ನೋಡಿದರೆ ಯುವಕ. ಹಾಗೆಲ್ಲಾ ಹುಡುಗರು ಫ್ರೀ ಟಿಕೆಟ್ ತಗೊಳ್ಳಂಗಿಲ್ಲ ಅಂತಾ ಹೇಳಿದ್ದಕ್ಕೆ, ಏನೇ ಹೇಳೋದಿದ್ರು ಮರಾಠಿಯಲ್ಲಿ ಹೇಳು ಅಂತಾ ಆಕೆ ದಬಾಯಿಸಿದ್ದಾಳಂತೆ.
ಇದನ್ನೂ ಓದಿ: ಮರಾಠಿ ಯುವಕರಿಂದ ಗೂಂಡಾಗಿರಿ: ಕನ್ನಡ ಮಾತನಾಡು ಅಂದಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ
ನನಗೆ ಮರಾಠಿ ಬರಲ್ಲ ಕನ್ನಡದಲ್ಲಿ ಹೇಳಿ ಅಂದಿದ್ದಕ್ಕೆ ಮರಾಠಿ ಕಲಿತ್ಕೋ ಅಂತಾ ಜಗಳ ಮಾಡಿದ್ದಾರೆ. ಬಳಿಕ ಆಕೆ ಜತೆ ಇದ್ದ ಯುವಕ ಕರೆ ಮಾಡಿ ಊರಿನ ಜನರಿಗೆ ವಿಷಯ ಮುಟ್ಟಿಸಿದ್ದಾನೆ. ಬಸ್ ಬಾಳೇಕುಂದ್ರಿಗೆ ಬರ್ತಿದ್ದಂತೆ ಕಂಡಕ್ಟರ್ ಮತ್ತು ಡ್ರೈವರ್ ಮೇಲೆ ಹತ್ತಿಪ್ಪತ್ತು ಮಂದಿ ಸೇರಿ ಹಲ್ಲೆ ಮಾಡಿದ್ದಾರೆ. ಸದ್ಯ ಮಾರಿಹಾಳ ಪೊಲೀಸರು ಮಾರುತಿ, ರಾಹುಲ್ ರಾಜು ನಾಯ್ಡು ಮತ್ತು ಬಾಳು ಸುರೇಶ್ ಗೊಂಜೇಕರ್ನನ್ನ ಬಂಧಿಸಿ ಹಿಂಡಲಗಾ ಜೈಲಿಗಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.