ಹುಲಿ ಉಗುರು ವಿವಾದ: ನನ್ನ ಬೆಡ್ರೂಮ್ಗೆ ನುಗ್ಗಿ ಸರ್ಚ್ ಮಾಡಿದ್ದಾರೆ, ಅರಣ್ಯ ಅಧಿಕಾರಿಗಳ ವಿರುದ್ಧ ಸವದಿ ಕೆಂಡಾಮಂಡಲ
ನಾನು ಮನಸ್ಸು ಮಾಡಿದರೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಮಾನಹಾನಿ ಕೇಸ್ ಹಾಕಬಹುದು. ಶಾಸಕರ ಹಕ್ಕುಚ್ಯುತಿ ಆಗಿದೆ. ನಾನು ಸಭಾಪತಿಗಳಿಗೆ ದೂರು ನೀಡಬಹುದು. ನಾನು ಹಕ್ಕು ಚ್ಯುತಿ ಮಂಡನೆ ಮಾಡಬಹುದು. ನನಗೇನು ಅದು ದೊಡ್ಡ ವಿಷಯವಲ್ಲ. ಅವರು, ಅವರ ಕರ್ತವ್ಯ ನಿರ್ವಹಣೆ ಮಾಡಿದ್ದಾರೆಂದು ಗಮನದಲ್ಲಿಟ್ಟುಕೊಂಡು ನಾನು ಗಂಭೀರವಾಗಿ ತಗೆದುಕೊಂಡಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಬೆಳಗಾವಿ ಅ.31: ಶಾಸಕ ಲಕ್ಷ್ಮಣ್ ಸವದಿ (Laxman Savadi) ಪುತ್ರ ಸುಮಿತ್ ಹುಲಿ ಉಗುರು ಪೆಂಡೆಂಟ್ (Tiger Claw Pendant) ಧರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಗೆ ಬಂದು ಪರಿಶೀಲನೆ ನಡೆಸಿದ್ದ ಅರಣ್ಯ ಅಧಿಕಾರಿಗಳ (Forest Department Officers) ವಿರುದ್ಧ ಮಾಜಿ ಉಪಮುಖ್ಯಂತ್ರಿ ಲಕ್ಷ್ಮಣ್ ಸವದಿ ಗರಂ ಆಗಿದ್ದಾರೆ. ಯಾವ ಹುಲಿ ಉಗುರು ಇಲ್ಲ. ಇಲಿ ಉಗುರೂ ಇಲ್ಲ, ಅದು ಕೃತಕ ಉಗುರು. ನಮ್ಮ ಮನೆಯನ್ನು ಪರಿಶೀಲನೆ ಮಾಡಬೇಕಾದರೆ ನನ್ನ ಗಮನಕ್ಕೆ ತರಬೇಕಿತ್ತು ಅಥವಾ ನೋಟಿಸ್ ನೀಡಬೇಕಿತ್ತು. ನಾನು ಊರಲ್ಲಿ ಇರದ ಸಮಯದಲ್ಲಿ ನನ್ನ ಬೆಡ್ ರೂಮ್ಗೆ ಹೊಗಿ ಪರಿಶೀಲನೆ ಮಾಡಿದ್ದಾರೆ. ಅಧಿಕಾರಿಗಳು ಈ ಪ್ರಕರಣದಲ್ಲಿ ಲೋಪವೆಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಥಣಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾನು ಮನಸ್ಸು ಮಾಡಿದರೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಮಾನಹಾನಿ ಕೇಸ್ ಹಾಕಬಹುದು. ಶಾಸಕರ ಹಕ್ಕು ಚ್ಯುತಿ ಆಗಿದೆ. ನಾನು ಸಭಾಪತಿಗಳಿಗೆ ದೂರು ನೀಡಬಹುದು. ನಾನು ಹಕ್ಕು ಚ್ಯುತಿ ಮಂಡನೆ ಮಾಡಬಹುದು. ನನಗೇನು ಅದು ದೊಡ್ಡ ವಿಷಯವಲ್ಲ. ಅವರು ಅವರ ಕರ್ತವ್ಯ ನಿರ್ವಹಣೆ ಮಾಡಿದ್ದಾರೆಂದು ಗಮನದಲ್ಲಿಟ್ಟುಕೊಂಡು ನಾನು ಗಂಭೀರವಾಗಿ ತಗೆದುಕೊಂಡಿಲ್ಲ ಎಂದರು.
ಇದನ್ನೂ ಓದಿ: ಹುಲಿ ಉಗುರು ವಿವಾದ: ಶಾಸಕ ಭರತ್ ರೆಡ್ಡಿ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಪೋಟೋ ವೈರಲ್
ಬೆಡ್ ರೂಮ್ ಪರಿಶೀಲನೆಗೆ ಹೋದಾಗ ನನ್ನ ಪತ್ನಿ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ. ಅಧಿಕಾರಿಗಳು ಯಾವುದೇ ಉತ್ತರ ಕೊಟ್ಟಿಲ್ಲ. ಕಾನೂನು ಪ್ರಕಾರ ನನಗೆ ನೋಟಿಸ್ ನೀಡಬೇಕಾಗಿತ್ತು. ನಿಯಮ ಉಲ್ಲಂಘಟನೆ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಡಿಕೆ ಶಿವಕುಮಾರ್ ಆದಷ್ಟು ಬೇಗನೆ ಮಾಜಿ ಮಂತ್ರಿ ಆಗುತ್ತಾರೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಕೆಲವೊಬ್ಬರು ಕೆಲಸ ಇಲ್ಲದಕ್ಕೆ ಇಂತಹ ಉಸಾಬರಿ ಮಾಡುತ್ತಿರುತ್ತಾರೆ. ಮೈ ತುಂಬಾ ಕೆಲಸ ಇದ್ದಾಗ ಯಾವುದೂ ನೆನಪು ಆಗುವುದಿಲ್ಲ. ಕೆಲಸ ಇಲ್ಲದ ಸಮಯದಲ್ಲಿ ಇಂತಹಾ ವಿಚಾರಗಳು ಬರುತ್ತಿರುತ್ತವೆ. ಅದರ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲು ಹೋಗಲ್ಲ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ