
ಬೆಳಗಾವಿ, ಫೆ.10: ಜಿಲ್ಲೆಯ ( Belagavi murder allegation) ಬೈಲಹೊಂಗಲ ತಾಲೂಕಿನ ಹೊಸೂರ ಗ್ರಾಮದಲ್ಲಿ 29 ವರ್ಷದ ಸಕ್ಕುಬಾಯಿ ದಿಡಗಣ್ಣವರ್ ಎಂಬುವವರು ಸಾವನ್ನಪ್ಪಿದ್ದು, ಇದೀಗ ಇದು ಸಹಜ ಸಾವಲ್ಲ, ಕೊಲೆ ಎಂದು ಸಕ್ಕುಬಾಯಿ ಮನೆಯವರು ಆರೋಪಿಸಿದ್ದಾರೆ. ಸಕ್ಕುಬಾಯಿ ಅವರ ಪತಿ ನಾಗಪ್ಪ ದಿಡಗಣ್ಣವರ್ ಅವರೇ ತಮ್ಮ ಪತ್ನಿಯನ್ನು ಕೊಲೆ ಮಾಡಿ, ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದು ಸಕ್ಕುಬಾಯಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕುಟುಂಬಸ್ಥರು ನಾಗಪ್ಪ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿ, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಸಕ್ಕುಬಾಯಿ ಮತ್ತು ನಾಗಪ್ಪ ಅವರ ಮದುವೆಯಾಗಿ 11 ವರ್ಷಗಳಾಗಿದ್ದು, ಈ ಅವಧಿಯಲ್ಲಿ ನಿರಂತರವಾಗಿ ಕೌಟುಂಬಿಕ ಕಲಹಗಳು ನಡೆಯುತ್ತಲೇ ಇದ್ದವು ಎಂದು ಸಕ್ಕುಬಾಯಿ ಕುಟುಂಬಸ್ಥರು ಹೇಳಿದ್ದಾರೆ. ದಂಪತಿಗೆ ನಾಲ್ಕು ಮಕ್ಕಳಿದ್ದರು, ಅದರಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಇಬ್ಬರು ಮಕ್ಕಳು ಮನೆಯಲ್ಲಿದ್ದಾರೆ. ಪಂಚಾಯಿತಿಯಲ್ಲಿ ನೌಕರಿ ಮಾಡುತ್ತಿರುವ ನಾಗಪ್ಪ ಅವರು ಸಕ್ಕುಬಾಯಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ತಾಯಿ ಆರೋಪಿಸಿದ್ದಾರೆ. ತುಂಬಾ ದಿನದಿಂದ ಮಗಳಿಗೆ ಶಿಕ್ಷೆ ನೀಡುತ್ತಿದ್ದ ಎಲ್ಲವನ್ನೂ ಸಹಿಸಿಕೊಂಡು ಹಿರಿಯರ ಮಾತಿಗೆ ಬೆಲೆ ನೀಡಿ ಮಗಳನ್ನು ಅಲ್ಲೇ ಬಿಟ್ಟಿದ್ದೆವು” ಎಂದು ಸಕ್ಕುಬಾಯಿ ತಾಯಿ ಅಳಲು ತೋಡಿಕೊಂಡಿದ್ದಾರೆ. ಅತ್ತೆಯ ಕಿರುಕುಳವೂ ಇತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ.
“ಸಕ್ಕುಬಾಯಿಗೆ ಒಂದಾದ ಮೇಲೊಂದು ಕೆಲಸಗಳನ್ನು ನೀಡಿ ತೊಂದರೆ ನೀಡಲಾಗುತ್ತಿತ್ತು. ಕೆಲಸ ಮಾಡುವ, ರೊಟ್ಟಿ ಬರುವ, ಅಡುಗೆ ಮಾಡುವ ವಿಚಾರದಲ್ಲಿ ನಿರಂತರವಾಗಿ ತೊಂದರೆ ಕೊಡುತ್ತಿದ್ದರು. ನಾವು ದಿನವೂ ಬೆಳಿಗ್ಗೆ 6 ಗಂಟೆಗೆ ಕೆಲಸಕ್ಕೆ ಹೋಗಿ ರಾತ್ರಿ 6 ಗಂಟೆಯವರೆಗೂ ದುಡಿಯುತ್ತಿದ್ದೆವು. ಮಗಳಿಗೆ ಬಹಳಷ್ಟು ತೊಂದರೆಯಾಗುತ್ತಿತ್ತು” ಎಂದು ತಾಯಿ ವಿವರಿಸಿದ್ದಾರೆ. ಈ ಕುರಿತು ಗ್ರಾಮದ ಹಿರಿಯರು ಹಲವಾರು ಬಾರಿ ಮಧ್ಯಪ್ರವೇಶಿಸಿ, ರಾಜಿ ಸಂಧಾನಕ್ಕೆ ಪ್ರಯತ್ನಿಸಿದ್ದರು. “ಬಾಂಡ್ ಮಾಡಿ ಕೊಡಿ” ಎಂದು ಹಿರಿಯರು ಹೇಳಿದ್ದರೂ ಪರಿಸ್ಥಿತಿ ಸುಧಾರಿಸಿರಲಿಲ್ಲ. ಮಗನಿಗೆ ನೌಕರಿ ಇದ್ದು, ಮಗಳಿಗೆ ಒಳ್ಳೆಯ ಜೀವನ ಸಿಗುತ್ತದೆ ಎಂಬ ಆಸೆಯಿಂದ ಸಕ್ಕುಬಾಯಿ ಪೋಷಕರು ಮಗಳನ್ನು ಅಲ್ಲೇ ಉಳಿಯಲು ಬುದ್ಧಿ ಹೇಳಿ ಕಳಿಸುತ್ತಿದ್ದರು.
ಇದನ್ನೂ ಓದಿ: ಸ್ಮಶಾನ ಸೇರಬೇಕಿದ್ದ ಶವ ಆಸ್ಪತ್ರೆಯ ಶವಗಾರಕ್ಕೆ: 17 ವರ್ಷದ ಬಾಲಕಿ ಸಾವಿನ ಸುತ್ತ ಅನುಮಾನದ ಹುತ್ತ
ಸಕ್ಕುಬಾಯಿ ಸಾವನ್ನಪ್ಪಿದ ದಿನದಂದು ನಾಗಪ್ಪ ಅವರು ಸಕ್ಕುಬಾಯಿ ಸಹೋದರನಿಗೆ ಸಂಜೆ 5 ಗಂಟೆಗೆ ನೇರವಾಗಿ ಕರೆ ಮಾಡಿ, “ನಿಮ್ಮ ತಂಗಿ ಮೇಲೆ ಹೋಗಿದ್ದಾಳೆ ನೋಡು” ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಮಕ್ಕಳು ತಾಯಿ ಮನೆಯೊಳಗೆ ಜೋತಾಡುವುದನ್ನು ನೋಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಕ್ಕುಬಾಯಿ ಪೋಷಕರು ಆ ದಿನ ಅಯ್ಯಪ್ಪಸ್ವಾಮಿ ಪೂಜೆಗೆಂದು ಬೈಲಹೊಂಗಲಕ್ಕೆ ಹೋಗಿದ್ದರು. ಅಲ್ಲಿದ್ದಾಗಲೇ ಈ ದುರ್ಘಟನೆಯ ಸುದ್ದಿ ತಿಳಿದು ತಕ್ಷಣವೇ ಹೊಸೂರ ಗ್ರಾಮಕ್ಕೆ ಧಾವಿಸಿದ್ದಾರೆ. ಎಂಟು ದಿನಗಳ ಹಿಂದೆ ಸಕ್ಕುಬಾಯಿ ತಾಯಿ ಮಗಳನ್ನು ಕರೆದುಕೊಂಡು ಹೋಗಲು ಬಂದಿದ್ದರಾದರೂ, ಸಕ್ಕುಬಾಯಿ ಅಲ್ಲಿಂದ ಹೋಗಿರಲಿಲ್ಲ. ಸಕ್ಕುಬಾಯಿ ಸಾವಿನ ಹಿಂದೆ ಪತಿ ನಾಗಪ್ಪ ದಿಡಗಣ್ಣವರ್ ಅವರ ಕೈವಾಡವಿದೆ ಎಂದು ಕುಟುಂಬಸ್ಥರು ಬಲವಾಗಿ ನಂಬಿದ್ದಾರೆ. ಘಟನೆಯ ಕುರಿತು ಸಮಗ್ರ ಮತ್ತು ನ್ಯಾಯಯುತ ತನಿಖೆ ನಡೆಸಿ, ಸಕ್ಕುಬಾಯಿಗೆ ನ್ಯಾಯ ಒದಗಿಸುವಂತೆ ಮತ್ತು ಆರೋಪಿಗಳಿಗೆ ಶಿಕ್ಷೆ ನೀಡುವಂತೆ ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:53 pm, Tue, 10 February 26