AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯಲ್ಲಿ ಉರುಸ್ ಮೆರವಣಿಗೆ ಜಟಾಪಟಿ: ಐ ಲವ್ ಮೊಹಮ್ಮದ್ ಘೋಷಣೆ, ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಬೆಳಗಾವಿಯ ಖಡಕ್‌ ಗಲ್ಲಿಯಲ್ಲಿ ಉರುಸ್ ಮೆರವಣಿಗೆ ವೇಳೆ ‘ಐ ಲವ್ ಮೊಹಮ್ಮದ್’ ಘೋಷಣೆಯಿಂದ ಕೋಮು ಸಂಘರ್ಷ ಭುಗಿಲೆದ್ದಿದೆ. ಅಕ್ಟೋಬರ್ 4ರಂದು ರಾತ್ರಿ ನಡೆದ ಈ ಘಟನೆಯಲ್ಲಿ ಹಿಂದೂಗಳ ಮನೆಗಳ ಮೇಲೆ ಕಲ್ಲುತೂರಾಟ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಅನುಮತಿಯಿಲ್ಲದ ಮಾರ್ಗದಲ್ಲಿ ಸಾಗಿದ ಮೆರವಣಿಗೆ ಘರ್ಷಣೆಗೆ ಕಾರಣವಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಕೆಎಸ್‌ಆರ್‌ಪಿ ನಿಯೋಜಿಸಲಾಗಿದೆ.

ಬೆಳಗಾವಿಯಲ್ಲಿ ಉರುಸ್ ಮೆರವಣಿಗೆ ಜಟಾಪಟಿ: ಐ ಲವ್ ಮೊಹಮ್ಮದ್ ಘೋಷಣೆ, ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ
ಬೆಳಗಾವಿಯಲ್ಲಿ ಉರುಸ್ ಮೆರವಣಿಗೆ ಜಟಾಪಟಿ
Sahadev Mane
| Updated By: Ganapathi Sharma|

Updated on: Oct 04, 2025 | 6:51 AM

Share

ಬೆಳಗಾವಿ, ಅಕ್ಟೋಬರ್ 4: ಮನೆ ಮುಂದೆ ಕಲ್ಲುಗಳ ರಾಶಿಯೇ ಬಿದ್ದಿದೆ. ಬೀದಿಯಲ್ಲಿ ಜನ ಆತಂಕದಿಂದ ನಿಂತಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಎಲ್ಲ ದೃಶ್ಯಗಳು ಕಂಡುಬಂದಿದ್ದು ಬೆಳಗಾವಿಯ (Belagavi) ಖಡೇಬಜಾರ್‌ನ ಖಡಕ್‌ ಗಲ್ಲಿಯಲ್ಲಿ ಶುಕ್ರವಾರ ರಾತ್ರಿ. ಬೆಳಗಾವಿಯಲ್ಲಿ ಒಂದಲ್ಲ ಒಂದು ಕಾರಣಕ್ಕೆ ಆಗಾಗ್ಗೆ ಕೋಮು ಸಂಘರ್ಷದ ಕಿಡಿ ಹೊತ್ತುತ್ತಲೇ ಇರುತ್ತದೆ. ಶುಕ್ರವಾರ ನಡೆದ ಉರುಸ್ ಮೆರವಣಿಗೆ ಹಿಂದೂ-ಮುಸ್ಲಿಮರ (Hindu Muslim Clash) ನಡುವೆ ಜಟಾಪಟಿಗೆ ಕಾರಣವಾಗಿದೆ.

ಪ್ರತಿವರ್ಷದಂತೆ ಈ ವರ್ಷವೂ ಮಾಬುಸುಬಾನಿ ದರ್ಗಾ ಉರುಸ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿಯ ಖಡಕ್‌ ಗಲ್ಲಿ ಮೂಲಕ ಮೆರವಣಿಗೆ ಸಾಗಿದೆ. ಕೆಲ ಯುವಕರು ‘ಐ ಲವ್ ಮೊಹಮ್ಮದ್’ ಎಂಬ ಘೋಷಣೆ ಕೂಗುತ್ತಾ ತೆರಳಿದ್ದಾರೆ. ಇದು ಸ್ಥಳೀಯ ಹಿಂದೂಗಳನ್ನು ಕೆರಳಿಸಿದ್ದು ಇದಕ್ಕೆ ಆಕ್ಷೇಪಿಸಿದ್ದಾರೆ. ಆದರೆ, ಇದಾದ ಕೆಲಹೊತ್ತಿನಲ್ಲೇ ಅನ್ಯಕೋಮಿನ ಯುವಕರು ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ತಲ್ವಾರ್ ಪ್ರದರ್ಶಿಸಿ ಗೂಂಡಾವರ್ತನೆ ತೋರಿದ ಆರೋಪ ಕೇಳಿಬಂದಿದೆ.

ಅನುಮತಿ ಇಲ್ಲದೆ ಖಡಕ್ ಗಲ್ಲಿಯಲ್ಲಿ ಮೆರವಣಿಗೆ ಆರೋಪ

ಪ್ರತಿ ವರ್ಷ ಜಾಲ್ಗಾರ ಗಲ್ಲಿ ಮತ್ತು ಶನಿವಾರ ಕೂಟ ಗಲ್ಲಿ ಮೂಲಕ ದರ್ಗಾಕ್ಕೆ ಉರುಸ್ ಮೆರವಣಿಗೆ ಹೋಗುತ್ತಿತ್ತು. ಆದರೆ, ಈ ಬಾರಿ ಪೊಲೀಸರ ಅನುಮತಿ ಇಲ್ಲದಿದ್ದರೂ ಮರಾಠಿ ಸಮುದಾಯದವರೇ ಹೆಚ್ಚಿರುವ ಖಡಕ್ ಗಲ್ಲಿಯಲ್ಲಿ ಉರುಸ್ ಮೆರವಣಿಗೆ ಸಾಗಿದೆ. ಇದೇ ಸ್ಥಳೀಯ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ, ಡಿಸಿಪಿ ನಾರಾಯಣ ಭರಮನಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಲ್ಲುತೂರಾಟ ಮಾಡಿದವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸದ್ಯ ಬೆಳಗಾವಿಯ ಖಡಕ್‌ ಗಲ್ಲಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಮುಂಜಾಗ್ರತಾ ಕ್ರಮವಾಗಿ ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ.

ದಾವಣಗೆರೆಯಲ್ಲೂ ಸಂಘರ್ಷಕ್ಕೆ ಕಾರಣವಾಗಿದ್ದ ‘ಐ ಲವ್ ಮೊಹಮ್ಮದ್’!

ಕೆಲವು ದಿನಗಳ ಹಿಂದಷ್ಟೇ ದಾವಣಗೆರೆಯ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಕೂಡ ‘ಐ ಲವ್ ಮೊಹಮ್ಮದ್’ ಫ್ಲೆಕ್ಸ್ ಹಾಕಿದ್ದ ವಿಚಾರ ಹಿಂದೂ-ಮುಸ್ಲಿಮರ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು. ಕಲ್ಲು ತೂರಾಟ ಕೂಡ ನಡೆದಿತ್ತು. ‘ಐ ಲವ್ ಮೊಹಮ್ಮದ್’ ಎಂಬ ಬರಹವುಳ್ಳ ಫ್ಲೆಕ್ಸ್ ಹಾಕಿದ್ದನ್ನು ಹರಿದು ಹಾಕಲಾಗಿದೆ ಎಂದು ಕಿಡಿಗೇಡಿಗಳು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಿಯಬಿಟ್ಟಿದ್ದರಿಂದ ಸಂಘರ್ಷ ಆರಂಭವಾಗಿತ್ತು.

ಇದನ್ನೂ ಓದಿ: ಕರ್ನಾಟಕಕ್ಕೂ ಕಾಲಿಟ್ಟ ‘ಐ ಲವ್ ಮೊಹಮ್ಮದ್’ ಫ್ಲೆಕ್ಸ್​ ವಿವಾದ: ಏನಿದು? ಶುರುವಾಗಿದ್ದು ಎಲ್ಲಿಂದ?

ಒಟ್ಟಾರೆಯಾಗಿ, ಉತ್ತರ ಪ್ರದೇಶದ ಕಾನ್ಪುರದಲ್ಲಿ ಶುರುವಾವಗಿ, ದೇಶದ ವಿವಿಧೆಡೆಗೆ ಹಬ್ಬಿರುವ ‘ಐ ಲವ್ ಮೊಹಮ್ಮದ್’ ಫ್ಲೆಕ್ಸ್, ಘೋಷಣೆ ಅಭಿಯಾನ ಇದೀಗ ಕರ್ನಾಟಕಕ್ಕೆ ತಲೆನೋವು ತಂದೊಡ್ಡಿರುವುದು ಸುಳ್ಳಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ