ಕುಂದಾನಗರಿಯಲ್ಲಿ ಹೆಚ್ಚಾದ ಕಳ್ಳರ ಕಾಟ; ದೇವಸ್ಥಾನ-ಸೊಸೈಟಿಗಳೇ ಟಾರ್ಗೆಟ್, ಖದೀಮರನ್ನು ಬಂಧಿಸದ ಪೊಲೀಸರ ವಿರುದ್ಧ ಜನರ ಆಕ್ರೋಶ
ಮಹಾರಾಷ್ಟ್ರ, ಗೋವಾ ರಾಜ್ಯದ ಗಡಿಗೆ ಹೊಂದಿಕೊಂಡಿರುವ ನಗರದಲ್ಲಿ ಅಂತರ್ ರಾಜ್ಯ ಕಳ್ಳರ ಹಾವಳಿ ಹೆಚ್ಚಾಗಿದೆ. ಕಳೆದ ಹತ್ತು ದಿನಗಳಲ್ಲಿ ಮೂರು ದೇವಸ್ಥಾನ, ಒಂದು ಸೊಸೈಟಿ ಕಳ್ಳತನ ಮಾಡಿದ್ದಾರೆ. ಹೆಚ್ಚಾಗಿ ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡ್ತಿದ್ದು, ದೇವರ ವಿಗ್ರಹ ಮೇಲಿರುವ ಚಿನ್ನಾಭರಣ, ಹುಂಡಿ ಹಣ ದೋಚಿ ಪರಾರಿಯಾಗ್ತಿದ್ದಾರೆ.
ಬೆಳಗಾವಿ: ಕುಂದಾನಗರಿಯಲ್ಲಿ ಅಂತರ್ ರಾಜ್ಯ ಕಳ್ಳರ ಹಾವಳಿ ಹೆಚ್ಚಾಗಿದೆ. ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡಿ ಕಳ್ಳರು ಕರಾಮತ್ತು ತೋರಿಸ್ತಿದ್ದಾರೆ. ಹಾಗೆ, ಸೊಸೈಟಿಗೂ ಕನ್ನ ಹಾಕ್ತಿದ್ದು ಜನರೆಲ್ಲ ಭಯದಲ್ಲೇ ಬದುಕುತ್ತಿದ್ದಾರೆ. ದೇವಸ್ಥಾನದ ಹುಂಡಿಯನ್ನೂ ಹೊಡೆದಿದ್ದಾರೆ. ಸೊಸೈಟಿಗೂ ಕನ್ನ ಹಾಕಿದ್ದಾರೆ. ಸಿಕ್ಕಿದ್ದೆಲ್ಲವನ್ನೂ ದೋಚಿ ಕಳ್ಳರು ಕಾಲ್ತಿದ್ದಾರೆ. ಖದೀಮರನ್ನ ಬೆನ್ನತ್ತಿ ಪೊಲೀಸ್ರ ಶ್ವಾನಗಳು ನುಗ್ಗುತ್ತಿವೆ. ಆದ್ರೆ, ಗಲ್ಲಿ ಗಲ್ಲಿಯಲ್ಲೂ ಹುಡುಕಾಡಿದ್ರೂ ಕ್ರಿಮಿಗಳ ಜಾಡು ಪತ್ತೆಯಾಗಿಲ್ಲ. ಜನರ ಆತಂಕ ಮಾತ್ರ ಮರೆಯಾಗಿಲ್ಲ. ಕುಂದಾನಗರಿ ಬೆಳಗಾವಿಯಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ.
ಮಹಾರಾಷ್ಟ್ರ, ಗೋವಾ ರಾಜ್ಯದ ಗಡಿಗೆ ಹೊಂದಿಕೊಂಡಿರುವ ನಗರದಲ್ಲಿ ಅಂತರ್ ರಾಜ್ಯ ಕಳ್ಳರ ಹಾವಳಿ ಹೆಚ್ಚಾಗಿದೆ. ಕಳೆದ ಹತ್ತು ದಿನಗಳಲ್ಲಿ ಮೂರು ದೇವಸ್ಥಾನ, ಒಂದು ಸೊಸೈಟಿ ಕಳ್ಳತನ ಮಾಡಿದ್ದಾರೆ. ಹೆಚ್ಚಾಗಿ ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡ್ತಿದ್ದು, ದೇವರ ವಿಗ್ರಹ ಮೇಲಿರುವ ಚಿನ್ನಾಭರಣ, ಹುಂಡಿ ಹಣ ದೋಚಿ ಪರಾರಿಯಾಗ್ತಿದ್ದಾರೆ. ಪಾಂಗುಳು ಗಲ್ಲಿಯ ಅಶ್ವತ್ಥಾಮ ಮಂದಿರದ ಕಳ್ಳತನ ಮಾಡಿದ್ದರು, ಇದಾದ ಬಳಿಕ ಸಮರ್ಥನಗರದ ರೇಣುಕಾ ಮಂದಿರದಲ್ಲಿಯೂ ದೇವರ ವಿಗ್ರಹದ ಮೇಲಿದ್ದ ಚಿನ್ನದ ಒಡವೆ ಹಾಗೂ ಹುಂಡಿ ಹಣವನ್ನ ದೋಚಿದ್ದಾರೆ. 2 ದಿನದ ಹಿಂದಷ್ಟೇ ಕಪಿಲೇಶ್ವರ ದೇವಸ್ಥಾನಕ್ಕೂ ಚೋರರು ಬಂದಿದ್ದು, ಸೆಕ್ಯೂರಿಟಿ ಗಾರ್ಡ್ ಇದ್ದಿದನ್ನ ಗಮನಿಸಿ ಎಸ್ಕೇಪ್ ಆಗಿದ್ದಾರೆ.
ಇನ್ನೂ ಕಳ್ಳರು ದೇವಸ್ಥಾನಗಳಲ್ಲಿರುವ ಸಿಸಿಟಿವಿ ವರ್ಕ್ ಆಗುತ್ತೋ ಇಲ್ವೋ ಅನ್ನೋದನ್ನ ವಿಚಾರಿಸಿಕೊಂಡೇ ಕಳ್ಳತನ ಮಾಡ್ತಿದ್ದಾರೆ. ಹಾಗೇ, ಕೋ ಆಪರೇಟಿವ್ ಬ್ಯಾಂಕ್ ಗಳಿಗೂ ಕನ್ನ ಹಾಕ್ತಿದ್ದಾರೆ. ಕಳೆದ ಶನಿವಾರ ಕೂಟ ಬಳಿಯ ಮಹಿಳಾ ಅಘಾಡಿ ಕೋ.ಆಪರೇಟಿವ್ ಸೊಸೈಟಿಯಲ್ಲಿ ಲಕ್ಷಾಂತರ ರೂಪಾಯಿ ಹಣ ಕದ್ದು ಪರಾರಿ ಆಗಿದ್ದಾರೆ. ಇನ್ನೂ ಸುದ್ದಿ ತಿಳಿಯುತ್ತಿದ್ದಂತೆ ಖಡೇಬಜಾರ್ ಪೊಲೀಸರು ಆಗಮಿಸಿ ಬೆರಳಚ್ಚು ತಜ್ಞರಿಂದ ಸಾಕ್ಷಿ ಸಂಗ್ರಹಿಸಿದ್ರು. ಜತೆಗೆ, ಶ್ವಾನ ದಳದಿಂದಲೂ ಖದೀಮರ ಹೆಜ್ಜೆ ಗುರುತು ಪತ್ತೆ ಹಚ್ಚುವ ಕೆಲಸ ಮಾಡಿದ್ರು. ಇನ್ನು, ಎರಡು ತಿಂಗಳಲ್ಲಿ ಮೂವತ್ತಕ್ಕೂ ಅಧಿಕ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ನಗರದ ಜನರು ಬೆಚ್ಚಿ ಬಿದ್ದಿದ್ದಾರೆ. ಚೋರರನ್ನ ಪೊಲೀಸರು ಬಂಧಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಒಟ್ನಲ್ಲಿ, ಬೆಳಗಾವಿ ಜಿಲ್ಲೆಯಾದ್ಯಂತ ದೇವಸ್ಥಾನಗಳಲ್ಲೇ ಹೆಚ್ಚಾಗಿ ಕಳ್ಳತನ ನಡೆಯುತ್ತಿದ್ದು ಪೊಲೀಸರು ಎಚ್ಚೆತ್ತುಕೊಳ್ಳಬೇಕಿದೆ.. ಜನರು ನಿರ್ಭೀತಿಯಿಂದ ಇರುವ ವಾತಾವರಣ ನಿರ್ಮಾಣ ಮಾಡಬೇಕಿದೆ.
ವರದಿ: ಸಹದೇವ ಮಾನೆ, ಟಿವಿ9 ಬೆಳಗಾವಿ
ಇದನ್ನೂ ಓದಿ: ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಾದ ಕಳ್ಳತನ; ದೇವಸ್ಥಾನ, ಮಠ, ದರ್ಗಾಗಳಲ್ಲಿನ ಹುಂಡಿ ಹಣ ಮಂಗಮಾಯ