Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ: ಲವ್ ವಿಚಾರಕ್ಕೆ ನಡೆಯಿತು ಭೀಕರ ಗುಂಡಿನ ದಾಳಿ, ಕೂದಲೆಳೆ ಅಂತರದಲ್ಲಿ ಪಾರಾದ ಯುವಕ

ಆತ ಗಂಡನಿಲ್ಲದ ಒಂಟಿ ಹೆಣ್ಣಿನ ಮನೆಗೆ ಊಟಕ್ಕೆಂದು ಹೋಗಿದ್ದ. ಸ್ನೇಹಿತೆ ಅಂದುಕೊಂಡು ಊಟಕ್ಕೆ ಹೋದವನಿಗೆ ಶಾಕ್ ಕಾದಿತ್ತು. ಅಲ್ಲಿಗೆ ಎಂಟ್ರಿಯಾದ ಮಾಜಿ ಪ್ರೇಯಸಿ ಗಲಾಟೆ ಶುರು ಮಾಡಿಕೊಂಡಿದ್ದಳು. ಕೆಲವೇ ಹೊತ್ತಿನಲ್ಲಿ ಎಂಟ್ರಿಯಾಗಿದ್ದು ಮತ್ತೊಂದು ಟೀಮ್, ಬಳಿಕ ನಡೆದಿದ್ದು ಗುಂಡನ ದಾಳಿ! ಬೆಳಗಾವಿಯ ಆಂಜನೇಯ ನಗರದಲ್ಲಿ ನಡೆದ ಘಟನೆಯ ವಿವರ ಇಲ್ಲಿದೆ.

ಬೆಳಗಾವಿ: ಲವ್ ವಿಚಾರಕ್ಕೆ ನಡೆಯಿತು ಭೀಕರ ಗುಂಡಿನ ದಾಳಿ, ಕೂದಲೆಳೆ ಅಂತರದಲ್ಲಿ ಪಾರಾದ ಯುವಕ
ಗಾಯಾಳು ಪ್ರಣೀತ್​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Follow us
Sahadev Mane
| Updated By: Ganapathi Sharma

Updated on: Nov 28, 2024 | 9:52 AM

ಬೆಳಗಾವಿ, ನವೆಂಬರ್ 28: ಆಸ್ಪತ್ರೆಯ ಬೆಡ್ ಮೇಲೆ ನರಳಾಡುತ್ತಿರುವ ಯುವಕ, ಆತನಿಂದ ಮಾಹಿತಿ ಪಡೆಯುತ್ತಿರುವ ಪೊಲೀಸರು. ಅದೊಂದು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಪೊಲೀಸ್ ಕಮಿಷನರ್ ಹಾಗೂ ತಂಡ. ಈ ಎಲ್ಲ ಘಟನಾವಳಿಗಳು ಕಂಡು ಬಂದಿದ್ದು ಬೆಳಗಾವಿಯ ಆಂಜನೇಯ ನಗರದಲ್ಲಿ. ಬುಧವಾರ ಸಂಜೆ ಟಿಳಕವಾಡಿಯ ದ್ವಾರಕಾನಗರದ ಪ್ರಣಿತ್ ಕುಮಾರ್ (31 ವರ್ಷ) ಸ್ನೇಹಿತೆ ಸ್ಮಿತಾ ಮನೆಗೆ ಊಟಕ್ಕೆ ಹೋಗಿದ್ದಾನೆ. ಇನ್ನೇನು ಊಟ ಮಾಡಬೇಕು ಅಂದುಕೊಳ್ಳುವಷ್ಟರಲ್ಲಿ ಪ್ರಣಿತ್ ಮಾಜಿ ಗರ್ಲ್ ಫ್ರೆಂಡ್ ಸ್ಮಿತಾಳ ಮನೆಗೆ ಬಂದಿದ್ದಾಳೆ. ಗಂಡ ಸತ್ತ ಸ್ಮಿತಾ ಒಬ್ಬಳೆ ಇದ್ದು ಆಕೆ ಮನೆಗೆ ಪ್ರಣಿತ್ ಯಾಕೆ ಬಂದಾ ಎಂದು ಅನುಮಾನಗೊಂಡು ಪ್ರಣಿತ್ ಜೊತೆಗೆ ಜಗಳಕ್ಕಿಳಿದಿದ್ದಾಳೆ. ಈ ವೇಳೆ ಸ್ಮಿತಾ ಎಂಟ್ರಿಯಾಗಿ ಇಬ್ಬರ ನಡುವಿನ ಜಗಳ ಬಗೆ ಹರಿಸುವ ಕೆಲಸ ಮಾಡಿದ್ದಾಳೆ. ಆದರೆ ಇದು ಇಷ್ಟಕ್ಕೆ ಮುಗಿದಿಲ್ಲ. ಮಾಜಿ ಪ್ರೇಯಸಿ ಹಿಂದೆ ಹಿಂದೆ ಮತ್ತೆ ಮೂರು ಜನ ಬಂದೇ ಬಿಟ್ಟಿದ್ದಾರೆ. ಪ್ರಣಿತ್ ಮೇಲೆ ಹಲ್ಲೆ ಮಾಡಿ ಜೊತೆಗೆ ತಂದಿದ್ದ ಗನ್ ತೆಗೆದು ಶೂಟ್ ಮಾಡಿಯೇ ಬಿಟ್ಟಿದ್ದಾರೆ.

ಹಲವು ಸುತ್ತು ಗುಂಡಿನ ದಾಳಿ: ಸ್ವಲ್ಪದರಲ್ಲೇ ಬಚಾವಾದ ಯುವಕ

ಗುಂಡಿನ ದಾಳಿಯಿಂದ ಪ್ರಣಿತ್ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾನೆ. ಗುಂಡು ಹಣೆ ಭಾಗದಿಂದ ಕಿವಿ ಪಕ್ಕ ಹಾದುಗೋಗಿದೆ. ಇತ್ತ ಆರೋಪಿಗಳು ಮತ್ತೊಂದು ಬಾರಿ ಗುಂಡಿನ ದಾಳಿ ಮಾಡಿದ್ದು ಅದು ತೊಡೆಯ ಭಾಗಕ್ಕೆ ತಗುಲಿದೆ. ತಕ್ಷಣ ಕುಸಿದು ಪ್ರಣಿತ್ ಕೆಳಗೆ ಬೀಳ್ತಿದ್ದಂತೆಯೇ ಮತ್ತೆ ಗುಂಡು ಹಾರಿಸಲು ನೋಡಿದ್ದಾರೆ. ಈ ವೇಳೆ ಫೈರ್ ಆಗಿಲ್ಲ. ತಕ್ಷಣ ನಾಲ್ಕು ಜನ ಆರೋಪಿಗಳು ಪರಾರಿಯಾಗಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದ ಪ್ರಣಿತ್​​ನನ್ನು ಕೂಡಲೇ ಸ್ಮಿತಾ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಮಾಳಮಾರುತಿ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಗುಂಡಿನ ದಾಳಿ ವಿಚಾರ ಗೊತ್ತಾಗುತ್ತಿದ್ದಂತೆಯೇ ಅಲರ್ಟ್ ಆದ ಪೊಲೀಸರು ಆಸ್ಪತ್ರೆಗೆ ಬಂದು ಹಲ್ಲೆಗೊಳಗಾದ ಪ್ರಣಿತ್​ರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಪ್ರಣಿತ್ ಆರೋಗ್ಯ ವಿಚಾರಿಸಿ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.‌ ಬಳಿಕ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿ ಪಡೆದರು. ಡಿಸಿಪಿ ರೋಹನ್ ಜಗದೀಶ್ ಕೂಡ ಸಾಥ್ ನೀಡಿದ್ದರು.

ಎಸಿಪಿ ನೇತೃತ್ವದ ಎರಡು ತಂಡ ರಚನೆ ಮಾಡಿ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಪೊಲೀಸ್ ಆಯುಕ್ತರು ಹೇಳಿದ್ದೇನು?

ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವುದಾಗಿ ಹೇಳಿದ್ದಾರೆ. ಜೊತೆಗೆ ಬಳಕೆಯಾದ ಗನ್ ಯಾವುದು ಎಂಬುದರ ಕುರಿತು ಕೂಡ ತನಿಖೆ ಮಾಡುತ್ತೇವೆ. ಪ್ರೀತಿ ವಿಚಾರಕ್ಕೆ ಗಲಾಟೆಯಾಗಿದ್ದು ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಶಬರಿಮಲೆ ಭಕ್ತರಿಗಾಗಿ ಹುಬ್ಬಳ್ಳಿ-ಬೆಳಗಾವಿಯಿಂದ ಕೊಲ್ಲಂಗೆ ವಿಶೇಷ ರೈಲು ಸಂಚಾರ

ಘಟನೆ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ‌‌. ಐಸಿಯುವಿನಲ್ಲಿ ಪ್ರಣಿತ್​ಗೆ ಚಿಕಿತ್ಸೆ ಮುಂದುವರೆದಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ