ಬೆಳಗಾವಿ ಭೀಕರ ಅಗ್ನಿ ಅವಘಡ ಪ್ರಕರಣಕ್ಕೆ ಸ್ಪೋಟಕ ತಿರುವು: ಸಿಸಿಟಿವಿಯಲ್ಲಿ ರಹಸ್ಯಾತ್ಮಕ ವ್ಯಕ್ತಿಯ ಓಡಾಟ ಸೆರೆ!

ಬೆಳಗಾವಿಯ ಚವ್ಹಾಟ ಗಲ್ಲಿಯಲ್ಲಿ 6 ಜನರ ದಾರುಣ ಸಾವಿಗೆ ಕಾರಣವಾಗಿದ್ದ ಅಗ್ನಿ ಅವಘಡ ಪ್ರಕರಣಕ್ಕೆ ಈಗ ಸ್ಪೋಟಕ ತಿರುವು ಸಿಕ್ಕಿದೆ. ಘಟನೆ ನಡೆದ ರಾತ್ರಿ ಮನೆ ಬಳಿ ಬಕೆಟ್ ಹಿಡಿದು ಬಂದಿದ್ದ ಅಗಂತುಕನೊಬ್ಬ ಓಡಿ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಾರ್ಟ್ ಸರ್ಕ್ಯೂಟ್ ಶಂಕೆ ವ್ಯಕ್ತವಾಗಿದ್ದ ಕೇಸ್‌ನಲ್ಲಿ ಈಗ ಸಿಸಿಟಿವಿ ಆಧಾರದ ಮೇಲೆ ಮಾರ್ಕೆಟ್ ಠಾಣೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಬೆಳಗಾವಿ ಭೀಕರ ಅಗ್ನಿ ಅವಘಡ ಪ್ರಕರಣಕ್ಕೆ ಸ್ಪೋಟಕ ತಿರುವು: ಸಿಸಿಟಿವಿಯಲ್ಲಿ ರಹಸ್ಯಾತ್ಮಕ ವ್ಯಕ್ತಿಯ ಓಡಾಟ ಸೆರೆ!
Belagavi Fire
Edited By:

Updated on: Sep 20, 2026 | 1:13 PM

ಮುಖ್ಯಾಂಶಗಳು

  • ಬೆಳಗಾವಿ ಅಗ್ನಿ ಅವಘಡದಲ್ಲಿ 6 ಜನರ ಸಾವಿಗೆ ರಹಸ್ಯಾತ್ಮಕ ತಿರುವು.
  • ಘಟನೆಗೂ ಮುನ್ನ ಬಕೆಟ್ ಹಿಡಿದು ಬಂದಿದ್ದ ವ್ಯಕ್ತಿ ಸಿಸಿಟಿವಿಯಲ್ಲಿ ಸೆರೆ.
  • ಶಾರ್ಟ್ ಸರ್ಕ್ಯೂಟ್ ಶಂಕೆ ನಡುವೆ ದುಷ್ಕರ್ಮಿಯ ಕೃತ್ಯದ ಅನುಮಾನ ತೀವ್ರ.

ಬೆಳಗಾವಿ, ಸೆಪ್ಟೆಂಬರ್ 20: ಗಣೇಶ ಚತುರ್ಥಿಯಂದು ಬೆಳಗಾವಿ ನಗರದ ಚವ್ಹಾಟ ಗಲ್ಲಿಯಲ್ಲಿ ನಡೆದಿದ್ದ ಭೀಕರ ಅಗ್ನಿ ಅವಘಡದಲ್ಲಿ ದಮೋನೆ ಕುಟುಂಬದ ಆರು ಜನರು ಸಜೀವ ದಹನಗೊಂಡಿದ್ದ ದುರಂತ ಪ್ರಕರಣಕ್ಕೆ ಈಗ ಸ್ಪೋಟಕ ತಿರುವು ಸಿಕ್ಕಿದೆ. ಆರಂಭದಲ್ಲಿ ಶಾರ್ಟ್ ಸರ್ಕ್ಯೂಟ್ ಹಾಗೂ ಫ್ರಿಡ್ಜ್ ಬ್ಲಾಸ್ಟ್‌ನಿಂದ ಈ ಅನಾಹುತ ಸಂಭವಿಸಿದೆ ಎಂದು ಶಂಕಿಸಲಾಗಿತ್ತು. ಆದರೆ, ಘಟನೆಗೂ ಕೆಲವೇ ಕ್ಷಣಗಳ ಮುನ್ನ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡಿದ ವ್ಯಕ್ತಿಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಇದು ಕೊಲೆಯೋ ಅಥವಾ ಬೆಂಕಿ ಹಚ್ಚಿದ ಕೃತ್ಯವೋ ಎಂಬ ಗಂಭೀರ ಅನುಮಾನ ಹುಟ್ಟುಹಾಕಿದೆ.

ಕೈಯಲ್ಲಿ ಬಕೆಟ್ ಹಿಡಿದು ಬಂದಿದ್ದ ಅಗಂತುಕ!

ಸೆಪ್ಟೆಂಬರ್ 15ರ ಮಧ್ಯರಾತ್ರಿ 1.58ರ ಸುಮಾರಿಗೆ ಕೈಯಲ್ಲಿ ಬಕೆಟ್ ಹಿಡಿದುಕೊಂಡು ಬಂದ ಅಗಂತುಕನೊಬ್ಬ ಗಜಾನನ ದಮೋನೆ ಅವರ ಮನೆ ಬಳಿ ಎಂಟ್ರಿ ಕೊಟ್ಟಿದ್ದಾನೆ. ಕೇವಲ ಎರಡೇ ನಿಮಿಷದಲ್ಲಿ ಅಂದರೆ ರಾತ್ರಿ 2:00 ಗಂಟೆಗೆ ಆತ ಕೈಯಲ್ಲಿದ್ದ ಬಕೆಟ್ ಇಲ್ಲದೆಯೇ ಅಲ್ಲಿಂದ ಕಂಗಾಲಾಗಿ ಓಡಿ ಹೋಗಿ ಪರಾರಿಯಾಗಿದ್ದಾನೆ. ಆತ ಪರಾರಿಯಾದ ಎರಡೇ ನಿಮಿಷಗಳಲ್ಲಿ ಇಡೀ ಮನೆ ಸಂಪೂರ್ಣವಾಗಿ ಹೊತ್ತಿ ಉರಿದಿದೆ.

YouTube video player

ಆರು ಜನರ ಸಾವಿನ ಹಿಂದೆ ದುಷ್ಕರ್ಮಿಯ ಕೈವಾಡ?

ಕೇವಲ 2 ನಿಮಿಷಗಳಲ್ಲಿ ಈ ರಹಸ್ಯಾತ್ಮಕ ವ್ಯಕ್ತಿ ಏನು ಮಾಡಿ ಪರಾರಿಯಾದ? ಆತ ತಂದಿದ್ದ ಬಕೆಟ್‌ನಲ್ಲಿದ್ದ ವಸ್ತು ಯಾವುದು? ಎಂಬ ಪ್ರಶ್ನೆಗಳು ತನಿಖಾಧಿಕಾರಿಗಳನ್ನು ಕಾಡುತ್ತಿವೆ. ಶಾರ್ಟ್ ಸರ್ಕ್ಯೂಟ್‌ನಿಂದ ನಡೆದ ಅಪಘಾತವೆಂದು ದಾಖಲಾಗಿದ್ದ ಪ್ರಕರಣದಲ್ಲಿ ಈಗ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಮಾರ್ಕೆಟ್ ಠಾಣೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಆರು ಜನರ ದಾರುಣ ಸಾವಿನ ಹಿಂದೆ ಈ ಅಗಂತುಕನ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ ಬೆಳಗಾವಿ: ಗಣೇಶ ಚತುರ್ಥಿ ದಿನವೇ ಭೀಕರ ಅಗ್ನಿ ಅವಘಡ, ಒಂದೇ ಕುಟುಂಬದ ನಾಲ್ವರು ಸಜೀವ ದಹನ

ಘಟನಾ ಸ್ಥಳಕ್ಕೆ ಪೊಲೀಸರ ದಂಡು!

ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗುತ್ತಿದ್ದಂತೆಯೇ ಮಾರ್ಕೆಟ್ ಠಾಣೆ ಪೊಲೀಸರು ದಾಮೋನೆ ನಿವಾಸಕ್ಕೆ ದೌಡಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಅಗಂತುಕ ತಂದಿದ್ದ ಬಕೆಟ್ ಎಲ್ಲಿದೆ ಎಂಬುದರ ಹುಡುಕಾಟ ನಡೆಸುತ್ತಿದ್ದು, ಅಕ್ಕಪಕ್ಕದ ನಿವಾಸಿಗಳಿಂದಲೂ ಮತ್ತೊಮ್ಮೆ ವಿವರವಾದ ಮಾಹಿತಿ ಕಲೆಹಾಕುತ್ತಿದ್ದಾರೆ. ಪ್ರಸ್ತುತ ಪೊಲೀಸರು ಈ ಪ್ರಕರಣವನ್ನು ಶಾರ್ಟ್ ಸರ್ಕ್ಯೂಟ್ ಅಪಘಾತ ಹಾಗೂ ರಹಸ್ಯಾತ್ಮಕ ವ್ಯಕ್ತಿಯ ಅನುಮಾನಾಸ್ಪದ ಓಡಾಟ – ಹೀಗೆ ಎರಡು ಪ್ರಮುಖ ಆಯಾಮಗಳಲ್ಲಿ ತೀವ್ರ ತನಿಖೆಗೆ ಒಳಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:41 pm, Sun, 20 September 26

Loading...
Unable to load recommendations.
Follow Us