SSLC ಪ್ರಶ್ನೆಪತ್ರಿಕೆ ಸೋರಿಕೆ: ಟಿವಿ9 ವರದಿ ಬೆನ್ನಲ್ಲೇ ಸೆಂಟರ್ ಪತ್ತೆ, ಡಿಡಿಪಿಐ ಸ್ಥಳಕ್ಕೆ ಭೇಟಿ
2026ರ ರಾಜ್ಯಮಟ್ಟದ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ-1 ಸಮಾಜ ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಕೇಳಿಬಂದಿದೆ. ಪ್ರಶ್ನೆಪತ್ರಿಕೆ ಇದೀಗ ಎಲ್ಲೆಡೆ ವೈರಲ್ ಕೂಡ ಆಗಿದೆ. ಟಿವಿ9 ವರದಿ ಗಮನಿಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಸೆಂಟರ್ ಇದೀಗ ಪತ್ತೆ ಆಗಿದೆ. ಬೆಳಗಾವಿ ಡಿಡಿಪಿಐ ಲೀಲಾವತಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಬೆಳಗಾವಿ, ಜನವರಿ 10: ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯ ಸಮಾಜ ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆ ಸೋರಿಕೆ (SSLC Exam Paper Leak) ಆರೋಪ ಕೇಳಬಂದಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಮಾಜ ವಿಜ್ಞಾನ ಪ್ರಶ್ನೆಪತ್ರಿಕೆ ವೈರಲ್ ಆಗಿದೆ. ಆದರೆ ಇದೀಗ ಪ್ರಶ್ನೆಪತ್ರಿಕೆ ಲೀಕ್ ಆದ ಪರೀಕ್ಷಾ ಕೇಂದ್ರ ಪತ್ತೆ ಆಗಿದೆ. ಟಿವಿ9 ವರದಿ ಗಮನಿಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಸೆಂಟರ್ ಪತ್ತೆ ಮಾಡಲಾಗಿದೆ. ಬೆಳಗಾವಿಯ ಪರೀಕ್ಷಾ ಕೇಂದ್ರವಾಗಿದ್ದು, ಲಕ್ಷ್ಮೀನಗರದಲ್ಲಿರುವ ಸೇಂಟ್ ಮೀರಾ ಶಾಲೆಯಿಂದ ಸೋರಿಕೆಯಾಗಿರುವ ಸಂಶಯ ವ್ಯಕ್ತವಾಗಿದೆ.
ಪ್ರಶ್ನೆಪತ್ರಿಕೆ ಮೇಲಿರುವ ಕೋಡ್ ಸೇಂಟ್ ಮೂಲಕ ಸೆಂಟರ್ ಪತ್ತೆ
ಪ್ರಶ್ನೆಪತ್ರಿಕೆ ಮೇಲಿರುವ ಕೋಡ್ ಸೇಂಟ್ ಮೀರಾ ಶಾಲೆಯದ್ದು ಆಗಿದೆ. ಟಿವಿ9 ವರದಿ ಬೆನ್ನಲ್ಲೇ ಶಾಲೆಗೆ ಡಿಡಿಪಿಐ ಲೀಲಾವತಿ ಭೇಟಿ ನೀಡಿದ್ದು, ಬೆಳಗ್ಗೆಯಿಂದ ಪರೀಕ್ಷೆ ಆರಂಭವಾಗುವವರೆಗಿನ ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ.
ಟಿವಿ9 ವರದಿ ಗಮನಿಸಿ ಸೆಂಟರ್ ಪತ್ತೆ: ಡಿಡಿಪಿಐ ಲೀಲಾವತಿ
ಇನ್ನು ಈ ಬಗ್ಗೆ ಟಿವಿ9ಗೆ ಬೆಳಗಾವಿ ಡಿಡಿಪಿಐ ಲೀಲಾವತಿ ಪ್ರತಿಕ್ರಿಯಿಸಿದ್ದು, ಟಿವಿ9 ವರದಿ ಗಮನಿಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಸೆಂಟರ್ ಪತ್ತೆ ಹಚ್ಚಲಾಗಿದೆ. ಬೆಳಗಾವಿ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯ ಕೋಡ್ ಇದ್ದು, ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಪ್ರಶ್ನೆಪತ್ರಿಕೆ ಲೀಕ್ ! ಸಮಾಜ ವಿಜ್ಞಾನ ಪ್ರಶ್ನೆಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಬೆಳಗಾವಿ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 17 ವಿದ್ಯಾರ್ಥಿಗಳು 10ನೇ ತರಗತಿ ಓದುತ್ತಿದ್ದಾರೆ. ವಿದ್ಯಾರ್ಥಿಗಳಿಂದಲೂ ಮಾಹಿತಿ ಪಡೆದಿದ್ದೇವೆ. ಹೆಚ್ಎಂ ಸೇರಿ ಶಿಕ್ಷಕರಿಂದಲೂ ಈ ಬಗ್ಗೆ ಮಾಹಿತಿ ಪಡೆದಿದ್ದೇನೆ. ಎಲ್ಲಾ ಮಾಹಿತಿಯ ವರದಿ ಸಿದ್ಧಪಡಿಸಿ ಇಲಾಖೆಗೆ ಕಳುಹಿಸುತ್ತೇನೆ ಎಂದು ಬೆಳಗಾವಿ ಡಿಡಿಪಿಐ ಲೀಲಾವತಿ ಹೇಳಿದ್ದಾರೆ.
ಇದನ್ನೂ ಓದಿ: SSLC ವಿದ್ಯಾರ್ಥಿಗಳೇ ಎಚ್ಚರ! ಹಣ ಕೊಟ್ರೆ ಪ್ರಶ್ನೆ ಪತ್ರಿಕೆ ಸಿಗತ್ತೆ ಅಂತಾ ಯಾಮಾರಬೇಡಿ
ಡೆಲ್ಟಾ ಎಸ್‌ಎಸ್‌ಎಲ್‌ಸಿ ಎಂಬ ಇನ್ಸ್ಟಾಗ್ರಾಂ ಖಾತೆಯಿಂದ ವೈರಲ್ ಮಾಡಲಾಗಿದೆ. ಪ್ರತಿವರ್ಷವೂ ಈ ಖಾತೆ ಪರೀಕ್ಷೆ ಸಮಯದಲ್ಲಿ ಸಕ್ರಿಯವಾಗುತ್ತೆ. ಕಳೆದ ವರ್ಷವೂ ಇದೇ ಖಾತೆಯಿಂದ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು, ಆದರೆ ಪರೀಕ್ಷಾ ಮಂಡಳಿ ಅಧಿಕಾರಿಗಳಿಂದ ದಿವ್ಯ ನಿರ್ಲಕ್ಷ್ಯವಹಿಸಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.