ವಿದ್ಯಾರ್ಥಿನಿ ಜತೆ ಅಸಭ್ಯ ವರ್ತನೆ: ಇನ್ನೂ ದೂರು ದಾಖಲಿಸಿಕೊಳ್ಳದ ಪೊಲೀಸರು, ಪ್ರಾಂಶುಪಾಲ ಸಚಿವರ ಆಪ್ತ ಎಂದ ಮಾಜಿ ಶಾಸಕ
ಬೆಳಗಾವಿಯ ಬೆಳಗುಂದಿ ಗ್ರಾಮದ ಶಾಲಾ ಪ್ರಾಂಶುಪಾಲ ಕಲ್ಲಪ್ಪ ಬೆಳಗಾಂವಕರ್ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಕ್ಕೆ ಪೋಷಕರು ಧರ್ಮದೇಟು ನೀಡಿದ್ದಾರೆ. ಅಶ್ಲೀಲ ಚಾಟ್ ಸಾಕ್ಷ್ಯಗಳ ನಡುವೆಯೂ ಪೊಲೀಸರು ಕ್ರಮ ಕೈಗೊಳ್ಳದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ರಾಜಕೀಯ ತಿರುವು ಪಡೆದಿರುವ ಈ ಪ್ರಕರಣದಲ್ಲಿ, ಮಾಜಿ ಶಾಸಕ ಸಂಜಯ್ ಪಾಟೀಲ್ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿ, ಸಂತ್ರಸ್ತ ವಿದ್ಯಾರ್ಥಿನಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.

ಬೆಳಗಾವಿ, ಡಿ.13: ಬೆಳಗಾವಿ (Belagavi) ತಾಲೂಕಿನ ಬೆಳಗುಂದಿ ಗ್ರಾಮದಲ್ಲಿ ನೆನ್ನೆ (ಡಿ.12) ಗರ್ಲ್ಸ್ ಹೈಸ್ಕೂಲ್‌ನ ಪ್ರಾಂಶುಪಾಲ ವಿದ್ಯಾರ್ಥಿನಿ ಜತೆಗೆ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ ಎಂದು ಗ್ರಾಮಸ್ಥರು ಧರ್ಮದೇಟು ನೀಡಿದ್ದಾರೆ. ಕೆಲವು ದಿನಗಳಿಂದ ಪ್ರಾಂಶುಪಾಲ ಕಲ್ಲಪ್ಪ ಬೆಳಗಾಂವಕರ್ ವಿದ್ಯಾರ್ಥಿನಿಗಳ ಜತೆಗೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾನೆ ಎಂಬ ದೂರು ಕೇಳಿ ಬರುತ್ತಿತ್ತು. ಈ ಬಗ್ಗೆ ಪೋಷಕರು ಹಾಗೂ ಶಾಲೆಯ ವಿದ್ಯಾರ್ಥಿಗಳು ಸ್ಥಳೀಯ ನಾಯಕರಿಗೆ ದೂರು ನೀಡಿದ್ದರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಲಾಗಿದೆ. ಇದರಿಂದ ಆಕ್ರೋಶಗೊಂಡು ವಿದ್ಯಾರ್ಥಿನಿಯರ ಪೋಷಕರು ಶಾಲೆಗೆ ಧಾವಿಸಿ ಪ್ರಾಂಶುಪಾಲ ಕಲ್ಲಪ್ಪ ಬೆಳಗಾಂವಕರ್ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಪೋಷಕರು ಹಾಗೂ ಗ್ರಾಮಸ್ಥರು ಶಾಲೆ ಬಂದು ಪ್ರಾಂಶುಪಾಲನ್ನು ಕೊಠಡಿಯಿಂದ ಹೊರಗೆ ಎಳೆದುಕೊಂಡು ಬಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಕೆಲವರು ಕಲ್ಲಪ್ಪ ಬೆಳಗಾಂವಕರ್ಗೆ ಧರ್ಮದೇಟು ನೀಡಿದ್ದಾರೆ. ಜತೆಗೆ ವಿದ್ಯಾರ್ಥಿನಿಗಳು ಕೂಡ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯ ಆವರಣದಲ್ಲಿ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಶಾಲೆ ಬಂದು ಪ್ರಾಂಶುಪಾಲ ಕಲ್ಲಪ್ಪ ಬೆಳಗಾಂವಕರ್ನ್ನು ರಕ್ಷಿಸಿದ್ದಾರೆ.
ಇನ್ನು ಈ ಘಟನೆ ನಡೆದು ಒಂದು ದಿನ ಕಳೆದರು ಪೊಲೀಸರು ಪ್ರಾಂಶುಪಾಲನ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದೀಗ ಈ ಪ್ರಕರಣಕ್ಕೆ ಸಾಕ್ಷಿಯಾಗಿ ವಿದ್ಯಾರ್ಥಿನಿ ಜೊತೆಗೆ ಅಶ್ಲೀಲ ಮೆಸೇಜ್ ಮಾಡಿದ ಚಾಟೀಂಗ್ ಕೂಡ ಸಿಕ್ಕಿದೆ. ಇನ್ನು ಈ ಬಗ್ಗೆ ಖುದ್ದು ವಿದ್ಯಾರ್ಥಿನಿಯೇ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ.ಅದರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಇದೀಗ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಪೊಲೀಸರ ನಡೆಯ ಬಗ್ಗೆ ಮಾಜಿ ಶಾಸಕ ಸಂಜಯ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಿನ್ಸಿಪಲ್ ಕಾಂಗ್ರೆಸ್ ಕಾರ್ಯಕರ್ತ ಹಾಗೂ ಸಚಿವರ ಆಪ್ತ ಎಂದು ಹೇಳಿದ್ದಾರೆ. ಪರೋಕ್ಷವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಎಂದು ಶಾಸಕ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಇಬ್ಬರು ಗಂಡಂದಿರ ಮುದ್ದಿನ ಮಡದಿ ಪೊಲೀಸಪ್ಪನ ಜತೆ ಪರಾರಿ
ಸಚಿವರ ಆಪ್ತ ಎಂಬ ಕಾರಣಕ್ಕೆ ಒತ್ತಡ ಹಾಕಿ ದೂರು ದಾಖಲಿಸಿಕೊಂಡಿಲ್ಲ, ವಿಚಾರಣೆ ಮಾಡಿ ಬಿಟ್ಟು ಕಳಿಸಿದ್ದಾರೆ. ಹೆಣ್ಣು ಮಗುವಿನ ಭವಿಷ್ಯದ ದೃಷ್ಟಿಯಿಂದ ರಾಜಕಾರಣ ಮಾಡಲ್ಲ. ಆದ್ರೇ ತಪ್ಪು ಮಾಡಿದ ಪ್ರಿನ್ಸಿಪಲ್ ಗೆ ಶಿಕ್ಷೆಯಾಗಬೇಕು. ಅಂದು ಸ್ಥಳೀಯ ಶಾಸಕಿ ಸಾರಾಯಿ ಕುಡಿತಾರೆ ಅಂದಿದ್ದಕ್ಕೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಈಗ ಎಲ್ಲಿಗೆ ಹೋಗಿದ್ದಾರೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ಬಿಜೆಪಿ ಎಂದು ರಾಜಕಾರಣ ಮಾಡೋದು ಬೇಡ, ಸಚಿವರ ಬಳಿಯೂ ಮನವಿ ಮಾಡುವೆ. ವಿದ್ಯಾರ್ಥಿನಿಗೆ ನ್ಯಾಯ ಸಿಗಲಿ ಪ್ರಿನ್ಸಿಪಲ್ ಗೆ ಶಿಕ್ಷೆ ಕೊಡಿಸಿ. ನೀವು ನ್ಯಾಯ ಕೊಡಿಸದಿದ್ದರೆ ನಿಮ್ಮ ತಂಗಿಗೆ ಮಗಳಿಗೆ ಅನ್ಯಾಯ ಮಾಡಿದಂತೆ ಎಂದು ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




