ಗೃಹ ಲಕ್ಷ್ಮೀ ಯೋಜನೆ ಬಗ್ಗೆ ತಪ್ಪು ಲೆಕ್ಕ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್: 5 ಸಾವಿರ ಕೋಟಿ ಹಣ ಎಲ್ಲಿ ಹೋಯ್ತು?
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಈ ವೇಳೆ ಗೃಹ ಲಕ್ಷ್ಮೀ ಯೋಜನೆ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಪ್ಪು ಲೆಕ್ಕ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. 2025ರ ಆಗಸ್ಟ್ ತಿಂಗಳ ವರೆಗೂ ಗೃಹ ಲಕ್ಷ್ಮೀ ಹಣವನ್ನು ಫಲಾನುಭಿಗಳ ಖಾತೆಗಳಿಗೆ ಹಾಕಲಾಗಿದೆ ಎಂದಿದ್ದಾರೆ. ಆದ್ರೆ, ಹಣ ಮಾತ್ರ ಖಾತೆಗಳಿಗೆ ಜಮೆ ಆಗಿಲ್ಲ. ಈ ಬಗ್ಗೆ ಬಿಜೆಪಿ ಶಾಸಕ ದಾಖಲೆ ಬಿಡುಗಡೆ ಮಾಡಿದ್ದು, 5 ಸಾವಿರ ಕೋಟಿ ರೂ. ಹಣದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ, (ಡಿಸೆಂಬರ್ 12): ಸಿದ್ದರಾಮಯ್ಯ (Siddaramaiah) ಸರ್ಕಾರ ಪಂಚ ಗ್ಯಾರಂಟಿಗಳಲ್ಲಿ ಮನೆ ಯಜಮಾನಿಗೆ ಪ್ರತಿ ತಿಂಗಳ 2000 ರೂ. ನೀಡುವ ಗೃಹ ಲಕ್ಷ್ಮೀ ಯೋಜನೆ (gruhalakshmi scheme) ಒಂದಾಗಿದೆ. ಆದ್ರೆ, ಕೆಲ ತಿಂಗಳುಗಳಿಂದ ಮಹಿಳೆಯರ ಖಾತೆಗೆ ಗೃಹ ಲಕ್ಷ್ಮೀ ಹಣ ಜಮೆ ಆಗಿಲ್ಲ. ಈ ಸಂಬಂಧ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಅಧಿವೇಶನದಲ್ಲಿ ಗಮನಸೆಳೆದಿದ್ದಾರೆ. ಆದ್ರೆ, ಈ ಬಗ್ಗೆ ಮಹಿಳಾ ಮತ್ತು ಮಕ್ಕಳು ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ತಪ್ಪು ಲೆಕ್ಕಾ ಕೊಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಗೃಹ ಲಕ್ಷ್ಮೀ ಹಣವನ್ನು ಆಗಸ್ಟ್ ತಿಂಗಳವರೆಗೂ ನೀಡಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ಆದ್ರೆ, ಆಗಸ್ಟ್ ವರೆಗೂ ಹಣ ಬಿಡುಗಡೆ ಮಾಡಿಲ್ಲ. ಈ ಸಂಬಂಧ ಮಹೇಶ್ ಟೆಂಗಿನಕಾಯಿ ಅವರು ಸದನದಲ್ಲಿಂದು ಸರ್ಕಾರದ ಅಧಿಕೃತ ದಾಖಲೆ ಬಿಡುಗಡೆ ಮಾಡಿದ್ದು, ಫೆಬ್ರವರಿ, ಮಾರ್ಚ್ ತಿಂಗಳ ಹಣ ಬಿಡುಗಡೆ ಮಾಡಿಲ್ಲದಿರುವುದು ದಾಖಲೆ ಮೂಲಕ ಬಹಿರಂಗವಾಗಿದೆ. ಹಾಗಾದ್ರೆ, ಐದು ಸಾವಿರ ಕೋಟಿ ರೂಪಾಯಿ ಎಲ್ಲೋಯ್ತು ಎಂದು ವಿಪಕ್ಷ ಪ್ರಶ್ನಿಸಿದೆ.
ಈ ಬಗ್ಗೆ ಸ್ಲೀಕರ್ಗೆ ಪತ್ರ
ಈ ಸಂಬಂಧ ಮಹೇಶ್ ಟೆಂಗಿನಕಾಯಿ ಅವರು ಸ್ಪೀಕರ್ ಯುಟಿ ಖಾದರ್ ಅವರಿಗೆ ಪತ್ರ ಬರೆದಿದ್ದು, ಆಗಸ್ಟ್ 2025ರ ವರೆಗೆ ಗೃಹ ಲಕ್ಷ್ಮಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಉತ್ತರಿಸಿದ್ದಾರೆ. ಆದರೆ ಬಿಡುಗಡೆ ಮಾಡಿಲ್ಲ ಎಂಬುದಕ್ಕೆ ನನ್ನ ಸರ್ಕಾರಿ ದಾಖಲೆ ಇದೆ. ಸದನಕ್ಕೆ ಸಚಿವರು ತಪ್ಪು ಮಾಹಿತಿ ನೀಡುತ್ತಿದ್ದಾರೆ . ಸದನದ ಹಕ್ಕು ಮತ್ತು ಗೌರವ ತೋರಿದ ಅಗೌರವ. ಈ ವಿಚಾರವಾಗಿ ತುರ್ತಾಗಿ ಸದನದಲ್ಲಿ ಮಾತನಾಡಲು ಅವಕಾಶ ಕೋಡಿ ಎಂದು ಪತ್ರ ಬರೆದಿದ್ದಾರೆ.
ಇದನ್ನೂ ಓದಿ: Nandini Products: ಇನ್ಮುಂದೆ ಇಂದಿರಾ ಕ್ಯಾಂಟೀನ್ಗಳಲ್ಲೂ ಸಿಗಲಿದೆ ನಂದಿನಿ ಉತ್ಪನ್ನ! ಜಿಬಿಎ ಹೊಸ ಪ್ಲಾನ್
5 ಸಾವಿರ ಕೋಟಿ ಹಣ ಎಲ್ಲಿ ಹೋಯ್ತು?
ದಾಖಲೆ ಬಿಡುಗಡೆ ಮಾಡಿದ ಬಳಿಕ ಪ್ರತಿಕ್ರಿಯಿಸಿರುವ ಮಹೇಶ್ ಟೆಂಗಿನಕಾಯಿ, ಡಿಸೆಂಬರ್ 9ರಂದು ಸದನದದಲ್ಲಿ ಗೃಹ ಲಕ್ಷ್ಮೀ ಹಣ ಬಿಡುಗಡೆ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಪ್ರಶ್ನೆ ಮಾಡಿದ್ದೆ. 2025ರ ಫೆಬ್ರವರಿ, ಮಾರ್ಚ್ ತಿಂಗಳ ಹಣ ಕೊಟ್ಟಿಲ್ಲ ಅಂತಾ ಕೇಳಿದ್ದೆ. ಇದಕ್ಕೆ ಸಚಿವರು ಆಗಸ್ಟ್ ತಿಂಗಳವರೆಗೂ ಕೊಟ್ಟಿದ್ದೇವೆ ಎಂದು ಹೇಳಿದ್ರು. ಮತ್ತೆ ಪರಿಶೀಲಿಸುವಂತೆ ಕೇಳಿದ್ದೆವು, ಆದ್ರೂ ಕೊಟ್ಟಿರೋದಾಗಿ ಹೇಳಿದ್ರು. ಆದ್ರೆ, ಫೆಬ್ರವರಿ, ಮಾರ್ಚ್ ತಿಂಗಳ ‘ಗೃಹಲಕ್ಷ್ಮೀ’ ಹಣ ಬಿಡುಗಡೆ ಮಾಡಿಲ್ಲ. ಗದಗ, ಹಾವೇರಿ ಸೇರಿ ಮೂರು ಜಿಲ್ಲೆಗಳ ಬಗ್ಗೆ ದಾಖಲೆ ನೀಡಿದ್ದೇವೆ. ಫೆಬ್ರವರಿ, ಮಾರ್ಚ್ ತಿಂಗಳ ‘ಗೃಹಲಕ್ಷ್ಮೀ’ ಹಣ ಬಿಡುಗಡೆ ಮಾಡಿಲ್ಲ. ಬಿಡುಗಡೆ ಮಾಡಿದ್ರೆ 5 ಸಾವಿರ ಕೋಟಿ ಹಣ ಎಲ್ಲಿ ಹೋಯ್ತು? ಎಂದು ಪ್ರಶ್ನಿಸಿದರು. ಈ ವಿಚಾರವನ್ನು ಶೂನ್ಯ ವೇಳೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಧ್ವನಿ ಎತ್ತಿದ್ದು, ಇದಕ್ಕೆ ಸಿಎಂ ಪ್ರತಿಕ್ರಿಯಿಸಿ, ಬಾಕಿ ಇದ್ರೆ ಹಾಕುವುದಾಗಿ ಹೇಳಿದರು. ಅಲ್ಲದೇ ಸೋಮವಾರ ಸಚಿವರಿಂದ ಉತ್ತರ ಕೊಡಿಸುವುದಾಗಿ ಸಮಜಾಯಿಷಿ ನೀಡಿದರು.




