ಬೆಳಗಾವಿ: ವಿಡಿಯೋ ಕಾಲ್‌ನಲ್ಲಿ ಮಗು ತೋರಿಸಿಲ್ಲವೆಂದು ಅತ್ತೆಗೆ ಚಾಕುವಿನಿಂದ ಇರಿದ ಅಳಿಯ, ಕೃತ್ಯ ಎಸಗಿ ಸ್ಟೇಟಸ್ ಹಾಕಿ ವಿಕೃತಿ

ಸವದತ್ತಿ ತಾಲೂಕಿನ ಆಲದಕಟ್ಟಿಯಲ್ಲಿ ವಿಡಿಯೋ ಕಾಲ್ ಸಂಬಂಧಿ ಜಗಳದಿಂದ ಅಳಿಯ ಅರವಿಂದ ಗವಳಿ ಅತ್ತೆಗೆ ಚಾಕುವಿನಿಂದ ಇರಿದಿದ್ದಾನೆ. ಅತ್ತೆ ಐಸಿಯುನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೆ, ಇತ್ತ ಅಳಿಯ ‘ಇಂದು ಜೈಲು, ನಾಳೆ ಬೇಲ್’ ಎಂದು ಸ್ಟೇಟಸ್ ಹಾಕಿ ವಿಕೃತಿ ಮೆರೆದಿದ್ದಾನೆ. ಇದೀಗ ಆರೋಪಿ ಜೈಲು ಸೇರಿದ್ದಾನೆ.

ಬೆಳಗಾವಿ: ವಿಡಿಯೋ ಕಾಲ್‌ನಲ್ಲಿ ಮಗು ತೋರಿಸಿಲ್ಲವೆಂದು ಅತ್ತೆಗೆ ಚಾಕುವಿನಿಂದ ಇರಿದ ಅಳಿಯ, ಕೃತ್ಯ ಎಸಗಿ ಸ್ಟೇಟಸ್ ಹಾಕಿ ವಿಕೃತಿ
ಆರೋಪಿ ಅರವಿಂದ ಗವಳಿ
Image Credit source: social Media
Edited By:

Updated on: May 05, 2026 | 9:41 AM

ಬೆಳಗಾವಿ, ಮೇ 5: ಕ್ಷುಲ್ಲಕ ಕಾರಣಕ್ಕಾಗಿ ಅಳಿಯನೊಬ್ಬ ತನ್ನ ಅತ್ತೆಗೆ ಚಾಕುವಿನಿಂದ ಇರಿದ ಘೋರ ಘಟನೆ ಬೆಳಗಾವಿ (Belagavi) ಜಿಲ್ಲೆಯ ಸವದತ್ತಿ ತಾಲೂಕಿನ ಆಲದಕಟ್ಟಿಯಲ್ಲಿ ನಡೆದಿದೆ. ವಿಡಿಯೋ ಕಾಲ್‌ನಲ್ಲಿ ಮಗು ತೋರಿಸಿಲ್ಲ ಎನ್ನುವ ಕಾರಣಕ್ಕೆ ಆಕ್ರೋಶಗೊಂಡ ಅರವಿಂದ ಗವಳಿ ಎಂಬಾತ ಅತ್ತೆ ಮಹಾದೇವಿ (45) ಅವರಿಗೆ ಚಾಕು ಇರಿದಿದ್ದಾನೆ. ಸದ್ಯ ಮಹಾದೇವಿ ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಪಿ ಅರವಿಂದ ಗವಳಿಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ

ಅರವಿಂದ ಗವಳಿಯ ಪತ್ನಿಗೆ ಎರಡು ತಿಂಗಳ ಹಿಂದೆಯಷ್ಟೇ ಹೆರಿಗೆಯಾಗಿದ್ದು, ಆಕೆ ಸದ್ಯ ತವರು ಮನೆಯಲ್ಲಿದ್ದಳು. ಅಲ್ಲಿಯೂ ಪತ್ನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಅರವಿಂದ, ಪದೇಪದೆ ವಿಡಿಯೋ ಕಾಲ್ ಮಾಡಿ ಮಗುವನ್ನು ತೋರಿಸುವಂತೆ ಪಟ್ಟು ಹಿಡಿಯುತ್ತಿದ್ದ. ಇದಕ್ಕೆ ಪ್ರತಿಕ್ರಿಯಿಸಿದ್ದ ಅತ್ತೆ ಮಹಾದೇವಿ, ‘ಕೆಲಸ ಬಿಟ್ಟು ಸದಾ ಮೊಬೈಲ್ ಹಿಡಿದು ಕೂರಲು ಸಾಧ್ಯವಿಲ್ಲ, ದಿನಕ್ಕೆ ಒಂದು ಬಾರಿ ಮಾತ್ರ ಕಾಲ್ ಮಾಡು’ ಎಂದು ಬುದ್ಧಿ ಹೇಳಿದ್ದರು.

ಇದರಿಂದ ಸಿಟ್ಟಾದ ಅರವಿಂದ ಅತ್ತೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅತ್ತೆ ಕೂಡ ‘ನನ್ನ ಮನೆ ಬಾಗಿಲಿಗೆ ಬಂದರೆ ಸುಮ್ಮನೆ ಬಿಡಲ್ಲ’ ಎಂದು ಎಚ್ಚರಿಸಿದ್ದರು. ಇದೇ ದ್ವೇಷದಲ್ಲಿ ಆಕೆಯ ಮನೆಗೆ ನುಗ್ಗಿದ ಅರವಿಂದ, ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಸದ್ಯ ತೀವ್ರವಾಗಿ ಗಾಯಗೊಂಡಿರುವ ಮಹಾದೇವಿ ಅವರು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಜೈಲು-ಬೇಲ್’ ಎಂದು ಸ್ಟೇಟಸ್ ಹಾಕಿದ ಆರೋಪಿ

ಅಷ್ಟಕ್ಕೇ ಸುಮ್ಮನಾಗದ ಅರವಿಂದ, ಅತ್ತೆಗೆ ಚಾಕುವಿನಿಂದ ಇರಿದ ಬಳಿಕ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದಾನೆ. ‘‘ಇಂದು ಜೈಲು, ನಾಳೆ ಬೇಲ್… ನಿನ್ನನ್ನು ಬಿಡಲ್ಲ’’ ಎಂದು ಬರೆದುಕೊಂಡು ತನ್ನ ವಿಕೃತಿ ಮೆರೆದಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಮುರಗೋಡ ಪೊಲೀಸರು ಆರೋಪಿ ಅರವಿಂದನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: ಮೆಜೆಸ್ಟಿಕ್​ನಲ್ಲಿ ತನ್ನ 2 ವರ್ಷದ ಮಗುವನ್ನೇ ಮಾರಿದಳಾ ತಾಯಿ? ತಂದೆಯಿಂದಲೇ ಗಂಭೀರ ಆರೋಪ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:36 am, Tue, 5 May 26

Follow Us