ಆಡು ಮುಟ್ಟದ ಸೊಪ್ಪಿಲ್ಲ ಕತ್ತಿ ಸಹೋದರರು ನೋಡದ ಪಕ್ಷವಿಲ್ಲ: ಬಿಜೆಪಿ ತೊರೆಯುವ ಸುಳಿವು ಕೊಟ್ಟ ರಮೇಶ್ ಕತ್ತಿ
ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಅಧಿಕಾರದ ಅವಧಿ ಇನ್ನೂ ಒಂದು ವರ್ಷ ಇರುವಾಗಲೇ ಕಂಪನವಾಗಿದೆ. ಕಳೆದ 9 ವರ್ಷಗಳಿಂದ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ರಮೇಶ್ ಕತ್ತಿ ದಿಢೀರ್ ರಾಜೀನಾಮೆ ನೀಡಿದ್ದು. ಜಿಲ್ಲಾ ರಾಜಕಾರಣದಲ್ಲಿ ಹೊಸದೊಂದು ಕಿಡಿ ಹೊತ್ತಿಕೊಂಡಿದೆ. ಜಿಲ್ಲಾ ನಾಯಕರ ಮುಸುಕಿನ ಗುದ್ದಾಟದಿಂದ ರಮೇಶ ಕತ್ತಿ ರಾಜೀನಾಮೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗಿದ್ದು ಇದರಿಂದಾಗಿ ಬೆಳಗಾವಿ ಜಿಲ್ಲೆಯ ಮೇಲೆ ಕತ್ತಿ ಕುಟುಂಬದ ರಾಜಕೀಯ ಹಿಡಿತ ಸಂಪೂರ್ಣ ಕೈತಪ್ಪಿಹೋಗಿದೆ. ಇದೀಗ ರಮೇಶ್ ಕತ್ತಿ ಬಿಜೆಪಿ ತೊರೆಯುವ ಸುಳಿವು ಸಹ ಕೊಟ್ಟಿದ್ದಾರೆ.
ಬೆಳಗಾವಿ, (ಅಕ್ಟೋಬರ್ 05): ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಮತ್ತೆ ಕಂಪನ ಸೃಷ್ಟಿಸಿದೆ. ರಮೇಶ್ ಜಾರಕಿಹೊಳಿ ಮತ್ತು ಮೂಲ ಬಿಜೆಪಿಗರ ನಡುವೆ ಮುಸುಕಿನ ಗುದ್ದಾಟಗಳು ನಡೆಯುತ್ತಿವೆ. ಈಗಾಗಲೇ ಯಡಿಯೂರಪ್ಪ ಆದಿಯಾಗಿ ಕರ್ನಾಟಕ ಬಿಜೆಪಿ ಉಸ್ತುವಾರಿ ಸಂಧಾನ ಸಭೆ ಮಾಡಿದರೂ ಸಹ ಇದೀಗ ಮತ್ತೆ ಬೆಳಗಾವಿ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಹೌದು…ಮಾಜಿ ಸಂಸದ. ಬಿಜೆಪಿ ನಾಯಕ ರಮೇಶ್ ಕತ್ತಿ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಆಡು ಮುಟ್ಟದ ಸೊಪ್ಪಿಲ್ಲಿ ಕತ್ತಿ ಸಹೋದರರು ನೋಡದ ಪಕ್ಷವೇ ಇಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿ ತೊರೆಯುವ ಸುಳಿವು ಕೊಟ್ಟಿದ್ದಾರೆ.
ಹೌದು…ನಿನ್ನೆ (ಅಕ್ಟೋಬರ್ 04) ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಮೇಶ್ ಕತ್ತಿ ಇಂದು(ಅ.05) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯರದ್ದು ಜನತಾ ಪರಿವಾರ, ನಮ್ಮದು ಜನತಾ ಪರಿವಾರ. ಈಗ ಸಿಎಂ ಸಿದ್ದರಾಮಯ್ಯ ಮೇಲೆ ಹಗರಣದ ಗೂಬೆ ಬಂದಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿ ಇರಬಹುದು.ವೈಯಕ್ತಿಕವಾಗಿ ಅವರು ದಕ್ಷ, ಆರ್ಥಿಕ ನಿರ್ವಹಣೆ ಮಾಡುವ ನಾಯಕ ಎಂದು ಹಾಡಿಗೊಳಿದರು.
ಅಂದಿನ ರಾಜಕಾರಣ, ಇಂದಿನ ರಾಜಕಾರಣದ ವ್ಯಾಖ್ಯಾನ ಬೇರೆ ಇದೆ. B.S.ಯಡಿಯೂರಪ್ಪ, ಕುಮಾರಸ್ವಾಮಿ ಮೇಲೆಯೂ ಕಳಂಕ ಬಂದಿದೆ. ಬಿ.ಎಸ್.ಯಡಿಯೂರಪ್ಪ ಸಹ ಸ್ವಚ್ಛ, ದಕ್ಷ ನಾಯಕ. ಸೈಕಲ್ ಮೇಲೆ ಪಕ್ಷ ಕಟ್ಟಿದಂತವರಿಗೆ ಕಳಂಕ ಕಟ್ಟುವ ಕೆಲಸ ಮಾಡಿದ್ರು, ವಿರೋಧ ಪಕ್ಷದ ನಾಯಕ ಅಶೋಕ್ ವಿರುದ್ಧವೂ ಆರೋಪ ಬರುತ್ತಿದೆ. ಇಂದಿನ ರಾಜಕಾರಣದಲ್ಲಿ ಯಾರೂ ಬೆಳೆಯಲು ಪ್ರಯತ್ನ ಮಾಡುತ್ತಿಲ್ಲ. ಬೇರೆಯವರನ್ನು ತುಳಿಯಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಸಮಾಧನ ಹೊರಹಾಕಿದ ರಮೇಶ್ ಕತ್ತಿ, ಆಡು ಮುಟ್ಟದ ಸೊಪ್ಪಿಲ್ಲಿ ಕತ್ತಿ ಸಹೋದರರು ನೋಡದ ಪಕ್ಷವೇ ಇಲ್ಲ. ನಾವು ಎಲ್ಲ ಪಕ್ಷಗಳ ಜೊತೆ ಒಡನಾಟ ಹೊಂದಿದ್ದೇವೆ. ಇಂದಿನ ರಾಜಕಾರಣದ ಸ್ಥಿತಿ ಸರಿಯಿಲ್ಲ. ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಹಿರಿಯರ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಕತ್ತಿ ರಾಜಕಾರಣದಲ್ಲಿ ಇದ್ದರೂ ಇರದೇ ಇದ್ದರೂ ಜನರ ಪರ ಇದೆ ಎಂದರು. ಈ ಮೂಲಕ ರಮೇಶ್ ಕತ್ತಿ ರಾಜಕೀಯ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಬೆಳಗಾವಿ ಮೇಲಿನ ರಾಜಕೀಯ ಹಿಡಿತ ಕಳೆದುಕೊಂಡ ಕತ್ತಿ ಕುಟುಂಬ
ಕಳೆದ 9 ವರ್ಷಗಳಿಂದ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ರಮೇಶ್ ಕತ್ತಿ ದಿಢೀರ್ ರಾಜೀನಾಮೆ ನೀಡಿದ್ದು. ಜಿಲ್ಲಾ ರಾಜಕಾರಣದಲ್ಲಿ ಹೊಸದೊಂದು ಕಿಡಿ ಹೊತ್ತಿಕೊಂಡಿದೆ. ಜಿಲ್ಲಾ ನಾಯಕರ ಮುಸುಕಿನ ಗುದ್ದಾಟದಿಂದ ರಮೇಶ ಕತ್ತಿ ರಾಜೀನಾಮೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗಿದ್ದು ಇದರಿಂದಾಗಿ ಬೆಳಗಾವಿ ಜಿಲ್ಲೆಯ ಮೇಲೆ ಕತ್ತಿ ಕುಟುಂಬದ ರಾಜಕೀಯ ಹಿಡಿತ ಸಂಪೂರ್ಣ ಕೈತಪ್ಪಿಹೋಗಿದೆ.
ಅಣ್ಣ ಉಮೇಶ ಕತ್ತಿಯವರ ಅಕಾಲಿಕ ನಿಧನದ ಬಳಿಕ ರಮೇಶ್ ಕತ್ತಿ ರಾಜಕೀಯವಾಗಿ ಅತಂತ್ರವಾಗಿದ್ದು. ಲೋಕಸಭೆ ಚುನಾವಣೆಯಿಂದಲೂ ಕತ್ತಿ ಕುಟುಂಬ ಮತ್ತು ಜೋಲ್ಲೆ ಕುಟುಂಬದ ಮಧ್ಯೆ ರಾಜಕೀಯ ಭಿನ್ನಾಭಿಪ್ರಾಯ ಉಂಟಾಗಿದೆ. ಚಿಕ್ಕೋಡಿ ಟಿಕೆಟ್ ಗಾಗಿ ತೀವ್ರ ಲಾಬಿ ನಡೆಸಿದ್ದ ರಮೇಶ್ ಕತ್ತಿ ಅದನ್ನು ಪಡೆಯುವಲ್ಲಿ ವಿಫಲವಾಗಿದ್ದರು. ಹೀಗೆ ರಾಜಕೀಯವಾಗಿ ಹಿನ್ನಡೆ ಅನುಭವಿಸಿದ್ದ ರಮೇಶ್ ಕತ್ತಿ ಇದೀಗ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಬೆಳಗಾವಿ ಜಿಲ್ಲೆಯ ಮೇಲೆ ಕತ್ತಿ ಕುಟುಂಬದ ರಾಜಕೀಯ ಹಿಡಿತ ಸಂಪೂರ್ಣ ಕೈತಪ್ಪಿಹೋದಂತಾಗಿದೆ.
ಇನ್ನು ಈ ಬಗ್ಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ದಿಢೀರ್ ಸುದ್ದಿಗೋಷ್ಠಿ ನಡೆಸಿ ರಮೇಶ್ ಕತ್ತಿಯವರು ಸ್ವಇಚ್ಚೆಯಿಂದಲೇ ರಾಜೀನಾಮೆ ನೀಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದ್ರೆ, ಅಣ್ಣಾ ಸಾಹೇಬ್ ಜೊಲ್ಲೆ ತಂತ್ರಗಾರಿಕೆಯಿಂದ ರಮೇಶ್ ಕತ್ತಿ ಅವರನ್ನು ರಾಜೀನಾಮೆ ಕೊಡಿಸುವಂತೆ ಮಾಡಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಜಿಲ್ಲೆಯ ಸಹಕಾರ ಕ್ಷೇತ್ರದಲ್ಲೂ ಜಾರಕಿಹೊಳಿ ಕುಟುಂಬದ ಹಿಡಿತ ಮತ್ತಷ್ಟು ಗಟ್ಟಿಯಾಗಿದ್ದು. ಸಂಪೂರ್ಣ ಬೆಳಗಾವಿ ಜಿಲ್ಲೆಯ ಮೇಲೆ ಜಾರಕಿಹೊಳಿ ಕುಟುಂಬದ ಕಂಟ್ರೋಲ್ಗೆ ಬಂದಂತಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ