
ಬೆಳಗಾವಿ, ಡಿಸೆಂಬರ್ 08: ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ (Belagavi Winter Session) ಪ್ರಾರಂಭವಾಗಿದೆ. ಈ ನಿಟ್ಟಿನಲ್ಲಿ ರೈತ ವಿರೋಧಿ ನೀತಿ ಖಂಡಿಸಿ ಸದನದ ಒಳಗೂ ಮತ್ತು ಹೊರಗೂ ತರಾಟೆ ತೆಗೆದುಕೊಳ್ಳಲು ವಿಪಕ್ಷಗಳು ಮುಂದಾಗಿವೆ. ಅದಕ್ಕೂ ಮುನ್ನ ನಾಳೆ ಸರ್ಕಾರದ ವಿರುದ್ಧ ಬೃಹತ್ ಹೋರಾಟಕ್ಕೆ ಬಿಜೆಪಿ (BJP) ಸಜ್ಜಾಗಿದೆ. ನಗರದ ಮಾಲಿನಿ ಸಿಟಿ ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ. ಅದಕ್ಕೂ ಮುನ್ನ ಇಂದು ಪ್ರತಿಭಟನಾ ಸ್ಥಳಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕರಾದ R.ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವರು ಭೇಟಿ ನೀಡಿ ವೇದಿಕೆ ಹಾಗೂ ಇತರೆ ಸಿದ್ಧತೆಗಳ ಬಗ್ಗೆ ಪರಿಶೀಲನೆ ಮಾಡಿದ್ದಾರೆ.
ಪ್ರತಿಭಟನಾ ಸ್ಥಳ ಪರಿಶೀಲನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಕಾಂಗ್ರೆಸ್ ಸರ್ಕಾರ ರೈತರನ್ನು ನಿರ್ಲಕ್ಷ್ಯ ಮಾಡಿದೆ. ಕಬ್ಬು ಬೆಳೆಗಾರರು, ಮೆಕ್ಕೆಜೋಳ, ಭತ್ತ, ತೊಗರಿ ಬೆಳೆಗಾರರಿಗೆ ಅನ್ಯಾಯವಾಗಿದೆ. ಹೀಗಾಗಿ ನಾಳೆ 20 ಸಾವಿರಕ್ಕೂ ಹೆಚ್ಚು ರೈತರನ್ನು ಸೇರಿಸಿ ಪ್ರತಿಭಟನೆ ಮಾಡ್ತೇವೆ. ನಾಳೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದರು.
ಇದನ್ನೂ ಓದಿ: ಸುವರ್ಣಸೌಧದ ಮೊಗಸಾಲೆಯಲ್ಲಿ ಸಿದ್ದರಾಮಯ್ಯ ಮತ್ತು ಅಶೋಕ್ ನಡುವೆ ‘ನಾಟಿಕೋಳಿ’ ಮಾತು
ಕಣ್ಣಿದ್ದು ಕಾಣದಂತೆ, ಕಿವಿ ಇದ್ದು ಕಿವುಡರಂತೆ ವರ್ತಿಸುತ್ತಿದ್ದಾರೆ. ಪರಿಹಾರ ವಿಚಾರವಾಗಿ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುತ್ತಾರೆ. ಸಿಎಂ ಪರಿಹಾರ ಕೊಡುತ್ತಾರಾ ಎಂದು ರೈತರು ಕಾಯುತ್ತಿದ್ದಾರೆ. ಖಜಾನೆಗೆ ಬರುತ್ತಿರುವ ದುಡ್ಡು ಎಲ್ಲಿ ಹೋಗುತ್ತಿದೆ. ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ನಾವು ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ನಾಳೆ ನಾವು ರೈತರಿಗೋಸ್ಕರ ಹೋರಾಟ ಮಾಡುತ್ತೇವೆ. ರೈತರ ಪರವಾಗಿ ಧ್ವನಿ ಎತ್ತುತ್ತೇವೆ. ರೈತರ ಆತ್ಮಹತ್ಯೆ ಪ್ರಕರಣದಲ್ಲಿ ದೇಶಕ್ಕೆ ರಾಜ್ಯ ಎರಡನೇ ಸ್ಥಾನದಲ್ಲಿದೆ. 2400 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಜಾನೆ ಖಾಲಿ ಖಾಲಿ, ಕಾಂಗ್ರೆಸ್ನವರು ಜಾಲಿ ಜಾಲಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್ ಮುಖಂಡರು ಪೊಲೀಸ್ ವಶಕ್ಕೆ
ಅಧಿಕಾರದ ಮದ ಏರಿದೆ. ಅವರಿವರ ಕಾಲು ಎಳೆದುಕೊಂಡು ನಡೆಯುತ್ತಿದ್ದಾರೆ. ಬನ್ನಿ ರೈತರ ಪರವಾಗಿ ನಿಲ್ಲಿ, ಇಲ್ಲ ಜಾಗ ಬಿಟ್ಟು ಕೊಡಿ ಎಂದು ಹೋರಾಟವನ್ನು ನಾವು ಮಾಡುತ್ತಿದ್ದೇವೆ. ನಮ್ಮ ಸರ್ಕಾರದಲ್ಲಿ ರೈತರ ಪರವಾಗಿ ಕೆಲಸವನ್ನು ಮಾಡುತ್ತಾ ಬಂದಿದೆ. ನಾನು ಬೆಳಿಗ್ಗೆ ನಿಲುವಳಿ ಸೂಚನೆ ಕೊಟ್ಟಿದ್ದೇನೆ. ಕಾಂಗ್ರೆಸ್ ನಮ್ಮ ಒತ್ತಾಯದ ಮೇರೆಗೆ ಪ್ರವಾಹ ಪರಿಹಾರದ ಬಗ್ಗೆ ಅವಕಾಶ ಕೊಡಬೇಕು. ಇಲ್ಲದಿದ್ದರೆ ಸದನದಲ್ಲಿ ಹೋರಾಟ ಮಾಡುವ ಪರಿಸ್ಥಿತಿ ಎದುರಾಗುತ್ತದೆ ಎಂದು ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:52 pm, Mon, 8 December 25