ಸ್ಮಶಾನ ಹೀಗೂ ಇರುತ್ತಾ! ಜನರು ಬೆಳಿಗ್ಗೆ, ಸಂಜೆ ರುದ್ರ ಭೂಮಿಯಲ್ಲಿ ಕಾಲ ಕಳೆಯಲು ಬೆಳಗಾವಿ ಯುವಕರೇ ಕಾರಣ
ಹೊರದೇಶಗಳಲ್ಲಿ ಸ್ಮಶಾನ ಭೂಮಿ ಎಂದರೆ ಉದ್ಯಾನವನದ ರೀತಿ ಇರುತ್ತವೆ ಅಂತ ಕೇಳಿದ್ದೆವು. ಆದರೆ ನಮ್ಮ ಗ್ರಾಮದ ಯುವಕರು ಸ್ಮಶಾನ ಭೂಮಿಯಲ್ಲಿ ಉದ್ಯಾನವನ ನಿರ್ಮಾಣ ಮಾಡಿ ಇತರರಿಗೆ ಮಾದರಿಯಾಗಿದ್ದಾರೆಂದು ಗ್ರಾಮದ ಹಿರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಬೆಳಗಾವಿ: ಸ್ಮಶಾನ (Cemetery) ಎಂದರೆ ಅಲ್ಲಿಗೆ ಹೋಗೋದು ಇರಲಿ, ಹೆಸರು ಹೇಳುತ್ತಿದ್ದಂತೆ ಭಯ ಶುರುವಾಗುತ್ತದೆ. ಆದರೆ ಜಿಲ್ಲೆಯ ರಾಯಬಾಗ ತಾಲೂಕಿನ ಹಾರುಗೇರಿ ಪಟ್ಟಣದ ಲಿಂಗಾಯತ ರುದ್ರ ಭೂಮಿಯನ್ನು ಯುವಕರು ನಂದನ ವನದಂತೆ ನಿರ್ಮಾಣ ಮಾಡಿದ್ದಾರೆ. ಲಾಕ್ಡೌನ್ (Lackdown) ಸಂದರ್ಭದಲ್ಲಿ ಸಮಯವನ್ನ ಸದುಪಯೋಗ ಪಡೆದುಕೊಂಡ ಗ್ರಾಮದ ಯುವಕರು, ರುದ್ರ ಭೂಮಿಯನ್ನ ಚಿಕ್ಕವರಿಂದ ಹಿಡಿದು ದೊಡ್ಡವರೆಗೂ ಇಷ್ಟಪಡುವ ತಾಣವಾಗಿ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಸ್ಮಶಾನ ಎಂದರೆ ಭಯ ಆಗುವುದು ಸಹಜ. ದೆವ್ವ, ಭೂತಗಳ ಬಗ್ಗೆ ಮೂಢನಂಬಿಕೆ ಹೆಚ್ಚಾಗಿದ್ದರೂ ಭಯ ಮಾತ್ರ ಇದ್ದೇ ಇರುತ್ತದೆ. ಸ್ಮಶಾನದ ದಾರಿಯಲ್ಲಿ ಹೋಗುವ ಅನಿವಾರ್ಯ ಬಂದರಂತೂ ಕೆಲವರಿಗೆ ಕೈ, ಕಾಲುಗಳು ನಡುಗುತ್ತವೆ. ಈ ನಡುವೆ ಜಿಲ್ಲೆಯ ರಾಯಬಾಗ ತಾಲೂಕಿನ ಹಾರುಗೇರಿ ಪಟ್ಟಣದ ಲಿಂಗಾಯತ ರುದ್ರಭೂಮಿ ಕೈ ಬೀಸಿ ಕರೆಯುವಂತೆ ನಿರ್ಮಾಣವಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ 40 ಯುವಕರು ಸೇರಿ ಲಿಂಗಾಯತ ಕಾಯಕ ಸೇವಾ ಸಮಿತಿ ಹೆಸರಿನ ಸಂಸ್ಥೆ ಕಟ್ಟಿದ್ದಾರೆ. ಸ್ಮಶಾನದ ಬಗ್ಗೆ ಜನರಿಗಿರುವ ಭಯ, ಮೂಢನಂಬಿಕೆಯನ್ನ ಕಿತ್ತೆಸೆಯುವ ಸಲುವಾಗಿ ಸಮಾಜದ ಹಿರಿಯರು ಹಾಗೂ ಗ್ರಾಮಸ್ಥರ ಸಹಕಾರದಿಂದ ಪ್ರತಿ ಭಾನುವಾರ ಯುವಕರೆಲ್ಲರೂ ಸೇರಿ ಶ್ರಮದಾನ ಮಾಡುವ ಮೂಲಕ ಸ್ಮಶಾನ ಭೂಮಿಯನ್ನು ರುದ್ರ ಭೂಮಿಯನ್ನಾಗಿ, ರುದ್ರ ಭೂಮಿಯನ್ನು ನಂದನ ವನದಂತೆ ನಿರ್ಮಾಣ ಮಾಡಿದ್ದಾರೆ.
ರುದ್ರ ಭೂಮಿಯಲ್ಲಿ ಆಟದ ಮೈದಾನ, ಕುಡಿಯುವ ನೀರಿನ ವ್ಯವಸ್ಥೆ ಅನುಭವ ಮಂಟಪ, ಶರಣರ ವಚನಗಳು, 12ನೇ ಶತಮಾನದ ಶರಣರ ಕಾಯಕದ ಚಿತ್ರಗಳು, ಹಕ್ಕಿಗಳಿಗೆ ಕಾಳು- ನೀರಿನ ವ್ಯವಸ್ಥೆ, ಅಂತ್ಯಕ್ರಿಯೆಗೆ ಬಂದಿರುವ ಜನರಿಗೆ ತಂಗಲು ಕಟ್ಟಡ, ಭವ್ಯವಾದ ಸುಂದರವಾದ ಶಿವನ ಮೂರ್ತಿ, ಮೂರ್ತಿಯ ಸುತ್ತಮುತ್ತ ಹುಲ್ಲು ಹಾಕಿದ್ದಾರೆ. ಈ ಸುಂದರ ಪರಿಸರದಲ್ಲಿ ಕಾಲ ಕಳೆಯಲು ಜನರಿಗೆ ಕೂರಲು ವ್ಯವಸ್ಥೆ ಮಾಡಿದ್ದಾರೆ. ಗ್ರಾಮದಲ್ಲಿ ಎಲ್ಲೂ ಕೂಡ ಉದ್ಯಾನವಿಲ್ಲ. ರುದ್ರ ಭೂಮಿಯಲ್ಲಿ ಉದ್ಯಾನವನ ನಿರ್ಮಾಣ ಮಾಡಿರುವುದಕ್ಕೆ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಪ್ರತಿನಿತ್ಯ ಬೆಳಿಗ್ಗೆ, ಸಾಯಂಕಾಲ ಬಂದು ಕುಳಿತುಕೊಂಡು ವಿಶ್ರಾಂತಿ ಪಡೆದು ಹೋಗುತ್ತಾರೆ.
ಹೊರದೇಶಗಳಲ್ಲಿ ಸ್ಮಶಾನ ಭೂಮಿ ಎಂದರೆ ಉದ್ಯಾನವನದ ರೀತಿ ಇರುತ್ತವೆ ಅಂತ ಕೇಳಿದ್ದೆವು. ಆದರೆ ನಮ್ಮ ಗ್ರಾಮದ ಯುವಕರು ಸ್ಮಶಾನ ಭೂಮಿಯಲ್ಲಿ ಉದ್ಯಾನವನ ನಿರ್ಮಾಣ ಮಾಡಿ ಇತರರಿಗೆ ಮಾದರಿಯಾಗಿದ್ದಾರೆಂದು ಗ್ರಾಮದ ಹಿರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವರದಿ: ವಿನಾಯಕ್ ಗುರವ್
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ