ಬೆಳಗಾವಿ ಕುಂದಾಗೆ ದಾಖಲೆ ಬೇಡಿಕೆ: ಕುಂದಾ ಖರೀದಿಗೆ ಮುಗಿಬಿದ್ದ ಶಾಸಕರು, ಸಿಬ್ಬಂದಿ
ಅಧಿವೇಶನಕ್ಕೂ ಮೊದಲು ವಿವಿಧ ಅಂಗಡಿಗಳಲ್ಲಿ ನಿತ್ಯ 200ರಿಂದ 300 ಕೆಜಿ ಕುಂದಾ ಮಾರಾಟವಾಗುತ್ತಿತ್ತು. ಆದರೆ ಅಧಿವೇಶನದ ವೇಳೆ ಈ ಪ್ರಮಾಣವು ದಿನಕ್ಕೆ 1 ಸಾವಿರ ಕೆಜಿಯಷ್ಟು ಹೆಚ್ಚಾಗಿತ್ತು.
ಬೆಳಗಾವಿ: ಸುವರ್ಣಸೌಧದಲ್ಲಿ ನಡೆದ ವಿಧಾನಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ಪ್ರಸಿದ್ಧ ಬೆಳಗಾವಿ ಕುಂದಾ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ. ಅಧಿವೇಶನಕ್ಕೂ ಮೊದಲು ವಿವಿಧ ಅಂಗಡಿಗಳಲ್ಲಿ ನಿತ್ಯ 200ರಿಂದ 300 ಕೆಜಿ ಕುಂದಾ ಮಾರಾಟವಾಗುತ್ತಿತ್ತು. ಆದರೆ ಅಧಿವೇಶನದ ವೇಳೆ ಈ ಪ್ರಮಾಣವು ದಿನಕ್ಕೆ 1 ಸಾವಿರ ಕೆಜಿಯಷ್ಟು ಹೆಚ್ಚಾಗಿತ್ತು ಎಂದು ಸ್ವೀಟ್ ಮಾರ್ಟ್ ಮಾಲೀಕ ರಾಜಪುರೋಹಿತ್ ಮಾಹಿತಿ ನೀಡಿದ್ದಾರೆ. ಅಧಿವೇಶನದ ಕೊನೆಯ ದಿನವಾಗಿರುವ ಹಿನ್ನೆಲೆಯಲ್ಲಿ ಕುಂದಾ ಖರೀದಿಗೆ ಶಾಸಕರು ಮತ್ತು ಅಧಿಕಾರಿಗಳು ಮುಗಿಬಿದ್ದಿದ್ದಾರೆ.
ನಗರದ ಅಂಗಡಿಯೊಂದರಲ್ಲಿ ಕುಂದಾ ಖರೀದಿಸಿದ ಶಾಸಕ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರತಿಕ್ರಿಯಿಸಿ, ನನ್ನ ಕುಟುಂಬ ಸದಸ್ಯರು ಕುಂದಾ ತೆಗೆದುಕೊಂಡು ಬನ್ನಿ ಎಂದಿದ್ದಾರೆ. ಹೀಗಾಗಿ ಕುಟುಂಬಸ್ಥರಿಗಾಗಿ ಕುಂದಾ ಖರೀದಿ ಮಾಡುತ್ತಿದ್ದೇನೆ ಎಂದರು. ವಿವಿಧ ಅಂಗಡಿಗಳಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಕೆಜಿಯಷ್ಟು ಕುಂದಾ ಮಾರಾಟವಾಗುತ್ತಿತ್ತು. ಬೆಳಗಾವಿಯಲ್ಲಿ ಸಿಗುವ ಹಾಲಿನ ಜೊತೆಗೆ ಮಹಾರಾಷ್ಟ್ರದಿಂದಲೂ ಹಾಲು, ಖೋವಾ ತೆರೆಸಿ ಕುಂದಾ ಸಿದ್ಧಪಡಿಸಲಾಗುತ್ತಿದೆ. ಅಧಿವೇಶನಕ್ಕೆಂದು ಬೆಳಗಾವಿಗೆ ಹೊರಡುವಾಗಲೇ ಕುಟುಂಬದ ಸದಸ್ಯರು ಕುಂದಾ ತೆಗೆದುಕೊಂಡು ಬನ್ನಿ ಎಂದಿದ್ದರು. ಹೀಗಾಗಿ ಬೆಳಗಾವಿಗೆ ಬಂದಾಗ ಕುಂದಾ, ಕರದಂಟು ಖರೀದಿಸುತ್ತೇನೆ ಎಂದು ಹೇಳಿದರು.
ಹೇಗೆ ತಯಾರುತ್ತೆ ಕುಂದಾ? ಬೆಳಗಾವಿ ಕುಂದಾ ಸಿಹಿ ತಿಂಡಿ ಇಂದು ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದಿದೆ. ಕುಂದಾ ಮೊದಲ ಬಾರಿಗೆ ತಯಾರಾದ ಕಥೆಯೂ ರೋಚಕವಾಗಿದೆ. ಅಡುಗೆಮನೆಯಲ್ಲಿ ಹಾಲು ಕಾಯಲು ಇರಿಸಿದ್ದವರೊಬ್ಬರು ಕೆಲಸದ ನಿಮಿತ್ತ ಒಲೆ ಆರಿಸುವುದನ್ನು ಮರೆತರಂತೆ. ಕೊನೆಗೆ ನೋಡಿದಾಗ ಪಾತ್ರೆಯ ತಳದಲ್ಲಿ ಹಾಲು ಗಟ್ಟಿಯಾಗಿ ಅಂಟಿಕೊಂಡಿತ್ತಂತೆ. ಅದಕ್ಕೇ ಸಕ್ಕರೆ, ಏಲಕ್ಕಿ ಪುಡಿ ಬೆರೆಸಿದಾಗಿ ವಿಶೇಷ ಖಾದ್ಯವೊಂದು ರೂಪುಗೊಂಡಿತು. ಮುಂದಿನ ದಿನಗಳಲ್ಲಿ ಅದೇ ಕುಂದಾ ಎಂದು ಹೆಸರಾಯಿತು ಎನ್ನುತ್ತಾರೆ.
ಮನೆಗಳಲ್ಲೂ ಕುಂದಾ ತಯಾರಿಸಬಹುದು. ಇದಕ್ಕೆ 1 ಲೀಟರ್ ಹಾಲಿಗೆ ಅರ್ಧ ಕಪ್ಗಿಂತಲೂ ತುಸು ಹೆಚ್ಚು ಸಕ್ಕರೆ, ಅರ್ಧ ಕಪ್ ಮೊಸಲು, 2 ಪುಡಿ ಮಾಡಿದ ಏಲಕ್ಕಿ ಬೇಕು. ದಪ್ಪ ತಳದ ಪಾತ್ರೆಯಲ್ಲಿ ಸಣ್ಣ ಉರಿಯ ಹಾಲು ಕಾಯಿಸಬೇಕು. ಹಾಲಿನ ಪ್ರಮಾಣ ಅರ್ಧದಷ್ಟು ಕಡಿಮೆಯಾದಾಗ ಅದಕ್ಕೆ ಮೊಸರು ಸೇರಿಸಿ ಮತ್ತೆ ಕುದಿಸಬೇಕು. ಹಾಲು ಒಡೆಯಲು ಶುರುವಾದಾಗ ಸಕ್ಕರೆ-ಏಲಕ್ಕಿ ಪುಡಿ ಸೇರಿಸಿ. ಒಲೆ ಆರಿಸಿ. ಇದು ತಣ್ಣಗಾದರೆ ರುಚಿಯಾದ ಕುಂದಾ ಸವಿಯಲು ಸಿದ್ಧ.
ಇದನ್ನೂ ಓದಿ: Viral Video: ಹಸಿ ಮೆಣಸಿನಕಾಯಿ ಐಸ್ ಕ್ರೀಮ್ ತಿಂದಿದ್ದೀರಾ? ವೈರಲ್ ಆಯ್ತು ಹೊಸ ರೆಸಿಪಿಯ ವಿಡಿಯೋ ಇದನ್ನೂ ಓದಿ: ಗೋಲ್ಡ್ ಲೇಪನದ ವಡಾಪಾವ್ಗೆ 2,000ರೂ.; ದುಬೈನಲ್ಲಿ ಫೇಮಸ್ ಆಯ್ತು ಹೊಸ ರೆಸಿಪಿ