ಬೆಳಗಾವಿ: 2,500 ಬಾಕಿ ಹಣ ಕೇಳಿದ್ದಕ್ಕೆ ಬಂದೂಕಿನಿಂದ ಫೈರಿಂಗ್; ಕಿರಾಣಿ ಅಂಗಡಿ ಮಾಲೀಕ ಜಸ್ಟ್ ಮಿಸ್!

ಬೆಳಗಾವಿ ಜಿಲ್ಲೆಯ ಘೋಡಗೇರಿ ಗ್ರಾಮದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಬಾಕಿ ಹಣ ಕೇಳಿದ್ದಕ್ಕೆ ನಾಡ ಬಂದೂಕಿನಿಂದ ಗುಂಡಿನ ದಾಳಿ ಮಾಡಿದ್ದು, ಕೂದಲೆಳೆ ಅಂತರದಲ್ಲಿ ಓರ್ವ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಫೈರಿಂಗ್ ಮಾಡುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಯಮಕನಮರಡಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿ: 2,500 ಬಾಕಿ ಹಣ ಕೇಳಿದ್ದಕ್ಕೆ ಬಂದೂಕಿನಿಂದ ಫೈರಿಂಗ್; ಕಿರಾಣಿ ಅಂಗಡಿ ಮಾಲೀಕ ಜಸ್ಟ್ ಮಿಸ್!
ಪ್ರಾತಿನಿಧಿಕ ಚಿತ್ರ
Image Credit source: Getty images
Edited By:

Updated on: Nov 29, 2026 | 10:38 PM

ಬೆಳಗಾವಿ, ನವೆಂಬರ್​​ 29: ಕಿರಾಣಿ ಅಂಗಡಿಯ ಬಾಕಿ ಹಣ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ನಾಡ ಬಂದೂಕಿನಿಂದ ಗುಂಡಿನ ದಾಳಿ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ನಡೆದಿದೆ. ಅವರಗೋಳ ಗ್ರಾಮದ ಆಸ್ಕರ್ ಕಿಲ್ಲೇದಾರ ಎಂಬಾತ ಮೆಹಬೂಬ್ ಮುನ್ನೋಳಿ ಎಂಬುವವರ ಮೇಲೆ ಸಿಂಗಲ್ ಬ್ಯಾರೆಲ್ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಗುಂಡು ಕೂದಲೆಳೆ ಅಂತರದಲ್ಲಿ ಪಕ್ಕದಿಂದ ಹಾದುಹೋಗಿದ್ದು, ಮೆಹಬೂಬ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

2,500 ರೂ ಬಾಕಿ ಹಣ ಕೇಳಿದ್ದಕ್ಕೆ ಫೈರಿಂಗ್

ಮೆಹಬೂಬ್ ಮುನ್ನೋಳಿ ಕಿರಾಣಿ ಅಂಗಡಿ ನಡೆಸುತ್ತಿದ್ದು, ಆಸ್ಕರ್ ಕಿಲ್ಲೇದಾರನ ಬಳಿ 2,500 ರೂ ಬಾಕಿ ಹಣ ಇತ್ತು. ಹೀಗಾಗಿ ಆ ಹಣವನ್ನು ಹಿಂದಿರುಗಿಸುವಂತೆ ಮೆಹಬೂಬ್ ಕೇಳಿದ್ದಕ್ಕೆ ಆಸ್ಕರ್ ಬಂದೂಕಿನಿಂದ ಗುಂಡಿನ ದಾಳಿ ಮಾಡಿದ್ದಾನೆ.

Loading...

ಸಿಸಿಟಿವಿಯಲ್ಲಿ ಗುಂಡಿನ ದಾಳಿ ದೃಶ್ಯ ಸೆರೆ

ಆಸ್ಕರ್ ಕಿಲ್ಲೇದಾರ ಗುಂಡು ಹಾರಿಸುತ್ತಿರುವ ದೃಶ್ಯ ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗುಂಡು ಮೆಹಬೂಬ್ ಅವರ ಪಕ್ಕದಲ್ಲೇ ಹಾದುಹೋಗಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಪ್ರೀತಿ ಹೆಸರಲ್ಲಿ ದೋಖಾ: ಅಶ್ಲೀಲ ವೆಬ್​​ಸೈಟ್​​ನಲ್ಲಿ ವಿಡಿಯೋ ಕಂಡು ಯುವತಿ ಶಾಕ್​​; ಮಾಜಿ ಲವರ್​​ ವಿರುದ್ಧ ದೂರು

ಇನ್ನು ಘಟನೆ ಬೆನ್ನಲ್ಲೇ ಯಮಕನಮರಡಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಗುಂಡಿನ ದಾಳಿ ನಡೆಸಿದ ಆರೋಪದ ಮೇಲೆ ಆಸ್ಕರ್ ಕಿಲ್ಲೇದಾರನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಕಾಫಿ ಕೊಯ್ಲು ಮಾಡ್ತಿದ್ದ ವೇಳೆ ಒಂಟಿ ಮಹಿಳೆ ಹತ್ಯೆಗೆ ಯತ್ನ

ಕಾಫಿ ಕೊಯ್ಲು ಮಾಡುತ್ತಿದ್ದ ಒಂಟಿ ಮಹಿಳೆಯ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆಗೆ ಯತ್ನಿಸಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಣದೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶೋಭಾ (36) ಎಂಬುವವರ ಮೇಲೆ ಚಂದ್ರಯ್ಯ ಮತ್ತು ಆತನ ಪತ್ನಿ ಪುಷ್ಪಾ ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೆಲ ವರ್ಷಗಳ ಹಿಂದೆ ಶೋಭಾ ಮತ್ತು ಅವರ ಪತಿ ರುದ್ರೇಶ್ ಒಂದು ಎಕರೆ ಜಮೀನು ಖರೀದಿಸಿದ್ದರು. ಇದೇ ಜಮೀನನ್ನು ಖರೀದಿಸಲು ಚಂದ್ರಯ್ಯ ಮತ್ತು ಪುಷ್ಪಾ ದಂಪತಿಯೂ ಮುಂದಾಗಿದ್ದರು. ಆದರೆ ಜಮೀನು ಶೋಭಾ ದಂಪತಿಯ ಪಾಲಾಗಿದ್ದರಿಂದ ಚಂದ್ರಯ್ಯ ಮತ್ತು ಪುಷ್ಪಾ ದ್ವೇಷ ಸಾಧಿಸುತ್ತಿದ್ದರು ಎನ್ನಲಾಗಿದೆ. ಈ ಹಿಂದೆ ಹಲವು ಬಾರಿ ರುದ್ರೇಶ್ ಮತ್ತು ಶೋಭಾ ದಂಪತಿ ಮೇಲೆ ಹಲ್ಲೆಗೆ ಯತ್ನಿಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಚಾಮರಾಜನಗರದ ಹುರುಳಿನಂಜನಪುರಕ್ಕೆ ನಟೋರಿಯಸ್ ಗ್ಯಾಂಗ್ ಎಂಟ್ರಿ: ಮನೆ ಹೆಂಚು ಪುಡಿಪುಡಿ, ಶಾಲೆಯ ಛಾವಣಿಯೂ ಧ್ವಂಸ

ಇಂದು ಕಾಫಿ ತೋಟದಲ್ಲಿ ಶೋಭಾ ಒಬ್ಬರೇ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಕೈ, ಕಾಲು ಹಾಗೂ ಎದೆ ಭಾಗಕ್ಕೆ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದು, ದಾಳಿಯ ರಭಸಕ್ಕೆ ಶೋಭಾ ಅವರ ಒಂದು ಕೈ ಬೆರಳು ತುಂಡಾಗಿದೆ. ಶೋಭಾ ಕಿರುಚಿಕೊಳ್ಳುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ನೆರೆಹೊರೆಯವರನ್ನು ಕಂಡು ಆರೋಪಿ ಚಂದ್ರಯ್ಯ ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಶೋಭಾ ಅವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
Loading...
Unable to load recommendations.
Follow Us