ಜಗದೀಶ್ ಶೆಟ್ಟರ್ಗೆ ಬೆಳಗಾವಿ ಟಿಕೆಟ್; ಜಿಲ್ಲಾ ಬಿಜೆಪಿಯಲ್ಲಿ ತೀವ್ರ ಅಸಮಾಧಾನ; ಕುತೂಹಲ ಕೆರಳಿಸಿದ ನಾಯಕರ ಹೇಳಿಕೆ
ಧಾರವಾಡ ಮತ್ತು ಹಾವೇರಿ ಲೋಕಸಭಾ ಕ್ಷೇತ್ರಗಳ ಬಿಜೆಪಿ ಟಿಕೆಟ್ ಕೈತಪ್ಪಿದ್ದಿಂದ ಗೊಂದಲಕ್ಕೀಡಾಗಿದ್ದ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಕ್ಷೇತ್ರದ ಟಿಕೆಟ್ ಫೈನಲ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಕ್ಷೇತ್ರದ ಹಾಲಿ ಸಂಸದೆ ಮಂಗಳಾ ಅಂಗಡಿ ಕೂಡ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ, ಜಿಲ್ಲೆಯ ಬಿಜೆಪಿಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದ್ದು, ಹೈಕಮಾಂಡ್ ಘೋಷಣೆಗಾಗಿ ಸ್ಥಳೀಯ ನಾಯಕರು ಕಾಯುತ್ತಿದ್ದಾರೆ.
ಬೆಳಗಾವಿ, ಮಾ.16: ಧಾರವಾಡ ಮತ್ತು ಹಾವೇರಿ ಲೋಕಸಭಾ ಕ್ಷೇತ್ರಗಳ ಬಿಜೆಪಿ ಟಿಕೆಟ್ ಕೈತಪ್ಪಿದ್ದಿಂದ ಗೊಂದಲಕ್ಕೀಡಾಗಿದ್ದ ಜಗದೀಶ್ ಶೆಟ್ಟರ್ (Jagadish Shettar) ಅವರಿಗೆ ಬೆಳಗಾವಿ (Belagavi) ಕ್ಷೇತ್ರದ ಟಿಕೆಟ್ ಫೈನಲ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಕ್ಷೇತ್ರದ ಹಾಲಿ ಸಂಸದೆ ಮಂಗಳಾ ಅಂಗಡಿ ಕೂಡ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ, ಜಿಲ್ಲೆಯ ಬಿಜೆಪಿಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದ್ದು, ಹೈಕಮಾಂಡ್ ಘೋಷಣೆಗಾಗಿ ಸ್ಥಳೀಯ ನಾಯಕರು ಕಾಯುತ್ತಿದ್ದಾರೆ.
ಯಾರು ಏನು ಹೇಳಿದ್ದಾರೋ ಗೊತ್ತಿಲ್ಲ, ನಾನು ಟಿವಿ ನೋಡಿಲ್ಲ ಎಂದು ಹೇಳಿದ ಬಿಜೆಪಿ ಶಾಸಕ ಅಭಯ್ ಪಾಟೀಲ್, ನಮ್ಮಲ್ಲಿ ಸ್ಥಳೀಯವಾಗಿ ಅನೇಕ ನಾಯಕರು ಸ್ಪರ್ಧೆಗೆ ಸಮರ್ಥರಿದ್ದಾರೆ. ಹಾಗಾಗಿ ರಾಷ್ಟ್ರೀಯ ನಾಯಕರು ಅಧಿಕೃತವಾಗಿ ಹೇಳುವವರೆಗೂ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಕ್ಷೇತ್ರದಲ್ಲಿ ನಾನು ನೂರಕ್ಕೆ ನೂರಷ್ಟು ಗೆಲ್ಲುತ್ತೇನೆ: ಜಗದೀಶ್ ಶೆಟ್ಟರ್
ಜಿಲ್ಲೆಯ ಪ್ರತಿಯೊಬ್ಬರು ಅಪೇಕ್ಷಿತರಿದ್ದಾರೆ. ಈ ಹಿಂದೆ ಬಾಬಾಗೌಡ, ಸುರೇಶ್ ಅಂಗಡಿ ಹಾಗೂ ಮಂಗಲಾ ಅಂಗಡಿಯವರು ನಮ್ಮ ಜಿಲ್ಲೆಯವರಿದ್ದರು. ನಮ್ಮ ಜಿಲ್ಲೆಯವರೇ ಅಭ್ಯರ್ಥಿ ಆಗಬೇಕು ಎಂಬುದು ಎಲ್ಲರ ಅಪೇಕ್ಷೆ ಇದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಹೊರಗಿನವರಿಗೆ ಟಿಕೆಟ್ ನೀಡದಂತೆ ಬಿಜೆಪಿ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.
ಪ್ರಭಾಕರ್ ಕೋರೆ ಮನೆಯಲ್ಲಿ ರಹಸ್ಯ ಸಭೆ ವಿಚಾರವಾಗಿ ಮಾತನಾಡಿದ ಅಭಯ್ ಪಾಟೀಲ್, ಕೋರ್ ಕಮಿಟಿ ಸಭೆಯಲ್ಲಿ ಅನೇಕ ವಿಷಯಗಳು ಚರ್ಚೆ ಆಗಿವೆ. ಅದನ್ನ ಹಿರಿಯರ ಗಮನಕ್ಕೆ ತರುವ ಕೆಲಸ ಸಾಮೂಹಿಕವಾಗಿ ಮಾಡಲಾಗುತ್ತದೆ. ಒಬ್ಬರೆ ಟಿಕೆಟ್ ಫೈನಲ್ ಮಾಡುವಂತದ್ದು ಅಲ್ಲ, ಪಕ್ಷದ ಎಲ್ಲರೂ ಕೂಡಿ ನಿರ್ಣಯ ತೆಗೆದುಕೊಳ್ಳುತ್ತಾರೆ. ಕಳೆದ ಬಾರಿ ಲೀಡ್ಗಿಂತ 10 ಪಟ್ಟು ಹೆಚ್ಚಿನ ಲೀಡ್ ಪಡೆದುಕೊಳ್ಳುವ ಬಗ್ಗೆ ಚರ್ಚೆ ಮಾಡಿದ್ದೇವೆ. ಟಿಕೆಟ್ ವಿಚಾರ ಬಂದಾಗ ಅದನ್ನೂ ಚರ್ಚೆ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಜಗದೀಶ್ ಶೆಟ್ಟರ್ ಬೆಳಗಾವಿ ಲೋಕಸಭಾ ಟಿಕೆಟ್ ಸಿಗಲಿದೆ, ವರಿಷ್ಠರು ಮಾತಾಡಿದ್ದಾರೆ: ಆರ್ ಅಶೋಕ, ಬಿಜೆಪಿ ನಾಯಕ
ಊಹಾಪೋಹಗಳಿಗೆ ಉತ್ತರ ಕೊಡಲ್ಲ: ಈರಣ್ಣ ಕಡಾಡಿ
ಬೆಳಗಾವಿ ಕ್ಷೇತ್ರಕ್ಕೆ ಜಗದೀಶ್ ಶೆಟ್ಟರ್ ಹೆಸರು ಫೈನಲ್ ವಿಚಾರವಾಗಿ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸಾಕಷ್ಟು ಹೆಸರುಗಳು ಬಂದಿವೆ. ಆದರೆ ನಮ್ಮ ನಾಯಕರು ಅಧಿಕೃತವಾಗಿ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಸ್ಥಳೀಯವಾಗಿ ಸಾಕಷ್ಟು ಮುಖಂಡರು ಟಿಕೆಟ್ ಆಕಾಂಕ್ಷಿಗಳು ಇದ್ದಾರೆ. ಅಧಿಕೃತವಾಗಿ ರಾಷ್ಟ್ರೀಯ ನಾಯಕರು ಬಿ ಫಾರಂ ಕೊಡಲಿದ್ದಾರೆ ಎಂದು ಹೇಳುವ ಮೂಲಕ ಬೆಳಗಾವಿ ಕ್ಷೇತ್ರಕ್ಕೆ ಶೆಟ್ಟರ್ ಹೆಸರು ಘೋಷಣೆ ಮಾಡಿದ ಯಡಿಯೂರಪ್ಪ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ಅಲ್ಲದೆ, ಟಿಕೆಟ್ ಘೋಷಣೆಯಾಗುವ ಮುನ್ನ ಯಾವುದೇ ಪ್ರತಿಕ್ರಿಯೆ ನೀಡುವುದು ಒಳ್ಳೆಯದಲ್ಲ. ಊಹಾಪೋಹಗಳಿಗೆ ಉತ್ತರ ಕೊಡುವುದಿಲ್ಲ ಎಂದ ಈರಣ್ಣ ಕಡಾಡಿ, ಜೆಡಿಎಸ್ ಜೊತೆಗೆ ಸ್ಥಳ ಹೊಂದಾಣಿಕೆ, ಸಾಮಾಜಿಕ ನ್ಯಾಯದಡಿ ಅವಕಾಶ ಕೊಡುವ ಚರ್ಚೆ ನಡೆದಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ