ಪೊಲೀಸ್ ಠಾಣೆಯಲ್ಲೇ ಎಣ್ಣೆ ಪಾರ್ಟಿ; ಹೆಡ್ ಕಾನ್ಸ್‌ಟೇಬಲ್ ಅಮಾನತು
ಇದೇ ಮೇ.22 ರಂದು ನೀತಿಸಂಹಿತೆ ಮಧ್ಯೆಯೇ ಜಮಖಂಡಿ ಸರಕಾರಿ ಐಬಿಯಲ್ಲೇ ಅಧಿಕಾರಿಗಳು ಎಣ್ಣೆ ಪಾರ್ಟಿ ಮಾಡಿದ ಘಟನೆ ನಡೆದಿತ್ತು. ಈ ಪ್ರಕರಣದ ಬೆನ್ನಲ್ಲೇ ಇದೀಗ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಪೊಲೀಸ್ ಠಾಣೆ(Ankali police station)ಯಲ್ಲಿ ತಡರಾತ್ರಿ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿರುವ ಆರೋಪ ಕೇಳಿಬಂದಿದ್ದು, ಓರ್ವ ಹೆಡ್ ಕಾನ್ಸ್ಟೇಬಲ್ನ್ನು ಅಮಾನತುಗೊಳಿಸಿ ಎಸ್ಪಿ ಆದೇಶಿಸಿದ್ದಾರೆ.
ಬೆಳಗಾವಿ, ಮೇ.28: ಚಿಕ್ಕೋಡಿ ತಾಲೂಕಿನ ಅಂಕಲಿ ಪೊಲೀಸ್ ಠಾಣೆ(Ankali police station)ಯಲ್ಲಿ ತಡರಾತ್ರಿ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿರುವ ಆರೋಪ ಕೇಳಿಬಂದಿತ್ತು. ಜೊತೆಗೆ ಠಾಣೆ ಮುಂಭಾಗದಲ್ಲಿ ಮದ್ಯದ ಖಾಲಿ ಬಾಟಲ್, ವಾಟರ್ ಬಾಟಲ್ ಟೇಬಲ್ ಮೇಲೆ ಇರುವ ಫೋಟೋಗಳು ವೈರಲ್ ಆಗಿತ್ತು. ಪೊಲೀಸರ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿತ್ತು. ಈ ಹಿನ್ನಲೆ ಅಂಕಲಿ ಠಾಣೆ ಹೆಡ್ ಕಾನ್ಸ್‌ಟೇಬಲ್ ರಾಮಚಂದ್ರ ಖೋತ ಎಂಬುವವರನ್ನು ಅಮಾನತುಗೊಳಿಸಿ ಎಸ್ಪಿ ಭೀಮಾಶಂಕರ ಗುಳೇದ್ ಆದೇಶಿಸಿದ್ದಾರೆ.
ಸರಕಾರಿ ವಸತಿ ಗೃಹದಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ ಅಧಿಕಾರಿಗಳು
ಇದೇ ಮೇ.22 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಸರಕಾರಿ ವಸತಿ ಗೃಹದಲ್ಲಿ ಜಿಲ್ಲಾ ಪಂಚಾಯತಿ ವಿಭಾಗದ ಜಮಖಂಡಿ ಎಇಇ ಎಮ್ಎಸ್ ನಾಯಕ, ಇಂಜಿನಿಯರ್ಗಳಾದ ರಾಮಪ್ಪ ರಾಠೋಡ್, ಜಗದೀಶ್ ನಾಡಗೌಡ, ಗಜಾನನ ಪಾಟೀಲ್, ಶ್ರೀಶೈಲ್ ಹೂಗಾರ ಹಾಗೂ ಗುತ್ತಿಗೆದಾರರಾದ ಸಾಗರ, ಶೀತಲ ಹರಿಜನ ಸೇರಿದಂತೆ ಆರು ಜನ ಗುತ್ತಿಗೆದಾರರು ಸೇರಿಕೊಂಡು ಮದ್ಯಸೇವನೆ ಮಾಡಿದ್ದರು.
ಇದನ್ನೂ ಓದಿ:ಸರಕಾರಿ ಐಬಿಯಲ್ಲೇ ಅಧಿಕಾರಿಗಳಿಂದ ಎಣ್ಣೆ ಪಾರ್ಟಿ ಪ್ರಕರಣ; ಶೋಕಾಸ್ ನೋಟಿಸ್ ಜಾರಿ
ಶೋಕಾಸ್ ನೋಟಿಸ್ ಜಾರಿಯಾಗಿತ್ತು
ನೀತಿಸಂಹಿತೆ ನಡುವೆಯೋ ಜಮಖಂಡಿ ವಿಭಾಗದ ಜಿಲ್ಲಾ ಪಂಚಾಯತಿ ಇಂಜಿನಿಯರ್ಗಳು ಕಚೇರಿಗೆ ಚಕ್ಕರ್ ಹೊಡೆದು ಗುತ್ತಿಗೆದಾರರೊಂದಿಗೆ ಸೇರಿಕೊಂಡು ಹಾಡಹಗಲೇ ಮದ್ಯಸೇವಿಸಿ ಮೋಜು ಮಸ್ತಿ ಮಾಡಿದ್ದ ಹಿನ್ನಲೆ ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ಎಂ ಜಾನಕಿ ಅವರು ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು. ನೋಟಿಸ್ ತಲುಪಿದ 24 ತಾಸಿನೊಳಗೆ ಉತ್ತರ ನೀಡಿ. ತಪ್ಪಿದ್ದಲ್ಲಿ ನಿಮ್ಮ ಮೇಲೆ ಶಿಸ್ತು ಕ್ರಮಕೈಗೊಳ್ಳುವುದಾಗಿ ಎಂದು ನೋಟಿಸ್ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಅಂಕಲಿ ಪೊಲೀಸ್ ಠಾಣೆಯಲ್ಲಿ ಇಂತಹ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ