ಕನ್ನಡಿಗ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣ: ಬೆಳಗಾವಿ ಗಡಿಯಲ್ಲಿ ನಿಜಕ್ಕೂ ನಡೆದಿದ್ದೇನು? ಇಲ್ಲಿದೆ ಸಂಪೂರ್ಣ ವಿವರ
ಕನ್ನಡ ಮಾತನಾಡು ಎಂದಿದ್ದಕ್ಕೆ ಎನ್ಡಬ್ಲ್ಯುಕೆಆರ್ಟಿಸಿ ನಿರ್ವಾಹಕನ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಮಧ್ಯೆ, ಪೊಲೀಸರು ಇಂದು (ಶನಿವಾರ) ನಿರ್ವಾಹಕನ ಮೇಲೆ ಪೋಕ್ಸೋ ಕೇಸ್ ದಾಖಲು ಮಾಡಿದ್ದಾರೆ. ಇದಕ್ಕೆ ಕರ್ನಾಟಕದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಮತ್ತೊಂದೆಡೆ, ಮಹಾರಾಷ್ಟ್ರ ಸಾರಿಗೆ ಬಸ್ಗಳ ಕರ್ನಾಟಕ ಸಂಚಾರ ಸ್ಥಗಿತಗೊಳಿಸಲಾಗಿದೆ. ಇನ್ನೊಂದು ಕಡೆ ಕರ್ನಾಟಕ ಬಸ್ಗಳ ಮೇಲೆ ಮಹಾರಾಷ್ಟ್ರದಲ್ಲಿ ಪುಂಡರು ಪುಂಡಾಟಿಕೆ ಮೆರೆದಿದ್ದಾರೆ. ಹಾಗಾದರೆ ಬೆಳಗಾವಿ ಗಡಿಯಲ್ಲಿ ನಿಜಕ್ಕೂ ನಡೆದಿದ್ದೇನು? ಇಲ್ಲಿದೆ ವಿವರ.

ಬೆಳಗಾವಿ, ಫೆಬ್ರವರಿ 22: ಆಸ್ಪತ್ರೆ ಬೆಡ್ ಮೇಲೆ ಕಣ್ಣೀರಿಡುತ್ತಿರುವ ಕಂಡಕ್ಟರ್, ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪೊಲೀಸರ ವಿರುದ್ಧವೇ ಘೋಷಣೆ ಕೂಗುತ್ತಿರುವ ಕರವೇ ಕಾರ್ಯಕರ್ತರು. ಮತ್ತೊಂದೆಡೆ ಎಂಇಎಸ್ ಪ್ರತಿಕೃತಿಗೆ ಬೆಂಕಿ. ರಾಜ್ಯ ಹೆದ್ದಾರಿ ತಡೆದ ಕರವೇ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು… ಈ ಎಲ್ಲಾ ಪ್ರತಿಭಟನೆ, ಆಕ್ರೋಶಕ್ಕೆ ಕಾರಣವಾಗಿದ್ದು ಬೆಳಗಾವಿ ತಾಲೂಕಿನ ಮಾರಿಹಾಳ ಪೊಲೀಸರ ನಡೆ. ಶುಕ್ರವಾರ ಮದ್ಯಾಹ್ನದ ವೇಳೆಯಲ್ಲಿ ಮಹಾದೇವಪ್ಪ ಹುಕ್ಕೇರಿ ಎಂಬ ನಿರ್ವಾಹಕ ಕನ್ನಡ ಮಾತನಾಡಿಲ್ಲ, ಕನ್ನಡ ಮಾತಾಡಿ ಎಂದರು ಎಂಬ ಕಾರಣಕ್ಕೆ ಅವರ ಮೇಲೆ ಮರಾಠಿ ಪುಂಡರು ಹಲ್ಲೆ ಮಾಡಿದ್ದರು. ಗಾಯಾಳು ನಿರ್ವಾಹಕನನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಗೆ ವಿವಿಧ ಕನ್ನಡ ಪರ ಹೋರಾಟಗಾರರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಹಲ್ಲೆ ಮಾಡಿದ ಮರಾಠಿ ಪುಂಡರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆ ತೀವ್ರಗೊಳ್ಳುವ ಸುಳಿವು ದೊರೆತ ಪೊಲೀಸರು ತಕ್ಷಣವೇ ಎಚ್ಚೆತ್ತುಕೊಂಡು ಶುಕ್ರವಾರ ರಾತ್ರಿ ಮೂವರು ಆರೋಪಿಗಳನ್ನು ಹಾಗೂ ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ್ನು ಬಂಧಿಸಿದ್ದರು. ಬಂಧಿತ ಮಾರುತಿ ತುರುಮರಿ, ರಾಹುಲ್ ಹಾಗೂ ಬಾಳು ಗೋಜಗೇಕರ್ ಎಂಬಾತನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಬೆಳಗಾವಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದರು.
ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಪ್ರಕರಣಕ್ಕೆ ಶನಿವಾರ ಮದೊರೆತಿದೆ. ಯುವತಿ ನೀಡಿದ ದೂರಿನ ಅನ್ವಯ ನಿರ್ವಾಹಕ ಮಹಾದೇವಪ್ಪ ಹುಕ್ಕೇರಿ ವಿರುದ್ಧ ಪೊಲೀಸರು ಪೋಕ್ಸೋ ಪ್ರಕರಣ ದಾಖಲು ಮಾಡಿದ್ದಾರೆ. ಮೇಲಾಧಿಕಾರಿಗಳಿಗೆ ಮಾಹಿತಿ ಇಲ್ಲದೇ ಇನ್ಸ್ಪೆಕ್ಟರ್ ಈ ನಿರ್ಧಾರ ಮಾಡಿದ್ದು, ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಇದು ಕನ್ನಡ ಪರ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಪೋಕ್ಸೋ ಕೇಸ್ ಬಗ್ಗೆ ಮಾತನಾಡಿದ ಮಹಾದೇವಪ್ಪ ಹುಕ್ಕೇರಿ, ‘‘ನಾನು ತಪ್ಪು ಮಾಡಿದ್ದರೆ ನೇಣಿಗೆ ಹಾಕಲಿ. ಆದರೆ, ತಮ್ಮ ತಪ್ಪು ಮುಚ್ಚಿಕೊಳ್ಳಲು ಅವರು ಕೇಸ್ ಹಾಕಿದ್ದಾರೆ. ನನ್ನ ಮೇಲೆಯೇ ಹಲ್ಲೆಯಾಗಿದ್ದು ನಾನು ಕೇಸ್ ಕೊಟ್ಟ ಮೇಲೆ ಈ ರೀತಿ ಮಾಡಿದ್ದಾರೆ’’ ಎಂದು ನೋವು ತೊಡಿಕೊಂಡಿದ್ದಾರೆ. ಇತ್ತ ಘಟನೆ ಸಂಬಂಧ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಪ್ರತಿಕ್ರಿಯೆ ನೀಡಿದ್ದು, ಪೋಕ್ಸೋ ಕೇಸ್ ಕೊಡಲು ಬಂದಾಗ ನಾವು ತೆಗೆದುಕೊಳ್ಳಬೇಕು. ಇಲ್ಲವಾದರೆ ಮಾನವಹಕ್ಕುಗಳ ಆಯೋಗದ ಬಳಿಗೆ ಹೋಗಿ ಅಲ್ಲಿಂದ ಆದೇಶ ತರುತ್ತಾರೆ. ನಾವೇ ಕೇಸ್ ದಾಖಲಿಸಿಕೊಂಡು ಸತ್ಯಾಂಶ ಹೊರ ತೆಗೆಯುತ್ತೇವೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಕನ್ನಡ ಹೋರಾಟಗಾರರ ಪ್ರತಿಭಟನೆ ತೀವ್ರ
ನಿರ್ವಾಹಕ ಮಹಾದೇವಪ್ಪ ಹುಕ್ಕೇರಿ ಮೇಲೆ ಪೋಕ್ಸೋ ಕೇಸ್ ದಾಖಲು ವಿಚಾರ ತಿಳಿಯುತ್ತಿದ್ದಂತೆಯೇ ಕನ್ನಡ ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ. ಕರವೇ ಶಿವರಾಮೇಗೌಡ ಬಣ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೊಡಿ ಹಾಗೂ ಕಿತ್ತೂರು ಕರ್ನಾಟಕ ಸೇನೆ ಕಾರ್ಯಕರ್ತರು ಬೆಳಗಾವಿ- ಬಾಗಲಕೋಟೆ ರಸ್ತೆ ಹೆದ್ದಾರಿ ತಡೆ ನಡೆಸಿದರು. ಈ ವೇಳೆಯಲ್ಲಿ ಪೊಲೀಸರನ್ನು ಹೋರಾಟಗಾರರು ತರಾಟೆಗೆ ತೆಗೆದುಕೊಂಡರು. ಎಂಇಎಸ್ ಪ್ರತಿಕೃತಿ ದಹಿಸಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಬಳಿಕ ಮಾರಿಹಾಳ ಪೊಲೀಸ್ ಠಾಣೆಗೆ ಕರವೇ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ದೀಪಕ್ ನೇತೃತ್ವದಲ್ಲಿ ಮುತ್ತಿಗೆ ಹಾಕಲಾಯಿತು. ಪೋಕ್ಸೋ ಕೇಸ್ ವಾಪಸ್ ಪಡೆಯಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.

ಬೆಳಗಾವಿ ಗಡಿ ಪ್ರದೇಶದಲ್ಲಿ ಕರವೇ ಪ್ರತಿಭಟನೆ
ಕಾಂಗ್ರೆಸ್ ಕಾರ್ಯಕರ್ತೆ ಆಯೆಷಾ ಸನದಿ ಠಾಣೆಯ ಮುಂಭಾಗದಲ್ಲಿ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಇತ್ತ ಅಥಣಿಯಲ್ಲಿ ಮಹಾರಾಷ್ಟ್ರ ಸಾರಿಗೆ ಬಸ್ ತಡೆದು ಕನ್ನಡದ ಬಾವುಟ ಕಟ್ಟಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದೇನು?
ಘಟನೆಯ ಬಗ್ಗೆ ಎಂಡಿ ಅವರಿಂದ ಮಾಹಿತಿ ಪಡೆದಿದ್ದೇನೆ. ಬೇಕೆಂದೇ ಪೋಕ್ಸೋ ಕೇಸ್ ಕೊಟ್ಟಿದ್ದಾರೆ. ಅಲ್ಲಿ ಅಂತಹದ್ದೇನೂ ಆಗಿಲ್ಲ. ನೆಲ, ಜಲ, ಭಾಷೆ ಈ ಬಗ್ಗೆ ಈ ರೀತಿ ಆದರೆ ಖಂಡಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸಹ ಧಾರವಾಡದಲ್ಲಿ ಈ ಬಗ್ಗೆ ಮಾತನಾಡಿದ್ದು, ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನೊಡೋಣ ಎಂದಿದ್ದಾರೆ.
ಇದನ್ನೂ ಓದಿ: ಕಂಡಕ್ಟರ್ ಮೇಲೆ ಹಲ್ಲೆ: ಗಡಿಯಲ್ಲಿ ಉದ್ವಿಗ್ನ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಸಾರಿಗೆ ಬಸ್ ಸಂಚಾರ ಸ್ಥಗಿತ
ಘಟನೆಗೆ ಕಾರಣವಾದ ಬೆಳಗಾವಿ- ಸುಳೇಬಾವಿ ಬಸ್ ಅನ್ನು ಇಂದು ಮಾರಿಹಾಳ ಪೊಲೀಸ್ ಠಾಣೆಯಿಂದ ಬಿಡುಗಡೆ ಮಾಡಲಾಗಿದೆ. ಚಾಲಕ ಕತಲಸಾಬ್ ಅತ್ತಾರ್ ಇಂದು ಸಾರಿಗೆ ಇಲಾಖೆಯ ಅನುಮತಿ ಪಡೆದು ಬಸ್ ತೆಗೆದುಕೊಂಡು ಹೋಗಿದ್ದಾರೆ. ಒಟ್ಟಾರೆಯಾಗಿ ನಿರ್ವಾಹಕನ ಮೇಲೆ ದುರುದ್ದೇಷ ಪೂರ್ವಕವಾಗಿ ಪೋಕ್ಸೋ ಕೇಸ್ ದಾಖಲು ಮಾಡಿದ ಪೊಲೀಸರ ನಡೆಯ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಇದು ಬೆಳಗಾವಿಗೆ ಸಿಮೀತವಾಗದೇ ಇಡೀ ರಾಜ್ಯದಲ್ಲಿ ಈಗ ಕನ್ನಡಿಗರನ್ನು ಕೆರಳಿಸಿದೆ. ಇತ್ತ ಗಡಿಯಲ್ಲಿ ಸದ್ಯ ಬಿಗುವಿಣ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ರಾಜ್ಯದಿಂದ ಮಹಾರಾಷ್ಟ್ರಕ್ಕೆ ಹೋಗುವ ಬಸ್ ಸಂಚಾರ ಕೂಡ ಸ್ಥಗಿತವಾಗುವ ಸಾಧ್ಯತೆ ಇದೆ.