ಬೆಂಗಳೂರು, ಡಿಸೆಂಬರ್ 16: ಪಂಚಮಸಾಲಿ 2ಎ ಮೀಸಲಾತಿ ಕಿಚ್ಚು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಮೀಸಲಾತಿಗಾಗಿ ಆಗ್ರಹಿಸಿ ಬೆಳಗಾವಿಯಲ್ಲಿ ಹೋರಾಟ ತೀವ್ರಗೊಳಿಸಿರುವ ಪಂಚಮಸಾಲಿ ಸಮುದಾಯ ಸೋಮವಾರ ಡಿಸಿ ಕಚೇರಿ ಬಳಿ ಹೋರಾಟಕ್ಕೆ ಮುಂದಾಗಿತ್ತು. ಲಾಠಿಜಾರ್ಜ್ ಖಂಡಿಸಿ ಹೋರಾಟ ನಡೆಸಲು ಬಸವ ಜಯಮೃತ್ಯುಂಜಯ ಶ್ರೀಗಳು ಕರೆ ನೀಡಿದ್ದರು. ಆದರೆ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪ್ರತಿಭಟನೆಗೆ ಅವಕಾಶ ನೀಡಿಲ್ಲ. ಅವಕಾಶ ನೀಡದ್ದಕ್ಕೆ ಪಂಚಮಸಾಲಿ ಸಮುದಾಯ ಆಕ್ರೋಶ ಹೊರಹಾಕಿದೆ.
ಹೋರಾಟಕ್ಕೆ ತಡೆ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಪಂಚಮಸಾಲಿ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು, ತಡೆಯುವುದು ಅವರ ಹವ್ಯಾಸ. ಹೋರಾಟ ಮಾಡುವುದು ನಮ್ಮ ಕರ್ತವ್ಯ ಎಂದಿದ್ದಾರೆ. ಸಿಎಂ ಕ್ಷಮೆ ಕೇಳಬೇಕು, ಲಾಠಿಚಾರ್ಜ್ ಮಾಡಿದವರ ಸಸ್ಪೆಂಡ್ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಡಿಸಿ ಕಚೇರಿ ಬಳಿ ಹೋರಾಟಕ್ಕೆ ಅನುಮತಿ ಕೊಡದ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ಬೆಳಗಾವಿಯಲ್ಲಿ ಪ್ರಜಾಪ್ರಭುತ್ವ ಇದೆಯಾ? ಡಿಸಿ ಸರ್ವಾಧಿಕಾರ ಇದೆಯಾ ಎಂದು ಪ್ರಶ್ನಿಸಿದ್ದಾರೆ.
ಪ್ರತಿಭಟನೆಗೆ ಅನುಮತಿ ಕೊಡದೇ ಇರುವುದು ಖಂಡನೀಯ ಎಂದು ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಕೂಡಾ ಕಿಡಿಕಾರಿದ್ದಾರೆ.
ಪಂಚಮಸಾಲಿ ಸಮುದಾಯದವರ ಮೇಲಿನ ಲಾಠಿಚಾರ್ಜ್ ವಿಚಾರ ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪವಾಗಿದೆ. ಕಲಾಪದ ಆರಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ್ದಾರೆ. ಲಾಠಿಚಾರ್ಜ್ ಮಾಡಿರುವ ಸರ್ಕಾರ ಸಮುದಾಯದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಗೃಹ ಸಚಿವರಿಂದ ಉತ್ತರ ಕೊಡಿಸುತ್ತೇವೆ ಎಂದು ಪರಿಷತ್ ಸಭಾನಾಯಕ ಭೋಸರಾಜು ಭರವಸೆ ನೀಡಿದ ಬಳಿಕ ಬಿಜೆಪಿ ಸದಸ್ಯರು ಧರಣಿ ಹಿಂಪಡೆದಿದ್ದಾರೆ.
ಸಿಎಂ ಕ್ಷಮೆ ಕೇಳಬೇಕು ಎಂಬ ಪಂಚಮಸಾಲಿ ಸಮುದಾಯ ಮತ್ತು ಬಿಜೆಪಿಗರ ಆಗ್ರಹಕ್ಕೆ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. ಪಂಚಮಸಾಲಿ ಮೀಸಲಾತಿ ವಿಚಾರವನ್ನು ಬಿಜೆಪಿಯವರೇಕೆ ಇತ್ಯರ್ಥ ಮಾಡಲಿಲ್ಲ? ಪ್ರಲ್ಹಾದ್ ಜೋಶಿ ಯಾಕೆ ಇತ್ಯರ್ಥ ಮಾಡಲಿಲ್ಲ ಎಂದು ಸಿಎಂ ಪ್ರಶ್ನಿಸಿದ್ದಾರೆ. ಯಾರು ಇತ್ಯರ್ಥ ಮಾಡಲಿಲ್ಲವೋ ಅವರು ಕ್ಷಮ ಕೇಳಬೇಕು ಎಂದು ಪಂಚ್ ಕೊಟ್ಟಿದ್ದಾರೆ.
ಇದನ್ನೂ ಓದಿ: ನಮ್ಮ ಅನ್ನದ ತಟ್ಟೆಗೆ ಕೈ ಹಾಕಿದ್ರೆ ಕೈ ಕತ್ತರಿಸುತ್ತೇವೆ: ಜಯಮೃತ್ಯುಂಜಯ ಸ್ವಾಮೀಜಿಗೆ ಕೆಎಸ್ ಶಿವರಾಮು ಎಚ್ಚರಿಕೆ
ಏತನ್ಮಧ್ಯೆ, ಸಿಎಂ ಕ್ಷಮೆಗೆ ಮತ್ತು ಎಫ್ಐಆರ್ ರದ್ದು ಕೋರಿ ಪಂಚಮಸಾಲಿ ಸಮುದಾಯದ ಹೋರಾಟ ಮುಂದುವರೆದಿದೆ. ಗಾಂಧಿಭವನದಿಂದ ಕಿತ್ತೂರು ಚೆನ್ನಮ್ಮ ವೃತ್ತಕ್ಕೆ ಆಗಮಿಸಿದ ಶ್ರೀಗಳು ಹೋರಾಟ ನಡೆಸುತ್ತಿದ್ದಾರೆ. ಸಿಎಂ ಕ್ಷಮೆಗೆ ಆಗ್ರಹಿಸಿದ್ದಾರೆ. ಮತ್ತೆ ಗಾಂಧಿಭವನದಲ್ಲೇ ಧರಣಿ ಕೂತು ಹೋರಾಟ ನಡೆಸಲು ನಿರ್ಧರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ