ಬೆಳಗಾವಿ ನರ್ಸಿಂಗ್ ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಟ್ವಿಸ್ಟ್, ಸದ್ರುದ್ದಿನ್ ಜೊತೆ ಓಡಿ ಹೋಗಿದ್ದಳು ಯುವತಿ
ಬೆಳಗಾವಿಯ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ರಾಧಿಕಾ ಮುಚ್ಚಂಡಿ ಅಪಹರಣ ಪ್ರಕರಣ ತಿರುವು ಪಡೆದುಕೊಂಡಿದೆ. ರಾಧಿಕಾ ತಾನು ಸ್ವ ಇಚ್ಛೆಯಿಂದ ಸದ್ರುದ್ದಿನ್ ಜೊತೆ ಹೋಗಿದ್ದಾಗಿ ಪೊಲೀಸರ ಮುಂದೆ ಹೇಳಿದ್ದಾರೆ. ಇಬ್ಬರೂ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ರಾಧಿಕಾ ತಾಯಿಯ ವಿರೋಧದಿಂದಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಇಬ್ಬರ ಹೇಳಿಕೆ ದಾಖಲಿಸಿಕೊಂಡು ಕಳುಹಿಸಿದ್ದಾರೆ.

ಬೆಳಗಾವಿ, ಮಾರ್ಚ್ 10: ನರ್ಸಿಂಗ್ ವಿದ್ಯಾರ್ಥಿನಿಯ (Nursing student) ಅಪಹರಣ ಪ್ರಕರಣ ತಿರುವು ಪಡೆದುಕೊಂಡಿದೆ. “ನಾನು ಸ್ವ ಇಚ್ಛೆಯಿಂದ ಹೋಗಿರುವೆ, ನನ್ನನ್ನು ಯಾರು ಅಪಹರಿಸಲಿಲ್ಲ. ಸದ್ರುದ್ದಿನ್ ಬೇಪಾರಿ ಮತ್ತು ನಾನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ನನ್ನ ತಾಯಿ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ನಾನು ಸದ್ರುದ್ದಿನ್ ಬೇಪಾರಿ ಜೊತೆಗೆ ಹೋಗಿದ್ದೆ ಎಂದು ರಾಧಿಕಾ ಮುಚ್ಚಂಡಿ ಬೆಳಗಾವಿ ಗ್ರಾಮಾಂತರ ಪೊಲೀಸರ (Belagavi Police) ಮುಂದೆ ಹೇಳಿದ್ದಾರೆ. ಇಬ್ಬರ ಹೇಳಿಕೆಯನ್ನು ಪಡೆದು ಪೊಲೀಸರು ವಾಪಸ್ ಕಳುಹಿಸಿದ್ದಾರೆ.
ಅಷ್ಟಕ್ಕೂ ನಡೆದಿದ್ದಾದರೂ ಏನು?
ಬೆಳಗಾವಿ ತಾಲೂಕಿನ ಸಂತಿ ಬಸ್ತವಾಡ ಗ್ರಾಮದ ನಿವಾಸಿಯಾಗಿರುವ 19 ವರ್ಷದ ರಾಧಿಕಾ ಮುಚ್ಚಂಡಿ ನರ್ಸಿಂಗ್ ಕೋರ್ಸ್ ಓದುತ್ತಿದ್ದಳು. ಫೆಬ್ರವರಿ 19ರಂದು ಮನೆಯಿಂದ ಹೊರ ಹೋದ ರಾಧಿಕಾ ವಾಪಸ್ ಬಂದಿರಲಿಲ್ಲ. ಮಗಳಿಗಾಗಿ ತಾಯಿ ಎಷ್ಟೇ ಹುಡುಕಾಟ ನಡೆಸಿದರೂ ರಾಧಿಕಾ ಮಾತ್ರ ಪತ್ತೆಯಾಗಿರಲಿಲ್ಲ. ಕೊನೆಗೆ ರಾಧಿಕಾ ತಾಯಿ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸದ್ರುದ್ದಿನ್ ಬೇಪಾರಿ ನನ್ನ ಮಗಳನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು.
ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿಕೊಂಡ ಪೊಲೀಸರು ರಾಧಿಕಾಗಾಗಿ ಹುಡುಕಾಟ ನಡೆಸಿದರು. ರಾಧಿಕಾ ಮತ್ತು ಸದ್ರುದ್ದಿನ್ ಬೇಪಾರಿ ಓಡಿ ಹೋಗಿ ಮುಂಬೈನಲ್ಲಿ ವಾಸವಾಗಿದ್ದಾರೆ ಎಂದು ಪೊಲೀಸರಿಗೆ ಗೊತ್ತಾಗುತ್ತೆ. ಬೆಳಗಾವಿ ಪೊಲೀಸರು ಮುಂಬೈಗೆ ತೆರಳಿ ಇಬ್ಬರನ್ನೂ ಠಾಣೆಗೆ ಕರೆತಂದಿದ್ದಾರೆ. ಠಾಣೆಯಲ್ಲಿ ಇಬ್ಬರ ಹೇಳಿಕೆಯನ್ನು ದಾಖಲಿಸಿಕೊಂಡು ವಾಪಸ್ ಕಳುಹಿಸಿದ್ದಾರೆ.
ಸದ್ರುದ್ದಿನ್ ಬೇಪಾರಿ ಮೇಲೆ ನಡೆದಿತ್ತು ದಾಳಿ
ರಾಧಿಕಾ ನಾಪತ್ತೆಯಾಗಿ 15 ದಿನ ಬಳಿಕ, ಆಕೆಯ ಸಂಬಂಧಿಕರು ಮಾರ್ಚ್ 08 ರಂದು ಸದ್ರುದ್ದಿನ್ ಮನೆ ಮೇಲೆ ದಾಳಿ ಮಾಡಿದ್ದರು. ಯುವತಿ ನಾಪತ್ತೆಯಾಗುತ್ತಿದ್ದಂತೆ ಮನೆ ಬಿಟ್ಟಿದ್ದ ಸದ್ರುದ್ದಿನ್ ಪೋಷಕರು, ದಾಳಿಯಾದ ದಿನ ಕೂಡ ಮನೆಯಲ್ಲಿ ಇರಲಿಲ್ಲ.
ಇದನ್ನೂ ಓದಿ: ಕಸದ ತೊಟ್ಟಿಯಲ್ಲಿ ಸಿಕ್ಕ ವಿಶೇಷ ಚೇತನ ಕಂದನಿಗೆ ಇಟಲಿ ದಂಪತಿಯ ಅಪ್ಪುಗೆ
ಹತ್ತಕ್ಕೂ ಅಧಿಕ ಯುವಕರು ಗುಂಪು ಕಟ್ಟಿಕೊಂಡು ಮನೆ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಮನೆ ಬಾಗಿಲು ಕಿಟಕಿ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಮನೆಯ ಬಾಗಿಲು, ಕಿಟಕಿಯ ಗಾಜುಗಳನ್ನು ಪುಡಿ ಪುಡಿ ಮಾಡಿದ್ದರು. ಮನೆಯಲ್ಲಿದ್ದ ಪಾತ್ರೆ ಸಾಮಾಗ್ರಿಗಳನ್ನ ಕೂಡ ಎತ್ತಿ ಒಡೆದು ಹಾಕಿ ಪರಾರಿಯಾಗಿದ್ದರು.