
ಬೆಳಗಾವಿ, ನವೆಂಬರ್ 01: ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಡೆಸಲು ಯತ್ನಿಸಿದ ಕರಾಳ ದಿನ ಆಚರಣೆ ಮತ್ತು ಪುಂಡಾಟಿಕೆ ಗಡಿಭಾಗದಲ್ಲಿ ತೀವ್ರ ಉದ್ವಿಗ್ನತೆಗೆ ಕಾರಣವಾಗಿದೆ. ಜಿಲ್ಲಾಡಳಿತದ ಅನುಮತಿ ಇಲ್ಲದೆ ರ‍್ಯಾಲಿ ನಡೆಸಲು ಯತ್ನಿಸಿದ ಎಂಇಎಸ್ ಕಾರ್ಯಕರ್ತರ ವಿರುದ್ಧ ಕರವೇ ಪ್ರತಿಭಟನೆ ನಡೆಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಬೆಳಗಾವಿಯ ಗೋಗಟೆ ಸರ್ಕಲ್ ಬಳಿ ಜಿಲ್ಲಾಡಳಿತದ ಅನುಮತಿ ಇಲ್ಲದೇ ಕರಾಳ ದಿನದ ರ‍್ಯಾಲಿ ನಡೆಸಲು ಮುಂದಾದ ಎಂಇಎಸ್ ಪುಂಡರ ಕಡೆಗೆ ನುಗ್ಗಲು ಕರವೇ (ಶಿವರಾಮೇಗೌಡ ಬಣ) ಕಾರ್ಯಕರ್ತರು ಯತ್ನಿಸಿದರು. ಈ ವೇಳೆ ಕರವೇ ಮುಖಂಡ ವಾಜೀದ್ ಸೇರಿದಂತೆ 10ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಘಟನೆ ಕುರಿತು ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, “ಎಂಇಎಸ್ ಸಂಘಟನೆಯನ್ನು ಯಾವುದೇ ಔಷಧಿ ಇಲ್ಲದೇ ವಾಸಿ ಮಾಡೋಣ” ಎಂದು ವ್ಯಂಗ್ಯವಾಡಿದ್ದಾರೆ. “ಈ ಹಿಂದೆ ಕರಾಳ ದಿನದಲ್ಲಿ 15 ರಿಂದ 20 ಸಾವಿರ ಜನರು ಸೇರುತ್ತಿದ್ದರು. ಆದರೆ ಈಗ ಅವರ ಸಂಖ್ಯೆ ನೂರಾರಕ್ಕೆ ಕುಸಿದಿದೆ. ಅವರ ಪ್ರಭಾವ ಸಂಪೂರ್ಣವಾಗಿ ಕ್ಷೀಣಿಸುತ್ತಿದೆ” ಎಂದು ಅವರು ಹೇಳಿದರು.
ಇತ್ತ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ಸಮಾರಂಭದಲ್ಲಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೆಳಗಾವಿ ಗಲಾಟೆ ಕುರಿತು ಡಿಜಿ-ಐಜಿಪಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಅವರು, “ನಮ್ಮ ನೆಲದಲ್ಲಿದ್ದ ಮೇಲೆ ಈ ಮಣ್ಣಿಗೆ ಗೌರವ ಕೊಡಬೇಕು. ಮರಾಠಿಗರಾಗಲಿ, ಎಂಇಎಸ್ ಅವರಾಗಲಿ ಈ ಭೂಮಿಯನ್ನು ಗೌರವಿಸಲೇಬೇಕು. ಅದೇ ರೀತಿ ಕನ್ನಡ ಹೋರಾಟಗಾರರು ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಹೋರಾಟಗಾರರ ಮೇಲಿರುವ ಹಳೆಯ ಕೇಸ್‌ಗಳನ್ನು ವಾಪಸ್ ಪಡೆಯಲು ಫೈಲ್‌ಗಳು ಸಿದ್ಧವಾಗುತ್ತಿವೆ. ಈಗ ಮತ್ತೆ ಗಲಾಟೆ ಮಾಡಿದರೆ ಕೇಸ್ ವಾಪಸ್ ಪಡೆಯುವುದು ಕಷ್ಟವಾಗುತ್ತದೆ. ಸರ್ಕಾರ ಕನ್ನಡಿಗರ ಹಾಗೂ ಈ ನೆಲದ ರಕ್ಷಣೆಗೆ ಬದ್ಧವಾಗಿದೆ, ಎಲ್ಲರೂ ಸಹಕರಿಸಬೇಕು” ಎಂದು ಮನವಿ ಮಾಡಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:08 pm, Sun, 1 November 26