ಕರ್ನಾಟಕದಲ್ಲಿ ಶೇ 19.55ರಷ್ಟು ಮಾರಾಟ ಕುಂಠಿತ: ಪಾತಾಳಕ್ಕೆ‌ ಕುಸಿದ ಬಿಯರ್, ಕಾರಣ ಇಲ್ಲಿದೆ

ಬೆಳಗಾವಿ ಅಧಿವೇಶನದ ಮೊದಲ ದಿನವೇ ವಿಧಾನಪರಿಷತ್​ ಕಲಾಪ ಕಾವೇರಿತ್ತು. ಈ ವೇಳೆ ಮದ್ಯಪ್ರಿಯರ ಆರೋಗ್ಯ ಚಿಕಿತ್ಸೆಗೆ ಅಬಕಾರಿ ಆದಾಯದ 20% ಮೀಸಲಿಡುವಂತೆ ಎಂಎಲ್‌ಸಿ ಎನ್​​. ರವಿಕುಮಾರ್ ಪ್ರಸ್ತಾಪಿಸಿದರು. ಈ ಕುರಿತಾಗಿ ಉತ್ತರಿಸಿದ ಸಚಿವ ಆರ್‌.ಬಿ ತಿಮ್ಮಾಪುರ ಪ್ರತ್ಯೇಕವಾಗಿ ಅನುದಾನ ನೀಡಲು ಅಸಾಧ್ಯ. ಕರ್ನಾಟಕದಲ್ಲಿ ಶೇ 19.55ರಷ್ಟು ಮಾರಾಟ ಮಾರಾಟ ಕುಂಠಿತವಾಗಿದೆ ಎಂದರು.

ಕರ್ನಾಟಕದಲ್ಲಿ ಶೇ 19.55ರಷ್ಟು ಮಾರಾಟ ಕುಂಠಿತ: ಪಾತಾಳಕ್ಕೆ‌ ಕುಸಿದ ಬಿಯರ್, ಕಾರಣ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Edited By:

Updated on: Dec 08, 2025 | 9:41 PM

ಬೆಳಗಾವಿ, ಡಿಸೆಂಬರ್​ 08: ಬೆಳಗಾವಿ ಅಧಿವೇಶನದ (Belagavi Session) ಮೊದಲ ದಿನವೇ ವಿಧಾನಪರಿಷತ್​ ಕಲಾಪ ಕಾವೇರಿತ್ತು. ಆಡಳಿತ, ವಿಪಕ್ಷ ನಾಯಕರ ಮಧ್ಯೆ ಆರೋಪ, ಪ್ರತ್ಯಾರೋಪಗಳು ಜೋರಾಗಿಯೇ ನಡೆಯಿತು. ಈ ವೇಳೆ ಎಂಎಲ್‌ಸಿ ಎನ್​​. ರವಿಕುಮಾರ್ (MLC N. Ravikumar) ಮದ್ಯಪ್ರಿಯರ ರಕ್ಷಣೆ ಬಗ್ಗೆ ಪ್ರಶ್ನೆ ಎತ್ತಿದರು. ಸರ್ಕಾರಕ್ಕೆ ಬರುವ ಆದಾಯದಲ್ಲಿ ಮದ್ಯಪ್ರಿಯರ ಆರೋಗ್ಯ ರಕ್ಷಣೆಗೆ ಶೇಕಡಾ 20% ಹಣವನ್ನು ಸರಕಾರ ಮೀಸಲಿಡಿಬೇಕು ಅಂತಾ ಒತ್ತಾಯಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಕೂಡ ಧ್ವನಿಗೂಡಿಸಿದರು.

ಶೇಕಡಾ 19.55ರಷ್ಟು ಬಿಯರ್ ಮಾರಾಟ ಕುಂಠಿತ: ಸಚಿವ ಆರ್‌.ಬಿ ತಿಮ್ಮಾಪುರ

ಇದಕ್ಕೆ ಲಿಖಿತ ಉತ್ತರ ನೀಡಿದ ಅಬಕಾರಿ ಸಚಿವ ಆರ್‌.ಬಿ ತಿಮ್ಮಾಪುರ, ಮದ್ಯಸೇವನೆ ಮಾಡುವವರಿಗೆ ಪ್ರತ್ಯೇಕವಾಗಿ ಅನುದಾನ ನೀಡಲು ಅಸಾಧ್ಯ. ಸಂಗ್ರಹವಾಗುವ ಹಣ ಆರೋಗ್ಯ ಇಲಾಖೆಗೂ ಹೋಗುತ್ತೆ. ಈಗಾಗಲೇ ಹಲವು ಆರೋಗ್ಯ ಯೋಜನೆಗಳು ಇವೆ ಎಂದು ಉತ್ತರಿಸಿದ್ದಾರೆ.

ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗೆ 195 ಲಕ್ಷ ಕೇಸ್​ ಬಿಯರ್​ ಮಾರಾಟವಾಗಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದ್ರೆ ಈ ವರ್ಷ 46 ರಿಂದ 47 ಲಕ್ಷ ಕೇಸ್​ ಬಿಯರ್​​​ ಕಡಿಮೆ ಮಾರಾಟ ಆಗಿದೆ. ಅಂದರೆ ಶೇಕಡಾ 19.55ರಷ್ಟು ಮಾರಾಟ ಬೆಳವಣಿಗೆ ಕುಂಠಿತವಾಗಿದೆ. ಪ್ರಸ್ತುತ ಕೂಡ ಬಿಯರ್ ಮಾರಾಟ ಕಡಿಮೆಯಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಸರ್ಕಾರದ ವಿರುದ್ಧ ಸಿಡಿದೆದ್ದ ಬಿಜೆಪಿ: ನಾಳೆ ಬೆಳಗಾವಿಯಲ್ಲಿ ಬೃಹತ್ ಹೋರಾಟಕ್ಕೆ ಸಜ್ಜು

ರಾಜ್ಯದಲ್ಲಿ ಹೆಚ್ಚಿನ ಮಳೆಯಿಂದ ಶೀತ ವಾತಾವರಣದ ಕಾರಣ ಬಿಯರ್ ಮಾರಾಟದಲ್ಲಿ ಕುಸಿತ ಉಂಟಾಗಿದೆ. ಅಬಕಾರಿ ಆದಾಯ ಬಜೆಟ್​ನ ಕಾರ್ಯಕ್ರಮಗಳಿಗೆ ಕೊಡುತ್ತಿದ್ದೇವೆ. ಆದಾಯವನ್ನು ರಾಜ್ಯದ ಸಂಚಿತ ನಿಧಿಗೆ ಜಮೆಗೊಳಿಸಲಾಗುತ್ತಿದೆ. ನಿಮ್ಮ ಕೋರಿಕೆಯಂತೆ ಕ್ರಮ ವಹಿಸಲು ಅವಕಾಶ ಇರುವುದಿಲ್ಲ ಎಂದು ಅಬಕಾರಿ ಇಲಾಖೆ ಸಚಿವ ಆರ್.ಬಿ.ತಿಮ್ಮಾಪುರ ಲಿಖಿತ ಉತ್ತರ ನೀಡಿದ್ದಾರೆ.

ಸರ್ಕಾರಕ್ಕೆ ಮನವಿ ಮಾಡಿದ ಬಿಜೆಪಿ ಸದಸ್ಯ ಕೆ.ಎಸ್.ನವೀನ್

ಈ ಚರ್ಚೆ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಕೆ.ಎಸ್.ನವೀನ್​, ಮದ್ಯಪಾನ ಸಾಮಾಜಿಕ ಪಿಡುಗು. ಹಾರ್ಡ್ ಲಿಕ್ಕರ್ ಸೇವನೆಯಲ್ಲಿ ದೇಶಕ್ಕೆ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. ಸರ್ಕಾರಕ್ಕೆ ಆದಾಯ ತರಲು ಇಷ್ಟು ಮದ್ಯ ಪೂರೈಸುತ್ತಿದೆ ಅನಿಸುತ್ತೆ. ಅಬಕಾರಿ ಇಲಾಖೆ ಮೇಲೆ ಒತ್ತಡ ಹೇರಲಾಗುತ್ತಿದೆ ಅನಿಸುತ್ತಿದೆ. ಬಂಗಾರಪ್ಪ ಕಾಲದಲ್ಲಿ ಹೆಚ್ಚು ಲೈಸೆನ್ಸ್ ಕೊಡಬಾರದೆಂದು ನಿರ್ಧಾರ ಮಾಡಲಾಗಿತ್ತು ಎಂದರು.

ಬೆಳಗ್ಗೆ 9 ಗಂಟೆ ನಂತರ ಬಾರ್ ಬಾಗಿಲು ತೆಗೆಯಬೇಕೆಂದು ನಿಯಮ, ಆದರೆ ಈಗ ಹಾಲಿನ ಅಂಗಡಿಗೂ ಮೊದಲೇ ಎಣ್ಣೆ ಅಂಗಡಿ ಓಪನ್ ಆಗುತ್ತಿದೆ. ಅಬಕಾರಿ ಇಲಾಖೆಯಿಂದ ಪ್ರತಿ ಜಿಲ್ಲೆಯಲ್ಲೂ ಟಾರ್ಗೆಟ್ ಕೊಟ್ಟಿದ್ದಾರೆ. ಟಾರ್ಗೆಟ್ ಮುಟ್ಟದಿದ್ದರೆ ಆಯಾ ಜಿಲ್ಲೆಗಳ ಅಧಿಕಾರಿಗಳಿಗೆ ಸಮಸ್ಯೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸುವರ್ಣಸೌಧದ ಮೊಗಸಾಲೆಯಲ್ಲಿ ಸಿದ್ದರಾಮಯ್ಯ ಮತ್ತು ಅಶೋಕ್​​ ನಡುವೆ ‘ನಾಟಿಕೋಳಿ’ ಮಾತು

ಮದ್ಯ ಸೇವನೆ ಮಾಡುವವರ ಲಿವರ್ ಡ್ಯಾಮೇಜ್ ಹೆಚ್ಚಾಗುತ್ತಿದೆ. ಮದ್ಯವ್ಯಸನಿ ಕುಟುಂಬ ಸದಸ್ಯರನ್ನು ಬಿಟ್ಟು ಸಾಯುತ್ತಿದ್ದಾರೆ. ಮಕ್ಕಳು ಅನಾಥರಾಗುತ್ತಿದ್ದಾರೆ, ಪತ್ನಿಯರು ವಿಧವೆ ಆಗುತ್ತಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಾತ್ರ ಲಿವರ್ ಕಸಿ ಮಾಡಲಾಗುತ್ತಿದೆ. ಲಿವರ್ ಕಸಿ ಮಾಡಲು ಲಕ್ಷ ಲಕ್ಷ ಹಣ ಬೇಕಾಗಿದೆ. ಹೀಗಾಗಿ ಅಬಕಾರಿ ಇಲಾಖೆ ಆದಾಯದಲ್ಲಿ 20% ಹಣ ಮೀಸಲಿಡಬೇಕು. ಮದ್ಯಪ್ರಿಯರು ಅನಾರೋಗ್ಯಕ್ಕೊಳಗಾದರೆ ಚಿಕಿತ್ಸೆ ಹಣ ಮೀಸಲಿಡಬೇಕು. ಮದ್ಯಸೇವನೆಯಿಂದ ಸಾವು ನೋವು ತಡೆಗಟ್ಟಲು ಸರ್ಕಾರ ಕ್ರಮವಹಿಸಲಿ ಎಂದು ಬಿಜೆಪಿ ಸದಸ್ಯ ಕೆ.ಎಸ್.ನವೀನ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:52 pm, Mon, 8 December 25