BJP-JDS ನಡುವೆ ಸಮನ್ವಯ ಸಮಿತಿ ರಚನೆಗೆ ನಿರ್ಧಾರ: ರಾಜ್ಯ ಸರ್ಕಾರದ ವಿರುದ್ಧದ ಜಂಟಿ ಹೋರಾಟಕ್ಕೂ ತೀರ್ಮಾನ
Karnataka Politics: ರಾಜ್ಯ ಸರ್ಕಾರದ ವಿರುದ್ಧದ ಜಂಟಿ ಹೋರಾಟ ಹಾಗೂ ಮೈತ್ರಿ ಗಟ್ಟಿಗೊಳಿಸಲು ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ರಚನೆಗೆ ನಿರ್ಧಾರ ಕೈಗೊಂಡಿವೆ. ಶೀಘ್ರದಲ್ಲೇ 6 ಸದಸ್ಯರ ಅಧಿಕೃತ ಸಮಿತಿ ಘೋಷಣೆಯಾಗಲಿದೆ ಎನ್ನಲಾಗಿದ್ದು, ಬೈ ಎಲೆಕ್ಷನ್ ಮತ್ತು ಪರಿಷತ್ ಚುನಾವಣೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಬಿಜೆಪಿ ಮತ್ತು ಜೆಡಿಎಎಸ್ನ ರಾಜ್ಯಾಧ್ಯಕ್ಷರು ಚರ್ಚೆ ನಡೆಸಿದ್ದಾರೆ.

ಬೆಂಗಳೂರು, ಜುಲೈ 10: ರಾಜ್ಯ ಸರ್ಕಾರದ ವಿರುದ್ಧದ ಹೋರಾಟ ಮತ್ತು ಉಪಚುನಾವಣೆಗಳ ಹಿನ್ನೆಲೆಯಲ್ಲಿ ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಎಸ್ನ ರಾಜ್ಯಾಧ್ಯಕ್ಷರು ಬೆಂಗಳೂರಿನಲ್ಲಿ ಚರ್ಚೆ ನಡೆಸಿದ್ದಾರೆ. ಸಮನ್ವಯ ಸಮಿತಿ ರಚನೆ ಬಗ್ಗೆ ಈ ವೇಳೆ ತೀರ್ಮಾನಿಸಲಾಗಿದ್ದು, ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿ ಮತ್ತಷ್ಟು ಗಟ್ಟಿಗೊಳ್ಳಲು ಈ ಸಮಿತಿ ರಚನೆಯಾಗಬೇಕು ಎಂಬುದು ದೀರ್ಘ ಕಾಲದ ಬೇಡಿಕೆಯೂ ಆಗಿತ್ತು. ಇದೀಗ ಆ ಬಗ್ಗೆ ತೀರ್ಮಾನ ಆಗಿದ್ದು, ಶೀಘ್ರದಲ್ಲೇ ಸಮಿತಿ ಘೋಷಣೆ ಆಗಲಿದೆ.
ಸಮನ್ವಯ ಸಮಿತಿಯಲ್ಲಿ ಯಾರ್ಯಾರಿಗೆ ಸ್ಥಾನ?
ಸಮನ್ವಯ ಸಮಿತಿಗೆ ಸದಸ್ಯರನ್ನಾಗಿ ಬಿಜೆಪಿಯಿಂದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಹೆಸರಿಸಲಾಗಿದೆ. ಜೆಡಿಎಸ್ನಿಂದ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಇನ್ನಿಬ್ಬರು ಸಮಿತಿ ಸದಸ್ಯರಾಗಲಿದ್ದಾರೆ. ಒಟ್ಟು ಆರು ಜನ ಸದಸ್ಯರನ್ನು ಒಳಗೊಂಡಿರುವ ಸಮನ್ವಯ ಸಮಿತಿಯನ್ನು ರಚನೆಗೆ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಉಪ ಚುನಾವಣೆ ಘೋಷಣೆಗೂ ಮುನ್ನವೇ ಹಿರಿಯೂರು ಕ್ಷೇತ್ರದ ಮೇಲೆ ದಳಪತಿಗಳ ಕಣ್ಣು; ತೆರೆಮರೆಯಲ್ಲಿ ಹೆಚ್‌ಡಿಕೆ ತಂತ್ರಗಾರಿಕೆ
ಮಾತುಕತೆ ವೇಳೆ ಬೇರೆ ಏನೆಲ್ಲ ಚರ್ಚೆ?
ಮೈತ್ರಿ ಪಕ್ಷಗಳ ನಾಕಯಕರ ಮಾತುಕತೆ ವೇಳೆ ಹಿರಿಯೂರು ಉಪಚುನಾವಣೆ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಹಿರಿಯೂರು ಕ್ಷೇತ್ರ ನಮಗೆ ಬಿಟ್ಟು ಬಿಡಿ ಎಂದು ಕುಮಾರಸ್ವಾಮಿ ಅವರು ಹೇಳಿದ್ದು, ಈ ಹಿಂದೆ ಹಿರಿಯೂರಿನಲ್ಲಿ ಬಿಜೆಪಿ ಗೆದ್ದಿದ್ದ ಬಗ್ಗೆ ವಿಜಯೇಂದ್ರ ತಿಳಿಸಿದ್ದಾರೆ. ಇನ್ನು ನಾಲ್ಕು ವಿಧಾನ ಪರಿಷತ್ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿಗೆ ಜೆಡಿಎಸ್ ಸಹಕಾರವನ್ನು ವಿಜಯೇಂದ್ರ ಕೇಳಿದ್ದು, ರಾಜ್ಯ ಸರ್ಕಾರದ ವಿರುದ್ಧದ ಹೋರಾಟಗಳ ಬಗ್ಗೆ ಜಂಟಿ ಚರ್ಚೆ ಮಾಡಿಯೇ ಮುಂದುವರಿಯಲು ತೀರ್ಮಾನ ಮಾಡಲಾಗಿದೆ.
ಸಭೆ ಬಳಿಕ ಮಾತನಾಡಿರುವ ಹೆಚ್‌ಡಿಕೆ, ಮನ್ವಯ ಸಮಿತಿ ರಚನೆ ಬಗ್ಗೆ ವಿಜಯೇಂದ್ರ ಜತೆ ಚರ್ಚಿಸಿದ್ದೇನೆ. ಅಲ್ಲದೇ ಇತ್ತೀಚಿನ ಬೆಳವಣಿಗೆಗಳ ಬಗ್ಗೆಯೂ ಮಾತನಾಡಿದ್ದೇವೆ ಎಂದಿದ್ದಾರೆ. ರಾಜ್ಯದ ವಿದ್ಯಮಾನಗಳ ಬಗ್ಗೆ ಹೆಚ್‌ಡಿಕೆ ಜೊತೆ ಚರ್ಚೆ ಮಾಡಿದ್ದೇನೆ. ಸಮಸ್ಯೆಗಳಿದ್ದರೆ ಕುಳಿತು ಚರ್ಚಿಸಿ ಹೋರಾಟ ಮಾಡೋಣ ಎಂದಿದ್ದಾರೆ. ಒಟ್ಟಾಗಿ ಹೋಗಬೇಕು ಎಂಬುದು ರಾಷ್ಟ್ರೀಯ ನಾಯಕರ ಅಪೇಕ್ಷೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:34 pm, Fri, 10 July 26




