AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಸ್ಟಾಗ್ರಾಂ ರೀಲ್ಸ್ ಮಾಡುತ್ತ ಪ್ರೀತಿ, ಊರು ಬಿಟ್ಟು ಮದುವೆಯಾಗಿದ್ದ ಗರ್ಭಿಣಿ ಮಹಿಳೆ ಸಾವು; ಆರೋಪಿಗಳಿಗಾಗಿ ಹುಟುಕಾಟ

ಇನ್ಸ್ಟಾಗ್ರಾಂನಲ್ಲಿ ರೀಲ್ಸ್​ ಮಾಡುವ ಮೂಲಕ ಪರಿಚಯವಾಗಿದ್ದ ಯುವಕ-ಯುವತಿಗೆ ಪ್ರೀತಿ ಹುಟ್ಟಿತ್ತು. ಯುವತಿ ಮೈಸೂರು ತೊರೆದು ಬೆಳಗಾವಿಗೆ ಬಂದು ಯುವಕನ ಜೊತೆ ಮದುವೆಯಾಗಿದ್ದಳು. ವರ್ಷದ ಬಳಿಕ ಗರ್ಭಿಣಿಯಾಗಿದ್ದು ಇದು ಯುವಕನಿಗೆ ಇಷ್ಟವಿರಲಿಲ್ಲ. ಮಗು ತೆಗೆಸುವಂತೆ ಗಂಡ ಒತ್ತಾಯಿಸಿದ್ದ. ಇದಕ್ಕೆ ವಿರೋಧ ಪಡಿಸಿದಕ್ಕೆ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಇನ್ಸ್ಟಾಗ್ರಾಂ ರೀಲ್ಸ್ ಮಾಡುತ್ತ ಪ್ರೀತಿ, ಊರು ಬಿಟ್ಟು ಮದುವೆಯಾಗಿದ್ದ ಗರ್ಭಿಣಿ ಮಹಿಳೆ ಸಾವು; ಆರೋಪಿಗಳಿಗಾಗಿ ಹುಟುಕಾಟ
ಮಂಜುಳಾ, ಬೋರೇಶ್
Sahadev Mane
| Updated By: ಆಯೇಷಾ ಬಾನು|

Updated on: Jul 13, 2024 | 12:48 PM

Share

ಬೆಳಗಾವಿ, ಜುಲೈ.13: ಇನ್ಸ್ಟಾಗ್ರಾಂನಲ್ಲಿ ರೀಲ್ಸ್ (Instagram Love Story) ಮಾಡುತ್ತ ಹುಟ್ಟಿದ ಪ್ರೀತಿಗೆ ಸ್ವತಃ ಊರನ್ನು, ಅಪ್ಪ-ಅಮ್ಮನನ್ನು ಬಿಟ್ಟು ಮೈಸೂರಿನಿಂದ ಬೆಳಗಾವಿಗೆ ಬಂದು ಮದುವೆಯಾಗಿ ಗರ್ಭಿಣಿಯೂ ಆಗಿದ್ದ ಮಹಿಳೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ (Death) ಘಟನೆ ನಡೆದಿದೆ. ಸದ್ಯ ನೇಣು ಬಿಗಿದ ಸ್ಥಿತಿಯಲ್ಲಿ ನೆಲದ ಮೇಲೆ ಮಲಗಿರುವಂತೆ ಮಹಿಳೆ ಶವ ಪತ್ತೆಯಾಗಿದ್ದು ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಮತ್ತೊಂದೆಡೆ ಮಹಿಳೆ ಕುಟುಂಬಸ್ಥರು ಗಂಡ ಹಾಗೂ ಆತನ ಕುಟುಂಬಸ್ಥರ ಮೇಲೆ ಕೊಲೆ ಆರೋಪ ಮಾಡಿದ್ದು ಹುಡುಕಾಟ ನಡೆಯುತ್ತಿದೆ.

ಮೈಸೂರಿನ ಕುಂಬಾರಕೊಪ್ಪಲಿನ ಮಂಜುಳಾ ಅಲಿಯಾಸ್ ನಯನಾ(23) ಎಂಬ ಯುವತಿಗೂ ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದ ನಿವಾಸಿಯಾಗಿರುವ ಬೋರೇಶ್ ಎಂಬ ಯುವಕನಿಗೂ ಇನ್ಸ್ಟಾಗ್ರಾಂನಲ್ಲಿ ರೀಲ್ಸ್​ ಮಾಡುವ ಮೂಲಕ ಪರಿಚಯವಾಗಿತ್ತು. ಈ ಪರಿಚಯ ಸ್ನೇಹವಾಗಿ ಇಬ್ಬರಲ್ಲೂ ಪ್ರೀತಿ ಹುಟ್ಟಿತ್ತು. ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ರು. ಹೀಗಾಗಿ ಮಂಜುಳಾ ತನ್ನ ಊರು, ಮನೆ ಎಲ್ಲವನ್ನೂ ಬಿಟ್ಟು ಬೆಳಗಾವಿಗೆ ಬಂದು ಬೋರೇಶ್ ಜೊತೆ ಮದುವೆಯಾಗುತ್ತಾಳೆ. ಈ ವಿಚಾರ ತಿಳಿಯುತ್ತಿದ್ದಂತೆ ಯುವತಿ ಕುಟುಂಬಸ್ಥರು ಬೆಳಗಾವಿಗೆ ಧಾವಿಸಿ ಮಗಳನ್ನು ಮತ್ತೆ ಮೈಸೂರಿಗೆ ಕರೆದುಕೊಂಡು ಹೋಗುತ್ತಾರೆ.

ಆದರೆ ಮತ್ತೆ ಮಂಜುಳಾ ಮನೆ ಬಿಟ್ಟು ಓಡಿ ಬಂದು ಗಂಡನ ಜೊತೆ ಜೀವನ ಮಾಡುತ್ತಾಳೆ. ಇದರಿಂದ ನೊಂದ ಯುವತಿ ಕುಟುಂಬ ಮದುವೆಯಾಗಿದೆ ಸಂಸಾರ ಮಾಡಿಕೊಂಡು ಖುಷಿಯಾಗಿ ಇರಲಿ ಎಂದು ಮಗಳನ್ನು ಬಿಟ್ಟುಬಿಡುತ್ತಾರೆ. ಒಂದು ವರ್ಷ ಸುಖವಾಗಿದ್ದ ಈ ಸಂಸಾರದಲ್ಲಿ ಇತ್ತೀಚೆಗೆ ಬಿರುಕು ಬಿಟ್ಟಿದೆ. 1 ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಮಂಜುಳಾ 3 ತಿಂಗಳ ಗರ್ಭಿಣಿಯಾಗಿದ್ದು ಇದು ಗಂಡನಿಗೆ ಇಷ್ಟವಿರಲಿಲ್ಲ. ಮಂಜುಳಾಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಗಂಡ ಹಾಗೂ ಆತನ ಕುಟುಂಬಸ್ಥರು ಒತ್ತಡ ಹೇರಿದ್ದರು. ಈ ಬಗ್ಗೆ ಮಂಜುಳಾ ತನ್ನ ಚಿಕ್ಕಮ್ಮನ ಬಳಿ ಅಳಲು ತೋಡಿಕೊಂಡಿದ್ದಳು. ಆದರೆ ಈಗ ಮಂಜುಳಾ ಶವವಾಗಿ ಪತ್ತೆಯಾಗಿದ್ದಾಳೆ.

ಇದನ್ನೂ ಓದಿ: ಕೇಂದ್ರೀಯ ತನಿಖಾ ಏಜೆನ್ಸಿಗಳನ್ನು ರಾಜಕೀಯ ಅಸ್ತ್ರಗಳಾಗಿ ಬಳಸಬಾರದು: ಜಿ ಪರಮೇಶ್ವರ್

ಬೆಳಗಾವಿ ಹೊರವಲಯದ ಮಚ್ಚೆ ಗ್ರಾಮದಲ್ಲಿ ಪತಿ ಬೋರೇಶ್ & ಕುಟುಂಬದವರು ಉಸಿರುಗಟ್ಟಿಸಿ ನಮ್ಮ ಮಗಳನ್ನು ಕೊಂದು ಪರಾರಿಯಾಗಿದ್ದಾರೆ ಎಂದು ಮಂಜುಳಾ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಗರ್ಭಪಾತ ಮಾಡಿಸಿಕೊಳ್ಳಲು ವಿರೋಧ ಮಾಡಿದ್ದಕ್ಕೆ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿಯ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಘಟನೆ ಸಂಬಂಧ ಬೆಳಗಾವಿ ಡಿಸಿಪಿ ರೋಹನ್ ಜಗದೀಶ್ ಮಾತನಾಡಿದ್ದು, ಮಂಜುಳಾ ಅನ್ನೋ ಹುಡುಗಿ ಮದುವೆಯಾಗಿ ಒಂದು ವರ್ಷ ಆಗಿದ್ದು 3 ತಿಂಗಳ ಗರ್ಭಿಣಿಯಾಗಿದ್ದಳು. ಮಹಿಳೆ ನೇಣು ಹಾಕಿಕೊಂಡಿದ್ದಾರೆ ಅನ್ನೋ ಮಾಹಿತಿ ಸಿಕ್ಕ ನಂತರ ಮನೆಗೆ ದೌಡಾಯಿಸಿ ಚೆಕ್ ಮಾಡಿ ಕುಟುಂಬಸ್ಥರಿಗೆ ಮಾಹಿತಿ ನೀಡಿದೆವು. ಮದುವೆಯಾದ ಬಳಿಕ ಹುಡುಗನ ಮನೆಯವರಿಂದ ತೊಂದರೆ ಆಗ್ತಿತ್ತು. ಮಾನಸಿಕ, ದೈಹಿಕ ದೌರ್ಜನ್ಯ ಮಾಡಿದ್ದಾರೆ. ಕಾನೂನು ರೀತಿಯಲ್ಲಿ ಅಪಾಧಿತರಿಗೆ ಶಿಕ್ಷೆ ಮಾಡುತ್ತೇವೆ. ಎರಡು ತಂಡಗಳನ್ನ ರಚನೆ ಮಾಡಿ ಮೃತಳ ಗಂಡ ಹಾಗೂ ಅಪರಾಧಿತರನ್ನ ಬಂಧಿಸಲಾಗುತ್ತೆ ಎಂದು ತಿಳಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ