ಹಸುಗೂಸು ಸಾವು ಕೇಸ್​​ಗೆ ಟ್ವಿಸ್ಟ್: ಹೆಣ್ಣುಮಗು ಎಂದು ವಿಷವುಣಿಸಿದ್ದ ತಂದೆ ಅರೆಸ್ಟ್​​

ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದಲ್ಲಿ 15 ದಿನದ ಹೆಣ್ಣು ಮಗುವಿನ ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಹೆಣ್ಣುಮಗು ಎಂಬ ಕಾರಣಕ್ಕೆ ತಂದೆಯೇ ಮಗುವಿಗೆ ವಿಷವಿಕ್ಕಿ ಕೊಲೆ ಮಾಡಿರುವ ವಿಚಾರ ಇದೀಗ ಬಯಲಾಗಿದೆ. ಸದ್ಯ ಕಾಕತಿ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ.

ಹಸುಗೂಸು ಸಾವು ಕೇಸ್​​ಗೆ ಟ್ವಿಸ್ಟ್: ಹೆಣ್ಣುಮಗು ಎಂದು ವಿಷವುಣಿಸಿದ್ದ ತಂದೆ ಅರೆಸ್ಟ್​​
ಬಂಧಿತ ತಂದೆ
Image Credit source: tv9 kannada
Edited By:

Updated on: Mar 20, 2026 | 3:17 PM

ಬೆಳಗಾವಿ, ಮಾರ್ಚ್​ 20: 15 ದಿನದ ಹಿಂದೆಯಷ್ಟೇ ಜನಿಸಿದ್ದ ಹಸುಗೂಸು (baby death) ಏಕಾಏಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಣ್ಣುಮಗು ಎಂಬ ಕಾರಣಕ್ಕೆ ತಂದೆಯೇ ವಿಷವುಣಿಸಿದ್ದು, ಸದ್ಯ ಕಾಕತಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಭೀಮರಾಯ ಚಿಪ್ಪಾಡೆ ಬಂಧಿತ ತಂದೆ. ಮಾ.17ರಂದು ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದಲ್ಲಿ ಘಟನೆ ನಡೆದಿತ್ತು. ಕಾಕತಿ ಪೊಲೀಸ್​ ಠಾಣೆಗೆ ಮಗುವಿನ ತಾಯಿ ಶೀಲಾ ದೂರು ನೀಡಿದ್ದರು.

ನಡೆದಿದ್ದೇನು?

ಇತ್ತೀಚೆಗೆ ಅಂದರೆ ಮಾರ್ಚ್​ 17ರಂದು 15 ದಿನಗಳ ಹಿಂದೆ ಜನಿಸಿದ್ದ ಹಸುಗೂಸು ಅನುಮಾನಾಸ್ಪದವಾಗಿ ಸಾವನ್ನಪ್ಪಿತ್ತು. ಇದು ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಮಗುವಿನ ಸಾವಿಗೆ ತಂದೆಯೇ ಕಾರಣ ಎಂಬ ಗಂಭೀರ ಆರೋಪನ್ನು ಕುಟುಂಬಸ್ಥರೇ ಮಾಡಿದ್ದರು.

ಇದನ್ನೂ ಓದಿ: 15 ದಿನ ಮಗು ಅನುಮಾಸ್ಪದ ಸಾವು: ತಂದೆಯೇ ಮಗುವಿಗೆ ವಿಷ ಪ್ರಾಶನ ಶಂಕೆ

ಒಂದು ವರ್ಷದ ಹಿಂದೆ ಭೀಮರಾಯ ಶೀಲಾ‌ರನ್ನು ಮದುವೆ ಆಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಭೀಮರಾಯಗೆ ಗಂಡು ಮಕ್ಕಳೆಂದರೆ ಹುಚ್ಚು. ಆದರೆ 15 ದಿನದ ಹಿಂದೆ ಹೆಣ್ಣು ಮಗು ಆಗಿದ್ದಕ್ಕೆ ನೊಂದುಕೊಂಡಿದ್ದರು. ಪತ್ನಿ ತವರು ಮನೆಗೆ ಬಂದಿದ್ದ ಭೀಮರಾಯ ಮಗು ನೋಡಿ ವಾಪಾಸ್ ಹೋಗಿದ್ದರು. ಅವರು ಅತ್ತ ಹೋಗ್ತಿದ್ದಂತೆ ಮಗು ಅಸ್ವಸ್ಥಗೊಂಡಿತ್ತು. ಕೂಡಲೇ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಆದರೆ ಅಷ್ಟರಲ್ಲಿ ಮಗು ಮೃತಪಟ್ಟಿತ್ತು.

ಹತ್ತಿ ಬೆಳೆಗೆ ಸಿಂಪಡಣೆ ಮಾಡುವ ಔಷಧಿಯನ್ನು ಮಗುವಿಗೆ ಉಣಿಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿತ್ತು. ಮಗುವನ್ನ ಬಿಮ್ಸ್ ಆಸ್ಪತ್ರೆ ಶವಗಾರಕ್ಕೆ ಶಿಫ್ಟ್ ಮಾಡಿ, ಮರಣೋತ್ತರ ಪರೀಕ್ಷೆಯ ಬಳಿಕವೇ ಮಗುವಿನ ಸಾವಿನ ನಿಖರ ಕಾರಣ ಬಹಿರಂಗವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಮಗು ಕಳೆದುಕೊಂಡ ತಾಯಿ ಹಾಗೂ ಕುಟುಂಬಸ್ಥರ ದುಃಖ ಮಡುಗಟ್ಟಿತ್ತು.

ಇದನ್ನೂ ಓದಿ: 2 ವರ್ಷದಿಂದ ಮದುವೆಗೆ ದುಂಬಾಲು: ಯುವಕ ಕೊನೆಗೆ ಯುವತಿಗೆ ಮಾಡಿದ್ದೇನು ಗೊತ್ತಾ?

ಇನ್ನು ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಡಿಸಿಪಿ ನಾರಾಯಣ್ ಭರಮನಿ, ಬೆಳಗಾವಿ ಗ್ರಾಮೀಣ ಎಸಿಪಿ ಹಾಗೂ ಕಾಕತಿ ಸಿಪಿಐ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಮತ್ತೊಂದೆಡೆ ಆರೋಪ ಎದುರಿಸುತ್ತಿದ್ದ ಪತಿ ಭೀಮರಾಯ ನಾಪತ್ತೆ ಆಗಿದ್ದರು. ಬಂಧನಕ್ಕೆ ಪೊಲೀಸರು ಬಲೆ ಕೂಡ ಬೀಸಿದ್ದರು. ಅದರಂತೆಯೇ ಇಂದು ಆರೋಪಿ ತಂದೆಯನ್ನು  ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Sahadev Mane
Follow Us