ಆಗಾಗ ಅಜ್ಜಿ ಮನೆಗೆ ಬರುತ್ತಿದ್ದವ ಯುವತಿಯನ್ನೇ ಪಟಾಯಿಸಿ ಮದ್ವೆಯಾದ: ಮುಂದೇನಾಯ್ತು?
ಅವರು ಐದು ವರ್ಷದಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಈ ವಿಚಾರ ಯುವತಿ ಕುಟುಂಬಸ್ಥರಿಗೆ ಗೊತ್ತಾಗಿ ಆಕೆಗೆ ಬುದ್ದಿವಾದ ಹೇಳಿ ಬೇರೊಂದು ಹುಡುಗನ ಜೊತೆಗೆ ನಿಶ್ಚಿತಾರ್ಥ ಮಾಡಿದ್ದಾರೆ. ಅಲ್ಲದೇ ಮೇ.18ರಂದು ಮದುವೆ ಕೂಡ ನಿಶ್ಚಯ ಮಾಡಿದ್ದರು, ಆದ್ರೆ ಮನೆಯವರಿಗೆ ಹೇಳದೇ ಕೇಳದೇ ಓಡಿ ಹೋದ ಯುವತಿ ದೇವಸ್ಥಾನದಲ್ಲಿ ಮದುವೆಯಾಗಿ ಇದೀಗ ರಕ್ಷಣೆಗೆ ಪೊಲೀಸರ ಮೊರೆ ಹೋಗಿದ್ದಾರೆ.

ಬೆಳಗಾವಿ, (ಏಪ್ರಿಲ್ 09): ಕೈ ಕೈ ಹಿಡಿದು ಪ್ರಣಯ ಪಕ್ಷಿಗಳಂತೆ ಎಲ್ಲೊಂದರಲ್ಲಿ ಓಡಾಡಿ ಇದೀಗ ಪ್ರೇಮ ವಿವಾಹವಾಗಿರುವ (Love Marriage) ಜೋಡಿಗೆ ಮನೆಯವರೇ ವಿಲನ್ ಆಗಿದ್ದಾರೆ. ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಈ ಜೋಡಿ ಇಂದು(ಏಪ್ರಿಲ್ 09) ಬೆಳಗಾವಿ (Belagavi)ಎಸ್ಪಿ ಕಚೇರಿ ಮೆಟ್ಟಿಲೇರಿದೆ. ಹೌದು…19 ವರ್ಷದ ಕಿತ್ತೂರು ತಾಲೂಕಿನ ನಿಚ್ಚಣಕಿ ಗ್ರಾಮದ ಯುವತಿ ಹಾಗೂ ಹಳಿಯಾಳದ ರೋಹಿತ್ ಗುಡಿಸಾಗರ್ ಕಳೆದ ಐದು ವರ್ಷದಿಂದ ಪ್ರೀತಿಸಿ ಈಗ ಮದ್ವೆಯಾಗಿದ್ದಾರೆ. ಆದ್ರೆ, ಇದೀಗ ಮನೆಯವರ ಭಯ ಶುರುವಾಗಿದ್ದು, ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದೆ. ಅಲ್ಲದೇ ತಮ್ಮ ಪಾಡಿಗೆ ಜೀವನ ಸಾಗಿಸಲು ಅವಕಾಶ ಮಾಡಿಸಿಕೊಂಡುವಂತೆ ಕೇಳಿಕೊಂಡಿದ್ದಾರೆ.
ನಿಚ್ಚಣಕಿ ಗ್ರಾಮದಲ್ಲಿ ರೋಹಿತ್ ಅವರ ಚಿಕ್ಕಮ್ಮನ ಮನೆ ಇದ್ದು ಆಗಾಗ ಬರುತ್ತಿದ್ದ. ಆಗ ರೋಹಿತ್ ಗೆ ಯುವತಿ ಮೇಲೆ ಲವ್ ಆಗಿತ್ತು. ಈ ವಿಚಾರವನ್ನು ಯುವತಿ ಮುಂದೆ ಪ್ರಸ್ತಾಪ ಮಾಡಿದ್ದ. ಇದಕ್ಕೆ ಯುವತಿ ಸಹ ಓಕೆ ಎಂದಿದ್ದು, ಬಳಿಕ ಇಬ್ಬರು ಜೋಡಿ ಹಕ್ಕಿಯಂತೆ ಸುತ್ತಾಟವಾಡಿದ್ದಾರೆ. ಆದ್ರೆ ಕೆಲ ತಿಂಗಳ ಹಿಂದೆ ಇವರ ಪ್ರೀತಿ ವಿಚಾರ ಯುವತಿಯ ಮನೆಯವರಿಗೆ ಗೊತ್ತಾಗಿ ಎಚ್ಚರಿಕೆ ಸಹ ನೀಡಿದ್ದರು. ಅಲ್ಲದೇ ಬೇರೊಬ್ಬ ಯುವಕನ ಜೊತೆಗೆ ಮೊನ್ನೆಯಷ್ಟೇ ನಿಶ್ಚಿತಾರ್ಥ ಮಾಡಿದ್ದು, ಮೇ.18ರಂದು ಮದುವೆ ಕೂಡ ನಿಶ್ಚಯ ಮಾಡಿದ್ದರು. ಇದರಿಂದ ಆತಂಕಗೊಂಡ ಯುವತಿ ಯಾರಿಗೂ ಹೇಳದೇ ಕೇಳದೇ ವಾರದ ಹಿಂದೆ ಮನೆಬಿಟ್ಟು ಹಳಿಯಾಳದಲ್ಲಿದ್ದ ರೋಹಿತ್ ಬಳಿ ಹೋಗಿದ್ದಾಳೆ. ಆಗ ಹಳಿಯಾಳದಲ್ಲೇ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ.
ಇದನ್ನೂ ಓದಿ: ಎರಡೇ ವಾರಕ್ಕೆ ಮುರಿದು ಬಿತ್ತು ಹಿಂದೂ ಯುವಕ, ಮುಸ್ಲಿಂ ಯುವತಿಯ ಪ್ರೇಮ ವಿವಾಹ
ಇತ್ತ ಮಗಳು ಕಾಣಿಸುತ್ತಿಲ್ಲ ಎಂದು ಯುವತಿ ಮನೆಯವರುಕಿತ್ತೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನನ್ವಯ ಕಿತ್ತೂರು ಪೊಲೀಸರು ಯುವಕನ ಚಿಕ್ಕಮ್ಮನ ಕುಟುಂಬಸ್ಥರನ್ನ ಕರೆದುಕೊಂಡು ವಿಚಾರಣೆ ನಡೆಸಿದ್ದಾರೆ. ಇತ್ತ ಚಿಕ್ಕಮ್ಮನಿಗೆ ಯುವತಿ ಕುಟುಂಬಸ್ಥರು ನಿಮ್ಮ ಮಗನನ್ನ ಜೀವಂತ ಬಿಡಲ್ಲ ಎಂದು ಜೀವ ಬೆದರಿಕೆ ಕೂಡ ಹಾಕಿದ್ದರಂತೆ. ಇದೇ ಕಾರಣಕ್ಕೆ ತಮಗೆ ರಕ್ಷಣೆ ಬೇಕು ಎಂದು ಬೆಳಗಾವಿ ನಗರದಲ್ಲಿರುವ ಎಸ್ಪಿ ಕಚೇರಿಗೆ ಆಗಮಿಸಿದ ಜೋಡಿ ಮನವಿ ಮಾಡಿಕೊಂಡಿದೆ. ಇನ್ನು ಯುವತಿ ಸಹ ತಾನು ಯಾರು ಒತ್ತಡಕ್ಕೂ ಮಣಿದು ಬಂದಿಲ್ಲ. ಇಷ್ಟ ಪಟ್ಟು ಬಂದು ಮದುವೆಯಾಗಿದ್ದಾಗಿ ಯುವತಿ ಹೇಳಿಕೆ ಕೊಟ್ಟಿದ್ದಾಳೆ.
ಒಟ್ಟಿನಲ್ಲಿ ಮನೆಯಲ್ಲಿ ಮದುವೆ ನಿಗದಿಯಾಗುತ್ತಿದ್ದಂತೆಯೇ ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗಿ ಇದೀಗ ರಕ್ಷಣೆಗಾಗಿ ಠಾಣೆ ಮೆಟ್ಟಿಲೇರಿದ್ದಾರೆ. ಮನೆಯವರನ್ನ ಒಪ್ಪಿಸಿ ಮದುವೆಯಾಗಬೇಕಿದ್ದವರು ಈ ರೀತಿ ಓಡಿ ಹೋಗಿ ಮದುವೆಯಾಗಿದ್ದ ಕುಟುಂಬಸ್ಥರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಯುವತಿ ತನ್ನ ಇಷ್ಟದಂತೆ ಹುಡುಗನ ಜೊತೆಗೆ ಬಂದಿದ್ದೇನೆ ಎನ್ನುತ್ತಿದ್ದರೆ, ಇತ್ತ ಯುವಕ ತನಗೆ ರಕ್ಷಣೆ ಬೇಕು ಅಂತಿದ್ದಾನೆ. ಈ ನಿಟ್ಟಿನಲ್ಲಿ ಪೊಲೀಸರು ಮಧ್ಯಸ್ಥಿಕೆ ವಹಿಸಿ ಪ್ರಕರಣ ಇತ್ಯರ್ಥಗೊಳಿಸುವ ಕೆಲಸ ಮಾಡಬೇಕಿದೆ.